ಸ್ಪಿನ್ ಬಲೆಯಲ್ಲಿ ಇಂಗ್ಲೆಂಡ್ ಸೆರೆ
ಅಹಮದಾಬಾದ್: ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವರನ್ನು ಕ್ಲ್ಲೊಲ್ಲಲು ಪ್ರಯತ್ನಿಸಿದರೆ ಪ್ರಯೋಜನವೇನು ಎಂಬ ಮಾತಿದೆ. ಸ್ಪಿನ್ ಭಯದಲ್ಲೇ ಭಾರತಕ್ಕೆ ಕಾಲಿರಿಸಿದ್ದ ಆಂಗ್ಲರ ಪರಿಸ್ಥಿತಿ ಕೂಡ ಇಂಥದ್ದೆ!
ಮೊಟೇರಾ ಕ್ರೀಡಾಂಗಣದಲ್ಲಿ ಶನಿವಾರ ನಿಧಾನವಾಗಿ ಅರಳುತ್ತಿದ್ದ ಮುಂಜಾನೆಯನ್ನು ಮತ್ತಷ್ಟು ಸುಂದರವಾಗಿಸಿದ್ದು ಆತಿಥೇಯರು ಹೆಣೆದ ಸ್ಪಿನ್ ಬಲೆ.
ಈಗ ಆ ಸ್ಪಿನ್ ಬಲೆಯೊಳಗೆ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಬಂಧಿಯಾಗಿದ್ದಾರೆ. ಪರಿಣಾಮ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡದವರು ಸೋಲಿನ ಆತಂಕದಲ್ಲಿದ್ದಾರೆ.ಎರಡನೇ ಇನಿಂಗ್ಸ್ನಲ್ಲಿ ಆಂಗ್ಲರ ಬಳಗ ತಿರುಗೇಟು ನೀಡಲು ಪ್ರಯತ್ನಿಸುತ್ತಿದೆಯಾದರೂ ಸವಾಲಿನ ಹಾದಿ ಎದುರಿದೆ. ಏಕೆಂದರೆ 330 ರನ್ಗಳ ಹಿನ್ನಡೆ ಕಂಡು ಫಾಲೋಆನ್ಗೆ ಒಳಗಾಗಿರುವ ಇಂಗ್ಲೆಂಡ್ ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನೂ 219 ರನ್ ಪೇರಿಸಬೇಕಾಗಿದೆ. ಇನ್ನೂ ಎರಡು ದಿನಗಳ ಆಟ ಬಾಕಿ ಇದೆ.
ಎರಡನೇ ಇನಿಂಗ್ಸ್ ಆರಂಭಿಸಿರುವ ಪ್ರವಾಸಿ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 38 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 111 ರನ್ ಗಳಿಸಿದೆ. ನಾಯಕ ಕುಕ್ (74) ಹಾಗೂ ಕಾಂಪ್ಟನ್ (34) ತಂಡಕ್ಕೆ ಆಸರೆಯಾಗಿದ್ದಾರೆ. ಆಂಗ್ಲರ ಬಳಗ ಮೊದಲ ಇನಿಂಗ್ಸ್ನಲ್ಲಿ 74.2 ಓವರ್ಗಳಲ್ಲಿ ಕೇವಲ 191 ರನ್ಗಳಿಗೆ ಆಲೌಟಾಗಿ ಫಾಲೋಆನ್ ಪಡೆದಿತ್ತು. ಚೇತೇಶ್ವರ ಪೂಜಾರ (ಅಜೇಯ 206) ಗಳಿಸಿದ್ದ ಮೊತ್ತದ ಗಡಿ ದಾಟಲು ಕೂಡ ಇಂಗ್ಲೆಂಡ್ ತಂಡದ ಕೈಯಲ್ಲಿ ಸಾಧ್ಯವಾಗಲಿಲ್ಲ.
ಶನಿವಾರ ಭಾರತದ ಪಾಲಿನ ಹೀರೊ ಆಗಿ ಮೆರೆದಿದ್ದು ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ. ದೋನಿ ಬಳಗ ಮೊದಲ ಇನಿಂಗ್ಸ್ನಲ್ಲಿ 521 ರನ್ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಈ ಮೂಲಕ ಹೋದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಳ್ಳುವ ಭಾರತದ ಆಸೆಗೆ ಬಲಬಂದಿದೆ. ಪಂದ್ಯ ನಾಲ್ಕನೇ ದಿನವೇ ಮುಗಿದು ಹೋದರೂ ಅಚ್ಚರಿ ಇಲ್ಲ.
ಓಜಾ, ಅಶ್ವಿನ್ ಕೈಚಳಕ: ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್ನ 10 ವಿಕೆಟ್ಗಳಲ್ಲಿ 8 ವಿಕೆಟ್ ಸ್ಪಿನ್ನರ್ಗಳಾದ ಓಜಾ ಹಾಗೂ ಅಶ್ವಿನ್ ಪಾಲಾದವು. ಓಜಾ ಇನಿಂಗ್ಸ್ವೊಂದರಲ್ಲಿ ನಾಲ್ಕನೇ ಬಾರಿ ಐದು ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು.
ಮೂರನೇ ದಿನದಾಟದ ಶುರುವಿನಲ್ಲಿ ಬೌಲಿಂಗ್ ಆರಂಭಿಸಿದ್ದು ಓಜಾ. ಮೊದಲ ಎಸೆತದಲ್ಲಿ ಪೀಟರ್ಸನ್ ಔಟಾಗುವ ಆತಂಕದಿಂದ ಪಾರಾದಾಗಲೇ ಮುಂದಿರುವ ಅಪಾಯ ಆಂಗ್ಲರಿಗೆ ಗೊತ್ತಾಗಿ ಹೋಗಿತ್ತು. ಆರಂಭದಲ್ಲಿಯೇ ಸ್ಪಿನ್ನರ್ಗಳಿಗೆ ಚೆಂಡು ನೀಡಿದ ನಾಯಕ ದೋನಿ ಕ್ರಮ ಪಂದ್ಯ ಶುರುವಾದ 47ನೇ ನಿಮಿಷದಲ್ಲಿಯೇ ಫಲ ನೀಡಿತು.
ಏಕೆಂದರೆ ಓಜಾ ತಮ್ಮ 11ನೇ ಓವರ್ನಲ್ಲಿ ಆಂಗ್ಲರಿಗೆ ಎರಡು ಬಾರಿ ಆಘಾತ ನೀಡಿದರು. ಆ ಓವರ್ನ 3 ಹಾಗೂ 4ನೇ ಎಸೆತದಲ್ಲಿ ಪೀಟರ್ಸನ್ ಹಾಗೂ ಬೆಲ್ಗೆ ಪೆವಿಲಿಯನ್ ದಾರಿ ತೋರಿಸಿದರು. ಬೆಲ್ ತಾವೆದುರಿಸಿದ ಮೊದಲ ಎಸೆತವನ್ನೇ ಮುನ್ನುಗ್ಗಿ ಬಾರಿಸಿದರು. ಆದರೆ ಮಿಡ್ ಆಫ್ನಲ್ಲಿ ಸಚಿನ್ ಪಡೆದ ಕ್ಯಾಚ್ ಪ್ರವಾಸಿ ಆಟಗಾರನನ್ನು ನಿರಾಸೆಯ ಕಡಲಲ್ಲಿ ಮುಳುಗಿಸಿತು.
ಈ ಹಂತದಲ್ಲಿ ಓಜಾ 25 ಎಸೆತ ಹಾಕಿ ಒಂದೂ ರನ್ ನೀಡಲಿಲ್ಲ. ಆದರೆ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶವನ್ನು ಕೊಂಚದರಲ್ಲಿ ತಪ್ಪಿಸಿಕೊಂಡರು. 2001ರಲ್ಲಿ ಹರಭಜನ್ ಅವರ ಹ್ಯಾಟ್ರಿಕ್ ಸಾಹಸದ ಬಳಿಕ ಭಾರತದಿಂದ ಈ ಸಾಧನೆ ಮೂಡಿಬಂದಿಲ್ಲ.
ಬಳಿಕ ನಾಯಕ ಕುಕ್ ವಿಕೆಟ್ ಪಡೆದ ಆಫ್ ಸ್ಪಿನ್ನರ್ ಅಶ್ವಿನ್ ಭಾರತ ಮೇಲುಗೈ ಸಾಧಿಸಲು ಕಾರಣರಾದರು. ಈ ತಂಡ ಮತ್ತಷ್ಟು ಬೇಗನೇ ಸಂಕಟಕ್ಕೆ ಸಿಲುಕುತಿತ್ತು. ಏಕೆಂದರೆ ಅಶ್ವಿನ್ ಹಾಕಿದ ಫುಲ್ಟಾಸ್ ಎಸೆತವೊಂದನ್ನು ಪ್ರಯೋರ್ ಡೀಪ್ ಮಿಡ್ ವಿಕೆಟ್ನತ್ತ ಬಾರಿಸಿದರು. ಅಲ್ಲಿದ್ದ ಜಹೀರ್ ಖಾನ್ ಅದನ್ನು ಕೈಚೆಲ್ಲಿದರು.
ಆದರೆ ನಂತರದ ಓವರ್ನಲ್ಲಿ ಮತ್ತೊಬ್ಬ ಬ್ಯಾಟ್ಸ್ಮನ್ ಸಮಿತ್ ಪಟೇಲ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಿದ ವೇಗಿ ಉಮೇಶ್ ಯಾದವ್ ಲೆಕ್ಕ ಚುಕ್ತಾ ಮಾಡಿದರು. ಇದು ಯಾದವ್ ಅವರ ಮೊದಲ ಓವರ್ ಆಗಿತ್ತು. ಯಾದವ್ಗೆ ಬೌಲ್ ಮಾಡಲು ಅವಕಾಶ ಸಿಕ್ಕ್ದ್ದಿದ್ದೇ 47 ಓವರ್ ಆದ ಮೇಲೆ. ಸ್ಪಿನ್ನರ್ಗಳನ್ನು ಭಾರತ ಎಷ್ಟೊಂದು ನೆಚ್ಚಿಕೊಂಡಿದೆ ಎಂಬುದಕ್ಕೆ ಇದು ಸಾಕ್ಷಿ.
ಮೂರನೇ ದಿನದ ಮೊದಲ ಅವಧಿಯಲ್ಲಿ ಇಂಗ್ಲೆಂಡ್ 30 ಓವರ್ಗಳಲ್ಲಿ ಗಳಿಸಿದ್ದು ಕೇವಲ 69 ರನ್. ಅಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ಪ್ರಯೋರ್ಗೆ ಎರಡು ಬಾರಿ ಜೀವದಾನ ಲಭಿಸಿತು. ಒಮ್ಮೆ ಜಹೀರ್, ಮತ್ತೊಮ್ಮೆ ಸೆಹ್ವಾಗ್ ಕ್ಯಾಚ್ ಕೈಚೆಲ್ಲಿದರು. ಅದರನ್ನು ಸದುಪಯೋಗಪಡಿಸಿಕೊಂಡ ಅವರು ಬ್ರೆಸ್ನನ್ ಜೊತೆಗೂಡಿ ಸ್ವಲ್ಪ ಹೊತ್ತು ತಂಡಕ್ಕೆ ಆಸರೆಯಾಗಿದ್ದರು.
ಇವರಿಬ್ಬರು ಎಂಟನೇ ವಿಕೆಟ್ಗೆ 47 ರನ್ ಸೇರಿಸಿದರು. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ಪರ ದೊಡ್ಡ ಜೊತೆಯಾಟವಿದು. ಕೊನೆಯಲ್ಲಿ ಪ್ರಯೋರ್ (48) ಅವರ ವಿಕೆಟ್ ಕಬಳಿಸುವುದರೊಂದಿಗೆ ಓಜಾ ಪ್ರವಾಸಿಗರ ಮೊದಲ ಇನಿಂಗ್ಸ್ಗೆ ತೆರೆ ಎಳೆದರು.
ಓಜಾಗೆ ಗಾಯ: ಇಂಗ್ಲೆಂಡ್ ತಂಡದ ಎರಡನೇ ಇನಿಂಗ್ಸ್ ವೇಳೆ ಮಿಡ್ ವಿಕೆಟ್ನಲ್ಲಿ ಫೀಲ್ಡ್ ಮಾಡುತ್ತಿದ್ದಾಗ ಓಜಾ ಕೆಳಗೆ ಬಿದ್ದು ಬಲ ಮೊಣಕೈಗೆ ಗಾಯ ಮಾಡಿಕೊಂಡರು. ಹಾಗಾಗಿ ವಿಶ್ರಾಂತಿ ಪಡೆಯಲು ಪೆವಿಲಿಯನ್ಗೆ ಮರಳಿದರು. ಇದು ಪ್ರವಾಸಿ ಬ್ಯಾಟ್ಸ್ಮನ್ಗಳು ಸ್ವಲ್ಪ ಹೊತ್ತು ನಿಟ್ಟುಸಿರು ಬಿಡುವಂತೆ ಮಾಡಿತು.
ಆದರೆ ಕೆಲ ನಿಮಿಷಗಳಲ್ಲಿ ಅವರು ಅಂಗಳಕ್ಕೆ ವಾಪಸಾದರು. ಅವರ ಬೌಲಿಂಗ್ನಲ್ಲಿ ಕಾಂಪ್ಟನ್ ಸ್ಲಿಪ್ನಲ್ಲಿ ನೀಡಿದ ಕ್ಯಾಚ್ ಕೈಚೆಲ್ಲಿದ್ದು ಕೊಹ್ಲಿ. ಎರಡನೇ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ಕೊಂಚ ಎಚ್ಚರಿಕೆಯಿಂದ ಆಡಿದ ಪರಿಣಾಮ ವಿಕೆಟ್ ಕಳೆದುಕೊಳ್ಳಲಿಲ್ಲ.
ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್ 160 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 521 ಡಿಕ್ಲೇರ್ಡ್
ಇಂಗ್ಲೆಂಡ್ ಮೊದಲ ಇನಿಂಗ್ಸ್ 74.2 ಓವರ್ಗಳಲ್ಲಿ 191
(ಶುಕ್ರವಾರದ ಅಂತ್ಯಕ್ಕೆ 18 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 41)
ಅಲಸ್ಟೇರ್ ಕುಕ್ ಸಿ ವೀರೇಂದ್ರ ಸೆಹ್ವಾಗ್ ಬಿ ಆರ್.ಅಶ್ವಿನ್ 41
ಕೆವಿನ್ ಪೀಟರ್ಸನ್ ಬಿ ಪ್ರಗ್ಯಾನ್ ಓಜಾ 17
ಇಯಾನ್ ಬೆಲ್ ಸಿ ಸಚಿನ್ ತೆಂಡೂಲ್ಕರ್ ಬಿ ಪ್ರಗ್ಯಾನ್ ಓಜಾ 00
ಸಮಿತ್ ಪಟೇಲ್ ಎಲ್ಬಿಡಬ್ಲ್ಯು ಬಿ ಉಮೇಶ್ ಯಾದವ್ 10
ಮಟ್ ಪ್ರಯೋರ್ ಬಿ ಪ್ರಗ್ಯಾನ್ ಓಜಾ 48
ಟಿಮ್ ಬ್ರೆಸ್ನನ್ ಸಿ ವಿರಾಟ್ ಕೊಹ್ಲಿ ಬಿ ಪ್ರಗ್ಯಾನ್ ಓಜಾ 19
ಸ್ಟುವರ್ಟ್ ಬ್ರಾಡ್ ಎಲ್ಬಿಡಬ್ಲ್ಯು ಬಿ ಜಹೀರ್ ಖಾನ್ 25
ಗ್ರೇಮ್ ಸ್ವಾನ್ ಔಟಾಗದೆ 03
ಇತರೆ (ಬೈ-5,ಲೆಗ್ಬೈ-12) 17
ವಿಕೆಟ್ ಪತನ: 1-26 (ಕಾಂಪ್ಟನ್; 13.3); 2-29 (ಆ್ಯಂಡರ್ಸನ್; 14.4); 3-30 (ಟ್ರಾಟ್ 15.3); 4-69
(ಪೀಟರ್ಸನ್; 32.3); 5-69 (ಬೆಲ್; 32.4); 6-80 (ಕುಕ್; 39.4); 7-97 (ಸಮಿತ್; 47.6); 8-144
(ಬ್ರೆಸ್ನನ್; 66.4); 9-187 (ಬ್ರಾಡ್; 73.5); 10-191 (ಪ್ರಯೋರ್; 74.2)
ಬೌಲಿಂಗ್: ಆರ್.ಅಶ್ವಿನ್ 27-9-80-3, ಜಹೀರ್ ಖಾನ್ 15-7-23-1, ಪ್ರಗ್ಯಾನ್ ಓಜಾ 22.2-8-45-5,
ಯುವರಾಜ್ ಸಿಂಗ್ 3-0-12-0, ಉಮೇಶ್ ಯಾದವ್ 7-2-14-1
ಇಂಗ್ಲೆಂಡ್ ಎರಡನೇ ಇನಿಂಗ್ಸ್ 38 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 111
ಅಲಸ್ಟೇರ್ ಕುಕ್ ಬ್ಯಾಟಿಂಗ್ 74
ನಿಕ್ ಕಾಂಪ್ಟನ್ ಬ್ಯಾಟಿಂಗ್ 34
ಇತರೆ (ಲೆಗ್ಬೈ-3) 03
ಬೌಲಿಂಗ್: ಉಮೇಶ್ ಯಾದವ್ 7-1-15-0, ಪ್ರಗ್ಯಾನ್ ಓಜಾ 14-3-34-0, ಆರ್.ಅಶ್ವಿನ್ 14-3-49-0,
ವೀರೇಂದ್ರ ಸೆಹ್ವಾಗ್ 1-0-1-0, ಜಹೀರ್ ಖಾನ್ 1-0-1-0, ಸಚಿನ್ ತೆಂಡೂಲ್ಕರ್ 1-0-8-0
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.