ಶನಿವಾರ, ಆಗಸ್ಟ್ 17, 2019
27 °C
ಕೆ.ಎಸ್.ಒ.ಯು. ಸಿದ್ಧಪಠ್ಯ!

ಸ್ಪರ್ಧಾತ್ಮಕ ಪರೀಕ್ಷೆ

Published:
Updated:

ನಾಡಿನ ಶೈಕ್ಷಣಿಕ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆ.ಎಸ್.ಒ.ಯು.) ಪಾತ್ರ ಅವಿಸ್ಮರಣೀಯ. ಆದರೆ ಕೆ.ಎಸ್.ಒ.ಯು. ಒಂದು ದೂರ ಸಂಪರ್ಕ ಶಿಕ್ಷಣ ಸಂಸ್ಥೆ, ಅದಕ್ಕೂ ಸ್ಪರ್ಧಾತ್ಮಕ ಪರೀಕ್ಷೆಗೂ ಎಲ್ಲಿಂದೆಲ್ಲಿಯ ಸಂಬಂಧ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇದು ಸ್ಪರ್ಧಾತ್ಮಕ ಜಗತ್ತು. ಬಹಳಷ್ಟು ಪೋಷಕರು, ವಿದ್ಯಾರ್ಥಿಗಳ ಕನಸು ಸ್ಪರ್ಧಾತ್ಮಕ ಪರೀಕ್ಷೆಯೇ ಆಗಿದೆ. ಈ ಮೂಲಕ ಹಿಡಿಯಬಹುದಾದ ಐ.ಎ.ಎಸ್., ಐ.ಪಿ.ಎಸ್., ಕೆ.ಎ.ಎಸ್. ನಂತಹ ಹುದ್ದೆಗಳ ಮೇಲೆ ಸರ್ವರ ಕಣ್ಣು. ಆದರೆ ಬಹುತೇಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗ್ರಹಿಸದೆ ತಮ್ಮ ಗುರಿ ಈಡೇರಿಕೆಯಲ್ಲಿ ವಿಫಲರಾಗುತ್ತಿದ್ದಾರೆ. ಅಂತಹವರಿಗೆ ಕೆ.ಎಸ್.ಒ.ಯು. ಒಂದು ಸಿದ್ಧೌಷಧವಾಗಿದೆ.ಹೀಗಿದೆ ಸಂಬಂಧ

ಬಹು ವರ್ಷಗಳ ನಿರಂತರ ಅಧ್ಯಯನದ ನಂತರವೂ ಹಲವು ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುವುದೇ ಇಲ್ಲ. ಅದಕ್ಕೆ ಕಾರಣ, ಅಂತಹವರಿಗೆ ಪ್ರಶ್ನೆ ಪತ್ರಿಕೆಯ ಸಂರಚನೆ ಬಗ್ಗೆ ನಿಖರ ಮಾಹಿತಿಯೇ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ 100 ಅಂಕಗಳ ಪ್ರಶ್ನೆಪತ್ರಿಕೆ 18 ವಿಷಯಗಳನ್ನು ಒಳಗೊಂಡಿರುತ್ತದೆ. (ಉದಾ: ಭಾರತ ಸಂವಿಧಾನ, ವಿಜ್ಞಾನ, ಪ್ರಚಲಿತ ವಿದ್ಯುನ್ಮಾನಗಳು, ಕ್ರೀಡೆ...) ಈ ಪ್ರಶ್ನೆಪತ್ರಿಕೆಯನ್ನು ಸಮರ್ಥವಾಗಿ ಎದುರಿಸಲು ಪ್ರಾತಿನಿಧ್ಯದ ಆಧಾರದ ಮೇಲೆ ಸಿದ್ಧತೆ ನಡೆಸಬೇಕಾದ ಅನಿವಾರ್ಯತೆ ಇರುತ್ತದೆ. ವಿದ್ಯಾರ್ಥಿಗಳು ಈ ಕುರಿತ ಮಾಹಿತಿಯ ಕೊರತೆಯಿಂದ ಕೇವಲ 5-6 ವಿಷಯಗಳನ್ನಷ್ಟೇ ದೀರ್ಘ ಅಧ್ಯಯನ ಮಾಡಿ, ಪರೀಕ್ಷೆಯಲ್ಲಿ ನಿರಾಸೆ ಅನುಭವಿಸುತ್ತಾರೆ. ಈ ಸಮಸ್ಯೆಗೆ ಕೆ.ಎಸ್.ಒ.ಯು. ತಾನು ಬೋಧಿಸುವ ವಾರ್ಷಿಕ ವಿಷಯಗಳಿಗೆ ಸಿದ್ಧಪಡಿಸುವ ಸಾಮಾನ್ಯ ಪಠ್ಯ ಸಾಮಗ್ರಿಗಳು ಸೂಕ್ತ ಪರಿಹಾರ ಆಗಬಲ್ಲವು.ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಐಚ್ಛಿಕ ವಿಷಯವನ್ನು ಹೊರತುಪಡಿಸಿ, ಸಾಮಾನ್ಯ ಜ್ಞಾನ ಪತ್ರಿಕೆಯ ಸಿದ್ಧತೆಗೆ ಕನಿಷ್ಠ ಎರಡು ವರ್ಷಗಳ  ಅಧ್ಯಯನದ ಅವಶ್ಯಕತೆ ಇರುತ್ತದೆ. ಅಂದರೆ, ಕಲಾ ವಿಭಾಗದ ವಿದ್ಯಾರ್ಥಿಗಳು ತಮ್ಮ ಪದವಿ ಅಧ್ಯಯನದ 5-6 ವಿಷಯಗಳನ್ನು ಹೊರತುಪಡಿಸಿದರೂ ಉಳಿದ 11-12 ವಿಷಯಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲೇಬೇಕಿರುತ್ತದೆ. ಅದೇ ರೀತಿ ವಿಜ್ಞಾನದ ವಿದ್ಯಾರ್ಥಿಗಳು ಕೂಡ ಸಾಮಾಜಿಕ ವಿಜ್ಞಾನ ಸೇರಿದಂತೆ 10-11 ವಿಷಯಗಳನ್ನು ಕಡ್ಡಾಯವಾಗಿ ಓದಬೇಕಿರುತ್ತದೆ. ಈ 18 ವಿಷಯಗಳನ್ನು ಬಹುಮುಖ್ಯವಾದವು ಮತ್ತು ಎರಡನೇ ಹಂತದ ವಿಷಯಗಳೆಂದು ವಿಂಗಡಣೆ ಮಾಡಿಕೊಳ್ಳಬೇಕಾಗುತ್ತದೆ. ಉದಾ- (ಇತಿಹಾಸ, ಭಾರತ ಸಂವಿಧಾನ, ವಿಜ್ಞಾನ,  ಕ್ರೀಡೆ ಮುಂತಾದವು ಮೊದಲ ಹಂತದಲ್ಲಿ ಬರುತ್ತವೆ. ಅಂತರ ರಾಷ್ಟ್ರೀಯ ಸಂಬಂಧ, ಮನಃಶಾಸ್ತ್ರ, ಆವಿಷ್ಕಾರದಂತಹವು ಎರಡನೇ ಹಂತದ ವಿಷಯಗಳಾಗಿರುತ್ತವೆ.ಮೊದಲ ಹಂತದ ವಿಷಯಗಳಿಗೆ ಕನಿಷ್ಠ ಮೂರು ತಿಂಗಳು ಮತ್ತು ಎರಡನೇ ಹಂತದ ವಿಷಯಗಳಿಗೆ ಕನಿಷ್ಠ ಎರಡು ತಿಂಗಳುಗಳ ಅಧ್ಯಯನ ಅಗತ್ಯ. ಹೀಗಾಗಿ ಮೊದಲ ಹಂತದ 10 ಹಾಗೂ ಎರಡನೇ ಹಂತದ 8 ವಿಷಯಗಳು ಸೇರಿ ಒಟ್ಟು 46 ತಿಂಗಳು ಅಧ್ಯಯನಕ್ಕೆ ಅಗತ್ಯವಾಗಿರುತ್ತದೆ. ಅಂದರೆ 4 ವರ್ಷಗಳ ನಿರಂತರ ಅಧ್ಯಯನ ಹಾಗೂ ಆಸಕ್ತಿಯನ್ನು ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಆದ್ದರಿಂದ ಅಧ್ಯಯನದ ಈ ಸುದೀರ್ಘ ಅವಧಿಯನ್ನು ಕಡಿಮೆ ಮಾಡಿಕೊಳ್ಳಲೇಬೇಕಾದುದು ಅನಿವಾರ್ಯ. ಅದಕ್ಕೆ ಮಾಡಬೇಕಾದ ಮೊದಲ ಕೆಲಸವೆಂದರೆ, ಕಡಿಮೆ ಅವಧಿಯಲ್ಲೇ ಪರೀಕ್ಷೆಯ ಅವಶ್ಯಕತೆಗೆ ಅನುಗುಣವಾಗಿ ಸೀಮಿತ ಪಠ್ಯವನ್ನು ಸಿದ್ಧಪಡಿಸಿಕೊಳ್ಳುವುದು. ಆದರೆ ಇದು ಅತ್ಯಂತ ಕಠಿಣ ಹಾದಿ. ಉದಾಹರಣೆಗೆ, ವಿಜ್ಞಾನ ವಿಭಾಗದ ವಿದ್ಯಾರ್ಥಿಯೊಬ್ಬ ಭಾರತ ಸಂವಿಧಾನದ ಪೂರ್ಣ ಪಠ್ಯವನ್ನು, ಸ್ಪರ್ಧಾತ್ಮಕ ಆಯಾಮಕ್ಕೆ ತಕ್ಕಂತೆ ಸಂಕ್ಷಿಪ್ತಗೊಳಿಸಿಕೊಳ್ಳುವ ಪ್ರಕ್ರಿಯೆ ಸರಳವಾದದ್ದಲ್ಲ. ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ವಿಫಲರಾಗುತ್ತಿರುವುದು ಇಲ್ಲಿಯೇ.ಕೆ.ಎಸ್.ಒ.ಯು. ಆಸರೆ

ಮುಕ್ತ ವಿ.ವಿ.ಯು ವಿಜ್ಞಾನ ಮತ್ತು ಕಲಾ ವಿಭಾಗಗಳೆರಡಕ್ಕೂ ನೀಡುತ್ತಿರುವ ಸಿದ್ಧಪಠ್ಯಗಳು ಅತ್ಯಂತ ಸ್ಪರ್ಧಾಪೂರಕ ಮತ್ತು ಸರಳವಾಗಿವೆ. ಉದಾ: ಕಲಾ ವಿಭಾಗದ ವಿದ್ಯಾರ್ಥಿಯೊಬ್ಬ ವಿಜ್ಞಾನಕ್ಕೆ ಸಂಬಂಧಿಸಿದ ಕೆ.ಎಸ್.ಒ.ಯು. ಸಿದ್ಧಪಠ್ಯವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಹಾಗೂ ಅರ್ಥಗರ್ಭಿತವಾಗಿ ಅಧ್ಯಯನ ಮಾಡಬಹುದು. ಆಗ ಆತನಿಗೆ ತಾನು  ಕಡ್ಡಾಯವಾಗಿ ಸಿದ್ಧಪಡಿಸಿಕೊಳ್ಳಲೇ ಬೇಕಿದ್ದ 10-12 ವಿಷಯಗಳ ಸಿದ್ಧತೆಯ ಹೊರೆ ಕಡಿಮೆಯಾಗುತ್ತದೆ. ಆಗ ತನ್ನ ಸಮಯವನ್ನು ಅತ್ಯಂತ ವ್ಯವಸ್ಥಿತವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.ಸಾಕಷ್ಟು ಬಾರಿ ಸ್ಪರ್ಧಾರ್ಥಿಗಳು ಆಧಾರ ಗ್ರಂಥಗಳ ಹುಡುಕಾಟಕ್ಕೇ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಾರೆ. ಇನ್ನು ಕೆಲವರು ಮೂಲ ಗ್ರಂಥಗಳ ಅಧ್ಯಯನವನ್ನೇ ಕೈಗೊಳ್ಳದೆ, ಪರೀಕ್ಷಾ ಅಧ್ಯಯನವನ್ನು ಅಪೂರ್ಣಗೊಳಿಸಿಕೊಳ್ಳುತ್ತಾರೆ. ಸಾಮಾನ್ಯ ಜ್ಞಾನವೆಂದರೆ ಕೇವಲ ಒಂದೆರಡು ನಿಯತಕಾಲಿಕಗಳು ಮತ್ತು ನಿಗದಿತ ಪರೀಕ್ಷೆಗಳಿಗೆಂದೇ ಸಿದ್ಧಪಡಿಸಿದ ಪಠ್ಯಪುಸ್ತಕಗಳ ಅಧ್ಯಯನವಷ್ಟೇ ಪರಿಪೂರ್ಣ ಎಂಬುದು ಬಹುತೇಕರ ಭಾವನೆ. ಇವುಗಳಿಂದ ಉಪಯೋಗವಿಲ್ಲ ಎಂದು ಹೇಳಲಾಗದು. ಆದರೆ ಇವುಗಳನ್ನಷ್ಟೇ ಓದುವುದರಿಂದ ಕೇವಲ ಶೇ 12- 15ರಷ್ಟು ಉಪಯೋಗ ಮಾತ್ರ ಆಗಬಲ್ಲದು. ಉಳಿದ ಶೇ 85ರಷ್ಟು ಪ್ರಶ್ನೆಗಳಿಗೆ ನಾವು ಮೂಲ ಗ್ರಂಥಗಳ ಅಧ್ಯಯನವನ್ನೇ ಕೈಗೊಳ್ಳಬೇಕಾಗುತ್ತದೆ. ಅರ್ಥಶಾಸ್ತ್ರದ ಬಗ್ಗೆ ಒಂದು ಅಥವಾ ಎರಡು ಪ್ರಶ್ನೆಗಳನ್ನು ಕೇಳಿದ್ದರೆ, ಪರೀಕ್ಷಾ ಸಮಿತಿಯ ಸದಸ್ಯರು ಯಾವುದಾದರೂ  ಆಧಾರ ಗ್ರಂಥವನ್ನು ಅಭ್ಯಸಿಸಿಯೇ ಈ ಪ್ರಶ್ನೆಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಅದು ಬಿಟ್ಟು ಯಾವುದೋ ನಿಯತಕಾಲಿಕ ಅಥವಾ ಪದವಿ ಪಠ್ಯವನ್ನು ಆಧಾರವಾಗಿ ಇಟ್ಟುಕೊಂಡು ಅವರು ಪ್ರಶ್ನೆಗಳನ್ನು ಸಿದ್ಧಪಡಿಸುವುದಿಲ್ಲ.ವಿದ್ಯಾರ್ಥಿಗಳ ದೀರ್ಘ ಅಧ್ಯಯನವನ್ನು ಪರೀಕ್ಷೆ ಮಾಡುವಂತಹ ಪ್ರಶ್ನೆಗಳನ್ನು ರಚಿಸಬೇಕಾದ ಸವಾಲು ಅವರ ಮೇಲಿರುತ್ತದೆ. ಈ ಹಿನ್ನೆಲೆಯಲ್ಲಿ, ಸೂಕ್ಷ್ಮಗ್ರಾಹಿಗಳಾಗುವ ಅವರು ತಮ್ಮ ಅಧ್ಯಯನಕ್ಕೆ ಅಧಿಕೃತ ಲೇಖನ ಗ್ರಂಥ, ಸರ್ಕಾರಿ ಇಲಾಖಾ ವರದಿಗಳು, ಗೆಜೆಟ್ ಮತ್ತು ಸರ್ಕಾರಿ ದಾಖಲೆಗಳನ್ನು ಆಶ್ರಯಿಸುತ್ತಾರೆ. ಅರ್ಥಶಾಸ್ತ್ರದ 2-3 ಪ್ರಶ್ನೆಗಳಿಗೆ ಉತ್ತರಿಸಲು ಪರೀಕ್ಷಾರ್ಥಿಗಳು ಯು.ಪಿ.ಎಸ್.ಸಿ. ಪಠ್ಯಕ್ರಮದ ಅರ್ಥಶಾಸ್ತ್ರದ ಸಿಲೆಬಸ್‌ನ ಸುಮಾರು 24 ವಿಷಯಗಳಿಗೂ ಈ ಮೇಲಿನ ಆಧಾರ ಗ್ರಂಥಗಳನ್ನೇ ಆಧರಿಸಿ ಅಧ್ಯಯನ ಕೈಗೊಳ್ಳಬೇಕಾಗುತ್ತದೆ. ಇಲ್ಲವಾದರೆ ತಮ್ಮ ಅಧ್ಯಯನ ಮತ್ತು ಪ್ರಶ್ನೆ ಪತ್ರಿಕೆಯ ಸಂರಚನೆ ಎರಡೂ ಬೇರೆ ಬೇರೆಯಾಗಿ ಪರೀಕ್ಷಾರ್ಥಿಗಳು ಸ್ಪರ್ಧೆಯ ಯಶಸ್ಸಿನಿಂದ ದೂರ ಉಳಿಯಬೇಕಾಗುತ್ತದೆ.ಕೆ.ಎಸ್.ಒ.ಯು.ವಿನ  ಪ್ರತಿ ವಿಭಾಗದ ಅಧ್ಯಯನ ಸಾಮಗ್ರಿಯೂ ನಿಗದಿತ ಸಮಿತಿಯಿಂದ ರಚನೆಯಾಗಿದ್ದು, ಈ ಸಮಿತಿಗಳು ತಮ್ಮ ಪಾಲಿನ ಅಧ್ಯಯನ ಸಾಮಗ್ರಿಯನ್ನು ಸಿದ್ಧಪಡಿಸಲು ಮೇಲಿನ ಮಾದರಿಯ ಸರ್ಕಾರಿ ಪ್ರಕಟಣೆಗಳನ್ನೇ ಅವಲಂಬಿಸಿರುತ್ತವೆ. ಇದರಿಂದ ಪರೀಕ್ಷಾರ್ಥಿ ಪುನಃ ಪ್ರತ್ಯೇಕ ಆಧಾರ ಗ್ರಂಥಗಳ ಹುಡುಕಾಟದಲ್ಲಿ ತೊಡಗಬೇಕಾದ ಅವಶ್ಯಕತೆ ಬರುವುದಿಲ್ಲ. ಹೀಗಾಗಿ 18 ವಿಷಯಗಳ ಅಧ್ಯಯನದ ಅವಧಿ ತಾನೇತಾನಾಗಿ ಕಡಿಮೆಯಾಗುತ್ತದೆ. ಇದು ಪರೀಕ್ಷಾರ್ಥಿಯ ಮನೋಸಾಮರ್ಥ್ಯ ವೃದ್ಧಿಗೆ ಪೂರಕವಾಗುತ್ತದೆ.ಹಾಗೆಂದ ಮಾತ್ರಕ್ಕೆ ಕೆ.ಎಸ್.ಒ.ಯು. ಸಿದ್ಧಪಠ್ಯದ ಅಧ್ಯಯನವಷ್ಟೇ ನಿಮಗೆ ಐ.ಎ.ಎಸ್.ನಂತಹ ಹುದ್ದೆಯನ್ನು  ತಂದುಕೊಟ್ಟುಬಿಡುತ್ತದೆ ಎಂದು ಅರ್ಥವಲ್ಲ. ಆದರೆ ಇದು ಅನಗತ್ಯ ಅಧ್ಯಯನವನ್ನು ತಪ್ಪಿಸುವ ಹಾಗೂ ಅಧ್ಯಯನದ ಕಾಲಾವಧಿಯನ್ನು ಸೀಮಿತಗೊಳಿಸಿ ಕಠಿಣ ಹಾದಿಯನ್ನು ಸುಲಭವಾಗಿಸುವ ಮಾರ್ಗ ಆಗಬಲ್ಲದು. ಈ ಮೂಲಕ, ಉನ್ನತ ಹುದ್ದೆ ಹಿಡಿಯುವ ಪರೀಕ್ಷಾರ್ಥಿಗಳ ಕನಸನ್ನು ಗಟ್ಟಿಗೊಳಿಸಬಲ್ಲದು.Post Comments (+)