ಶನಿವಾರ, ನವೆಂಬರ್ 16, 2019
22 °C

ಸ್ಫೋಟದ ಹಿನ್ನೆಲೆ: ಐಪಿಎಲ್‌ಗೆ ಬಿಗಿ ಭದ್ರತೆ

Published:
Updated:

ಬೆಂಗಳೂರು: ನಗರದ ಮಲ್ಲೇಶ್ವರದಲ್ಲಿ ಬಾಂಬ್ ಸ್ಫೋಟ ಸಂಭವಿಸಿರುವ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಏ.20) ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಕ್ಕೆ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ರಾತ್ರಿ ಎಂಟು ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಸಂಜೆ ಐದು ಗಂಟೆಗೆ ಕ್ರೀಡಾಂಗಣದ ಪ್ರವೇಶದ್ವಾರಗಳನ್ನು ತೆರೆಯಲಾಗುತ್ತದೆ. 

ಪಂದ್ಯ ವೀಕ್ಷಣೆಗೆ ಬರುವ ಪ್ರತಿ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದ ನಂತರವೇ ಕ್ರೀಡಾಂಗಣದೊಳಗೆ ಬಿಡಲಾಗುತ್ತದೆ. ಆದ್ದರಿಂದ ವೀಕ್ಷಕರು ಸಂಜೆ ಐದು ಗಂಟೆಗೆ ಕ್ರೀಡಾಂಗಣದ ಬಳಿ ಬರಬೇಕು. ಸಂಜೆ ಏಳು ಗಂಟೆಯ ನಂತರ ಬರುವವರಿಗೆ ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.ವೀಕ್ಷಕರು ಭದ್ರತೆ ದೃಷ್ಟಿಯಿಂದ ಬ್ಯಾಗ್, ಕ್ಯಾಮೆರಾ, ತಿಂಡಿ ಪದಾರ್ಥಗಳು, ನೀರಿನ ಬಾಟಲಿ, ತಂಪು ಪಾನೀಯ ಬಾಟಲಿ, ಬಲೂನ್ ಹಾಗೂ ಬಾವುಟಗಳನ್ನು ಕ್ರೀಡಾಂಗಣದ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಿರ್ಬಂಧ: ಪಂದ್ಯದ ಕಾರಣ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳಲ್ಲಿ ಮಧ್ಯಾಹ್ನ ಎರಡು ಗಂಟೆಯಿಂದ ರಾತ್ರಿ 11.30ರವರೆಗೆ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ.ಕ್ವೀನ್ಸ್ ರಸ್ತೆಯಲ್ಲಿ ಸಿ.ಟಿ.ಓ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ, ಎಂ.ಜಿ.ರಸ್ತೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ, ಲಿಂಕ್ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಕಬ್ಬನ್ ರಸ್ತೆಯಲ್ಲಿ ಬಿ.ಆರ್.ವಿ ವೃತ್ತದಿಂದ ಡಿಕೆನ್ಸನ್ ರಸ್ತೆ ಜಂಕ್ಷನ್‌ವರೆಗೆ ಮತ್ತು ಕ್ರೀಡಾಂಗಣದ ಕಾಂಪೌಂಡ್‌ಗೆ ಹೊಂದಿಕೊಂಡಂತಿರುವ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ. ಕಬ್ಬನ್ ರಸ್ತೆಯಲ್ಲಿ ಕಾಮರಾಜ ರಸ್ತೆ ಜಂಕ್ಷನ್‌ನಿಂದ ಡಿಕೆನ್ಸನ್ ರಸ್ತೆ ಜಂಕ್ಷನ್‌ವರೆಗೆ ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ ಇತರೆ ವಾಹನಗಳ ನಿಲುಗಡೆಗೆ ಅವಕಾಶವಿಲ್ಲ.

ಮದ್ರಾಸ್ ಬ್ಯಾಂಕ್ ರಸ್ತೆಯಲ್ಲಿ ಎಸ್.ಬಿ.ಐ ವೃತ್ತದಿಂದ ಆಶೀರ್ವಾದಂ ವೃತ್ತದವರೆಗೆ, ಮ್ಯೂಸಿಯಂ ರಸ್ತೆಯಲ್ಲಿ ಎಂ.ಜಿ.ರಸ್ತೆಯಿಂದ ಮದ್ರಾಸ್ ಬ್ಯಾಂಕ್ ರಸ್ತೆವರೆಗೆ ಮತ್ತು ರೆಸಿಡೆನ್ಸಿ ರಸ್ತೆವರೆಗೆ, ಕಸ್ತೂರಬಾ ರಸ್ತೆಯಲ್ಲಿ ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ, ಗ್ರ್ಯಾಂಡ್ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದಿಂದ ರಾಜಾರಾಮ್ ಮೋಹನ್ ರಾಯ್ ವೃತ್ತದವರೆಗೆ ನಿಲ್ಲಿಸುವಂತಿಲ್ಲ.ಕಬ್ಬನ್ ಉದ್ಯಾನದ ಒಳಗೆ, ಪ್ರೆಸ್‌ಕ್ಲಬ್ ಹಾಗೂ ಬಾಲಭವನ ಮುಂಭಾಗದ ರಸ್ತೆ, ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ, ರೇಸ್‌ಕೋರ್ಸ್ ರಸ್ತೆ, ಲ್ಯಾವೆಲ್ಲೆ ರಸ್ತೆ ಮತ್ತು ವಿಠಲ್ ಮಲ್ಯ ರಸ್ತೆಯಲ್ಲಿ ಬಿಷಪ್ ಕಾಟನ್ ಬಾಲಕಿಯರ ಶಾಲೆವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಿಲುಗಡೆಗೆ ಅವಕಾಶ: ಪಂದ್ಯ ವೀಕ್ಷಣೆಗೆ ಬರುವ ಸಾರ್ವಜನಿಕರು ಮತ್ತು ಕೆಎಸ್‌ಸಿಎ ಸದಸ್ಯರು ಕಡ್ಡಾಯವಾಗಿ ಕಂಠೀರವ ಕ್ರೀಡಾಂಗಣದೊಳಗೆ ಹಾಗೂ ಸೇಂಟ್ ಜೋಸೆಫ್ ಇಂಡಿಯನ್ ಪ್ರೌಢ ಶಾಲೆ ಮೈದಾನದಲ್ಲಿ ವಾಹನ ನಿಲ್ಲಿಸಬೇಕು. ಅಲ್ಲದೇ ಶಿವಾಜಿನಗರ ಟಿಟಿಎಂಸಿ ಬಸ್ ನಿಲ್ದಾಣದ ಒಂದನೇ ಮಹಡಿಯಲ್ಲಿ ವಾಹನಗಳನ್ನು ನಿಲ್ಲಿಸಬಹುದು.

ಕ್ರೀಡಾಂಗಣದ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ವಾಹನ ನಿಲುಗಡೆಗೆ ಕೆ.ಜಿ.ಐ.ಡಿ ಕಟ್ಟಡದ ಮುಂಭಾಗದಲ್ಲಿ ಅವಕಾಶ ನೀಡಲಾಗಿದೆ. ಸಿ.ಟಿ.ಓ ವೃತ್ತ ಹಾಗೂ ಬಿ.ಆರ್.ವಿ ಮೈದಾನದ ಬಳಿ ಮೆಟ್ರೊ ರೈಲು ಕಾಮಗಾರಿ ನಡೆಯುತ್ತಿರುವುದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ವಾಹನ ದಟ್ಟಣೆ ಉಂಟಾಗಬಹುದು.

ಆದ್ದರಿಂದ ಕ್ರಿಕೆಟ್ ನೋಡಲು ಬರುವವರು ಸಾಧ್ಯವಾದಷ್ಟು ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸಬೇಕು. ಪಂದ್ಯ ಮುಗಿದ ಬಳಿಕ ನಗರದ ಪ್ರಮುಖ ಭಾಗಗಳಿಗೆ ಬಿಎಂಟಿಸಿ ಬಸ್ ಸೇವೆ ಇರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ವೀನ್ಸ್ ರಸ್ತೆಯ ಗೇಟ್ ನಂಬರ್ ಒಂದರಿಂದ ಗೇಟ್ ನಂಬರ್ ಎಂಟರವರೆಗೆ ಹಾಗೂ ಲಿಂಕ್ ರಸ್ತೆಯ ಗೇಟ್ ನಂ.17ರಿಂದ ಗೇಟ್ ನಂಬರ್ 20ರವರೆಗಿನ ಪ್ರವೇಶದ್ವಾರಗಳ ಮೂಲಕ ವೀಕ್ಷಕರು ಕ್ರೀಡಾಂಗಣ ಪ್ರವೇಶಿಸಬಹುದು.

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ

ಬೆಂಗಳೂರು:  ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ 20 (ಶನಿವಾರ) ರಂದು ಐಪಿಎಲ್ ಕ್ರಿಕೆಟ್ ಪಂದ್ಯಾಟ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.  ಕ್ರಿಕೆಟ್ ಪ್ರೇಮಿಗಳು ಕ್ರೀಡಾಂಗಣಕ್ಕೆ ರಾತ್ರಿ 7.30ರ ಹೊತ್ತಿಗೆ ತಲುಪಲು ಅನುಕೂಲವಾಗುವಂತೆ ಸಂಜೆ 4 ಗಂಟೆಯ ನಂತರ ವಿವಿಧ ಭಾಗಗಳಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಂದ್ಯ ಮುಗಿದ ನಂತರ ರಾತ್ರಿ ಮನೆಗೆ ತೆರಳಲು ಎಂ.ಜಿ.ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ತೆರಳಲು ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.ಎಲ್ಲಿಂದ ಎಲ್ಲಿಗೆ: ಮಾಣಿಕ್ ಷಾ ಪೆರೇಡ್ ಗ್ರೌಂಡ್- ಕಾಡುಗೋಡಿ ಬಸ್ ನಿಲ್ದಾಣ, ಮೆಯೋಹಾಲ್-ಸರ್ಜಾಪುರ, ಬ್ರಿಗೇಡ್ ರಸ್ತೆ-ಎಲೆಕ್ಟ್ರಾನಿಕ್ ಸಿಟಿ, ಬ್ರಿಗೇಡ್ ರಸ್ತೆ-ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಚಿನ್ನಸ್ವಾಮಿ ಕ್ರೀಡಾಂಗಣ- ಕಗ್ಗಲೀಪುರ, ಚಿನ್ನಸ್ವಾಮಿ ಕ್ರೀಡಾಂಗಣ- ಕೆಂಗೇರಿ ಕೆಎಚ್‌ಬಿ ಕ್ವಾರ್ಟರ್ಸ್‌, ಬಿಆರ್‌ವಿ ಪೆರೇಡ್ ಗ್ರೌಂಡ್- ಜನಪ್ರಿಯ ಟೌನ್‌ಶಿಪ್, ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣ-ನೆಲಮಂಗಲ, ಎಂ.ಜಿ ರಸ್ತೆ ಮೆಟ್ರೊ ನಿಲ್ದಾಣ- ಯಲಹಂಕ ಉಪನಗರ, ಬಿಆರ್‌ವಿ ಪೆರೇಡ್ ಗ್ರೌಂಡ್-ಆರ್.ಕೆ.ಹೆಗಡೆ ನಗರ, ಎಂ.ಜಿ ರಸ್ತೆ ಮೆಟ್ರೊ ನಿಲ್ದಾಣ- ಬಾಗಲೂರು, ಮೆಯೋಹಾಲ್- ಹೊಸಕೋಟೆ.

ಪ್ರತಿಕ್ರಿಯಿಸಿ (+)