ಗುರುವಾರ , ಏಪ್ರಿಲ್ 22, 2021
29 °C

ಸ್ಪಂದಿಸದ ಅಧಿಕಾರಿ: ಕೂಲಿಕಾರರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಪಂದಿಸದ ಅಧಿಕಾರಿ: ಕೂಲಿಕಾರರ ಆಕ್ರೋಶ

ಚಳ್ಳಕೆರೆ: ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕೊಡಿ ಎಂದು ಅರ್ಜಿ ಸಲ್ಲಿಸಿದ ಕೂಲಿಕಾರರಿಗೆ ಕೆಲಸಕ್ಕೆ ಬರುವಂತೆ ಹೇಳಿದ ಅಧಿಕಾರಿಗಳು ನಿಗದಿತ ಸಮಯಕ್ಕೆ ಸ್ಥಳಕ್ಕೆ ಹೋಗದೇ, ಕೆಲಸ ಹಂಚದೇ, ಕುಡಿಯುವ ನೀರು ಒದಗಿಸದೇ ಸುಮಾರು 500 ಕೂಲಿಕಾರರನ್ನು ಮಧ್ಯಾಹ್ನದವರೆಗೂ ಕಾಯಿಸಿದ ಪ್ರಸಂಗ ಶುಕ್ರವಾರ ಮೀರಾಸಾಬಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.ತಾಲ್ಲೂಕಿನ ಮೀರಾಸಾಬಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿಡಪನಕುಂಟೆ, ರಂಗವ್ವನಹಳ್ಳಿ, ಕರೀಕೆರೆ, ವಿಶ್ವೇಶ್ವರಪುರ ಗ್ರಾಮದ ಸುಮಾರು 500 ಜನರು, ಎರಡು ದಿನಗಳ ಹಿಂದೆ ಉದ್ಯೋಗ ಖಾತ್ರಿ ಕಾಮಗಾರಿ ಆಯ್ಕೆ ಮಾಡುವಾಗ ಪಂಚಾಯ್ತಿಯ 21 ಸದಸ್ಯರು ಗ್ರಾಮ ಸಭೆ ಮಾಡದೇ ಅವರಿಗೆ ಅನುಕೂಲ ಆಗುವಂತೆ ಸ್ವಂತ ಜಮೀನುಗಳಲ್ಲಿ ಕಾಮಗಾರಿ ಮಾಡಲು ಕ್ರಿಯಾಯೋಜನೆ ತಯಾರಿಸಿ ಕೊಂಡಿದ್ದಾರೆ.

 

ಇದರಿಂದ ಕೂಲಿಕಾರರಿಗೆ ಅನ್ಯಾಯವಾಗುತ್ತದೆ. ಸದರಿ ಕ್ರಿಯಾಯೋಜನೆ ರದ್ದುಗೊಳಿಸಿ ಕೂಲಿಕಾರರಿಗೆ ಕೂಲಿ ಸಿಗುವಂತಹ, ಸಾರ್ವಜನಿಕರಿಗೆ ಅನುಕೂಲ ಆಗುವಂತಹ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಜಿ.ಪಂ. ಸಿಇಒಗೆ ಮನವಿ ಮಾಡಿ, ಈ ಕೂಡಲೇ ನಮಗೆ ಖಾತ್ರಿ ಯೋಜನೆಯಲ್ಲಿ ಕೂಲಿ ನೀಡಬೇಕು ಎಂದು ಅರ್ಜಿ ಸಲ್ಲಿಸ್ದ್ದಿದರು.ಇದಕ್ಕೆ ಸ್ಪಂದಿಸಿದ ಸಿಇಒ, ಕೂಲಿಕಾರರಿಗೆ ತಕ್ಷಣವೇ ಕೂಲಿ ನೀಡಬೇಕು. ಸದಸ್ಯರು ತಮ್ಮ ಸ್ವಂತ ಜಮೀನುಗಳಲ್ಲಿ ಕಾಮಗಾರಿ ನಿರ್ವಹಿಸುವುದು ತಪ್ಪಾಗುತ್ತದೆ. ಸ್ವಂತ ಜಮೀನುಗಳಲ್ಲಿ ಕಾಮಗಾರಿ ಮಾಡಲು ಗೊತ್ತುಪಡಿಸಿರುವ ಸ್ಥಳಗಳನ್ನು ಕೈಬಿಟ್ಟು, ಇದೇ ಯೋಜನೆಯಲ್ಲಿರುವ ಸರ್ಕಾರಿ ಗೋಕಟ್ಟೆಯಲ್ಲಿ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡು ಕೂಲಿಕಾರರಿಗೆ ಅಲ್ಲಿ ಕೆಲಸ ಕೊಡಿ ಎಂದು ಗುರುವಾರ ಪಂಚಾಯ್ತಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಅದರಂತೆ, ಪಿಡಿಒ ಶುಕ್ರವಾರವೇ ಕೆಲಸಕ್ಕೆ ಹಾಜರಾಗುವಂತೆ ಹೇಳಿದ್ದರು.ಪಿಡಿಒ ನಿಗದಿಪಡಿಸಿದ ಸಮಯಕ್ಕೆ ಕೂಲಿಕಾರರು ಹಾಜರಾಗಿದ್ದರೂ ಯಾವೊಬ್ಬ ಅಧಿಕಾರಿಗಳೂ ಬಂದಿಲ್ಲ. ಜನಪ್ರತಿನಿಧಿಗಳ ಕುಮ್ಮಕ್ಕಿನಿಂದಾಗಿ ಅಧಿಕಾರಿಗಳು ನಿಗದಿತ ಸಮಯಕ್ಕೆ ಕೆಲಸಕ್ಕೆ ಹಾಜರಾದ ಕೂಲಿಕಾರರಿಗೆ ಸ್ಥಳ ನಿಗದಿ ಮಾಡದೇ ಮದ್ಯಾಹ್ನದವರೆಗೂ ಕಾಯುವಂತೆ ಮಾಡಿದ್ದಾರೆ ಎಂದು ಕೂಲಿಕಾರರು ಆರೋಪಿಸಿದರು.ಮಧ್ಯಾಹ್ನದ ವೇಳೆಗೆ, ಕೂಲಿಕಾರರ ಬಳಿ ಬಂದ ಎಂಜಿನಿಯರ್ ಕೆಲಸ ಮಾಡುವ ಸ್ಥಳ ಅಳತೆ ಮಾಡಿಕೊಟ್ಟಿಲ್ಲ. ಇಷ್ಟು ಜನ ಕೂಲಿಕಾರರಿಗೆ ಹಣ ಬರುವುದೇ ಇಲ್ಲ ಎಂದು ಸಬೂಬು ಹೇಳಿ ಹೊರಟು ಹೋಗಿದ್ದಾರೆ.

ಪಿಡಿಒ ಸ್ಥಳಕ್ಕೆ ಆಗಮಿಸಿ, ಕೂಲಿಕಾರರ ಪಟ್ಟಿ ಮಾಡಿಕೊಳ್ಳದೇ ಹೊರಟು ಹೋಗಿದ್ದಾರೆ. ಇವರೆಲ್ಲಾ ಜನಪ್ರತಿನಿಧಿಗಳ ಜತೆ ಶಾಮೀಲಾಗಿದ್ದಾರೆ ಎಂದು ದೂರಿದರು.ಖಾತ್ರಿ ಯೋಜನೆ ಅಡಿಯಲ್ಲಿ ಅಧಿಕಾರಿಗಳು ಕೂಲಿ ಕೇಳಿ ಅರ್ಜಿ ಹಾಕಿದವರಿಗೆ ಕೆಲಸ ಕೊಡಬೇಕು. ಆದರೆ, ಗ್ರಾಮ ಸಭೆಯನ್ನೇ ಮಾಡದೆ ಜನಪ್ರತಿನಿಧಿಗಳೇ ಕಾಮಗಾರಿ ಹಂಚಿಕೊಂಡು ಕ್ರಿಯಾಯೋಜನೆ ತಯಾರಿಸಿ ಕೊಂಡಿದ್ದಾರೆ. ಇದರಿಂದ ಜನಪ್ರತಿನಿಧಿಗಳು ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ನಿರ್ವಹಿಸಬಾರದು ಎಂಬ ನಿಯಮ ಉಲ್ಲಂಘಿಸಿದ್ದಾರೆ ಎಂದು ಹರಿಹಾಯ್ದರು.ಬಿ. ಗುಜ್ಜಪ್ಪ, ಭೀಮಪ್ಪ, ರಾಜಪ್ಪ, ಗೋಪಾಲ, ಡಿ. ತಿಮ್ಮಣ್ಣ, ಜಯಣ್ಣ, ತಿಪ್ಪೇಸ್ವಾಮಿ, ಶಾಂತಮ್ಮ, ನಿಂಗಮ್ಮ, ಲಕ್ಷ್ಮೀದೇವಿ, ತಿಪ್ಪೇಸ್ವಾಮಿ, ಶಾರದಮ್ಮ ಇದ್ದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.