ಗುರುವಾರ , ಮೇ 19, 2022
22 °C

ಸ್ಪಂದಿಸದ ಗ್ರಾ.ಪಂ: ಕಚೇರಿಗೆ ಮುಳ್ಳಿಟ್ಟ ಜನತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಪಂದಿಸದ ಗ್ರಾ.ಪಂ: ಕಚೇರಿಗೆ ಮುಳ್ಳಿಟ್ಟ ಜನತೆ!

ಯಳಂದೂರು: ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸದಿರುವುದರಿಂದ ಬೇಸತ್ತ ಗ್ರಾಮಸ್ಥರು, ಪಂಚಾಯಿತಿ ಕಚೇರಿಯ ಬಾಗಿಲಿಗೆ ಬೀಗ ಜಡಿದರಲ್ಲದೇ, ಜಾಲಿ ಮುಳ್ಳನ್ನಿಟ್ಟು ಪ್ರತಿಭಟನೆ ನಡೆಸಿದರು.ಗ್ರಾಮದಲ್ಲಿ ಒಂದು ತಿಂಗಳಿಂದ ಟಿಸಿ ಕೆಟ್ಟು ವಿದ್ಯುತ್ ಕಣ್ಣಮುಚ್ಚಾಲೆಯಾಡುತ್ತಿದೆ. ಹೊಸ ಟಿಸಿ ಅಳವಡಿಸಿ ದಿನಗಳೇ ಕಳೆದರೂ ಇನ್ನೂ ಸಂಪರ್ಕ ನೀಡಿಲ್ಲ. ಗ್ರಾಮದ ಉಪ್ಪಾರ ಬಡಾವಣೆ ಹಾಗೂ ದಲಿತರ ಬಡಾವಣೆಗಳು ರಾತ್ರಿ ವೇಳೆ ಕಗ್ಗತ್ತಲಿನಲ್ಲೇ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೇ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಈ ಬಗ್ಗೆ ಅಸ್ಥೆ ವಹಿಸಿ ಕೆಲಸ ಮಾಡಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾರ್ವಜನಿಕರ ಕೈಗೇ ಸಿಗುತ್ತಿಲ್ಲ ಎಂಬುದು ಇಲ್ಲಿನ ನಾಗರೀಕರ ದೂರಾಗಿದೆ.ಕಚೇರಿ ಬಾಗಿಲು ತೆರೆದಿದ್ದರೂ ಇಲ್ಲಿ ಡಿ ದರ್ಜೆ ನೌಕರನೂ ಇರುವುದಿಲ್ಲ. ಕಚೇರಿಯ ಸುತ್ತಮುತ್ತಲಿನ ವಾತಾವಣವೂ ಗಬ್ಬು ನಾರುತ್ತಿದೆ. ಇಲ್ಲಿಗೆ ಅಪರೂಪಕ್ಕೆ ಆಗಮಿಸುವ ಕಾರ್ಯದರ್ಶಿ ಕೇವಲ ಅರ್ಧ ಗಂಟೆ ಮಾತ್ರ ಇದ್ದು ವಾಪಸ್ಸಾಗುತ್ತಾರೆ ಎಂದು ಆರೋಪಿಸಿದರು.ವಾಸಸ್ಥಳ ದೃಢೀಕರಣ ಪತ್ರಕ್ಕೆ ಅಲೆಯಿಸುವ ಈ ಮಂದಿ ಶಾಲಾ ಮಕ್ಕಳಿಂದಲೂ ಇದಕ್ಕೆ ಲಂಚ ಪಡೆಯುತ್ತಾರೆ ಎಂಬುದಾಗಿ ಗ್ರಾಮದ ವೆಂಕಟೇಶ್ ದೂರುತ್ತಾರೆ. ಕಚೇರಿಯ ದಾಖಲಾತಿಗಳನ್ನು ಬೇರೆಡೆ ಸಾಗಿಸಿ ಕೆಲಸ ಮಾಡುತ್ತಾರೆ ಎಂಬುದೂ ಇವರ ದೂರು.ಗ್ರಾಮದಲ್ಲಿನ ಬಹುತೇಕ ಬಡಾವಣೆಯ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಕಳೆದ 3 ದಿನಗಳಿಂದ ಬೀಳುತ್ತಿರುವ ಮಳೆಯಿಂದ ಚರಂಡಿಯ ನೀರೆಲ್ಲಾ ಇಳಿಜಾರಿನ ಮನೆಗಳಿಗೆ ನುಗ್ಗುತ್ತದೆ. ಹಾಗೂ ರಸ್ತೆಯಲ್ಲೇ ತುಂಬಿ ಹರಿಯುರಿಯುತ್ತದೆ. ಹಾಗಾಗಿ ರೋಗ ಗುಜಿನಗಳಿಗೆ ತುತ್ತಾಗುವ ಭೀತಿ ಎದುರಿಸಬೇಕಾಗಿದೆ ಎಂದು ಗ್ರಾಮದ ಚಿಕ್ಕರಂಗಶೆಟ್ಟಿ, ಮಹೇಶ್ ದೂರಿದರು. ನಾಯಕರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಂಪರ್ಕವನ್ನೇ ನೀಡಿಲ್ಲ. ಇವರು ಕೇವಲ ಕೈಪಂಪನ್ನೇ ಆಶ್ರಯಿಸಿದ್ದಾರೆ. ಗ್ರಾಮದ ರಸ್ತೆಗಳಿಗೆ ಮಣ್ಣನ್ನು ಸುರಿಯಲಾಗಿದೆ. ಆದರೆ ಇದು ಮಳೆಗಾಲದಲ್ಲಿ ಕೆಸರುಮಯವಾಗುವುದರಿಂದ ಓಡಾಟಕ್ಕೆ ತೊಂದರೆಯಾಗಿದೆ.ಈ ಹಿಂದೆ ಅಧ್ಯಕ್ಷ, ನೋಡಲ್ ಅಧಿಕಾರಿ ಹಾಗೂ ಕಾರ್ಯದರ್ಶಿ ಕರ್ತವ್ಯ ಲೋಪ ಎಸೆಗಿ ಜೈಲು ಪಾಲಾಗಿದ್ದರೂ ಸಂಬಂಧಪಟ್ಟ ಮೇಲಧಿಕಾರಿಗಳು ಗ್ರಾಮವನ್ನು ನಿರ್ಲಕ್ಷಿಸಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ. ಇಲ್ಲಿಗೆ ಬಂದಿರುವ ಅನುದಾನಗಳ ಬಗ್ಗೆ, ಯೋಜನೆಯ ಅನುಷ್ಟಾನದ ಬಗ್ಗೆ ಜನರಿಗೆ ಮಾಹಿತಿ ನೀಡುವ ಸಭೆಗಳೂ ನಡೆಯುತ್ತಿಲ್ಲ ಆರೋಪಿಸಿದರು.ಇಷ್ಟಿದ್ದರೂ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಬೇಸತ್ತ ಗ್ರಾಮಸ್ಥರು ಗುರುವಾರ ಪಂಚಾಯಿತಿ ಕಚೇರಿಗೆ     ಮುಳ್ಳಿನ ಬೇಲಿ ಹಾಕಿ ಪ್ರತಿಭಟಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.