`ಸ್ಪರ್ಧಾ ಪರೀಕ್ಷೆ ಯಶಸ್ಸಿಗೆ ಪರಿಶ್ರಮ ಅಗತ್ಯ'

7

`ಸ್ಪರ್ಧಾ ಪರೀಕ್ಷೆ ಯಶಸ್ಸಿಗೆ ಪರಿಶ್ರಮ ಅಗತ್ಯ'

Published:
Updated:
`ಸ್ಪರ್ಧಾ ಪರೀಕ್ಷೆ ಯಶಸ್ಸಿಗೆ ಪರಿಶ್ರಮ ಅಗತ್ಯ'

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸತತ ಅಧ್ಯಯನ, ಶ್ರದ್ಧೆ, ಛಲ ಅಗತ್ಯ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಹೇಳಿದರು.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಯುಜಿಸಿ-ನೆಟ್ ಪರೀಕ್ಷೆ ತರಬೇತಿ ಶಿಬಿರಾರ್ಥಿಗಳಿಗೆ ಶುಭಹಾರೈಕೆ ಮತ್ತು `ಮುಕ್ತ ಭಂಡಾರ' ಅಧ್ಯಯನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.ಯುಜಿಸಿ ವೇತನ ಶ್ರೇಣಿಯು ಬೋಧಕ ವೃತ್ತಿ ಯನ್ನು ಹೆಚ್ಚು ಆಕರ್ಷಣೀಯವಾಗಿಸಿದೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ನೆಟ್) ಯಶಸ್ಸು ಸಾಧಿಸುವುದು ಸುಲಭವಲ್ಲ. ಯುಜಿಸಿ ವೇತನ ಶ್ರೇಣಿ ಉಪನ್ಯಾಸಕ ಹುದ್ದೆಗೆ ಆಯ್ಕೆಯಾಗಲು ನೆಟ್ ಅರ್ಹತೆ ಕಡ್ಡಾಯ. ಸೂಕ್ತ ಮಾರ್ಗದರ್ಶನ, ನಿರಂತರ ಅಧ್ಯಯನ, ಕಠಿಣ ಪರಿಶ್ರಮಪಟ್ಟರೆ ಈ ಪರೀಕ್ಷೆಯಲ್ಲಿ ಜಯ ಸಾಧಿಸಬಹುದು.ಸಾಮರ್ಥ್ಯವೇ ಸ್ಪರ್ಧಾ ಪರೀಕ್ಷೆಯ ಅಸ್ತ್ರ ಎಂದು ಕಿವಿಮಾತು ಹೇಳಿದರು.ವಿದ್ಯಾರ್ಥಿಗಳು ಬೋಧಕರನ್ನು ಆದರ್ಶವಾಗಿಸಿ ಕೊಳ್ಳುವಷ್ಟರ ಮಟ್ಟಿನ ಜ್ಞಾನ, ಉತ್ತಮ ಗುಣ ಗಳನ್ನು ಶಿಕ್ಷಕರು ಹೊಂದಿರಬೇಕು. ವಿದ್ಯಾರ್ಥಿಗಳ ತುಮುಲಗಳನ್ನು ಅರ್ಥೈಸಿಕೊಳ್ಳುವ, ಅವರನ್ನು ಅಧ್ಯಯನದತ್ತ ಹೊರಳಿಸುವ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕಲೆ ಶಿಕ್ಷಕರಿಗೆ ಕರಗತವಾಗಿರಬೇಕು. ವಿದ್ಯಾರ್ಥಿಯ ಸಮಗ್ರ ವ್ಯಕ್ತಿತ್ವ ರೂಪಿಸುವ ಶಿಲ್ಪಿ ಶಿಕ್ಷಕ ಎಂದು ಹೇಳಿದರು.ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ನೆಟ್ ಅರ್ಹತೆ ಹೊಂದಿದವರ ಸಂಖ್ಯೆ ಕಡಿಮೆ ಇದೆ. ಮುಕ್ತ ವಿಶ್ವವಿದ್ಯಾನಿಲಯ ಈಚೆಗೆ 42 ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ನೆಟ್ ಅರ್ಹತೆ ಹೊಂದಿದ ಮೂವರು ಗಣಿತ ಸಹ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಇತರ ವಿಷಯಗಳಲ್ಲಿ ಅರ್ಜಿ ಸಲ್ಲಿಸಿದ್ದವರ ಸಂಖ್ಯೆ ಇದಕ್ಕಿಂತ ಭಿನ್ನವಾಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ನೆಟ್ ತೇರ್ಗಡೆ ಪ್ರಮಾಣದಲ್ಲಿ ದಕ್ಷಿಣ ಭಾರತೀಯ ರಿಗಿಂತ ಉತ್ತರ ಭಾರತೀಯರ ಪ್ರಮಾಣ ಹೆಚ್ಚಿದೆ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಈ ಪರೀಕ್ಷೆಗೆ ಸಜ್ಜುಗೊಳಿಸಲು ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ತರಬೇತಿ ಕೇಂದ್ರದಲ್ಲಿ ಸೂಕ್ತ ಮಾರ್ಗದರ್ಶನ, ಕಲಿಕಾ ಸಾಮಗ್ರಿ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.ಆನೆ ಯೋಜನೆ ನಿರ್ದೇಶಕ ಅಜಯ್ ಮಿಶ್ರ ಅವರು `ಮುಕ್ತ ಭಂಡಾರ' ಅಧ್ಯಯನ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಮುಕ್ತ ವಿವಿ ಅಧ್ಯಯನ ಕೇಂದ್ರಗಳ ಮುಖ್ಯಸ್ಥ ಡಾ.ಟಿ.ಡಿ.ದೇವೇಗೌಡ, ಶೈಕ್ಷಣಿಕ ಡೀನ್ ವಿಕ್ರಂರಾಜೇ ಅರಸ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry