ಗುರುವಾರ , ಮಾರ್ಚ್ 4, 2021
18 °C

ಸ್ಪಾ ಬೆಳಕಲ್ಲಿ ರವಿ ಚಟಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಪಾ ಬೆಳಕಲ್ಲಿ ರವಿ ಚಟಾಕಿ

ಪಂಚರಂಗಿ

ಜಿಟಿಜಿಟಿ ಜಿನುಗುವ ಮಳೆ ಸಂಜೆಯ ವೇಳೆಯಲ್ಲಿ ತಣ್ಣನೆ ಹವೆ ಮೂಡಿಸಿದ್ದರೂ ಕಾದು ಕುಳಿತವರ ಮುಖದಲ್ಲಿ ಆ ವಾತಾವರಣದ ಸೊಬಗನ್ನು ಆಸ್ವಾದಿಸುವ ಕಳೆ ಇರಲಿಲ್ಲ. ಗಂಟೆಗಟ್ಟಲೆ ಚಡಪಡಿಸುತ್ತಿದ್ದ ಅವರ ಮುಖಗಳು ದೊಡ್ಡ ಗೆಲುವೊಂದು ಸಿಕ್ಕಂತೆ ಸಂಭ್ರಮದಿಂದ ಅರಳಿದವು. ಹೀಗೆ ಕಾದು ಕುಳಿತಿದ್ದವರು ನಿರೀಕ್ಷಿಸುತ್ತಿದ್ದದ್ದು ಮೂವರು `ಸ್ಟಾರ್~ಗಳ ಆಗಮನವನ್ನು.ಅದು `ಗೋಲ್ಡ್‌ಫಿಂಚ್~ ಹೋಟೆಲ್‌ನಲ್ಲಿ ಆಯೋಜಿಸಿದ್ದ ಲಿಯಾನಾ ಸ್ಪಾ ಮತ್ತು ಸಲೂನ್‌ಗಳ ಉದ್ಘಾಟನಾ ಕಾರ್ಯಕ್ರಮ. ಕ್ರೇಜಿಸ್ಟಾರ್ ರವಿಚಂದ್ರನ್, ಯಶ್ ಮತ್ತು ನಟಿ ಪೂಜಾ ಗಾಂಧಿ ಅತಿಥಿಗಳು. ಸಿನಿಮಾ ತಾರೆಯರು ಕಾರ್ಯಕ್ರಮಗಳಿಗೆ ತಡವಾಗಿ ಬರುವುದು ಮಾಮೂಲು. ರವಿಚಂದ್ರನ್ ಮತ್ತು ಯಶ್ ತಡವಾಗಿ ಬಂದವರು ಕ್ಯಾಮೆರಾಗಳಿಗೆ ಸ್ವಲ್ಪ ಹೊತ್ತು ಮುಖವೊಡ್ಡಿ ನಿಂತರು.ದಂಡುಪಾಳ್ಯ ಚಿತ್ರಕ್ಕಾಗಿ `ಗಾಂಧಿನಗರ~ಕ್ಕೆ ತೆರಳಿದ್ದ ಪೂಜಾ ಗಾಂಧಿ ದರ್ಶನ ಕೊಡುವ ವೇಳೆಗೆ ಮತ್ತೊಂದು ಹದಿನೈದು ನಿಮಿಷ ಕಳೆದಿತ್ತು. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳು ತಮ್ಮದೇ ಹೊಸ ಜಗತ್ತು ಸೃಷ್ಟಿಸಿಕೊಂಡಿರುತ್ತವೆ. ಅದ್ದೂರಿ ಯಾಗಿದ್ದರೂ ಕಾರ್ಯಕ್ರಮ ಕನ್ನಡಮಯವಾಗಿದ್ದು ವಿಶೇಷ.ರವಿಚಂದ್ರನ್ ಇದ್ದಮೇಲೆ ಅಲ್ಲಿ ನಗುವಿನ ಚಟಾಕಿ ಇರಲೇಬೇಕು. `ದಂಡುಪಾಳ್ಯಕ್ಕೆ ಹೋಗಿ ಪೂಜಾಗಾಂಧಿ ಏಟು ತಿಂದು ಬಂದಿದ್ದಾರೆ. ಅವರಿಗೇ ಸ್ಪಾದ ಅಗತ್ಯ ಹೆಚ್ಚಾಗಿದೆ~ ಎಂದು ಅವರು ಕೀಟಲೆ ಮಾಡಿದರು. ಅವರ ಆಗಮನದಿಂದ `ದಂಡುಪಾಳ್ಯ~ದಂತೆ ಸ್ಪಾ ಕೂಡ ಸೂಪರ್ ಹಿಟ್ ಆಗಲಿ ಎಂದು ಮತ್ತಷ್ಟು ನಗುಹರಿಸಿದರು.ಇಂದಿನ ಕೆಲಸದ ಒತ್ತಡದಲ್ಲಿ ಸಾಮಾನ್ಯ ಜನರಿಗೂ ಸ್ಪಾ ಅಗತ್ಯವಿದೆ ಎಂದರು ಯಶ್. ಗೋಲ್ಡ್‌ಫಿಂಚ್ ಹೋಟೆಲ್ ಕುರಿತು ಅವರು ಮೆಚ್ಚುಗೆ ಮಾತುಗಳನ್ನಾಡಿದರು.

ಈ ಹೋಟೆಲ್ ತಮ್ಮ ಮನೆಯಿದ್ದಂತೆ ಎನ್ನುವುದು ಪೂಜಾ ಗಾಂಧಿ ಮಾತು. ಸ್ಪಾಗೋಸ್ಕರ ಇನ್ನು ತಾವು ಇಲ್ಲಿಗೇ ಬಂದು, ಬಿಲ್ ಕೂಡ ಕೊಟ್ಟು ಹೋಗುವುದಾಗಿ ನಕ್ಕರು.ಗೋಲ್ಡ್‌ಫಿಂಚ್ ಸಮೂಹದ ಮಾಲೀಕ ಕೆ. ಪ್ರಕಾಶ್ ಶೆಟ್ಟಿ ಮುಂದಿನ ಕಾರ್ಯಯೋಜನೆಗಳ ಸ್ವರೂಪವನ್ನು ಬಿಚ್ಚಿಟ್ಟರು. ಗೋಲ್ಡ್‌ಫಿಂಚ್ ಹೋಟೆಲ್‌ಗಳಲ್ಲಿ ಮೊದಲ ಬಾರಿಗೆ ಸ್ಪಾ ಆರಂಭಗೊಂಡಿದೆ. ಇದು ಮಂಗಳೂರಿನಲ್ಲಿರುವ ಹೋಟೆಲ್‌ನಲ್ಲಿಯೂ ಪ್ರಾರಂಭಗೊಳ್ಳಲಿದೆ. ಅಲ್ಲದೆ ಹೆಬ್ಬಾಳ, ಗೋವಾಗಳಲ್ಲಿ ಪಂಚತಾರಾ ಹೋಟೆಲ್‌ಗಳನ್ನು ಸ್ಥಾಪಿಸಲಾಗುವುದು ಎಂದರು.ಥಾಯ್ಲೆಂಡ್‌ನಿಂದ ಕರೆಸಲಾದ ಸ್ಪಾ ಪರಿಣತರು ಇಲ್ಲಿ ಸೇವೆ ಸಲ್ಲಿಸಲಿದ್ದಾರೆ. ಹೇರ್ ಕಟಿಂಗ್, ಬಾಡಿ ಥೆರಪಿ ಮತ್ತು ಮಸಾಜ್, ಫೇಷಿಯಲ್ ಟ್ರೀಟ್‌ಮೆಂಟ್ ಮುಂತಾದ ಸೌಕರ್ಯಗಳು ಇಲ್ಲಿನ ಸ್ಪಾನಲ್ಲಿ ಲಭ್ಯ ಎಂದು ಅವರು ಹೇಳಿದರು. ಗೋಲ್ಡ್‌ಫಿಂಚ್ ಹೋಟೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಗೌರವ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.