ಮಂಗಳವಾರ, ಮಾರ್ಚ್ 9, 2021
23 °C
ಪ್ರಜಾವಾಣಿ ಸಹಪಾಠಿ ಸಹಯೋಗದಲ್ಲಿ ‘ವರ್ಬ್ಯಾಟಲ್‌’ ಚರ್ಚಾಸ್ಪರ್ಧೆ

ಸ್ಪರ್ಧಿಯ ಏಟಿಗೆ ಪ್ರತಿಸ್ಪರ್ಧಿ ಎದಿರೇಟು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಪರ್ಧಿಯ ಏಟಿಗೆ ಪ್ರತಿಸ್ಪರ್ಧಿ ಎದಿರೇಟು!

ಹುಬ್ಬಳ್ಳಿ:  ಪ್ರಜಾವಾಣಿ ಸಹಪಾಠಿ ಸಹಯೋಗದಲ್ಲಿ ಟಿವಿ ಹೌಸ್‌ ನೆಟ್‌ವರ್ಕ್‌ ಆಯೋಜಿಸಿರುವ ‘ವರ್ಬ್ಯಾಟಲ್‌’ ಹುಬ್ಬಳ್ಳಿ ವಲಯ ಮಟ್ಟದ ಚರ್ಚಾಸ್ಪರ್ಧೆಯಲ್ಲಿ ಶುಕ್ರವಾರವೂ ನೂರಾರು ಸ್ಪರ್ಧಿಗಳು ಪಾಲ್ಗೊಂಡರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಶಾಲಾ ವಿದ್ಯಾರ್ಥಿಗಳು ಸ್ಪರ್ಧೆಯ ವಿಷಯ ಕುರಿತು ಸಮರ್ಥವಾಗಿ ವಾದ – ಪ್ರತಿವಾದ ಮಂಡಿಸಿದರು.‘ವರ್ಬ್ಯಾಟಲ್‌’ ಸ್ಥಾಪಕ ದೀಪಕ್‌ ತಿಮ್ಮಯ ನೇತೃತ್ವದಲ್ಲಿ ನಗರದ ದೇಶಪಾಂಡೆ ಫೌಂಡೇಷನ್‌ ಸಭಾಂಗಣದಲ್ಲಿ ಈ ಸ್ಪರ್ಧೆ ಜರುಗಿತು. ಹುಬ್ಬಳ್ಳಿ– ಧಾರವಾಡ, ದಾವಣಗೆರೆ, ಚಿತ್ರದುರ್ಗ, ಬೆಳಗಾವಿ, ಗದಗ, ಉತ್ತರ ಕನ್ನಡ ಮಾತ್ರವಲ್ಲದೆ, ಬೀದರ್‌, ಕಲಬುರ್ಗಿ ಜಿಲ್ಲೆಗಳಿಂದಲೂ ಸ್ಪರ್ಧಿಗಳು ಬಂದಿದ್ದರು. 75 ತಂಡಗಳಂತೆ, 150 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ತಮ್ಮ ವಾದ ಮಂಡಿಸಿದರು.ಮಹಾದಾಯಿ ಯೋಜನೆಯಿಂದ ಹಿಡಿದು, ಬಾಹ್ಯಾಕಾಶದವರೆಗಿನ ಅಂಶಗಳು ಚರ್ಚೆಯಲ್ಲಿ ಪ್ರಸ್ತಾಪವಾದವು. ‘ಭಾರತದಲ್ಲಿ ಕ್ರಿಕೆಟ್‌ ಧರ್ಮವಾಗಿ ಉಳಿದಿಲ್ಲ’ ಎಂಬ ವಿಷಯ ಕುರಿತು ಮಾತನಾಡಿದ ವಿದ್ಯಾರ್ಥಿಗಳು, ಸಚಿನ್‌ ತೆಂಡೂಲ್ಕರ್‌ ಅವರನ್ನು ‘ದೇವರು’ ಎಂದು ಕರೆದ ಮೇಲೆ, ಕ್ರಿಕೆಟ್‌ ‘ಧರ್ಮ’ ಆಗಲೇಬೇಕು. ಭಾರತದಲ್ಲಿ ಜನರು ಕ್ರಿಕೆಟ್‌ ಅನ್ನೇ ಸೇವಿಸುತ್ತಾರೆ, ಕುಡಿಯುತ್ತಾರೆ ಮತ್ತು ಉಸಿರಾಡುತ್ತಾರೆ.ಈಗಲೂ ದೇಶದಲ್ಲಿ  ಕ್ರಿಕೆಟ್‌ ಧರ್ಮವಾಗಿಯೇ ಉಳಿದಿದೆ ಎಂದು ವಾದಿಸಿದರು.  ‘ಕ್ರಿಕೆಟ್‌’ ಆಟವನ್ನು ಧರ್ಮ ಎಂದು ಪರಿಗಣಿಸುವುದಾದರೆ, ದೇಶದಲ್ಲಿ ಆಡುವ ಎಲ್ಲ ಆಟಗಳನ್ನೂ ಧರ್ಮ ಎಂದೇ ಪರಿಗಣಿಸಬೇಕಾಗುತ್ತದೆ. ಕ್ರಿಕೆಟ್‌ ಧರ್ಮವಲ್ಲ, ಅದು ಕೇವಲ ದುಡ್ಡು ಮಾಡುವ ಕ್ರೀಡೆಯಾಗಿದೆ. ವಿರಾಟ್‌ ಕೊಹ್ಲಿ, ಮಹೇಂದ್ರಸಿಂಗ್‌ ಧೋನಿ ಯಾರೇ ಆಡಿದರೂ, ಹಣಕ್ಕಾಗಿ ಆಡುತ್ತಾರೆಯೇ ವಿನಾ ದೇಶಕ್ಕಾಗಿ ಅಲ್ಲ. ದೇಶದ ಯುವಶಕ್ತಿಯ ಶ್ರಮ ಮತ್ತು ಸಮಯ ಕ್ರಿಕೆಟ್‌ನಿಂದ ವ್ಯರ್ಥವಾಗುತ್ತಿದೆ ಎಂದು ಮತ್ತೊಂದು ತಂಡದ ವಿದ್ಯಾರ್ಥಿಗಳು ಎದಿರೇಟು ನೀಡಿದರು.ದೇಶದಲ್ಲಿ, ಟಿವಿಯಲ್ಲಿ ಕ್ರೀಡೆಯನ್ನು ವೀಕ್ಷಿಸುವವರ ಸಂಖ್ಯೆ 112 ದಶಲಕ್ಷ ಇದೆ. ಅದೇ ರೀತಿ ಟ್ವೆಂಟಿ–ಟ್ವೆಂಟಿ ಕ್ರಿಕೆಟ್‌ ಪಂದ್ಯ ವೀಕ್ಷಿಸುವವರ ಸಂಖ್ಯೆ 20 ದಶಲಕ್ಷವಿದೆ. ಹೀಗಿದ್ದಾಗ, ಕ್ರಿಕೆಟ್‌ ಒಂದು ಧರ್ಮ ಎಂದು ಹೇಳುವುದು ಮೂರ್ಖತನ’ ಎಂದು ವಾದಿಸಿದರು.‘ಜನಸಾಮಾನ್ಯರಿಗೆ ವಿಜ್ಞಾನಕ್ಕಿಂತಲೂ ಮೂಢನಂಬಿಕೆಗಳೇ ಹೆಚ್ಚು ಸಮಾಧಾನ ನೀಡುತ್ತವೆ’ ಎಂಬ ವಿಷಯ ಕುರಿತು ನಡೆದ ಚರ್ಚೆ ಸ್ವಾರಸ್ಯಕರವಾಗಿತ್ತು. ಭಾರತೀಯರು ವಿಜ್ಞಾನಕ್ಕಿಂತ ನಂಬಿಕೆಗಳಲ್ಲಿಯೇ ಹೆಚ್ಚು ವಿಶ್ವಾಸ ಹೊಂದಿರುತ್ತಾರೆ. ದೇಶದಲ್ಲಿ ಡಿಸ್ಕವರಿ ಚಾನೆಲ್‌ ನೋಡುವವರಿಗಿಂತ ಜ್ಯೋತಿಷ, ವಾಸ್ತು ಕುರಿತ ಕಾರ್ಯಕ್ರಮ ನೋಡುವವರ ಸಂಖ್ಯೆ ಹೆಚ್ಚು ಇದೆ. ಜನರ ನಂಬಿಕೆ (ಮೂಢ ನಂಬಿಕೆ)ಗಳೇ ಅವರಿಗೆ ಶ್ರೀರಕ್ಷೆಯಾಗಿದೆ ಎಂದು ಒಂದು ತಂಡ ವಾದ ಮುಂದಿಟ್ಟಿತು. ಇದಕ್ಕುತ್ತರವಾಗಿ ಮಾತನಾಡಿದ ಮತ್ತೊಂದು ತಂಡ, ‘ಅಪಘಾತವಾದಾಗ, ಅನಾರೋಗ್ಯ ಉಂಟಾದಾಗ ಮೊದಲು ನಾವು ಆಸ್ಪತ್ರೆಗೆ ಓಡುತ್ತೇವೆಯೇ ವಿನಾ ದೇವಸ್ಥಾನಕ್ಕಲ್ಲ. ವಿಜ್ಞಾನ ಎನ್ನುವುದು ಸತ್ಯ. ಮೂಢನಂಬಿಕೆ ಎನ್ನುವುದು ಮಿಥ್ಯ’ ಎಂದು ವಾದಿಸಿತು.‘ಬಾಹ್ಯಾಕಾಶ ವಿಜ್ಞಾನದಲ್ಲಿ ದೊಡ್ಡ ಹೆಸರು ಮಾಡಿರುವ ಇಸ್ರೋದ ವಿಜ್ಞಾನಿಗಳೂ ಯಾವುದೇ ಉಪಗ್ರಹ ಉಡಾವಣೆಗೂ, ರಾಕೆಟ್‌ ಮಾದರಿಯನ್ನು ತಿರುಪತಿ ವೆಂಕಟೇಶ್ವರನ ಮುಂದಿಟ್ಟು ಪೂಜೆ ಸಲ್ಲಿಸುತ್ತಾರೆ. ಕಾರ್ಯಾಚರಣೆ ಯಶಸ್ವಿಯಾಗಲಿ ಎಂದು ಬೇಡಿಕೊಳ್ಳುತ್ತಾರೆ’ ಎಂದು ವಾದಿಸಿದಾಗ ಪ್ರತಿಸ್ಪರ್ಧಿ ತಂಡ ಮೌನಕ್ಕೆ ಶರಣಾಯಿತು.

ಇಂತಹ ಹತ್ತು ವಿವಿಧ ವಿಷಯಗಳು ಅಥವಾ ಹೇಳಿಕೆಗಳ ಕುರಿತು ವಿದ್ಯಾರ್ಥಿ ಗಳು ಚರ್ಚೆ ನಡೆಸಿದರು. ಸುರೇಶ ಹೊರಕೇರಿ, ರಿಯಾಜ್‌ ಬಸರಿ, ವಿಜಯ್‌ ಕುಲಕರ್ಣಿ ತೀರ್ಪುಗಾರರಾಗಿದ್ದರು.ಶನಿವಾರ ಹಿರಿಯರ ವಿಭಾಗದ ಸ್ಪರ್ಧೆ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವರು. ಆ್ಯಕ್ಟ್‌ ಫೈಬರ್‌ನೆಟ್‌, ವೆನ್‌ಕಾಬ್‌ ಚಿಕನ್ಸ್‌  ಹಾಗೂ ಮೈಕ್ರೋಲ್ಯಾಬ್ಸ್‌ ಕಂಪೆನಿ ಸ್ಪರ್ಧೆಯ ಪ್ರಾಯೋಜಕತ್ವ ವಹಿಸಿವೆ.ಅಂತಿಮ ಸುತ್ತಿಗೆ ಆಯ್ಕೆಯಾದ ತಂಡಗಳು

ಹುಬ್ಬಳ್ಳಿ:  ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 75 ತಂಡಗಳ ಪೈಕಿ 18 ತಂಡಗಳ 34 ವಿದ್ಯಾರ್ಥಿಗಳು ಅಂತಿಮ ಹಂತದ ಸುತ್ತಿಗೆ ಆಯ್ಕೆಯಾದರು.

ಹುಬ್ಬಳ್ಳಿಯ ಚೇತನಾ ಪಬ್ಲಿಕ್‌ ಶಾಲೆಯ ಮೂರು ತಂಡಗಳು (ರಮಿತಾ ಕೊಮ್ಮಿ, ನೀಲಂ ಗುಡಿಹಾಳ, ಸುಷ್ಮಿತಾ ಹುಬ್ಬಳ್ಳಿ, ಅಂಕಿತಾ ಕುಡವ, ಎಂ. ಹರ್ಷಿತಾ, ಎ.ಎಸ್. ಆಕರ್ಷಿತ). ಸೇಂಟ್‌ ಆಂಥೋನಿ ಪಬ್ಲಿಕ್‌ ಶಾಲೆಯ ನಾಲ್ಕು ತಂಡಗಳು (ಎಂ.ಎಚ್‌. ಶ್ರೀನಿಧಿ, ನಿಖಿಲ್‌ ಕುಲಕರ್ಣಿ, ಎಲ್‌. ಸುಪ್ರಿಯಾ, ಶುಭದಾ ರೇವಣಕರ್‌, ಗ್ಲೋರಿಯಾ ಬೋರಗಾವಿ, ಭೈಯಾ ಸುಬ್ರಮಣಿಯನ್‌, ಎಂ.ಬಿ. ಸುಧನ್ವಾ, ಜಿ.ಡಿ. ಆಕರ್ಷಾ) ಪಿಎಸ್‌ಎಸ್‌ ಇಎಂಆರ್‌ ಶಾಲೆಯ ಮೂರು ತಂಡಗಳು (ಫೈಸಲ್‌ ಖಾನ್‌, ಶ್ರೇಯಸ್‌ ಶಿವಪೂಜಿ, ಟಿ. ಸಚೇತನ್‌, ಪಿ.ಎಚ್‌. ಸಾಹಿಲ್‌, ಎಸ್‌. ನಿಶಾಂತ್‌, ಪ್ರೇಮ ಕಥಾವರಯನ್‌),  ದಾವಣಗೆರೆ ತರಳಬಾಳು ಐಸಿಎಸ್‌ಇ ಶಾಲೆಯ ಮೂರು ತಂಡಗಳು (ಅನ್ಮೋಲ್‌ ತರನ್‌ ಸಬಾಲೆ, ಜಿ.ಎಂ. ತೇಜಸ್ವಿನಿ, ಮೋಹಿತಾ ಮೋಹನ್‌, ಎಂ. ನಾಗಶಮಾ, ಪಿ.ಎಸ್. ಅನುಪಮಾ, ಟಿ.ಆರ್. ವೈಷ್ಣವಿ) ಕೆಎಲ್‌ಎಸ್‌ ಶಾಲೆಯ ಪೂಜಾ ಪಿ. ಗೊಜೇಕರ್‌, ಹರ್ಷವರ್ಧನ ಮಾಂಗ್ಲೆ, ಸೇಕ್ರೆಡ್‌ ಹಾರ್ಟ್‌ ಕಾನ್ವೆಂಟ್‌ ಪ್ರೌಢಶಾಲೆಯ ವಸುಧಾ ಪೈ, ಕಾಶಿಸ್‌ ಲೇವಿಸ್‌, ಶ್ರೀ ಮಂಜುನಾಥೇಶ್ವರ ಇಂಗ್ಲಿಷ್‌ ಮಾಧ್ಯಮ ಸ್ಟೇಟ್‌ ಸ್ಕೂಲ್‌ನ ಅಂಜನಾ ಎಸ್‌. ನಾಯರ್‌, ದೀಕ್ಷಾ ಹಾಗೂ ಬೆಳಗಾವಿಯ ರಾಷ್ಟ್ರೀಯ ಮಿಲಿಟರಿ ಶಾಲೆಯ ಅನಿಕೇತ್‌ ಕುಮಾರ್‌, ಜಿಜ್ಞಾಸು ಆಯ್ಕೆಯಾದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.