ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಬಟ್, ಆಸಿಫ್ ತಪ್ಪಿತಸ್ಥರು

7

ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಬಟ್, ಆಸಿಫ್ ತಪ್ಪಿತಸ್ಥರು

Published:
Updated:
ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಬಟ್, ಆಸಿಫ್ ತಪ್ಪಿತಸ್ಥರು

ಲಂಡನ್ (ಪಿಟಿಐ): ಪಾಕಿಸ್ತಾನದ ಕ್ರಿಕೆಟಿಗರಾದ ಸಲ್ಮಾನ್ ಬಟ್ ಮತ್ತು ಮೊಹಮ್ಮದ್ ಆಸಿಫ್ `ಸ್ಪಾಟ್ ಫಿಕ್ಸಿಂಗ್~ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಲಂಡನ್‌ನ ನ್ಯಾಯಾಲಯ ಹೇಳಿದೆ. ಈಗಾಗಲೇ ಸಾಕಷ್ಟು ಬಿಕ್ಕಟ್ಟು ಎದುರಿಸಿರುವ ಪಾಕ್ ಕ್ರಿಕೆಟ್ ಈ ಬೆಳವಣಿಗೆಯಿಂದ ಇನ್ನಷ್ಟು ಅವಮಾನಕ್ಕೆ ಗುರಿಯಾಗಿದೆ.ಇಲ್ಲಿನ ಸೌತ್‌ವಾಕ್ ಕ್ರೌನ್ ನ್ಯಾಯಾಲಯದ 12 ಮಂದಿಯನ್ನೊಳಗೊಂಡ ನ್ಯಾಯಾದರ್ಶಿ ಮಂಡಳಿ ಮಂಗಳವಾರ ತನ್ನ ತೀರ್ಪು ಪ್ರಕಟಿಸಿದೆ. ಬಟ್ ಮೇಲಿದ್ದ ಎರಡು ಆರೋಪ ಹಾಗೂ ಆಸಿಫ್ ಮೇಲಿನ ಒಂದು ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ.ಲಂಚ ಪಡೆಯಲು ಹಾಗೂ ವಂಚನೆಗೆ ಪಿತೂರಿ ನಡೆಸಿದ್ದ ಆರೋಪಗಳು ಬಟ್ ಮೇಲಿದ್ದವು. ಆಸಿಫ್ ಮೇಲೆ ವಂಚನೆಯ ಆರೋಪ ಹೊರಿಸಲಾಗಿತ್ತು. ಇವೆಲ್ಲವೂ ಸಾಬೀತಾಗಿವೆ. 20 ದಿನಗಳ ವಿಚಾರಣೆಯ ಬಳಿಕ ಈ ತೀರ್ಪು ಹೊರಬಿದ್ದಿದೆ. ಇವರ ಮೇಲಿನ ಇನ್ನೊಂದು ಆರೋಪದ ಬಗ್ಗೆ ತೀರ್ಪು ಸದ್ಯದಲ್ಲೇ ಹೊರಬೀಳಲಿದೆ. ತಪ್ಪು ಸಾಬೀತಾಗಿರುವ ಕಾರಣ ಬಟ್  ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ. ನ್ಯಾಯಾಲಯ ಶಿಕ್ಷೆ ಪ್ರಕಟಿಸುವವರೆಗೆ ಇಬ್ಬರಿಗೂ ಜಾಮೀನು ದೊರೆತಿದೆ.ಪಾಕ್ ತಂಡದ ಮೊಹಮ್ಮದ್ ಅಮೀರ್ ಕೂಡಾ `ಸ್ಪಾಟ್ ಫಿಕ್ಸಿಂಗ್~ ಹಗರಣದಲ್ಲಿ ಸಿಲುಕಿದ್ದರು. ಆದರೆ ತಪ್ಪನ್ನು ಒಪ್ಪಿಕೊಂಡ ಕಾರಣ ಅವರನ್ನು ವಿಚಾರಣೆಗೆ ಒಳಪಡಿಸಿರಲಿಲ್ಲ. ಪಾಕ್ ಕ್ರಿಕೆಟ್ ಕಳೆದ ಕೆಲ ಸಮಯಗಳಿಂದ ವಿವಾದಗಳಿಂದಲೇ ಸುದ್ದಿಯಾಗಿತ್ತು. ಮಂಗಳವಾರದ ಬೆಳವಣಿಗೆ ಈ ತಂಡಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ.ಕ್ರಿಕೆಟ್ ವಲಯದಲ್ಲಿ ತಲ್ಲಣ ಉಂಟುಮಾಡಿದ್ದ `ಸ್ಪಾಟ್ ಫಿಕ್ಸಿಂಗ್~ ಪ್ರಕರಣ 2010ರ ಆಗಸ್ಟ್ ತಿಂಗಳಲ್ಲಿ ನಡೆದಿತ್ತು. ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ವೇಳೆ ಆಸಿಫ್ ಮತ್ತು ಅಮೀರ್ ಉದ್ದೇಶಪೂರ್ವಕವಾಗಿ ನೋಬಾಲ್ ಎಸೆದಿದ್ದರು. ಅಂದು ತಂಡದ ನಾಯಕನಾಗಿದ್ದ ಸಲ್ಮಾನ್ ಬಟ್, ಬುಕ್ಕಿ ಮಜರ್ ಮಜೀದ್ ಎಂಬಾತನಿಂದ ಹಣ ಪಡೆದು ಪಂದ್ಯದ ಕೆಲವು ನಿರ್ದಿಷ್ಟ ಓವರ್‌ಗಳಲ್ಲಿ   ನೋಬಾಲ್ ಎಸೆಯುವಂತೆ ಈ ಇಬ್ಬರು ಬೌಲರ್‌ಗಳಿಗೆ ಸೂಚಿಸಿದ್ದರು.`ನ್ಯೂಸ್ ಆಫ್ ದಿ ವಲ್ಡ್~ ಟ್ಯಾಬ್ಲಾಯ್ಡನ (ಈಗ ಪ್ರಸಾರ ನಿಲ್ಲಿಸಿದೆ) ವರದಿಗಾರ ನಡೆಸಿದ್ದ ರಹಸ್ಯ ಕಾರ್ಯಾಚರಣೆಯಲ್ಲಿ ಈ ಮೋಸದಾಟ ಬಯಲಾಗಿತ್ತು. ಪಾಕ್ ಆಟಗಾರರು ತಂಗಿದ್ದ ಹೋಟೆಲ್‌ಗೆ ದಾಳಿ ಮಾಡಿದ್ದ ಲಂಡನ್ ಪೊಲೀಸರು ಬಟ್ ಹಾಗೂ ಆಸಿಫ್ ಅವರ ಕೊಠಡಿಯಿಂದ ನಗದು ಹಣ ವಶಪಡಿಸಿಕೊಂಡಿದ್ದರು. ಬುಕ್ಕಿ ಮಜೀದ್ ನೀಡಿದ್ದ ಹಣ ಇದಾಗಿತ್ತು.ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಈಗಾಗಲೇ ಈ ಮೂವರ ಮೇಲೆ ಕ್ರಮ ಕೈಗೊಂಡಿದೆ. ಬಟ್, ಆಸಿಫ್ ಹಾಗೂ ಅಮೀರ್ ಕ್ರಮವಾಗಿ ಹತ್ತು, ಏಳು ಹಾಗೂ ಐದು ವರ್ಷದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.ದುಃಖದ ದಿನ: ಬಟ್ ಮತ್ತು ಆಸಿಫ್ ವಿರುದ್ಧದ ತೀರ್ಪು ಪಾಕಿಸ್ತಾನದ ಕ್ರಿಕೆಟ್‌ಗೆ ದುಃಖದ ದಿನ ಎಂದು ಮಾಜಿ ಆಟಗಾರರು ಹೇಳಿದ್ದಾರೆ. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮತ್ತೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ. `ಕ್ರೀಡಾಪಟುಗಳು ಇಂತಹ ಹಗರಣದಲ್ಲಿ ಸಿಲುಕಿರುವುದು ಬೇಸರದ ಸಂಗತಿ.ಆದರೆ ತಪ್ಪು ಮಾಡಿದ್ದರೆ, ಅದಕ್ಕೆ ತಕ್ಕ ಬೆಲೆ ತೆರಬೇಕು~ ಎಂದು ಮಾಜಿ ನಾಯಕ ಜಹೀರ್ ಅಬ್ಬಾಸ್ ಪ್ರತಿಕ್ರಿಯಿಸಿದ್ದಾರೆ.ಈ ಬೆಳವಣಿಗೆಯ ಕುರಿತು ತಕ್ಷಣ ಪ್ರತಿಕ್ರಿಯೆ ನೀಡಲು ಐಸಿಸಿ ನಿರಾಕರಿಸಿದೆ. `ನ್ಯಾಯಾಲಯ ಇವರ ಮೇಲಿನ ನಾಲ್ಕನೇ ಆರೋಪದ ಕುರಿತು ತೀರ್ಪು ನೀಡಿದ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ~ ಎಂದ ಐಸಿಸಿಯ ವಕ್ತಾರರು ಹೇಳಿದ್ದಾರೆ.ಬಟ್‌ಗೆ ಗಂಡುಮಗು (ಕರಾಚಿ ವರದಿ): ಸಲ್ಮಾನ್ ಬಟ್ ಪತ್ನಿ ಗುಲ್, ಮಂಗಳವಾರ ಕರಾಚಿಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದರು. ಇದಾದ ಕೆಲವೇ ನಿಮಿಷಗಳ ಬಳಿಕ ಅತ್ತ ಲಂಡನ್‌ನ ನ್ಯಾಯಾಲಯದ ತೀರ್ಪು ಹೊರಬಿತ್ತು. ಈ ಕಾರಣ ಬಟ್ ಕುಟಂಬದ ಸಂತಸ ಅಧಿಕ ಸಮಯ ಇರಲಿಲ್ಲ.`ಈ ದಿನ ಮಿಶ್ರ ಅನುಭವ ಉಂಟಾಗಿದೆ. ಸಲ್ಮಾನ್ ವಿರುದ್ಧದ ತೀರ್ಪು ನಮಗೆ ಆಘಾತ ಉಂಟುಮಾಡಿದೆ. ಆದರೆ ಆತನಿಗೆ ಎರಡನೇ ಮಗು ಜನಿಸಿರುವುದು ಅಲ್ಪ ಸಂತಸಕ್ಕೆ ಕಾರಣವಾಗಿದೆ~ ಎಂದು ಬಟ್ ಅವರ ತಂದೆ ಜುಲ್ಫಿಕರ್ ಬಟ್ ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry