ಬುಧವಾರ, ಏಪ್ರಿಲ್ 21, 2021
24 °C

ಸ್ಮಶಾನಕ್ಕೆ ಕಾಂಪೌಂಡ್ ನಿರ್ಮಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬನ್ನೇರುಘಟ್ಟ ಮುಖ್ಯ ರಸ್ತೆಯ ಗೊಟ್ಟಿಗೆರೆ ಪ್ರದೇಶದಲ್ಲಿ ಒಂದು ತೆರೆದ ರುದ್ರಭೂಮಿ ಇದೆ. ಇಲ್ಲಿ ಶವಗಳನ್ನು ತರುವುದು, ಸಂಬಂಧಿಕರು ಅಳುವುದು, ಶವ ಸಂಸ್ಕಾರ ನಡೆಸುವುದು ಇತ್ಯಾದಿ ದೃಶ್ಯಗಳು ಕಣ್ಣಿಗೆ ರಾಚುತ್ತವೆ. ಈ ಸ್ಮಶಾನವು ಬನ್ನೇರುಘಟ್ಟ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದು ಇಲ್ಲಿಂದ ಮುಂದೆ ರಾಷ್ಟ್ರೀಯ ಉದ್ಯಾನವನ ಪ್ರಾರಂಭವಾಗುತ್ತದೆ. ಮತ್ತೊಂದು ಕಡೆ ಬನ್ನೇರುಘಟ್ಟ ರಸ್ತೆ ಹಾಗೂ ನೈಸ್ ರಸ್ತೆಯನ್ನು ಒಂದುಗೂಡಿಸುವ ದೊಡ್ಡಕಮ್ಮನ ಹಳ್ಳಿ ರಸ್ತೆ ಇದೆ.

ಅನೇಕ ವರ್ಷಗಳಿಂದ ತೆರೆದ ಮೈದಾನದಂತಿದ್ದ ಗೊಟ್ಟಿಗೆರೆ ಗ್ರಾಮದ ಈ ಸ್ಮಶಾನವನ್ನು ಸುತ್ತಮುತ್ತಲಿನ ನಿವಾಸಿಗಳು ಶವ ಸಂಸ್ಕಾರಕ್ಕಾಗಿ ಬಳಸುತ್ತಿದ್ದಾರೆ. ಇದಕ್ಕೆ ಕಾಂಪೌಂಡ್ ಇರುವುದಿಲ್ಲ. ಇದಕ್ಕೆ ಹೊಂದಿಕೊಂಡ ರಸ್ತೆಯ ಮತ್ತೊಂದು ಬದಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಹೀಗಾಗಿ ಶಾಲೆಯಲ್ಲಿ ಕಲಿಯುತ್ತಲೇ ಸಾವಿನ ದೃಶ್ಯವನ್ನು ನೋಡಬೇಕಾದ ಅನಿವಾರ್ಯ ಮಕ್ಕಳಿಗಿದೆ. ಎಳೆಯ ಮನಸ್ಸಿನಲ್ಲಿ ಸಾವಿನ ಭೀತಿ ಮೂಡಬಾರದು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಈ ಸ್ಮಶಾನವು ಮಾತ್ರ ಈ ಮಾತಿಗೆ ವಿರುದ್ಧವಾಗಿದೆ.

ನಗರ ಪ್ರದೇಶದಲ್ಲಿರುವ ಬಹುತೇಕ ಸ್ಮಶಾನಗಳಿಗೆ ಪಾಲಿಕೆಯವರು ಎಂಟು ಅಡಿ ಎತ್ತರದ ಕಾಂಪೌಂಡ್ ಕಟ್ಟಿಸಿ ಒಳಗೆ ನಡೆಯುವ ಕಲಾಪಗಳು ಸಾರ್ವಜನಿಕರಿಗೆ ಕಾಣದಂತೆ ಮಾಡಿರುತ್ತಾರೆ. ಈ ಸ್ಮಶಾನದ ವಿಪರ್ಯಾಸವೆಂದರೆ ಗೋಡೆಯನ್ನು ಕಟ್ಟುವ ಬದಲು ತಂತಿ ಬೇಲಿಯನ್ನು ನಿರ್ಮಿಸಲು ಹೊರಟಿರುತ್ತಾರೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.

ಶವಸಂಸ್ಕಾರದ ಎಲ್ಲಾ ಪ್ರಕ್ರಿಯೆಗಳನ್ನು ಇಲ್ಲಿನ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರಾದಿಯಾಗಿ ಪ್ರತಿಯೊಬ್ಬರೂ ವೀಕ್ಷಿಸುವುದು ಅನಿವಾರ್ಯವಾಗಿದೆ. ನಗರದಲ್ಲಿ ತಂತಿ ಬೇಲಿಯ ಒಂದೇ ಒಂದು ಸ್ಮಶಾನ ಇಲ್ಲ; ಏನಿದ್ದರೂ ಅವಕ್ಕೆಲ್ಲ ಕಾಂಪೌಂಡ್. ಹೀಗಿರುವಾಗ ಈ ಸ್ಮಶಾನಕ್ಕೆ ಮಾತ್ರ ಬೇಲಿ ಏಕೆ?

ಪಾಲಿಕೆಯವರು ತಕ್ಷಣವೇ ಎಚ್ಚೆತ್ತು ಈ ತಂತಿ ಬೇಲಿ ಯೋಜನೆಯನ್ನು ಕೈಬಿಟ್ಟು ಏಳು ಅಥವಾ ಎಂಟು ಅಡಿ ಎತ್ತರದ ಕಾಂಪೌಂಡ್ ನಿರ್ಮಿಸಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.