ಸ್ಪೈಡರ್ ಗರ್ಲ್ ಅಶಿಮಾ

7

ಸ್ಪೈಡರ್ ಗರ್ಲ್ ಅಶಿಮಾ

Published:
Updated:
ಸ್ಪೈಡರ್ ಗರ್ಲ್ ಅಶಿಮಾ

ಅದ್ಭುತ ಏಕಾಗ್ರತೆ, ಛಲ ಹಾಗೂ ಅಷ್ಟೇ ಆತ್ಮವಿಶ್ವಾಸ ಹೊಂದಿದ್ದ ಆ ಬಾಲಕಿ ಬಂಡೆಯೊಂದನ್ನು ಏರತೊಡಗಿದಳು. ಕಂದುಬಣ್ಣದ ಬಂಡೆಯಲ್ಲಿ ಹಿಡಿತ ಸಾಧಿಸಲು ಬಹಳ ಪ್ರಯಾಸ ಪಡುತ್ತಿದ್ದಳು. ಆದರೂ ಛಲ ಮಾತ್ರ ಬಿಡಲಿಲ್ಲ. ಹಲ್ಲಿಯೊಂದು ಗೋಡೆ ಏರುವ ರೀತಿಯಲ್ಲಿ ಈಕೆಯ ದೇಹವೂ ಬಂಡೆಗೆ ಅಂಟಿಕೊಂಡಂತೆಯೇ ಇತ್ತು. ತನ್ನೆಲ್ಲಾ ಶಕ್ತಿಯನ್ನು ಪುಟ್ಟ ಕೈಕಾಲುಗಳಲ್ಲಿ ಕೇಂದ್ರೀಕರಿಸಿ ಮೆಲ್ಲನೆ ಮೇಲೇರಿದಳು.ನೋಡನೋಡುತ್ತಿದ್ದಂತೆಯೇ ಸುಮಾರು 20 ಅಡಿ ಎತ್ತರದ ಬಂಡೆಯ ಮೇಲ್ಭಾಗ ತಲುಪಿಯೇ ಬಿಟ್ಟಳು.ಈ ಬಾಲೆಯ ಹೆಸರು ಅಶಿಮಾ ಶಿರಾಯ್‌ಶಿ. ವಯಸ್ಸು ಇನ್ನೂ 10. ಮನೆಯಲ್ಲಿ ಆಟಿಕೆಗಳೊಂದಿಗೆ ಆಡಬೇಕಾಗಿದ್ದ ವಯಸ್ಸು. ಆದರೆ ಅಶಿಮಾ ವಯಸ್ಸನ್ನೂ ಮೀರಿದ ಸಾಧನೆ ಮಾಡಿರುವ ಪೋರಿ. ಈಕೆಯ ಸಾಹಸ ನಡೆದಿರುವುದು ಅಮೆರಿಕದ ಟೆಕ್ಸಾಸ್ ಸಮೀಪದ ಎಲ್ ಪಾಸೊ ಕೌಂಟಿಯಲ್ಲಿರುವ `ಹ್ಯೂಕೊ ಟ್ಯಾಂಕ್ಸ್~ ಪಾರ್ಕ್‌ನಲ್ಲಿ. ಕೇವಲ ಕಲ್ಲುಬಂಡೆಗಳಿಂದ ಕೂಡಿರುವ ಈ ಪಾರ್ಕ್ ಐತಿಹಾಸಿಕ ತಾಣವೂ ಹೌದು.ಲಕ್ಷಾಂತರ ವರ್ಷಗಳ ಹಿಂದೆ ನೀರಿನಿಂದ ಆವೃತ್ತವಾಗ್ದ್ದಿದ ಪ್ರದೇಶ ಇಂದು ಬೃಹತ್ ಗಾತ್ರದ ಬಂಡೆಗಳಿಂದ ಕೂಡಿದ ನೆಲವಾಗಿದೆ. 860 ಎಕರೆಗಳಷ್ಟು ವಿಸ್ತಾರವಾಗಿ ಹರಡಿಕೊಂಡಿರುವ ಪ್ರದೇಶದಲ್ಲಿ ಒಂದಕ್ಕಿಂತ ಒಂದು ಭಿನ್ನವಾದ ಬಂಡೆಗಳನ್ನು ಕಾಣಬಹುದು. 15 ರಿಂದ 45 ಅಡಿಗಳಷ್ಟು ಎತ್ತರದ ಬಂಡೆಗಳು ಇಲ್ಲಿವೆ. ನೈಸರ್ಗಿಕವಾಗಿ ರೂಪುಗೊಂಡಿರುವ ಈ ಪ್ರದೇಶ `ಶಿಲಾರೋಹಿ~ಗಳ ಸ್ವರ್ಗ ಎನಿಸಿದೆ. ಸಾಹಸಿಗರ ನೆಚ್ಚಿನ ತಾಣ.ಇಲ್ಲಿ ಪ್ರತಿನಿತ್ಯ ನೂರಾರು ಹವ್ಯಾಸಿ `ಆರೋಹಿ~ಗಳು ಬಂಡೆ ಏರುವ ಸಾಹಸದಲ್ಲಿ ನಿರತರಾಗುವರು. ಅವರ ನಡುವೆ ಅಶಿಮಾ ಕೂಡಾ ಒಬ್ಬಳು. ಇಲ್ಲಿನ ಬಂಡೆಗಳಿಗೆ ಒಂದೊಂದು ಹೆಸರಿಡಲಾಗಿದೆ. ಇದರಲ್ಲಿ ಅಶಿಮಾ ಇತ್ತೀಚೆಗೆ `ಕ್ರೌನ್ ಆಫ್ ಆ್ಯರಗಾರ್ನ್~ ಹೆಸರಿನ ಬಂಡೆ ಏರುವಲ್ಲಿ ಯಶಸ್ವಿಯಾದಳು. ಇದುವರೆಗೆ ಕೇವಲ ಬೆರಳೆಣಿಕೆಯಷ್ಟು ಮಹಿಳಾ `ಆರೋಹಿ~ಗಳು ಇದನ್ನು ಏರಿದ್ದಾರೆ. ಆದರೆ 10 ರ ಹರೆಯದಲ್ಲಿ ಇದುವರೆಗೆ ಯಾರೂ ಇಂತಹ ಸಾಧನೆ ಮಾಡಿಲ್ಲ.ಸಣಕಲು ದೇಹದ ಈ ಹುಡುಗಿ ಅಸಾಮಾನ್ಯ ಪ್ರದರ್ಶನದಿಂದ ಅಮೆರಿಕದ ಅತ್ಯುತ್ತಮ `ಆರೋಹಿ~ಗಳಲ್ಲಿ ಒಬ್ಬಳೆನಿಸಿಕೊಂಡಿರುವಳು. ಈ ಸಾಹಸ ಕ್ರೀಡೆಯಲ್ಲಿ ಸಣ್ಣ ವಯಸ್ಸಿನಲ್ಲೇ ಅದ್ಭುತ ಸಾಧನೆ ಮಾಡಿರುವ ಇನ್ನೊಬ್ಬಳನ್ನು ಕಂಡುಹುಡುಕುವುದು ಕಷ್ಟ. ಅಶಿಮಾ ಹೊಂದಿರುವ ಶಕ್ತಿ ಅರಿವಿಗೆ ಬಂದದ್ದು 2008 ರಲ್ಲಿ. ತನ್ನ ಏಳನೇ ವಯಸ್ಸಿನಲ್ಲಿ ಕೆಲವೊಂದು ಬಂಡೆಗಳನ್ನು ಏರುವ ಮೂಲಕ ಸುದ್ದಿಯಾದಳು.

 

ಹದಿಹರೆಯದವರೂ ಹತ್ತಲು ವಿಫಲವಾದ ಬಂಡೆಗಳನ್ನು ಈಕೆ ಸರಾಗವಾಗಿ ಹತ್ತಿದ್ದಾಳೆ. 2010 ರಲ್ಲಿ ಹ್ಯೂಕೊ ಪಾರ್ಕ್‌ಗೆ ಭೇಟಿ ನೀಡಿದ್ದ ಸಂದರ್ಭ `ಪವರ್ ಆಫ್ ಸೈಲೆನ್ಸ್~ ಹೆಸರಿನ ಬಂಡೆ ಏರುವಲ್ಲಿ ಸಫಲಳಾದಳು. ಕಳೆದ  ವರ್ಷ ಕಠಿಣ ಎನ್ನಬಹುದಾದ ಮತ್ತೆರಡು ಬಂಡೆಗಳನ್ನು ಯಶಸ್ವಿಯಾಗಿ ಏರಿದಳು.ಮಾರ್ಚ್‌ನಲ್ಲಿ ಕೊಲರಾಡೊದಲ್ಲಿ ನಡೆದ `ಅಮೆರಿಕನ್ ಬೋಲ್ಡರಿಂಗ್ ಸೀರಿಸ್ ಯೂತ್ ನ್ಯಾಷನಲ್ ಚಾಂಪಿಯನ್‌ಷಿಪ್~ನಲ್ಲಿ ಅಶಿಮಾ ಅಗ್ರಸ್ಥಾನ ಪಡೆದರು. ನಾಲ್ಕು ಅಡಿ ಐದಿಂಚು ಎತ್ತರದ ಈ ಬಾಲೆ ಸರಸರನೆ ಮೇಲೇರಿದಾಗ ಅಲ್ಲಿ ನೆರೆದವರಿಗೆ ಅಚ್ಚರಿ.ವಯಸ್ಸಿನಲ್ಲಿ ತನಗಿಂತ ಹಿರಿಯರಾದವರಿಗೆ `ಶಾಕ್~ ನೀಡಿದಳು. ಇದೀಗ ಈಕೆ ಅಮೆರಿಕದ ವೃತ್ತಿಪರ ಆರೋಹಿಗಳ ಜೊತೆ ದಕ್ಷಿಣ ಆಫ್ರಿಕಾಕ್ಕೆ ಪಯಣಿಸಲಿದ್ದಾಳೆ. ಅಲ್ಲಿ ಇಂತಹದೇ ಚಮತ್ಕಾರ ತೋರುವುದು ಗುರಿ. ಈ ಗುಂಪಿನಲ್ಲಿರುವ ಏಕೈಕ ಬಾಲಕಿ ಅಶಿಮಾ.`ಅಶಿಮಾ ಬಂಡೆ ಏರುವ ಎಲ್ಲ ವಿದ್ಯೆಗಳನ್ನು ಚೆನ್ನಾಗಿ ಕರಗತಮಾಡಿಕೊಂಡಿದ್ದಾಳೆ. ಯಾರಾದರೂ ಸಲಹೆ ನೀಡಿದರೆ ಅದನ್ನು ಕೂಡಲೇ ಗ್ರಹಿಸಿಕೊಳ್ಳುವ ಶಕ್ತಿ ಈಕೆಯಲ್ಲಿದೆ~ ಎಂದು ಅರ್ಬನ್ ಕ್ಲೈಂಬರ್ ಮ್ಯಾಗಜಿನ್‌ನ ಸಂಪಾದಕ ಆ್ಯಂಡ್ರ್ಯೂ ಟವರ್ ನುಡಿದಿದ್ದಾರೆ.ಅಶಿಮಾಗೆ ಈ `ಶಿಲಾರೋಹಣ~ ಚಟ ಹತ್ತಿಕೊಂಡದ್ದು 2007 ರಲ್ಲಿ. ಆಗ ವಯಸ್ಸು ಆರು ವರ್ಷ. ಈಕೆಯ ಹೆತ್ತವರು ತ್ಸುಯಾ ಮತ್ತು ಹಿಸತೋಷಿ 1978 ರಲ್ಲಿ ಜಪಾನ್‌ನಿಂದ ಅಮೆರಿಕಕ್ಕೆ ವಲಸೆ ಬಂದು ಮ್ಯಾನ್‌ಹಟನ್‌ನಲ್ಲಿ ನೆಲೆಸಿದ್ದಾರೆ. ಮನರಂಜನೆ ಲಭಿಸಲಿ ಎಂಬ ಉದ್ದೇಶದಿಂದ ಹೆತ್ತವರು ಅಶಿಮಾಳನ್ನು ಮನೆ ಸಮೀಪದ ಸೆಂಟ್ರಲ್ ಪಾರ್ಕ್‌ಗೆ ಕರೆದೊಯ್ಯುತ್ತಿದ್ದರು.ಆ ಪಾರ್ಕ್‌ನಲ್ಲಿದ್ದ `ರ‌್ಯಾಟ್ ರಾಕ್~ ಹೆಸರಿನ ಬಂಡೆ ಅಶಿಮಾಳನ್ನು ಆಕರ್ಷಿಸಿತು. 15 ಅಡಿ ಎತ್ತರ ಹಾಗೂ ಸುಮಾರು 40 ಅಡಿ ಅಗಲದ ಬಂಡೆ ಹವ್ಯಾಸಿ `ಆರೋಹಿ~ಗಳ ನೆಚ್ಚಿನ ತಾಣ ಎನಿಸಿತ್ತು. ಅಶಿಮಾ ಕೂಡಾ ಅವರ ಜೊತೆ ಸೇರಿಕೊಂಡಳು.

 

ಅಲ್ಲಿದ್ದ ಕೆಲವರು ಬಂಡೆ ಏರಲು ಪರದಾಟ ನಡೆಸುತ್ತಿದ್ದರೆ, ಅಶಿಮಾ ಲೀಲಾಜಾಲವಾಗಿ ಮೇಲೇರುತ್ತಿದ್ದಳು. ನೇತಾಡುತ್ತಲೇ ಬಂಡೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಬರುತ್ತಿದ್ದಳು. ಬೆಳಿಗ್ಗೆ ಪಾರ್ಕ್‌ಗೆ ಬರುತ್ತಿದ್ದ ಅಶಿಮಾ ಕತ್ತಲು ಆವರಿಸಿದ ಬಳಿಕವಷ್ಟೇ ಅಲ್ಲಿಂದ ತೆರಳುತ್ತಿದ್ದಳು. ಈ ಕ್ರೀಡೆ ಅಷ್ಟರಮಟ್ಟಿಗೆ ಆಕೆಯನ್ನು ಸೆಳೆದುಕೊಂಡಿತು. ಸತತ ಪ್ರಯತ್ನದಿಂದಾಗಿ ಈ ಬಾಲಕಿ ಎತ್ತರೆತ್ತರ ಏರುತ್ತಿದ್ದಾಳೆ.ಹೆಚ್ಚಿದ ಜನಪ್ರಿಯತೆ

ಈ ರೀತಿಯ ಬಂಡೆ ಹತ್ತುವ ಸಾಹಸ ಕ್ರೀಡೆಗೆ 1990ರ ಬಳಿಕ ಹೆಚ್ಚಿನ ಜನಪ್ರಿಯತೆ ಲಭಿಸಿದೆ. `ವಾಲ್ ಕ್ಲೈಂಬಿಂಗ್~ಗೆ ಹೋಲಿಸಿದರೆ ಇದು ಅಗ್ಗ. ಯಾವುದೇ ಸಲಕರಣೆಗಳು ಬೇಕಿರುವುದಿಲ್ಲ. ಒಂದು ಜೊತೆ ಶೂ ಹಾಗೂ ಕೈಜಾರದಂತೆ ನೆರವಾಗಲು ಸೀಮೆಸುಣ್ಣದ ಪುಡಿ ಸಾಕು. ಕೃತಕ ಗೋಡೆ ಏರುವ ಸಂದರ್ಭ ಹಗ್ಗ, ಹೆಲ್ಮೆಟ್ ಒಳಗೊಂಡಂತೆ ಹೆಚ್ಚಿನ ಸಲಕರಣೆ ಬೇಕು.

 

ಮಾತ್ರವಲ್ಲ ಸ್ಪರ್ಧಿ ಆಯತಪ್ಪಿದರೂ ಕೆಳಕ್ಕೆ ಬೀಳದೆ, ಹಗ್ಗದಲ್ಲಿ ನೇತಾಡುವನು. ಆದರೆ ಬಂಡೆ ಹತ್ತುವ ವೇಳೆ ಯಾವುದೇ ಹಗ್ಗದ ನೆರವು ಇರುವುದಿಲ್ಲ. ಕೆಳಕ್ಕೆ ಬಿದ್ದರೆ ಏಟಾಗಬಾರದು ಎಂಬ ಉದ್ದೇಶದಿಂದ ಹಾಸಿಗೆಯಷ್ಟು ದಪ್ಪದ `ಕ್ರ್ಯಾಷ್ ಪ್ಯಾಡ್~ನ್ನು ನೆಲದಲ್ಲಿ ಹಾಸಿರುವರು. ಅದನ್ನು ಬಿಟ್ಟರೆ ಬೇರೆ ಯಾವುದೇ ಆಧುನಿಕ ಸಲಕರಣೆಗಳು ಬೇಡ.ಈ ಕ್ರೀಡೆ ಚಾರಣ, ಪರ್ವತಾರೋಹಣಗಳಿಗಿಂತ ಕಷ್ಟಕರ. ಇಲ್ಲಿ ದೀರ್ಘ ಅವಧಿಯವರೆಗೆ ನೇತಾಡಿಕೊಂಡಿರಬೇಕಾಗುತ್ತದೆ. ಒಮ್ಮೆ ಏರಲು ಆರಂಭಿಸಿದರೆ ತುದಿ ತಲುಪಿದ ಬಳಿಕವಷ್ಟೇ ವಿಶ್ರಾಂತಿ ಪಡೆಯಲು ಸಾಧ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry