ಸ್ಪೋರ್ಟ್ಸ್ ವಾಚ್ ನಂಗಿಷ್ಟ

7

ಸ್ಪೋರ್ಟ್ಸ್ ವಾಚ್ ನಂಗಿಷ್ಟ

Published:
Updated:

ಬಿಲಿಯರ್ಡ್ಸ್‌ನಲ್ಲಿ ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿರುವ ಪಂಕಜ್ ಅಡ್ವಾಣಿ ಅವರ ಪ್ರತಿ ಮಾತಿನಲ್ಲೂ ಆಟದ ಬಗ್ಗೆ ಅವರಿಗಿರುವ ಬದ್ಧತೆ ಎದ್ದು ಕಾಣುತ್ತದೆ. ಅವರ ಈ ಕ್ರೀಡಾಪ್ರೀತಿಯೇ ಅವರನ್ನು ವಿಶ್ವ ಶ್ರೇಷ್ಠರನ್ನಾಗಿಸಿರುವುದು. ಪಂಕಜ್ ಈಚೆಗೆ ನಗರದಲ್ಲಿ ಪ್ರಾರಂಭಗೊಂಡ ಸ್ಪೋರ್ಟ್ಸ್ ವಾಚ್ ಮಾರಾಟ ಮಳಿಗೆ `ಟ್ಯಾಗ್ ಹ್ಯುಯರ್~ ಉದ್ಘಾಟನೆಗೆ ಬಂದಿದ್ದರು. ಕಪ್ಪು ಬಣ್ಣದ ಪ್ಯಾಂಟ್ ಶರ್ಟ್ ಹಾಕಿಕೊಂಡಿದ್ದ ಪಂಕಜ್ ಥೇಟ್ ಯುವರಾಜನಂತೆ ಕಂಗೊಳಿಸುತ್ತಿದ್ದರು. ರೇಸ್ ಕಾರಿನಲ್ಲಿ ಕುಳಿತು ಪುಟ್ಟ ಮಕ್ಕಳಂತೆ ಕಂಪ್ಯೂಟರ್ ಪರದೆ ಮೇಲೆ ಸ್ಪೋರ್ಟ್ಸ್ ಕಾರ್ ಓಡಿಸಿ ಖುಷಿಪಟ್ಟರು. ಈ ಸಂದರ್ಭದಲ್ಲಿ ಮಾತಿಗೆ ಸಿಕ್ಕ ಪಂಕಜ್, ತಮ್ಮ ಕ್ರೀಡಾ ಪ್ರೀತಿ, ಟ್ಯಾಗ್ ಹ್ಯುಯರ್ ಸ್ಟೋರ್ಟ್ಸ್ ವಾಚ್ ಕುರಿತ ಇಷ್ಟ, ಬಿಲಿಯರ್ಡ್ಸ್ ಆಟಗಾರನಿಗೆ ಇರಬೇಕಾದ ಬದ್ಧತೆ ಹಾಗೂ ಸ್ನೂಕರ್‌ನ ಒಳ- ಹೊರಗುಗಳನ್ನು ತೆರೆದಿಟ್ಟರು.

`ನನ್ನೊಳಗೆ ಸ್ವ-ಹಿತಾಸಕ್ತಿ ಇಲ್ಲ. ದೇಶಕ್ಕಾಗಿ ಆಟ ಆಡುವುದರಲ್ಲಿ ನನಗೆ ಅಭಿಮಾನವಿದೆ. ಪ್ರತಿದಿನ ನಾನು ಆತ್ಮಶೋಧನೆ ಮಾಡಿಕೊಳ್ಳುತ್ತೇನೆ. ನಮ್ಮ ಅಸ್ಮಿತೆಯನ್ನು ಇಡೀ ಜಗತ್ತಿಗೆ ತಿಳಿಸಿಕೊಡಬೇಕಾದರೆ ನಾವು ಹೋರಾಟಕ್ಕೆ ಸದಾ ಸಿದ್ಧರಿರಬೇಕು. ಜೀವನ ಹೂವಿನ ಹಾಸಿಗೆಯಲ್ಲ. ಅಲ್ಲಿ ಪ್ರತಿದಿನ, ಪ್ರತಿಕ್ಷಣ ಸವಾಲುಗಳು ಎದುರಾಗುತ್ತಿರುತ್ತವೆ. ಅವುಗಳನ್ನು ಎದುರಿಸಿ ಮುನ್ನಡೆವ ಸಾಮರ್ಥ್ಯ ನಮಗಿರಬೇಕು. ಕ್ರೀಡಾಪಟುಗಳು ಫಿಟ್‌ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

ಬಿಲಿಯರ್ಡ್ಸ್ ಆಟಕ್ಕೆ ಬೇಕಿರುವುದು ಅಪಾರ ಶ್ರದ್ಧೆ ಹಾಗೂ ಕೈ ಮತ್ತು ಕಣ್ಣುಗಳ ನಡುವೆ ಹೊಂದಾಣಿಕೆ. ಕಣ್ಣುಗಳಲ್ಲಿ ತೀಕ್ಷ್ಣತೆ, ಕುಶಾಗ್ರಮತಿ ಇದ್ದರೆ ಸುಲಭವಾಗಿ ನಾವು ಆಟದ ಮೇಲೆ ಹಿಡಿತ ಸಾಧಿಸಬಹುದು. ಟೇಬಲ್ ಮೇಲಿರುವ ಬಾಲ್‌ಗಳನ್ನು ನಿಯಂತ್ರಣದಿಂದ ಪೋಚ್ ಕಡೆಗೆ ಕಳುಹಿಸುವ ಮೂಲಕ ಎದುರಾಳಿಯನ್ನು ಕಂಗೆಡಿಸಲು, ಆಟದಲ್ಲಿ ಸುರಕ್ಷಿತವಾಗಿ ಮುನ್ನಡೆಯಲು ಆಟಗಾರರಿಗೆ ಒಂದಿಷ್ಟು ಕೌಶಲ್ಯ ಬೇಕು. ಆಗ ಮಾತ್ರ ಈ ಆಟದಲ್ಲಿ ಪಳಗಲು ಸಾಧ್ಯ. ಸ್ನೂಕರ್ ಆಟಗಾರ ಆಟ ಆಡುವಾಗ ಪ್ರತಿ ಸಲವೂ ಟೇಬಲ್ ಸುತ್ತ ಸುತ್ತುತ್ತಿರಬೇಕು. ಆಗಾಗ ಬಾಗುತ್ತಿರಬೇಕು. ಇದಕ್ಕಾಗಿ ದೇಹವನ್ನು ತುಂಬಾ ಫ್ಲೆಕ್ಸಿಬಲ್ ಆಗಿಟ್ಟುಕೊಳ್ಳಬೇಕು. ಜತೆಗೆ ಕಾಲುಗಳು ಹಾಗೂ ಬೆನ್ನು ಬಲಿಷ್ಠವಾಗಿರಲೇಬೇಕು.

ನನಗೆ ಸ್ಪೋರ್ಟ್ಸ್ ವಾಚ್‌ಗಳ ಮೇಲೆ ತುಂಬಾ ಒಲವು. ಟ್ಯಾಗ್ ಹ್ಯುಯರ್ ನನ್ನ ಇಷ್ಟದ ಬ್ರಾಂಡ್. ಮಳಿಗೆ ಬಿಡುಗಡೆ ಮಾಡಿರುವ ಮೊನಾಕೊ ಗ್ರ್ಯಾಂಡ್ ಪ್ರಿ ಎಂದರೇ ನನಗೆ ತುಂಬಾ ಇಷ್ಟ. ಈ ವಾಚ್‌ನಲ್ಲಿ ಹತ್ತು ಹಲವು ವೈಶಿಷ್ಟ್ಯಗಳಿವೆ~.

ಇನ್ನು ಪಂಕಜ್ ಅವರಿಗೆ ಬಿಡುವಿನ ವೇಳೆಯಲ್ಲಿ ಟೆನಿಸ್ ಮ್ಯಾಚ್‌ಗಳನ್ನು ನೋಡುವುದೆಂದರೆ ಇಷ್ಟವಂತೆ. ಫೆಡರರ್ ಅವರ ಬಹು ದೊಡ್ಡ ಅಭಿಮಾನಿ ಎನ್ನುವ ಅವರಿಗೆ ಒಬ್ಬ ಅಪ್ಪಟ ಕ್ರೀಡಾಪಟುವಿನಲ್ಲಿ ಇರಬೇಕಾದ ಎಲ್ಲಾ ಗುಣಗಳು ಇವೆ ಎಂದು ಅನಿಸುತ್ತದಂತೆ. ಫೆಡರರ್ ಅವರ ಆಟದಲ್ಲಿ ಇರುವ ಲಾಲಿತ್ಯ, ವ್ಯಕ್ತಿತ್ವದಲ್ಲಿ ಮಿಳಿತಗೊಂಡಿರುವ ನಯ-ನಾಜೂಕು, ಠೀವಿ, ಸಭ್ಯತೆ ಇವೆಲ್ಲವೂ ಅವರನ್ನು ಬಹುವಾಗಿ ಸೆಳೆದಿವೆಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry