ಭಾನುವಾರ, ಜೂನ್ 20, 2021
23 °C

ಸ್ಪಂದನ

ಡಾ.ವೀಣಾ ಭಟ್ Updated:

ಅಕ್ಷರ ಗಾತ್ರ : | |

ವಯಸ್ಸು 22, ಹೆಸರು ಬೇಡ

ಎರಡು ವರ್ಷದಿಂದ ವಾರದಲ್ಲಿ ಎರಡು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ಇದನ್ನು ಬಿಡಲು ಎಷ್ಟೇ ಪ್ರಯತ್ನ ಮಾಡಿದರೂ ಆಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರವಿದೆಯೇ ತಿಳಿಸಿ.


–ನಿಮಗೆ ಪರಿಹಾರ ತಿಳಿಸಲು ಇದೊಂದು ಸಮಸ್ಯೆಯೇ ಅಲ್ಲ. ಇದೊಂದು ಸ್ವಯಂ ತೃಪ್ತಿಗಾಗಿ ಇರುವ ಸಹಜ ಲೈಂಗಿಕ ಚಟುವಟಿಕೆ ಅಥವಾ ಅಭಿವ್ಯಕ್ತಿ ಅಷ್ಟೇ.  ಈ ಕ್ರಿಯೆಯಲ್ಲಿ ವ್ಯಕ್ತಿ ಜನನ ಅಂಗವನ್ನು ಉದ್ರೇಕಿಸಿ ಲೈಂಗಿಕ ತೃಪ್ತಿ ಪಡೆದುಕೊಳ್ಳುತ್ತಾನೆ. ಇವೆಲ್ಲವನ್ನು ಎಷ್ಟೇ ಬಾರಿ ಎಷ್ಟು ದಿನಗಳ ಕಾಲ ಮಾಡಿದರೂ ಯಾವುದೇ ಅಪಾಯವಿಲ್ಲ.  ಮುಂದೆ ಸಂತಾನೋತ್ಪತ್ತಿಗೂ ಯಾವ ತೊಂದರೆಯೂ ಇಲ್ಲ. ಬದಲಾಗಿ ಸಂಗಾತಿ ಇಲ್ಲದಾಗ ಲೈಂಗಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಇರುವ ಆರೋಗ್ಯಕಕರ ಹಾಗೂ ಅನಿವಾರ್ಯ ಉಪಾಯವಷ್ಟೇ. ನೀವು ಇವೆಲ್ಲದರ ಬಗ್ಗೆ ಚಿಂತಿಸದೇ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಡಿ. ಕ್ರೀಡೆ, ಲಲಿತಕಲೆ, ಇತ್ಯಾದಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವಿದ್ಯಾಭ್ಯಾಸದಲ್ಲಿ ಉನ್ನತ ಸಾಧನೆಗೆ ಪ್ರಯತ್ನಿಸಿ.

ವಿದ್ಯಾಶ್ರೀ ಕುಲಕರ್ಣಿ, ನರಸಿಂಹರಾಜಪುರ, ಚಿಕ್ಕಮಗಳೂರು ಜಿಲ್ಲೆ.

ವಯಸ್ಸು 19, ಕೈ ಹಾಗೂ ಕಾಲುಗಳು ಬೆಳ್ಳಗಿದ್ದು, ಮುಖದ ಬಣ್ಣ ಬಹಳ ಕಪ್ಪುಗಿದೆ. ಎಲ್ಲರೂ ಹೀಗೇಕೆ ಎಂದು ಕೇಳುವಾಗ ಉತ್ತರ ಕೊಡಲಾಗದೇ ಹಿಂಸೆ ಅನುಭವಿಸುತ್ತಿದ್ದೇನೆ. ಹಲವು ರೀತಿಯ ಔಷಧಗಳ ಬಳಕೆ ಮಾಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಈ ಸಮಸ್ಯೆಯಿಂದ ಮನೆಯಿಂದ ಹೊರಗೆ ಹೋಗಲು ಹಿಂದೇಟು ಹಾಕುತ್ತಿದ್ದೇನೆ. ಇದಕ್ಕೆ ಸೂಕ್ತ ಪರಿಹಾರ ತಿಳಿಸಿ.


–ನಿಮಗೆ ಇರುವ ಸಮಸ್ಯೆ ಫೋಟೋ ಟಾಕ್ಸಿಕ್ ಮೆಲನೋಸಿಸ್ ಇರಬಹುದು. ನೀವು ಸೂರ್ಯನ ಬಿಸಿಲಿಗೆ ನಿಮ್ಮ ಮುಖವನ್ನು ಒಡ್ಡಬೇಡಿ. ಮತ್ತು ವಿಟಮಿನ್ ಸಿಯುಕ್ತ ಆಹಾರವನ್ನು ಹೆಚ್ಚಿಗೆ ಸೇವಿಸಿ. ಹಾಲಿನ ಕೆನೆ ಮತ್ತು ಅರಿಶಿನ ಪುಡಿಯನ್ನು, ನಿಂಬೆಹಣ್ಣಿನ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ಮುಖ ತೊಳೆದುಕೊಳ್ಳಿ. ಆಗಾಗ್ಗೆ ಸೌತೇಕಾಯಿ ರಸವನ್ನು ಮುಖಕ್ಕೆ ಹಚ್ಚಿ.  (ಕಿತ್ತಳೆ, ಬೆಟ್ಟದ ನೆಲ್ಲಿಕಾಯಿ, ಹಸಿರು ಸೊಪ್ಪು ತರಕಾರಿಗಳು ಇತ್ಯಾದಿ) ಇನ್ನೂ ಕಡಿಮೆಯಾಗದಿದ್ದಲ್ಲಿ ಉತ್ತಮ ಚರ್ಮ ರೋಗ ತಜ್ಞರನ್ನು ಭೇಟಿ ಮಾಡಿ ಸಮಾಲೋಚಿಸಿ ಚಿಕಿತ್ಸೆ ಪಡೆಯಿರಿ.

ಹೆಸರು ಬೇಡ, ಊರು ಮಾಗಡಿ.

ನನಗೆ 47 ವರ್ಷ ವಯಸ್ಸು. ಮದುವೆಯಾಗಿ 25 ವರ್ಷಗಳಾಗಿವೆ. 20 ವರ್ಷ ಮತ್ತು 15 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನನ್ನ ಸಮಸ್ಯೆ ಎಂದರೆ ಇತ್ತೀಚೆಗೆ ಆರೋಗ್ಯ ತಪಾಸಣೆಗಾಗಿ ದೇಹದ ಸ್ಕ್ಯಾನಿಂಗ್ ಮಾಡಿಸಿದಾಗ ಎಲ್ಲಾ ನಾರ್ಮಲ್ ಬಂದಿದ್ದು, ಗರ್ಭಾಶಯದ ಒಳಗೆ 4 ರಿಂದ 6 ಸಣ್ಣ ಗಾತ್ರದ14 ಎಂ.ಎಂ.ನಿಂದ 25 ಎಂ.ಎಂ.ನ ಫೈಬ್ರಾಯ್ಡಿಗಳು ಇರುವುದು ಕಂಡು ಬಂದಿದೆ. ಕ್ಯಾನ್ಸರ್ ಗೆಡ್ಡೆ ಅಲ್ಲ ಎಂದಿದ್ದಾರೆ. ಮುಂದೆ ಅವು ಬೆಳೆದು ಅದರಿಂದ ನನಗೆ ತೊಂದರೆ ಇದೆಯೇ? ಗರ್ಭಕೋಶ ತೆಗೆಸಬೇಕೆ? ಅವು ಕರಗಲು ಔಷಧಿ ಇದೆಯೇ? ಇದಕ್ಕೆ ಚಿಕಿತ್ಸೆ ಎಲ್ಲಿ ದೊರೆಯುವುದು ದಯವಿಟ್ಟು ತಿಳಿಸಿ.


–ನಿಮಗೆ ಆರೋಗ್ಯ ತಪಾಸಣಾ ಸಂದರ್ಭದಲ್ಲಿ ಎರಡು ಫೈಬ್ರಾಯಿಡ್ ಅಥವಾ ನಾರುಗಡ್ಡೆಗಳು ಇವೆ ಎಂದು ರಿಪೋರ್ಟ್ ಬಂದಿದ್ದರೆ ಏನು ತಲೆಕೆಡಿಸಿಕೊಳ್ಳಬೇಡಿ. ನಿಮಗೆ ಯಾವುದೇ ರೀತಿಯ ಮುಟ್ಟಿನ ಸಮಸ್ಯೆ ಇಲ್ಲ. ಮುಟ್ಟು ನಿಲ್ಲುವ ಸಂದರ್ಭಗಳಲ್ಲಿ ಎಷ್ಟೋ ಜನರಿಗೆ ಈ ನಾರುಗಡ್ಡೆಗಳು ಅದಾಗಿಯೇ ಕರಗಿಹೋಗುತ್ತವೆ. ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಗರ್ಭಕೋಶವನ್ನು ತೆಗೆಸುವ ಅವಶ್ಯಕತೆಯೂ ಇಲ್ಲ. ಆದರೆ ವರ್ಷಕ್ಕೊಮ್ಮೆ ಫೆಲ್ವಿಕ್ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಿ ಫೈಬ್ರಾಯಿಡ್ ಗಾತ್ರದಲ್ಲಿ ದೊಡ್ಡದಾಗುತ್ತಿದೆಯೇ ನೋಡಿಕೊಳ್ಳಿ. ಸ್ತ್ರೀರೋಗ ತಜ್ಞರೊಂದಿಗೆ ಚರ್ಚಿಸಿ. ಫೈಬ್ರಾಯಿಡ್ ಕ್ಯಾನ್ಸರ್ ಆಗಿ ಪರಿವರ್ತನೆ ಹೊಂದುವುದು ಅತೀ ಕಡಿಮೆ. ಯಾವುದೇ ಭಯ ಬೇಡ.

ಹೆಸರು ಪೂಜಾ: ಊರು ಬೇಡ.

ನಾನು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. 18 ವರ್ಷ,  ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಈಗ ನನ್ನ ತೂಕ 60ಕ್ಕೆ ಏರಿದೆ. ಅಡ್ಡ ಪರಿಣಾಮ ಉಂಟಾಗಬಹುದೆಂಬ ಕಾರಣದಿಂದ ಯಾವುದೇ ಚಿಕಿತ್ಸೆಯನ್ನು ಪಡೆದಿಲ್ಲ. ನನಗೆ ಆದಷ್ಟು ಬೇಗ ತೂಕ ಕಡಿಮೆ ಮಾಡಿಕೊಳ್ಳುವ ಆಹಾರಾಭ್ಯಾಸಗಳನ್ನು ತಿಳಿಸಿ.


–ನೀವು ಪಿಯುಸಿ ಓದುತ್ತಿದ್ದು ೬೦ ಕೆಜಿ ಇದ್ದೀರಾದರೆ ನಿಮ್ಮ ಎತ್ತರವನ್ನು ತಿಳಿಸಿಲ್ಲ. ನೀವು ೧೫೦ ಸೆ.ಮೀ ಇದ್ದು ನೀವು ೫೦ ಕೆಜಿ ಇದ್ದರೆ ನಿಮ್ಮದು ಸಮತೂಕ. (ನಿಮ್ಮ ಎತ್ತರವನ್ನು ಸೆ.ಮೀ ನಲ್ಲಿ ಅಳೆದು ೧೦೦ ಕಳೆದರೆ ನೀವಿರಬೇಕಾದ ತೂಕ ಬರುವುದು) ನೀವು ಜಾಹಿರಾತು ಹಾಗೂ ಔಷಧಗಳಿಗೆ ಮೊರೆಹೋಗಬೇಡಿ. ನಿಮ್ಮ ಆಹಾರ ಕ್ರಮ ಹಾಗೂ ಜೀವನಶೈಲಿ ಬದಲಾವಣೆಯಿಂದ ಬೊಜ್ಜನ್ನು ಹೋಗಲಾಡಿಸಿಕೊಳ್ಳಬಹುದು.ಅದಕ್ಕೆ ದೃಢಸಂಕಲ್ಪ ಬೇಕು ಅಷ್ಟೇ.  ಜಂಕ್‌ಫುಡ್ ಬಳಕೆಯನ್ನು ಕಡಿಮೆ ಮಾಡಿ. ಕೊಬ್ಬು, ಸಕ್ಕರೆ, ಉಪ್ಪಿನಾಂಶವುಳ್ಳ, ಡಾಲ್ಡಾ ಹಾಗೂ ಜಿಡ್ಡಿನ ಪದಾರ್ಥಗಳನ್ನು ಕಡಿಮೆ ಮಾಡಿ. ದಿನಕ್ಕೆ ೪ರಿಂದ-೫ ಲೀಟರ್ ನೀರು ಸೇವಿಸಿ. ನಾರಿನಾಂಶ ಹೆಚ್ಚಿರುವ ಹಸಿರು ಸೊಪ್ಪು–ತರಕಾರಿಗಳನ್ನು ಸೇವಿಸಿ. ನಿಯಮಿತ ವಾಕಿಂಗ್ ಅಥವಾ ಬಿರುಸಿನ ದೈಹಿಕ ಚಟುವಟಿಕೆ (ಸೈಕ್ಲಿಂಗ್, ಡ್ಯಾನ್ಸಿಂಗ್, ಸ್ವಿಮ್ಮಿಂಗ್, ಏರೋಬಿಕ್ಸ್ ಇತ್ಯಾದಿ) ಮಾಡಿ. ಇದರಿಂದ ತಿಂಗಳಿಗೆ ಎರಡು ಮೂರು ಕೆಜೆ ಕಡಿಮೆಯಾಗಬಹುದು.ಹೆಚ್ಚಿಗೆ ಬೇಳೆ, ಕಾಳು, ಪ್ರೊಟೀನ್ ವಿಟಮಿನ್‌ಗಳು ಇರುವ ಸಮತೋಲನ ಆಹಾರವನ್ನು ನಿಯಮಿತವಾಗಿ ಸೇವಿಸಿ. ಹಗಲು ನಿದ್ರೆ ಮಾಡಬೇಡಿ. ದಿನವಿಡೀ ಚಟುವಟಿಕೆಯಿಂದಿದ್ದು ರಾತ್ರಿ ೭ರಿಂದ -೮ ಗಂಟೆ ನಿದ್ದೆ ಮಾಡಿದರೆ ತೂಕ ನಿಯಂತ್ರಣದಲ್ಲಿರುತ್ತದೆ. ಒಮ್ಮೆ ನಿಯಂತ್ರಣಕ್ಕೆ ಬಂದ ತೂಕವನ್ನು ಜೀವನ ಪರ್ಯಂತ ಕಾಪಾಡಿಕೊಳ್ಳುವುದು ಮುಖ್ಯ.

ಹೆಸರು ಬೇಡ, ಚಿಕ್ಕಮಗಳೂರು.

ಮದುವೆಯಾಗಿ 21 ವರ್ಷವಾಗಿದೆ. ನನಗೆ ಇಬ್ಬರು ಮಕ್ಕಳಿದ್ದು, ಎರಡನೇ ಮಗುವಾದ ನಂತರ ನಾನು ಕಾಪರ್ಟಿ ಹಾಕಿಸಿಕೊಂಡಿದ್ದೇನೆ. ಕಾಪರ್ಟಿ ಹಾಕಿಸಿ 19 ವರ್ಷಗಳಾಗಿವೆ. ನನಗೆ ಈಗ 54ನೇ ವರ್ಷ. ಈಗ ನಾನು ಸಕ್ಕರೆ ಕಾಯಿಲೆಯಿಂದ ಡಾಕ್ಟರ್ ಸಲಹೆಯ ಮೇರೆಗೆ ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. 6ರಿಂದ 8 ತಿಂಗಳಿಗೆ ಮುಟ್ಟು ಆಗುತ್ತದೆ. ಕಾಪರ್ಟಿ ಇರುವುದರಿಂದ ಆರೋಗ್ಯ ಸಮಸ್ಯೆ ಏನಾದರೂ ಆಗುತ್ತದೆಯೇ? ಇದು ಮುಟ್ಟು ನಿಲ್ಲುವ ಸಮಯವೇ?


–ನಿಮಗೆ ಇನ್ನು ಒಂದೆರಡು ವರ್ಷದೊಳಗೆ ಮುಟ್ಟು ನಿಲ್ಲಬಹುದು. ಆದಷ್ಟು ಬೇಗ ಕಾಪರ್ಟಿ ತೆಗೆಸಿಬಿಡಿ. ವೈದ್ಯರ ಸಲಹೆಯ ಮೇರೆಗೆ ಮಾತ್ರೆ ಹಾಗೂ ಆಹಾರ ಪಥ್ಯವನ್ನು ಮಾಡಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ೬ರಿಂದ-೮ ತಿಂಗಳಿಗೊಮ್ಮೆ ಮುಟ್ಟಾಗುವುದು ಈ ವಯಸ್ಸಿನಲ್ಲಿ ಸಹಜ. ಅತೀ ರಕ್ತ ಸ್ರಾವವಾಗದಿದ್ದಲ್ಲಿ ಯಾವುದೇ ಭಯ ಬೇಡ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.