ಮಂಗಳವಾರ, ನವೆಂಬರ್ 19, 2019
23 °C

ಸ್ಫೂರ್ತಿ ಫೈನಾನ್ಸ್ ಪರ- ವಿರುದ್ಧ ಪ್ರತಿಭಟನೆ

Published:
Updated:

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಪಂದನ ಸ್ಫೂರ್ತಿ ಫೈನಾನ್ಸ್ ಲಿಮಿಟೆಡ್ ಪರ ಹಾಗೂ ವಿರುದ್ಧ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆಗಳು ನಡೆದವು.ರೈತ ಸಂಘದ ಆಶ್ರಯದಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಸ್ಪಂದನ ಸ್ಫೂರ್ತಿ ಫೈನಾನ್ಸ್ ವಿರುದ್ಧ ಘೋಷಣೆ ಕೂಗುತ್ತಾ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಕಳೆದ ತಿಂಗಳು ಫೈನಾನ್ಸ್ ವಿರುದ್ಧ ಪ್ರತಿಭಟನೆ ನಡೆಸಿದಾಗ ಮಾರ್ಚ್ 31ರೊಳಗೆ ಸಮಸ್ಯೆ ಬಗೆಹರಿಸುವುದಾಗಿ ಪೊಲೀಸರ ಸಮ್ಮುಖದಲ್ಲಿ ಆಶ್ವಾಸನೆ ನೀಡಲಾಗಿತ್ತು. ಅದರಂತೆ ಸೋಮವಾರ ಪ್ರತಿಭಟನೆ ನಡೆಸಲಾಯಿತು ಎಂದು ರೈತ ನಾಯಕರು ಹೇಳಿದರು.ಸ್ವಲ್ಪ ಹೊತ್ತಿನಲ್ಲಿ ಸ್ಪಂದನ ಸ್ಫೂರ್ತಿ ಫೈನಾನ್ಸ್ ಲಿಮಿಟೆಡ್ ಸಿಬ್ಬಂದಿ ಹಾಗೂ ಕೆಲ ಮಹಿಳೆಯರು ಫೈನಾನ್ಸ್ ಪರ ಘೋಷಣೆ ಕೂಗುತ್ತಾ ಠಾಣೆ ಎದುರು ಜಮಾಯಿಸಿದರು. ಈ ಹಂತದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆ ಪರಸ್ಪರ ದೋಷಾರೋಪ ಮಾಡಿದರು.

ಮಧ್ಯೆಪ್ರವೇಶಿಸಿದ ಪೊಲೀಸರು ಉಭಯ ಗುಂಪಿನ ಸದಸ್ಯರನ್ನು ಸಮಾಧಾನಪಡಿಸಿದರು. ನಂತರ ಕಚೇರಿಗೆ ಕರೆಸಿ ಚರ್ಚಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ನಾಯಕರು, ಮಹಿಳೆಯರು ಫೈನಾನ್ಸ್ ವಿರುದ್ಧ ದೂರಿದರು. ಸಾಲಕ್ಕೆ ಅಧಿಕ ಬಡ್ಡಿ ವಿಧಿಸಲಾಗುತ್ತಿದೆ. ಮೂರು ವರ್ಷಗಳಿಂದ ವಿಮಾ ಸೌಲಭ್ಯ ನೀಡು ತ್ತಿಲ್ಲ. ಆರ್‌ಬಿಐ ನಿಯಮಕ್ಕೆ ವಿರುದ್ಧವಾಗಿ ಮಹಿಳೆಯರಿಂದ ಫಿಗ್ಮಿ ವಸೂಲಿ ಮಾಡಲಾಗುತ್ತಿದೆ. ಸಾಲ ನೀಡುವು ದಾಗಿ ನಂಬಿಸಿ 13 ಮಹಿಳೆಯರಿಂದ ತಲಾ ರೂ.5 ಸಾವಿರ ವಸೂಲಿ ಮಾಡಲಾಗಿದೆ. ಸಾಲ ನೀಡುವಾಗ ಪಡೆದಿದ್ದ ಮೂಲ ದಾಖಲೆಗಳನ್ನು ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.ಫೈನಾನ್ಸ್‌ನ ಕ್ಲಸ್ಟರ್ ವ್ಯವಸ್ಥಾಪಕ ವೆಂಕಟರೆಡ್ಡಿ ಮಾತನಾಡಿ, ಆರ್‌ಬಿಐ ನಿಯಮಕ್ಕೆ ಅನುಸಾರವಾಗಿ ಫೈನಾನ್ಸ್ ಕಾರ್ಯನಿರ್ವಹಿಸುತ್ತಿದೆ. ಅದರ ಪ್ರಕಾರ ಸಾಲ ವಿತರಿಸಲಾಗುತ್ತಿದೆ. ಬಡ್ಡಿ ವಿಧಿಸಲಾಗಿದೆ. 23 ಜನರ ಪೈಕಿ 19 ಮಂದಿಗೆ ವಿಮಾ ಸೌಲಭ್ಯ ನೀಡ ಲಾಗಿದೆ. ಉಳಿದವರಿಗೆ ಶೀಘ್ರ ವಿಮಾ ಸೌಲಭ್ಯ ನೀಡಲಾಗುವುದು ಎಂದರು.ಸಾಲ ಮಂಜೂರು ಮಾಡುವುದಾಗಿ ಮಹಿಳೆಯರಿಂದ ಹಣ ಪಡೆದಿಲ್ಲ. ಒಂದು ವೇಳೆ ಸಿಬ್ಬಂದಿ ಪಡೆದಿದ್ದರೆ ಅಂಥವರ ವಿರುದ್ಧ ದೂರು ನೀಡಬಹುದು. ಎಲ್ಲರಿಗೂ ದಾಖಲೆ ವಾಪಸ್ ನೀಡಲಾಗಿದೆ. ಫಿಗ್ಮಿ ಹಣ ವಸೂಲಿ ಮಾಡುವುದನ್ನು ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ ಎಂದರು.ಇನ್‌ಸ್ಪೆಕ್ಟರ್ ಎ. ಮಾರಪ್ಪ ಮಾತ ನಾಡಿ, ಗ್ರಾಹಕರೊಂದಿಗೆ ಫೈನಾನ್ಸ್ ಸಿಬ್ಬಂದಿ ಅಸಭ್ಯವಾಗಿ ವರ್ತಿಸಬಾರದು. ಗ್ರಾಹಕರ ದಾಖಲೆಗಳನ್ನು ರೈತ ಸಂಘದ ನಾಯಕರಿಗೆ ನೀಡಿ, ಇದನ್ನು ಲೆಕ್ಕ ಪರಿಶೋಧನೆಗೆ ಒಳಪಡಿಸಬೇಕು. ಲೋಪದೋಪ ಕಂಡು ಬಂದರೆ ಫೈನಾನ್ಸ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ರೈತ ಸಂಘದ ಮುಖಂಡರಾದ ಆನೇಕೆರೆ ರವಿ, ಮಂಜೇಗೌಡ, ಸಿ.ಜಿ. ರವಿ, ರಾಮಸ್ವಾಮಿ ಇದ್ದರು.

ಪ್ರತಿಕ್ರಿಯಿಸಿ (+)