ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಸನ್‌ರೈಸರ್ಸ್‌ ಆಟಗಾರರು?

7

ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಸನ್‌ರೈಸರ್ಸ್‌ ಆಟಗಾರರು?

Published:
Updated:

ಮುಂಬೈ:  ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಭೂತ ಈಗ ಹೈದರಾಬಾದ್‌ ಸನ್‌ರೈಸರ್ಸ್‌ ತಂಡದ ಆಟಗಾರರ ಬೆನ್ನು ಹತ್ತಿದೆ. ಬುಕ್ಕಿ ಚಂದ್ರೀಶ್‌ ಪಟೇಲ್‌ ದೆಹಲಿ ಹಾಗೂ ಮುಂಬೈ ಪೊಲೀಸರ ಎದುರು ನೀಡಿದ ಹೇಳಿಕೆಯಲ್ಲಿ ಈ ವಿಷಯ ಬಹಿರಂಗವಾಗಿದೆ.ಸನ್‌ರೈಸರ್ಸ್‌ ತಂಡದ ಹನುಮ ವಿಹಾರಿ, ಕರಣ್‌ ಶರ್ಮಾ, ಆಶಿಶ್‌ ರೆಡ್ಡಿ ಮತ್ತು ಶ್ರೀಲಂಕಾದ ತಿಸ್ಸಾರ ಪೆರೇರಾ ಅವರ ಹೆಸರು ಫಿಕ್ಸಿಂಗ್‌ನಲ್ಲಿ ಕೇಳಿ ಬಂದಿದೆ. ಮುಂಬೈ ಅಪರಾಧ ವಿಭಾಗದ ಪೊಲೀಸರು ಎರಡು ದಿನಗಳ ಹಿಂದೆ ಆರೋಪ ಪಟ್ಟಿ ಸಲ್ಲಿಸಿದ್ದರು. ಮುಂಬೈನ ಹೋಟೆಲ್‌ವೊಂದರಲ್ಲಿ ಪೊಲೀಸರು ಬುಕ್ಕಿ ಚಂದ್ರೀಶ್‌ನನ್ನು ಬಂಧಿಸಿದ್ದರು.

 

ಐಪಿಎಲ್‌ ಆರನೇ ಆವೃತ್ತಿಯಲ್ಲಿ ಏಪ್ರಿಲ್‌ 17ರಂದು ಪುಣೆಯಲ್ಲಿ ನಡೆದ ಸನ್‌ರೈಸರ್ಸ್‌ ಮತ್ತು ಪುಣೆ ವಾರಿಯರ್ಸ್‌ ನಡುವಿನ ಪಂದ್ಯದ ವೇಳೆ ಫಿಕ್ಸಿಂಗ್‌ ನಡೆದಿತ್ತು ಎಂದು ತಿಳಿದು ಬಂದಿದೆ. ಸ್ಪಾಟ್‌ ಫಿಕ್ಸಿಂಗ್ ನಡೆಸಲು ಇನ್ನೊಬ್ಬ ಬುಕ್ಕಿ ಅಮೀರ್‌ ಮುಂದಾಗಿದ್ದ. ಇದಕ್ಕಾಗಿ ಐದು ಕೋಟಿ ರೂಪಾಯಿ ಹಣದ ಜೊತೆಗೆ ಒಂದು ಕೋಟಿ ರೂಪಾಯಿ ಕಮೀಷನ್‌ ನೀಡಬೇಕು ಎನ್ನುವ ಬೇಡಿಕೆ ಇಟ್ಟಿದ್ದ ಎನ್ನುವುದು ಗೊತ್ತಾಗಿದೆ. ಎರಡು ದಿನಗಳ ಹಿಂದೆ ಮುಂಬೈ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಈ ಬಗ್ಗೆ ಮಾಹಿತಿ ಇದೆ.ಪುಣೆ ಎದುರಿನ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡ 140ಕ್ಕಿಂತ ಹೆಚ್ಚು ರನ್‌ ಗಳಿಸಬಾರದು ಮತ್ತು ಪಂದ್ಯದಲ್ಲಿ ಸೋಲು ಕಾಣಬೇಕು ಎಂಬ ಷರತ್ತು ಇತ್ತು. ಆದರೆ, ಈ ಪಂದ್ಯದಲ್ಲಿ ಸನ್‌ರೈಸರ್ಸ್‌ 11 ರನ್‌ಗಳ ಗೆಲುವು ಸಾಧಿಸಿತ್ತು.ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಆಲ್‌ರೌಂಡರ್‌ ತಿಸ್ಸಾರ ಪೆರೇರಾ ಭಾಗಿಯಾಗಿದ್ದಾರೆ ಎನ್ನುವ ಆರೋಪವನ್ನು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಅಲ್ಲಗೆಳೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry