ಮಂಗಳವಾರ, ಮೇ 17, 2022
26 °C

ಸ್ಮಶಾನ ದಾರಿಯ ತಡೆಗೋಡೆ ತೆರವಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಹೋಬಳಿಯ ನೇಲಗೇತನಹಟ್ಟಿ ಗ್ರಾಮದಲ್ಲಿ ಭೂ ಹಿಡುವಳಿದಾರರು ಒತ್ತುವರಿ ಮಾಡಿರುವ ದಲಿತ ಸಮುದಾಯದವರ ಸ್ಮಶಾನ ಜಾಗವನ್ನು ತೆರವುಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.



ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.



ಗ್ರಾಮದಲ್ಲಿ ಸುಮಾರು 100 ದಲಿತ ಕುಟುಂಬಳಿವೆ. 500ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗ್ರಾಮದಿಂದ ಸ್ಮಶಾನಕ್ಕೆ ಹೋಗುವ ಹಾದಿಯಲ್ಲಿ ಅಕ್ರಮವಾಗಿ ಶಾಲಾ ತಡೆಗೊಡೆ ನಿರ್ಮಿಸಲಾಗಿದೆ. ಅಲ್ಲದೆ 3 ವಿದ್ಯುತ್ ಕಂಬಗಳಲ್ಲಿ ಗೈವೈರುಗಳನ್ನು (ದಪ್ಪ ವೈರುಗಳನ್ನು) ರಸ್ತೆಯ ಮಧ್ಯದಲ್ಲಿ ಉಳಿದಿರುವುದರಿಂದ ದಾರಿ ಇಲ್ಲದೆ ಶವಸಂಸ್ಕಾರಕ್ಕೆ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.



`ಸಂಸ್ಕಾರಕ್ಕಾಗಿ ಶವಗಳನ್ನು ಹೊತ್ತು ಸ್ಮಶಾನಕ್ಕೆ ಹೋಗಬೇಕಾದರೆ ಹಿಡುವಳಿದಾರರ ಜಮೀನುಗಳನ್ನೇ ದಾಟಿಕೊಂಡು ಹೋಗುವ ಪರಿಸ್ಥಿತಿ ಇದೆ. ಜಮೀನು ಮೂಲಕ ಹಾದು ಹೋಗುವಾಗ ಜಮೀನಿನ ರೈತರು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ. ಸಾವಿನ ದುಃಖದಲ್ಲಿರುವವರು ಇಂಥ ನಿಂದನೆ ಮಾತುಗಳಿಗೆ ಎದುರಾಡದೇ ನೋವು ನುಂಗಿಕೊಂಡು ಇರಬೇಕಾದ ಅನಿವಾರ್ಯತೆ ಉಂಟಾಗಿದೆ' ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.



ಸ್ಮಶಾನವಿರುವ ಜಾಗ ಸರ್ಕಾರಕ್ಕೆ ಸೇರಿದ್ದು. ಈ ಜಾಗದಲ್ಲಿ ಪೂರ್ವಿಕರ ಕಾಲದಿಂದಲೂ ಶವಸಂಸ್ಕಾರ ಮಾಡಿಕೊಂಡು ಬರುತ್ತಿದ್ದೇವೆ. ಆದರೆ, ಇಲ್ಲಿನ ಅಕ್ಕಪಕ್ಕದ ಜಮೀನುದಾರರು ಸ್ಮಶಾನದ ಜಾಗವನ್ನು ಆಕ್ರಮಿಸಿ ಕೊಂಡು ಪೂರ್ವಿಕರ ಸಮಾಧಿ ಗುಡ್ಡೆಗಳನ್ನು ಜೆಸಿಬಿ ಯಂತ್ರದ ಮೂಲಕ ನೆಲಸಮ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.



ಸುಮಾರು 10 ವರ್ಷಗಳ ಹಿಂದೆ ಸರ್ಕಾರ ಸೇಂದಿ ವನಗಳ ಜಮೀನುಗಳನ್ನು ಬಂಜರು ಭೂಮಿ ಎಂದು ನಮೂದಿಸಿ ಸಾರ್ವಜನಿಕರ ಉದ್ದೇಶಗಳಿಗೆ ಮೀಸಲಿಡಲು ತಿಳಿಸಿದೆ. ಆದರೆ, ಈವರೆಗೂ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಕಾನೂನು ರೀತಿ ಕ್ರಮ ಕೈಗೊಂಡು ಗ್ರಾಮದಿಂದ ಸ್ಮಶಾನಕ್ಕೆ ಹೋಗುವ ಮಾರ್ಗದಲ್ಲಿನ ಅಡೆತಡೆಗಳನ್ನು ತೆರವುಗೊಳಿಸಿ ಶವ ಸಂಸ್ಕಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.



ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಬಿ. ನಾಗರಾಜ್, ಉಪಾಧ್ಯಕ್ಷ ಎಚ್. ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಎನ್. ತಿಪ್ಪೇರುದ್ರಪ್ಪ, ಕಾರ್ಯದರ್ಶಿಗಳಾದ ತಿಪ್ಪೇಸ್ವಾಮಿ, ಚಂದ್ರಪ್ಪ, ಹನುಮಂತಪ್ಪ, ಚಂದ್ರಶೇಖರ್, ಹೊನ್ನೂರಮ್ಮ, ದುರುಗೇಶ್, ಬಸವರಾಜ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.