ಗುರುವಾರ , ನವೆಂಬರ್ 21, 2019
25 °C

ಸ್ಫೋಟ: ಭಾರತ, ಪಾಕ್‌ನಲ್ಲಿ ಬಳಸುವ ಕಚ್ಚಾ ಬಾಂಬ್

Published:
Updated:
ಸ್ಫೋಟ: ಭಾರತ, ಪಾಕ್‌ನಲ್ಲಿ ಬಳಸುವ ಕಚ್ಚಾ ಬಾಂಬ್

ಬಾಸ್ಟನ್ (ಪಿಟಿಐ): ಬಾಸ್ಟನ್‌ನಲ್ಲಿ ಬಳಸಲಾದ ಸ್ಫೋಟಕ ಸಾಮಗ್ರಿಗಳು ಸಾಮಾನ್ಯವಾಗಿ ಭಾರತ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ಕಂಡುಬರುವ ಮಾದರಿಯದ್ದಾಗಿದೆ ಎಂದು ಭದ್ರತಾ ತಜ್ಞರು ವಿಶ್ಲೇಷಿಸಿದ್ದಾರೆ.ಆರು ಲೀಟರ್ ಸಾಮರ್ಥ್ಯದ ಪ್ರೆಷರ್ ಕುಕ್ಕರ್‌ನಲ್ಲಿ ಮೊಳೆಗಳು, ಬಾಲ್ ಬೇರಿಂಗ್ ಮತ್ತಿತರ ಕಬ್ಬಿಣದ ಸಾಮಗ್ರಿಗಳನ್ನು ಇಡಲಾಗಿದೆ. ಆಮೇಲೆ ಅದನ್ನು ಬ್ಲಾಕ್ ನೈಲಾನ್ ಬ್ಯಾಗ್ ಅಥವಾ ಬ್ಯಾಕ್‌ಪಾಕ್‌ನಲ್ಲಿ ಇಡಲಾಗಿದೆ. ಅಲ್ಲದೇ ಸ್ಫೋಟ ನಡೆಸಲು ಟೈಮರ್‌ಗಳನ್ನು ಸಹ ಬಳಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.2001ರಲ್ಲಿ ನಡೆದ 9/11ರ ಘಟನೆಯ ನಂತರ ಇದೇ ಮೊದಲ ಬಾರಿ ಅಮೆರಿಕದಲ್ಲಿ ಇಂತಹ ಸ್ಫೋಟ ನಡೆದಿದ್ದು, ಘಟನೆಯ ಕುರಿತು ಹಲವು ಆಯಾಮಗಳ ತನಿಖೆ ನಡೆಯುತ್ತಿದೆ.ಆದರೆ, ಈ ಸ್ಫೋಟವನ್ನು ವಿದೇಶಿ ವ್ಯಕ್ತಿಗಳೇ ಮಾಡಿದ್ದಾರೆ ಎಂಬ ಕುರಿತು ಯಾವುದೇ ಸುಳಿವು ಈವರೆಗೆ ದೊರಕಿಲ್ಲ.ಒಬ್ಬನೇ ಉಗ್ರ ಯಾರದೇ ನೆರವಿಲ್ಲದೇ, ತಾನೇ ಕಚ್ಚಾ ಬಾಂಬ್ ತಯಾರಿಸಿ ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ ಎಂದೂ ವಿಶ್ಲೇಷಿಸಲಾಗಿದೆ.ಸ್ಥಳದಲ್ಲಿ ದೊರಕಿರುವ ಸ್ಫೋಟಕ ಸಾಮಗ್ರಿಗಳ ಆಧಾರದಲ್ಲಿ ಬಾಂಬ್ ತಜ್ಞರು ಅದೇ ಮಾದರಿಯ ಸ್ಫೋಟಕ ಸಲಕರಣೆಯನ್ನು ಮರುವಿನ್ಯಾಸ ಮಾಡುತ್ತಿದ್ದಾರೆ.ಪ್ರೆಷರ್ ಕುಕ್ಕರ್ ಸ್ಫೋಟಕವನ್ನು ಸಾಮಾನ್ಯವಾಗಿ ಭಾರತ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ಮಾತ್ರ ಬಳಸಲಾಗುತ್ತದೆ. ಅದು ಕಚ್ಚಾ ಸ್ಫೋಟಕ. ಅಡುಗೆಗೆ ಬಳಸುವುದರಿಂದ ಆ ದೇಶಗಳಲ್ಲಿ ಕುಕ್ಕರ್ ಎಲ್ಲೆಡೆ ದೊರಕುತ್ತದೆ.

ಅಮೆರಿಕದಲ್ಲಿ ಅದು ಅಷ್ಟಾಗಿ ಲಭ್ಯವಿಲ್ಲ. ಇಂಟರ್‌ನೆಟ್ ಮೂಲಕ ಈ ತರಹ ಬಾಂಬ್ ತಯಾರಿಸುವುದನ್ನು ಯಾರಾದರೂ ಕಲಿತುಕೊಳ್ಳಬಹುದು. ಅಲ್ಲದೇ ಕುಕ್ಕರ್ ಅನ್ನು ಖರೀದಿಸುವುದು ಯಾವುದೇ ಅನುಮಾನಕ್ಕೆ ಎಡೆ ಮಾಡಿಕೊಡುವುದಿಲ್ಲ ಎಂದು ರಿಪಬ್ಲಿಕನ್ ಪಕ್ಷದ ಸೆನೆಟ್ ಸದಸ್ಯ ಜೇಮ್ಸ ರಿಸ್ಚ್ ಹೇಳಿದ್ದಾರೆ.ವಿದೇಶಿ ಉಗ್ರರ ಸಂಘಟನೆಗಳು ಸ್ಫೋಟ ನಡೆಸಿದ್ದಲ್ಲಿ ಅವು ಹೊಣೆ ಹೊತ್ತುಕೊಳ್ಳುತ್ತಿದ್ದವು. ಏಕೆಂದರೆ ಈ ಸ್ಫೋಟದ ಹಿಂದಿರುವ ಸಂದೇಶವನ್ನು ಮುಟ್ಟಿಸುವುದು ಅವರಿಗೆ ಮುಖ್ಯವಾಗುತ್ತಿತ್ತು. ಇಲ್ಲವೇ ಉಗ್ರರನ್ನು ಸಂಘಟನೆಗೆ ನೇಮಿಸಿಕೊಳ್ಳಲು ಅವು ಇಂತಹ ಕೃತ್ಯಕ್ಕೆ ಪ್ರಚೋದನೆ ನೀಡುತ್ತವೆ. ಇಲ್ಲಿ ಹಾಗಾಗಿಲ್ಲ. ಒಬ್ಬನೇ ವ್ಯಕ್ತಿ ಅಥವಾ ಅಮೆರಿಕದ ವಿಕ್ಷಿಪ್ತ ಪ್ರಜೆಯೊಬ್ಬ ಈ ಕೃತ್ಯ ಎಸಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ನಡೆದ ಸ್ಫೋಟದಂತೆಯೇ ಬಾಸ್ಟನ್‌ನಲ್ಲಿ ಸ್ಫೋಟ ನಡೆದಿದೆ. ಎರಿಕ್ ರುಡಾಲ್ಫ್  ಎಂಬಾತ ಬೆನ್ನಿಗೆ ಹಾಕುವ ಚೀಲದಲ್ಲಿ ಈ ಬಾಂಬ್ ಇಟ್ಟಿದ್ದ. ಏಳು ವರ್ಷಗಳ ನಂತರ ಆತನನ್ನು ಬಂಧಿಸಲಾಯಿತು ಎಂದೂ ರಿಸ್ಚ್ ನೆನಪಿಸಿದ್ದಾರೆ.ಬಾಸ್ಟನ್ ಸ್ಫೋಟದ ಘಟನೆಯ ಕುರಿತು 1000 ಅಧಿಕಾರಿಗಳನ್ನು ತನಿಖೆಗಾಗಿ ನಿಯೋಜಿಸಲಾಗಿದೆ. ಎಫ್‌ಬಿಐಗೆ (ಫೆಡರಲ್ ಇನ್‌ವೆಸ್ಟಿಗೇಷನ್ ಏಜನ್ಸಿ) 2000ಕ್ಕೂ ಹೆಚ್ಚು ಮಾಹಿತಿಯ ತುಣುಕುಗಳು ಲಭ್ಯವಾಗಿದ್ದು, ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ.ಆದರೆ, ಸ್ಫೋಟ ನಡೆಸಿದ ವ್ಯಕ್ತಿ ಅಥವಾ ಸಂಘಟನೆಯ ಕುರಿತು ಯಾವುದೇ ನಿರ್ದಿಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಎಫ್‌ಬಿಐ ಬಾಸ್ಟನ್ ವಿಭಾಗದ ಮುಖ್ಯಸ್ಥ ರಿಕ್ ಡೆಸ್‌ಲಾರಿಯರ್ ಹೇಳಿದ್ದಾರೆ.

ಅಮೆರಿಕದ ಸೆನೆಟ್ ಸದಸ್ಯನಿಗೆ ವಿಷಲೇಪಿತ ಪತ್ರ

ವಾಷಿಂಗ್ಟನ್ (ಪಿಟಿಐ): ಬಾಸ್ಟನ್‌ನಲ್ಲಿ ಅವಳಿ ಸ್ಫೋಟ ಸಂಭವಿಸಿದ ಮಾರನೇ ದಿನವೇ ಅಮೆರಿಕದ ರಿಪಬ್ಲಿಕನ್ ಪಕ್ಷದ ಸೆನೆಟ್ ಸದಸ್ಯರೊಬ್ಬರಿಗೆ ವಿಷಲೇಪಿತ ಪತ್ರವೊಂದು ಬಂದಿದೆ.

ಮಿಸಿಸಿಪ್ಪಿಯ ಸೆನೆಟ್ ಸದಸ್ಯ ರೋಜರ್ ವಿಕರ್‌ಗೆ ಈ ಪತ್ರ ಬಂದಿದ್ದು, ವಿಷಯುಕ್ತವಾದ ರಿಸಿನ್ ಲೇಪಿಸಲಾಗಿದೆ ಎಂದು ಸೆನೆಟ್‌ನ ಬಹುಸಂಖ್ಯಾತ ಪಕ್ಷದ ನಾಯಕ ಹ್ಯಾರಿ ರಿಡ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರೋಜರ್ ವಿಕರ್‌ಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಕ್ಯಾಸ್ಟರ್ ಜಾತಿಯ ಅವರೆಕಾಯಿ ಬೀಜದಲ್ಲಿ ಈ `ರಿಸಿನ್' ಕಂಡುಬರುತ್ತದೆ ಎಂದು ರೋಗ ನಿಯಂತ್ರಣ ಕೇಂದ್ರ ತಿಳಿಸಿದೆ. 12 ವರ್ಷಗಳ ಹಿಂದೆ 2001ರಲ್ಲಿ ಅಮೆರಿಕದ ಇಬ್ಬರು  ಸೆನೆಟ್ ಸದಸ್ಯರಿಗೆ `ಆಂಥ್ರಾಕ್ಸ್ ವೈರಾಣು' ಇದ್ದ ಪತ್ರ ಬಂದಾಗಿನಿಂದ, ಅಮೆರಿಕದ ಎಲ್ಲ ಸೆನೆಟ್ ಸದಸ್ಯರಿಗೆ ಬರುವ ಪತ್ರಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ.ಈ ತಪಾಸಣಾ ಕೇಂದ್ರದಲ್ಲಿ ಪತ್ರಕ್ಕೆ ರಿಸಿನ್ ವಿಷ ಲೇಪಿಸಿರುವುದು ಪತ್ತೆಯಾಯಿತು.ಘಟನೆಯ ಕುರಿತು ಅಮೆರಿಕದ ಆಡಳಿತ ಕೇಂದ್ರವಿರುವ `ಕ್ಯಾಪಿಟಾಲ್'ನ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಪ್ರತಿಕ್ರಿಯಿಸಿ (+)