ಸ್ಪೆಕ್ಟ್ರಂ: ಹೂಡಿಕೆ ಬಂಡವಾಳ ರಕ್ಷಿಸಲು ಮನವಿ

7

ಸ್ಪೆಕ್ಟ್ರಂ: ಹೂಡಿಕೆ ಬಂಡವಾಳ ರಕ್ಷಿಸಲು ಮನವಿ

Published:
Updated:

ನವದೆಹಲಿ (ಪಿಟಿಐ): ಯುನಿನಾರ್‌ನ 2ಜಿ ಲೈಸೆನ್ಸ್ ರದ್ದತಿ ಬಳಿಕ ರಾಜತಾಂತ್ರಿಕ ಮಟ್ಟದ ಸಮಾಲೋಚನೆ ಆರಂಭಿಸಿರುವ ನಾರ್ವೆಯ ಮಾಹಿತಿ ತಂತ್ರಜ್ಞಾನ ಸಚಿವ ರಿಗ್ಮಾರ್ ಆಸ್ರುದ್ ಅವರು ಮಂಗಳವಾರ ಇಲ್ಲಿ ಕೇಂದ್ರ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರನ್ನು ಭೇಟಿಯಾಗಿ ಭಾರತೀಯ ಟೆಲಿಕಾಂ ಕಾರ್ಯ ಕ್ಷೇತ್ರದಲ್ಲಿನ ತನ್ನ ಬಂಡವಾಳ ಹೂಡಿಕೆಯ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿ, ಮುಂದಿನ ರಕ್ಷಣಾ ಮಾರ್ಗೋಪಾಯಗಳನ್ನು ಚರ್ಚಿಸಿದರು.ನಾರ್ವೆಯ ಟೆಲಿನಾರ್ ಮತ್ತು ಭಾರತೀಯ ರಿಯಾಲ್ಟಿ ನಿರ್ವಾಹಕ ಯುನಿಟೆಕ್ ಜಂಟಿ ಒಡೆತನದ `ಯುನಿನಾರ್~ ಹೆಸರಿನಲ್ಲಿ ದೇಶದಾದ್ಯಂತ ಟೆಲಿಕಾಂ ಸೇವೆಗೆ ಅನುವು ಮಾಡಿದೆ. ಇದರಲ್ಲಿ ನಾರ್ವೆ ಸಂಸ್ಥೆ ಶೇ 67ರಷ್ಟು ಷೇರನ್ನು ಹೊಂದಿದ್ದು, ಇದಕ್ಕೆ ಪ್ರತಿಯಾಗಿ ನಾರ್ವೆ ಸರ್ಕಾರವು ಟೆಲಿನಾರ್‌ನಲ್ಲಿ ಬಹುಪಾಲು ಷೇರನ್ನು ಪಡೆದಿದೆ.ಯುನಿನಾರ್‌ನಲ್ಲಿ ಷೇರು ಹೊಂದಲು ಟೆಲಿನಾರ್ ಸಂಸ್ಥೆ ಭಾರತೀಯ ಟೆಲಿಕಾಂ ಕಾರ್ಯಕ್ಷೇತ್ರದಲ್ಲಿ ಸುಮಾರು ರೂ 14,000 ಕೋಟಿಗಳ ಬಂಡವಾಳವನ್ನು ಹೂಡಿದ್ದು, ಹಲವಾರು ವಲಯಗಳಲ್ಲಿ ಸೇವೆಯನ್ನು ವಿಸ್ತರಿಸಿಕೊಂಡಿದೆ. ಕಂಪೆನಿಯು ಮುಂದಿನ ಸ್ಪೆಕ್ಟ್ರಂ ಹರಾಜಿನಲ್ಲಿ ಭಾಗವಹಿಸುವುದಕ್ಕೂ ಮುನ್ನ ಹೊಸ ನಿಯಮಗಳನ್ನು ತಿಳಿದುಕೊಳ್ಳಲು ಬಯಸಿರುವುದಾಗಿ ಯುನಿನಾರ್ ಸ್ಪಷ್ಟಪಡಿಸಿದೆ.ಸಚಿವರ ಸಭೆಗೆ ತೃಪ್ತಿ: `ಸಿಬಲ್ ಅವರೊಂದಿಗೆ ನಡೆಸಿದ ಮಾತುಕತೆ ಉತ್ತಮ, ಫಲದಾಯಕ ಹಾಗೂ ರಚನಾತ್ಮಕವಾಗಿದ್ದು, ಇತರ ವಿಷಯಗಳೊಂದಿಗೆ ಟೆಲಿನಾರ್ ವಿಚಾರವನ್ನೂ ಚರ್ಚಿಸಲಾಯಿತು~ ಎಂದು ಸಭೆಯ ನಂತರ ನಾರ್ವೆ ಸಚಿವರು ಸುದ್ದಿಗಾರರಿಗೆ ತಿಳಿಸಿದರು.“ನಾವು ನಮ್ಮ ಬಂಡವಾಳವನ್ನು ರಕ್ಷಿಸುವ ಅಗತ್ಯದೊಂದಿಗೆ, ನಮ್ಮ ಕಾರ್ಯನಿರ್ವಹಣೆಯನ್ನು ಮುಂದುವರಿಸುವ ಚೌಕಟ್ಟನ್ನು ನಿರ್ಮಿಸಿಕೊಳ್ಳುವ ಖಾತರಿಗಾಗಿ ಸರ್ಕಾರದೊಡನೆ ಮಾತುಕತೆ ನಡೆಸಿದ್ದೇವೆ” ಎಂದು ಯುನಿನಾರ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಟೆಲಿನಾರ್‌ನ ಏಷ್ಯಾ ವಿಭಾಗದ ಮುಖ್ಯಸ್ಥ ಸಿಗ್ವೆ ಬ್ರೆಕ್ಕೆ ಇದೇ ಸಂದರ್ಭದಲ್ಲಿ ನುಡಿದರು.

ಕೋರ್ಟ್‌ಗೆ ಮೇಲ್ಮನವಿ: ಟಾಟಾ, ಯುನಿನಾರ್

ನವದೆಹಲಿ (ಪಿಟಿಐ):
ತನ್ನ ಮೂರು 2ಜಿ ಲೈಸೆನ್ಸ್‌ಗಳನ್ನು ಸುಪ್ರೀಂಕೋರ್ಟ್ ರದ್ದುಪಡಿಸಿರುವುದರಿಂದ ಚಿಂತೆಗೀಡಾಗಿರುವ ಟಾಟಾ ಟೆಲಿ ಸರ್ವೀಸಸ್ (ಟಿಟಿಎಲ್), ತಾನು 2008ರ ಸ್ಪೆಕ್ಟ್ರಂ ಲೈಸೆನ್ಸ್ ಮಂಜೂರು ಪ್ರಕ್ರಿಯೆಗೂ 18 ತಿಂಗಳಿಗಿಂತಲೂ ಮುಂಚಿತವಾಗಿಯೇ (2006ರಲ್ಲಿ) ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದು, ಹೀಗಾಗಿ ಕೋರ್ಟ್ ತೀರ್ಪಿನ ವಿರುದ್ಧ ಪುನರ್‌ಪರಿಶೀಲನಾ ಮೇಲ್ಮನವಿ ಸಲ್ಲಿಸುವುದಾಗಿ ಮಂಗಳವಾರ ತಿಳಿಸಿದೆ.2008ರ ಜನವರಿಯಲ್ಲಿ ಮಾಜಿ ಟೆಲಿಕಾಂ ಸಚಿವ ಎ. ರಾಜಾ ಅವರು ಮಂಜೂರು ಮಾಡಿರುವ 122 ಸ್ಪೆಕ್ಟ್ರಂ 2ಜಿ ಲೈಸೆನ್ಸ್‌ಗಳನ್ನು ಅಕ್ರಮವೆಂದು ಸುಪ್ರೀಂಕೋರ್ಟ್ ರದ್ದುಪಡಿಸಿದ್ದು, ಇವುಗಳಲ್ಲಿ ಅಸ್ಸಾಂ, ಈಶಾನ್ಯ ರಾಜ್ಯಗಳು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಟಿಟಿಎಲ್‌ನ ಮೂರು ಲೈಸೆನ್ಸ್‌ಗಳು ಕೂಡ ಸೇರಿವೆ. ಆದರೆ ಟಿಟಿಎಲ್ 2006ರ ಜೂನ್‌ನಲ್ಲೇ (18 ತಿಂಗಳು ಮುನ್ನ) ಈ ಲೈಸೆನ್ಸ್‌ಗಳಿಗಾಗಿ ಅರ್ಜಿ ಸಲ್ಲಿಸಿದ್ದಾಗಿ ಹೇಳಿದೆ.ಇದೇ ರೀತಿಯಲ್ಲಿ ತನ್ನ ಬಂಡವಾಳವನ್ನು ರಕ್ಷಿಸಿಕೊಳ್ಳಲು ಸರ್ಕಾರದೊಡನೆ ಮಾತುಕತೆ ನಡೆಸುವುದರ ಜೊತೆಗೆ, ಸುಪ್ರೀಂಕೋರ್ಟ್‌ನಲ್ಲಿ ತೀರ್ಪು ಪುನರ್‌ಪರಿಶೀಲಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವುದಾಗಿ ಈಗಾಗಲೇ ಯುನಿನಾರ್ ಪ್ರಕಟಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry