ಶುಕ್ರವಾರ, ನವೆಂಬರ್ 15, 2019
20 °C

ಸ್ಫೋಟಕ್ಕೆ ಬೆಚ್ಚಿ ಬಿದ್ದ ನಾಗರಿಕರು

Published:
Updated:

ಬೆಂಗಳೂರು: ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಬುಧವಾರ ಬೆಳಿಗ್ಗೆ ಸಂಭವಿಸಿದ ಬಾಂಬ್ ಸ್ಫೋಟ ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವಾಯಿತು. ಆರಂಭದಲ್ಲಿ ಸಿಲಿಂಡರ್ ಅಥವಾ ಟ್ರಾನ್ಸ್‌ಫಾರ್ಮರ್ ಸಿಡಿದಿರಬಹದು ಎಂದುಕೊಂಡಿದ್ದ ನಾಗರಿಕರಿಗೆ ಇದೊಂದು ಭಯೋತ್ಪಾದನಾ ಕೃತ್ಯ ಎಂದು ತಿಳಿಯುವುದು ತಡವಾಗಲಿಲ್ಲ.ಇನ್ನೂ ಕೆಲವರು ಭೂಕಂಪ ಸಂಭವಿಸಿದೆ ಎಂದು ಮನೆಯಿಂದ ಹೊರ ಬಂದು ನಿಂತಿದ್ದರು. `ಸ್ಫೋಟದ ತೀವ್ರತೆಗೆ ನಾಲ್ಕನೇ ಅಂತಸ್ತಿನಲ್ಲಿದ್ದ ಮನೆಯ ಕಿಟಕಿ ಗಾಜುಗಳು ಸಹ ಒಡೆದಿವೆ. ಕೆಲ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಂಗಳವಾರವಷ್ಟೆ ಭೂಕಂಪದ ಸುದ್ದಿ ಕೇಳಿದ್ದರಿಂದ ನಗರದಲ್ಲೂ ಭೂಮಿ ಕಂಪಿಸಿರಬಹುದು ಎಂದು ಭಾವಿಸಿದ್ದೆವು. ಆದರೆ, ಬಾಂಬ್ ಸ್ಫೋಟಗೊಂಡಿರುವ ವಿಷಯ ನಂತರದಲ್ಲಿ ಗೊತ್ತಾಯಿತು ಎಂದು ಮಲ್ಲೇಶ್ವರದ ನಿವಾಸಿ ಭರತ್ ಆತಂಕದಿಂದ ನುಡಿದರು.ಸಿಲಿಂಡರ್ ಸ್ಫೋಟ ಎಂದುಕೊಂಡೆ: `ನಮ್ಮ ಮನೆಗೆ ಸುಮಾರು 600 ಮೀಟರ್ ಅಂತರದಲ್ಲಿ ಬಾಂಬ್ ಸ್ಫೋಟಿಸಿದೆ. ಆರಂಭದಲ್ಲಿ ಸಿಲಿಂಡರ್ ಸ್ಫೋಟಗೊಂಡಿರಬಹುದು ಎಂದು ಭಾವಿಸಿದ್ದೆ. ಆದರೆ, ಹೊರಗೆ ಬಂದು ನೋಡಿದಾಗ ವಾತಾವರಣದಲ್ಲಿ ದಟ್ಟ ಹೊಗೆ ಆವರಿಸಿತ್ತು. ಸ್ಪೋಟಗೊಂಡ ಸ್ಥಳದಲ್ಲಿ ವಾಹನಗಳು ಬೆಂಕಿಗೆ ಆಹುತಿಯಾಗುತ್ತಿದ್ದವು. ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ಪೀಠೋಪಕರಣಗಳು ಸಹ ಜರುಗಿದ್ದವು' ಎಂದು ಶಿವಶಂಕರ್ ಆತಂಕದಿಂದ ನುಡಿದರು.ಆತಂಕದಿಂದ ಸ್ಥಳಕ್ಕೆ ಹೋಗಲಿಲ್ಲ: `ಸ್ಫೋಟದಿಂದ ಹಲವರು ಗಾಯಗೊಂಡು ರಸ್ತೆ ಮೇಲೆ ಬಿದ್ದಿದ್ದರು. ಆದರೆ, ಅಕ್ಕಪಕ್ಕದ ವಾಹನಗಳು ಹೊತ್ತಿ ಉರಿಯುತ್ತಿದ್ದ ಕಾರಣ ಯಾರೊಬ್ಬರೂ ಗಾಯಾಳುಗಳ ಬಳಿ ಹೋಗುವ ಪ್ರಯತ್ನ ಮಾಡಲಿಲ್ಲ. ಬೇರೆ ವಾಹನಗಳಲ್ಲೂ ಬಾಂಬ್ ಇಟ್ಟಿರಬಹುದು ಎಂಬ ಆತಂಕ ಎಲ್ಲರಲ್ಲೂ ಇತ್ತು. ಸ್ವಲ್ಪ ಸಮಯದ ನಂತರ ಸಾರ್ವಜನಿಕರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ವಾಹನಗಳಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದರು' ಎಂದು ಸ್ಫೋಟದ ಪ್ರತ್ಯಕ್ಷದರ್ಶಿ ರಂಜಿತ್‌ಕುಮಾರ್ ಸನ್ನಿವೇಶವನ್ನು ವಿವರಿಸಿದರು.ಕಿವಿಗಳು ಸ್ತಬ್ಧವಾದವು: `ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ನಾನು ಬೆಳಿಗ್ಗೆ 10.30ರ ಸುಮಾರಿಗೆ ವಾಪಸ್ ಬಂದೆ. ಕಾರು ನಿಲ್ಲಿಸಿ ಮನೆಯ ಬಾಗಿಲ ಹತ್ತಿರ ಹೋಗುತ್ತಿದ್ದಂತೆ ಭಾರಿ ಪ್ರಮಾಣದ ಶಬ್ದ ಕೇಳಿಸಿತು. ಶಬ್ದದ ತೀವ್ರತೆಗೆ ಕಿವಿ ಸ್ತಬ್ಧವಾಗಿ ಕಣ್ಣುಗಳು ಮಂಜಾದವು. ಪ್ರಜ್ಞೆ ತಪ್ಪಿ ಬಿದ್ದಿದ್ದ ನನ್ನನ್ನು ಕುಟುಂಬ ಸದಸ್ಯರು ಒಳಗೆ ಕರೆದುಕೊಂಡು ಹೋದರು. 20 ನಿಮಿಷಗಳ ಬಳಿಕ ಎಚ್ಚರಗೊಂಡಾಗ ಬಾಂಬ್ ಸ್ಫೋಟದ ಸಂಗತಿ ತಿಳಿಯಿತು' ಎಂದು ಮಲ್ಲೇಶ್ವರ ನಿವಾಸಿ ರಘು ತಿಳಿಸಿದರು.ದೇಶದ ಭದ್ರತೆ ಮುಖ್ಯ: `ವಿಧಾನಸಭೆ ಚುನಾವಣೆ ಅಥವಾ ಐಪಿಎಲ್ ಕ್ರಿಕೆಟ್ ಟೂರ್ನಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಸ್ಫೋಟ ನಡೆದಿರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಕೂಡಲೇ ಉನ್ನತ ಮಟ್ಟದ ತನಿಖಾ ತಂಡವನ್ನು ನಗರಕ್ಕೆ ಕಳುಹಿಸಬೇಕು. 2-3 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಿ ಸಾರ್ವಜನಿಕರಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡಬೇಕು. ಕೆಲ ರಾಜಕೀಯ ಪಕ್ಷಗಳು ಈ ಸ್ಫೋಟದ ಲಾಭ ಪಡೆದು ಪರಸ್ಪರ ಕೆಸರೆರಚಾಟ ಮಾಡುತ್ತಿರುವುದು ಸರಿಯಲ್ಲ. ದೇಶದ ಭದ್ರತೆ ಮತ್ತು ಏಕತೆ ವಿಚಾರದಲ್ಲಾದರೂ ಒಟ್ಟಾಗಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು' ಎಂದು ಮಲ್ಲೇಶ್ವರದ ನಿವಾಸಿ ವಕೀಲ ರಾಮಚಂದ್ರಪ್ಪ ಹೇಳಿದರು.

ಪ್ರತಿಕ್ರಿಯಿಸಿ (+)