ಶುಕ್ರವಾರ, ನವೆಂಬರ್ 15, 2019
24 °C

ಸ್ಫೋಟ: ಆರೋಪಿಯ ಗುರುತು ಪತ್ತೆ?

Published:
Updated:

ಬೆಂಗಳೂರು: ಮಲ್ಲೇಶ್ವರ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ನಗರ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಚಿತ್ರ ಸ್ಪಷ್ಟತೆ ತಂತ್ರಜ್ಞಾನ ಬಳಸಿಕೊಂಡು ಆರೋಪಿಯ ಗುರುತು ಪತ್ತೆ ಮಾಡಲು ಪ್ರಯತ್ನ ನಡೆಸಿದ್ದಾರೆ.ಸ್ಫೋಟ ಸಂಭವಿಸುವುದಕ್ಕೂ ಮುನ್ನ ಬುಧವಾರ ಬೆಳಿಗ್ಗೆ 10.22ಕ್ಕೆ ವ್ಯಕ್ತಿಯೊಬ್ಬ ಘಟನಾ ಸ್ಥಳದಲ್ಲಿ ಬೈಕ್ ನಿಲ್ಲಿಸಿ ಹೋಗಿರುವ ದೃಶ್ಯ ಸಮೀಪದ ಸಾಯಿ ಅಪಾರ್ಟ್‌ಮೆಂಟ್‌ನ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆದರೆ, ಆ ದೃಶ್ಯದಲ್ಲಿ ವ್ಯಕ್ತಿಯ ಮುಖ ಅಸ್ಪಷ್ಟವಾಗಿ ಗೋಚರಿಸುತ್ತಿದೆ. ಆದ ಕಾರಣ ಚಿತ್ರ ಸ್ಪಷ್ಟತೆ ತಂತ್ರಜ್ಞಾನದ ನೆರವಿನಿಂದ ವ್ಯಕ್ತಿಯ ಗುರುತು ಪತ್ತೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.ಘಟನೆಗೂ ಮುನ್ನ 30 ದಿನಗಳ ಅಂತರದಲ್ಲಿ ಹಾಗೂ ಸ್ಫೋಟ ಸಂಭವಿಸಿದ ದಿನ ಸಾಯಿ ಅಪಾರ್ಟ್‌ಮೆಂಟ್‌ನ ಸಿ.ಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಗಳನ್ನು ಸಂಗ್ರಹಿಸಲಾಗಿದೆ. ಅಲ್ಲದೇ, ಸ್ಫೋಟದ ಸ್ಥಳದಲ್ಲಿ ಬೈಕ್ ನಿಲ್ಲಿಸಿ ಹೋಗಿದ್ದ ವ್ಯಕ್ತಿಯನ್ನು ನೋಡಿರುವ ಪ್ರತ್ಯಕ್ಷದರ್ಶಿಯಿಂದ ಮಾಹಿತಿ ಕಲೆ ಹಾಕಲಾಗಿದೆ.ಆ ಮಾಹಿತಿ ಹಾಗೂ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಗಳನ್ನು ಆಧರಿಸಿ ಆತನ ರೇಖಾಚಿತ್ರ ರಚಿಸುವ ಕಾರ್ಯ ಮುಂದುವರಿದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.`ಅಪಾರ್ಟ್‌ಮೆಂಟ್‌ನ ಪಕ್ಕದಲ್ಲೇ ಇರುವ ಕಚೇರಿಯ ಕಡೆಗೆ ಮುಖ ಮಾಡಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿದ್ದೆ. ಆದ್ದರಿಂದ ಕಟ್ಟಡದ ಮುಂದೆ ಅಂದರೆ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಘಟನೆಗೂ ಮುನ್ನ ವ್ಯಕ್ತಿಯೊಬ್ಬ ಬೈಕ್ ನಿಲ್ಲಿಸಿ ಹೋಗಿರುವ ದೃಶ್ಯ ಅಸ್ಪಷ್ಟವಾಗಿ ದಾಖಲಾಗಿದೆ.ಆ ನಂತರ 10.28ಕ್ಕೆ ಸ್ಫೋಟ ಸಂಭವಿಸಿದ ತೀವ್ರತೆಗೆ ಕ್ಯಾಮೆರಾ ಸ್ಥಗಿತಗೊಂಡಿದೆ' ಎಂದು ಸಾಯಿ ಅಪಾರ್ಟ್‌ಮೆಂಟ್‌ನ ಮಾಲೀಕ ನಾರಾಯಣರೆಡ್ಡಿ `ಪ್ರಜಾವಾಣಿ'ಗೆ ತಿಳಿಸಿದರು. ಘಟನಾ ಸ್ಥಳದ ಸುತ್ತಮುತ್ತಲಿನ ಟ್ರಾಫಿಕ್ ಜಂಕ್ಷನ್‌ಗಳು ಮತ್ತು ವೃತ್ತಗಳಲ್ಲಿನ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಆಧರಿಸಿ, ಬಾಂಬ್ ಸ್ಫೋಟ ನಡೆಸಿರುವ ವ್ಯಕ್ತಿಯ ಚಲನವಲನ ಹಾಗೂ ಗುರುತನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)