ಸ್ಫೋಟಗೊಂಡ ಕ್ರೌರ್ಯ: ಹಳ್ಳಿಯ ಆತ್ಮ ವಿಲವಿಲ

7

ಸ್ಫೋಟಗೊಂಡ ಕ್ರೌರ್ಯ: ಹಳ್ಳಿಯ ಆತ್ಮ ವಿಲವಿಲ

Published:
Updated:
ಸ್ಫೋಟಗೊಂಡ ಕ್ರೌರ್ಯ: ಹಳ್ಳಿಯ ಆತ್ಮ ವಿಲವಿಲ

ಯರ‌್ರಕೋಟೆ (ಚಿಂತಾಮಣಿ ತಾಲ್ಲೂಕು): `ಗುಂಪು ದೊಡ್ಡದಾಯಿತೆಂದರೆ ಅಲ್ಲಿ ಆಗಬಾರದ್ದು ಏನೋ ಆಯಿತೆಂದೇ ಅರ್ಥ...~ಶಾಲಾ ಶಿಕ್ಷಕರೊಬ್ಬರು ಪ್ರಾಸಂಗಿಕವಾಗಿ ಹೇಳಿದ ಈ ಮಾತು ಈ ಭಾಗದ ಜನರ ಮನಃಸ್ಥಿತಿಯನ್ನು ಬಿಂಬಿಸುತ್ತದೆ.ನೂರಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರಿದರೆ ಅಲ್ಲಿ ಕಲ್ಲು, ದೊಣ್ಣೆಗಳೇ ಎಲ್ಲವನ್ನೂ ನಿರ್ಧರಿಸುತ್ತವೆ ಎಂಬ ಅವರ ಮಾತಿಗೆ ಪೂರಕವಾಗಿ ಅನೇಕ ನಿದರ್ಶನಗಳು ಸಿಗುತ್ತವೆ. ಇಂತಹದೊಂದು `ರಕ್ತಚರಿತ್ರೆ~ಗೆ ಆ. 2ರಂದು ಬಾರ‌್ಲಹಳ್ಳಿ ಕ್ರಾಸ್ ಮತ್ತು ಯರ‌್ರಕೋಟೆಯಲ್ಲಿ ಕಳ್ಳರೆಂದು ಹತ್ತು ಮಂದಿಯನ್ನು ಹತ್ಯೆಗೈದ ಕೃತ್ಯ ಹೊಸ ಅಧ್ಯಾಯವನ್ನು ಸೇರಿಸಿದೆ.ಆಂಧ್ರಪ್ರದೇಶದ ಗಡಿಗೆ ತಾಗಿಕೊಂಡಿರುವ ತಾಲ್ಲೂಕಿನ ಬಿಲ್ಲಾಂಡ್ಲಹಳ್ಳಿ ಗ್ರಾಮದಲ್ಲಿ 1998ರಲ್ಲಿ ಮೂವರು ಪೊಲೀಸರನ್ನು ದೊಣ್ಣೆ, ಕಲ್ಲುಗಳಿಂದ ಹೊಡೆದು ಸಾಯಿಸಿದ್ದು, ಕಂಬಾಲಹಳ್ಳಿಯಲ್ಲಿ ನಡೆದ ದಲಿತರ ಸಜೀವ ದಹನ ಸೇರಿದಂತೆ ಹಲವು ಭೀಕರ ಕೃತ್ಯಗಳ ಹಿಂದೆ ಇಂತಹದೇ ಮನಃಸ್ಥಿತಿ ಕೆಲಸ ಮಾಡಿದೆ ಎಂದು ಅವರು ವಿಶ್ಲೇಷಿಸುತ್ತಾರೆ.ಕಾನೂನು ಕೈಗೆತ್ತಿಕೊಳ್ಳುವ ಈ ಪ್ರವೃತ್ತಿಗೆ ಕಾರಣಗಳನ್ನು ಕೆದಕುತ್ತಾ ಹೋದರೆ ತೆಲುಗು ಸಿನಿಮಾ, ರಾಯಲುಸೀಮೆಯ ರಕ್ತಸಿಕ್ತ ರಾಜಕಾರಣದ ಪ್ರಭಾವದ ಜತೆಗೆ ವ್ಯವಸ್ಥೆ ಬಗೆಗಿನ ವಿಶ್ವಾಸ ನಷ್ಟ, ಪೊಲೀಸ್ ವೈಫಲ್ಯ, ಗ್ರಾಮಗಳಲ್ಲಿ ಹಿರಿಯರ ಹಿಡಿತ ಸಡಿಲಗೊಂಡಿರುವುದು ಒಳಗೊಂಡಂತೆ ಬೇರೆ ಬೇರೆ ಅಂಶಗಳು ಹೊರಬರುತ್ತವೆ.ಆ. 2ರ ಭೀಕರ ಕೃತ್ಯದ ಬಳಿಕ ಇಡೀ ಮುರಗಮಲ್ಲ ಹೋಬಳಿಯಲ್ಲಿ ನೀರವ ನೆಲೆಸಿದೆ. `ಪ್ರಜಾವಾಣಿ~ ಪ್ರತಿನಿಧಿ ಗ್ರಾಮಗಳಿಗೆ ಭೇಟಿ ನೀಡಿದಾಗ ಕೆಲವೊಂದು ಊರುಗಳಲ್ಲಿ ಒಬ್ಬ ಗಂಡಸೂ ಕಾಣಿಸಲಿಲ್ಲ. ಮನೆಗಳಿಗೆ ಬೀಗ ಬಿದ್ದಿದೆ. ಭೀತಗೊಂಡ ಮಹಿಳೆಯರು ಮನೆ ಬಿಟ್ಟು ಹೊರಬರುತ್ತಿಲ್ಲ.ಮುರಗಮಲ್ಲಕ್ಕೆ ಹೋಗುವ ಮುಖ್ಯರಸ್ತೆಯಿಂದ 1.5 ಕಿ.ಮೀ. ಅಂತರದಲ್ಲಿರುವ ಬಾರ‌್ಲಹಳ್ಳಿ, ಬಸ್ ಅನುಕೂಲದಿಂದ ವಂಚಿತವಾದ ಗ್ರಾಮ. ನಿರಾಭರಣದ ದೀಕ್ಷೆ ತೊಟ್ಟವರಂತೆ ಊರಿನ ಮಹಿಳೆಯರೆಲ್ಲ ಕಿವಿಯ ಓಲೆ ಸಹಿತ ದಿನನಿತ್ಯ ಧರಿಸುವ ಎಲ್ಲ ಆಭರಣ ಕಳಚಿಟ್ಟಿದ್ದಾರೆ. ಕುತ್ತಿಗೆಯಲ್ಲಿ ಕರಿಮಣಿ ಸರ. ಕೆಲವರು ತಾಳಿ ಸಹ ತೆಗೆದಿಟ್ಟು ಅರಿಸಿನ ಕೊಂಬು ಕಟ್ಟಿಕೊಂಡಿದ್ದಾರೆ. ಕಳ್ಳರ ಹಾವಳಿ ಆ ಮಟ್ಟಿಗೆ ಗ್ರಾಮಸ್ಥರನ್ನು ಭಯಭೀತಗೊಳಿಸಿದೆ.ಗ್ರಾಮದ ಸುತ್ತ ಮಾವಿನ ತೋಪು. ಬೇಲಿ ಪೊದೆಗಳು. ಒಂಟಿ ಮಹಿಳೆಯರನ್ನು ಕಂಡರೆ ಸಾಕು ಕಳ್ಳರು ಧುತ್ತನೆ ಎರಗಿ ಕುತ್ತಿಗೆಗೆ ಕೈಹಾಕುತ್ತಾರಂತೆ. `ಮನೆಯವರನ್ನು ಕಾಡಿಬೇಡಿ ಒಂದು ತಾಳಿಸರ ಮಾಡಿಸಿಕೊಂಡಿದ್ದೆ. ಅದನ್ನು ತಾಳಿ ಸಹಿತವಾಗಿ ಕಳ್ಳರು ಕಿತ್ತುಕೊಂಡು ಹೋದರು~ ಎಂದು ನೊಂದು ನುಡಿದ ಸುಶೀಲಾ ಅವರು, `ಈಗ ಎಲ್ಲ ಬಂದು ವಿಚಾರಿಸುತ್ತಿದ್ದಾರೆ. ಆಗ ಒಬ್ಬ ನರಪಿಳ್ಳೆಯೂ ಬಂದು ಕಷ್ಟ ಕೇಳಲಿಲ್ಲ~ ಎಂದರು. `ಬೆಳಿಗ್ಗೆ ಹಿಡಿದುಕೊಟ್ಟರೆ ಸಂಜೆಗೆ ಹೊರಬರ‌್ತಾರೆ~ ಎಂದು ನಾರಾಯಣಮ್ಮ ದುಮುಗುಟ್ಟಿದರು.

 

ಮಹಿಳೆಯರು ತಮ್ಮ ಮಾತಿನಲ್ಲಿ ಯಾವ ಸಿಟ್ಟು, ಹತಾಶೆಯನ್ನು ಹೊರಹಾಕಿದರೋ ಅದನ್ನು ಪುರುಷರು ರಟ್ಟೆಗಿಳಿಸಿದ ಪರಿಣಾಮವೇ ಈ ಹತ್ಯಾಕೃತ್ಯ. `ನಮಗೆ ನಾವಲ್ಲದೆ ಬೇರೆ ಯಾರೂ ನ್ಯಾಯ ಒದಗಿಸಲಾರರು~ ಎಂಬ ಹತಾಶಭಾವ ಅವರ ಮಾತುಗಳಲ್ಲಿ ಒಂದಲ್ಲ ಒಂದು ರೂಪದಲ್ಲಿ ವ್ಯಕ್ತವಾಗುತ್ತದೆ. ಇದು ನಾಗರಿಕ ಸಮಾಜಕ್ಕೆ ಒಂದು ರೀತಿ ಎಚ್ಚರಿಕೆಯ ಗಂಟೆ.ಇದಕ್ಕೆಲ್ಲ ಕೊಲೆ ಒಂದು ಪರಿಹಾರವೇ ಎಂದು ಕೇಳಿದರೆ, `ರೋಸಿ ಹೋಗಿದ್ದೇವಣ್ಣೋ. ಹೊಲಕ್ಕೂ ಒಂಟಿಯಾಗಿ ಹೋಗಕ್ಕಾಗದ ಸ್ಥಿತಿ ಬಂದಿದೆ. ನಮ್ಮ ನೋವು ಯಾರಿಗೆ ಹೇಳೋದು~ ಎನ್ನುತ್ತಾರೆ ಹಳ್ಳಿಯ ಜನರು. ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ಗಾಂಧೀಜಿ ನಂಬಿದ್ದರು. ಇವತ್ತು ಹಳ್ಳಿಗಳನ್ನೂ ಅಭದ್ರ ಭಾವ ಈ ಪರಿ ಕಾಡತೊಡಗಿದೆ!ಮುದ್ದಲಹಳ್ಳಿಯಲ್ಲಿ ಊರ ನಡುವೆ ಇರುವ ಮನೆಯೊಂದಕ್ಕೆ ಹಾಡಹಗಲೇ ನುಗ್ಗಿದ ಕಳ್ಳನೊಬ್ಬ, ಅನಿತಾ ಎಂಬ ಗರ್ಭಿಣಿಗೆ ಚಾಕು ತೋರಿಸಿ `ಮಗು ಬೇಕೋ ಚೈನು ಬೇಕೋ~ ಎಂದು ಕುತ್ತಿಗೆ ಸರಕ್ಕೆ ಕೈಹಾಕಿದ್ದ. ಇದೇ ಗ್ರಾಮದ ತಿರುಮಲಮ್ಮ ಅವರ ಕುತ್ತಿಗೆಗೆ ಬಟ್ಟೆ ಬಿಗಿದು ಮರಕ್ಕೆ ನೇತುಹಾಕಿದ್ದರು. ಮಕ್ಕಳ ಕಿರುಚಾಟ ಕೇಳಿ ದಾರಿಹೋಕರು ಇವರ ಜೀವ ಉಳಿಸಿದ್ದಾರೆ. ಜನರು ರೊಚ್ಚಿಗೇಳಲು ಇಂತಹ ಘಟನೆಗಳೇ ಕಾರಣ ಎಂದು ಹೇಳಲಾಗುತ್ತಿದೆ. ಕಳ್ಳತನದ ಪ್ರಕರಣಗಳ ಬಗ್ಗೆ ಇಡೀ ತಾಲ್ಲೂಕಿನಲ್ಲಿ ಕೂಗು ಹಬ್ಬಿದರೂ ನಿಗ್ರಹಕ್ಕೆ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದೆ. ಪೊಲೀಸ್ ವೈಫಲ್ಯದ ಬಗ್ಗೆ ಪ್ರತಿಯೊಬ್ಬರೂ ಬೆರಳು ತೋರುತ್ತಾರೆ. ಆದರೆ ಅವರಿಂದ ಕೆಲಸ ತೆಗೆಸಬೇಕಾಗಿದ್ದ ಚುನಾಯಿತ ಪ್ರತಿನಿಧಿಗಳ ಬಗ್ಗೆ ಯಾರೊಬ್ಬರೂ ಚಕಾರ ಎತ್ತುವುದಿಲ್ಲ. ಗ್ರಾಮಗಳು ಗೆರೆ ಎಳೆದಂತೆ ಎರಡು ಭಾಗವಾಗಿವೆ. ಒಂದು ಗುಂಪು ಆ ರೆಡ್ಡಿ ಪರ ಮತ್ತೊಂದು ಗುಂಪು ಈ ರೆಡ್ಡಿ ಪರ. ಎರಡು ಕುಟುಂಬಗಳ ನಡುವೆ ತಾಲ್ಲೂಕಿನ ರಾಜಕಾರಣ ಜೀಕುತ್ತಿದೆ.

 

`ಊಳಿಗಮಾನ್ಯ ವ್ಯವಸ್ಥೆಯ ಬೇರುಗಳು ರಾಜಕೀಯ ನಾಯಕತ್ವದ ರೂಪದಲ್ಲಿ ಇನ್ನೂ ಜೀವಂತವಾಗಿದ್ದು, ಅವಕಾಶ ದೊರೆತಾಗೆಲ್ಲ ಜನರ ನಡೆನುಡಿ ಮೂಲಕ ಅದು ಪ್ರಕಟಗೊಳ್ಳುತ್ತಲೇ ಇದೆ~ ಎನ್ನುತ್ತಾರೆ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಶೇಖರ್.ತೆಲುಗು ಸಿನಿಮಾಗಳ ಪ್ರಭಾವವಂತೂ ಈ ಭಾಗದಲ್ಲಿ ತುಸು ಹೆಚ್ಚೇ. ಜೂನಿಯರ್ ಎನ್‌ಟಿಆರ್, ಚಿರಂಜೀವಿ, ಬಾಲಕೃಷ್ಣ ಅಭಿನಯದ ಚಿತ್ರಗಳ ಆವೇಶಭರಿತ ಸಂಭಾಷಣೆ ಮಕ್ಕಳ ನಾಲಿಗೆ ಮೇಲೂ ನಲಿದಾಡುತ್ತದೆ. ವ್ಯಾಪಾರೀ ಸಿನಿಮಾದಲ್ಲಿ ಕಾಣಸಿಗುವ `ನ್ಯಾಯದಾನ~ದ ನೆರಳು ಈ ಕೃತ್ಯದ ಹಿಂದೆ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿರಲಿಕ್ಕೂ ಸಾಧ್ಯ ಎನ್ನುತ್ತಾರೆ.ಇಂತಹ ಕೃತ್ಯಗಳು ಸಾಮಾಜಿಕ ಮನ್ನಣೆಯನ್ನೂ ಗಳಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. `ಕಳ್ಳರನ್ನು ಸಾಯಿಸಬಾರದಿತ್ತು. ಕೈ ಕಾಲು ತಿರುವಿ ಬಿಡಬೇಕಿತ್ತು~ ಎಂದು ಮಹಿಳೆಯರಲ್ಲಿ ಕೆಲವರು ಅನುಕಂಪ ತೋರಿದರೂ ಬಹುಪಾಲು ಮಂದಿ ಸಮರ್ಥನೆಯ ಧಾಟಿಯಲ್ಲಿ ಮಾತನಾಡುತ್ತಾರೆ. ಅದಕ್ಕೆ ಕೆಲವರು ಉಗ್ರ ಕಸಬ್‌ನ ವೃತ್ತಾಂತವನ್ನೂ ಬಳಸಿಕೊಂಡರು.ಊರಿಗೆ `ಉಪಕಾರ~ ಮಾಡಿ ಹೀರೊ ಅನ್ನಿಸಿಕೊಳ್ಳುವ ಹಂಬಲ ಮತ್ತು ರಾಜಕೀಯ ಸ್ಥಾನಮಾನದ ಆಕಾಂಕ್ಷೆ ಇಂತಹ ಕೃತ್ಯಗಳಲ್ಲಿ ತೊಡಗಲು ಯುವಕರಿಗೆ ಉತ್ತೇಜಕವಾಗಿ ಪರಿಣಮಿಸಿದೆ. ವೋಟ್ ಲೆಕ್ಕಾಚಾರಕ್ಕೆ ಬಿದ್ದು ಸ್ಥಳೀಯ ಮುಖಂಡರು ಓಲೈಕೆ ರಾಜಕಾರಣದಲ್ಲಿ ತೊಡಗಿದ್ದಾರೆ. ಹಿರಿಯರ ಮಾತು ಕಿಮ್ಮತ್ತು ಕಳೆದುಕೊಂಡಿದೆ ಎಂದು ಕೆಲವರು ಕಾರಣಗಳನ್ನು ಗುರುತಿಸುತ್ತಾರೆ.`ಹಬ್ಬ ಹರಿದಿನಗಳನ್ನೂ ಒಟ್ಟಿಗೆ ಆಚರಿಸುವ ಸ್ಥಿತಿ ಹಳ್ಳಿಗಳಲ್ಲಿ ಉಳಿದಿಲ್ಲ. ಅದು ಕೂಡ ಪಕ್ಷಾಧಾರಿತ ಆಗಿದೆ. ಆದರೆ ದೊಂಬಿ-ಗಲಾಟೆಗಳು ಮಾತ್ರ ಜಾತಿ, ಪಕ್ಷಭೇದಗಳಿಲ್ಲದೆ ಎಲ್ಲರನ್ನೂ ಒಂದುಗೂಡಿಸುವ ರಾಷ್ಟ್ರೀಯ ಹಬ್ಬಗಳಾಗಿವೆ~ ಎಂದು ತಾಲ್ಲೂಕಿನ ವಿದ್ಯಮಾನಗಳಿಂದ ರೋಸಿ ಹೋಗಿರುವ ಹಿರಿಯರೊಬ್ಬರು ನೊಂದು ನುಡಿದರು.

                      

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry