ಬುಧವಾರ, ನವೆಂಬರ್ 13, 2019
24 °C

ಸ್ಪರ್ಧೆಯಲ್ಲಿ ಇಬ್ಬರು ಮಹಿಳೆಯರು

Published:
Updated:

ಔರಾದ್: ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದು ಐದು ದಶಕದ ನಂತರ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದಾರೆ.1962ರಿಂದ 2008ರ ವರೆಗೆ 11 ಚುನಾವಣೆ ಕಂಡರೂ ಇಲ್ಲಿ ಯಾವುದೇ ಪಕ್ಷ ಮಹಿಳೆಗೆ ಸ್ಪರ್ಧಿಸಲು ಅವಕಾಶ ನೀಡಿಲ್ಲ. ಸ್ವತಂತ್ರರಾಗಿ ಸ್ಪರ್ಧಿಸಲು ಯಾರೂ ಆಸಕ್ತಿ ತೋರಿರಲಿಲ್ಲ. ಮೀಸಲು ಕ್ಷೇತ್ರವಾದ ಬಳಿಕ ನಡೆದಿರುವ ಎರಡನೇ ಚುನಾವಣೆಯಲ್ಲಿ ಇಬ್ಬರು ಮಹಿಳೆಯರು ಕಣದಲ್ಲಿದ್ದಾರೆ.ತಾಲ್ಲೂಕಿನ ಭವಾನಿ ಬಿಜಲಗಾಂವ್ ಗ್ರಾಮದ ಬಿ.ಎಡ್. ಪದವೀಧರೆ ಕಸ್ತೂರಬಾಯಿ ಗುಣವಂತರಾವ ಮತ್ತು ಎಕಂಬಾ ಗ್ರಾಮದ ಸುಲೋಚನಾ ರಾಠೋಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಪ್ರಚಾರದ ವೇಳೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಕಸ್ತೂರಬಾಯಿ. `ನಾನು ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸಿದ್ದೆ. ಸಿಗಲಿಲ್ಲ. ಪಕ್ಷೇತರರಾಗಿ ಸ್ಪರ್ಧಿಸಿದ್ದೇನೆ. ಸ್ವಸಹಾಯ ಸಂಘದವರು ಸೇರಿದಂತೆ ಎಲ್ಲೆಡೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ' ಎಂದರು.ನಮ್ಮದು ಸಣ್ಣ ಕುಟುಂಬ. ನನ್ನ ಬಳಿ ಹಣ ಇಲ್ಲ. ಮಹಿಳೆಯರೊಂದಿಗೆ ಎಲ್ಲ ಗ್ರಾಮಗಳಿಗೆ ಸುತ್ತಾಡಿದ್ದೇನೆ.  ಗ್ರಾಮಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಯುವತಿಯರು, ಬಾಣಂತಿಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಮಹಿಳೆಯರ ಸ್ವಾವಲಂಬನೆಗೆ ಪೂರಕ ಯೋಜನೆಗಳು ಜಾರಿಯಾಗಿಲ್ಲ ಎನ್ನುತ್ತಾರೆ.ಎಕಂಬಾ ಗ್ರಾಮದ ಸುಲೋಚನಾ ಶಂಕರಾವ ರಾಠೋಡ ಅವರು, ಕಳೆದ ಬಾರಿ ನಾಮಪತ್ರ ವಾಪಸ್ ಪಡೆದಿದ್ದರು. ಈ ಬಾರಿ ಒತ್ತಡಕ್ಕೆ ಮಣಿಯದೆ ಕಣದಲ್ಲಿ ಇದ್ದಾರೆ. `ನಮಗೂ ಹಕ್ಕಿದೆ. ನಾವ್ಯಾಕೆ ಸ್ಪರ್ಧಿಸಬಾರದು' ಎಂದು ಕೇಳಿದವರಿಗೆ ಖಡಾ ಖಂಡಿತ ಉತ್ತರ ಕೊಟ್ಟು ಭರಾಟೆಯ ಪ್ರಚಾರದಲ್ಲಿ ತೊಡಗಿದ್ದಾರೆ.

ಪ್ರತಿಕ್ರಿಯಿಸಿ (+)