ಸ್ಮಶಾನ ಭೂಮಿಯ ಸರ್ವೆಗೆ ಚಾಲನೆ

ಬುಧವಾರ, ಜೂಲೈ 24, 2019
23 °C

ಸ್ಮಶಾನ ಭೂಮಿಯ ಸರ್ವೆಗೆ ಚಾಲನೆ

Published:
Updated:

ಕಾರಟಗಿ: ಇಲ್ಲಿಯ ಸರ್ವೆ ನಂ. 1 ಹಾಗೂ 4ರ ಸ್ಮಶಾನ ಭೂಮಿ ಈಗ ವಿವಾದದ ಕೇಂದ್ರಬಿಂದುವಾಗಿದೆ. ಸರ್ವೆ ಕಾರ್ಯ ಎರಡು ದಿನದಿಂದ ನೆನೆಗುದಿಗೆ ಬಿದ್ದು, ಶನಿವಾರ ಸರ್ವೆ ನಂ. 1ರ ಭೂಮಿಯ ಸರ್ವೆ ಆರಂಭಿಸಲಾಗಿದೆ. ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಭಾನುವಾರ ಸರ್ವೆ ಮುಂದುವರಿಯಿತು.ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಿದ್ದ ಪೊಲೀಸ್ ಇಲಾಖೆ ಭಾರಿ ಬಂದೋಬಸ್ತ್ ಮಾಡಿತ್ತು.

ಸರ್ವೆ ನಂ. 4ರ 5 ಎಕರೆ 7ಗುಂಟೆ ಭೂಮಿಯನ್ನು ವೀರಶೈವ ಸಮಾಜಕ್ಕೆ ಜಿಲ್ಲಾಡಳಿತ ಮಂಜೂರು ಮಾಡಿದೆ. ನಮ್ಮ ಪಾಲಿನ ಭೂಮಿಯನ್ನು ಸರ್ವೆ ಮಾಡಿಸಿ, ಸ್ವಾದೀನಕ್ಕೆ ನೀಡಬೇಕು ಎಂದು ವೀರಶೈವ ಸಮಾಜ ಒತ್ತಾಯಿಸಿದೆ.ಈಗಾಗಲೇ ಸರ್ವೆಗೆ ಆಗಮಿಸುತ್ತಿದ್ದಾರೆಂಬ ಹಿನ್ನೆಲೆಯಲ್ಲಿ ವೀರಶೈವರು ಒಂದೆಡೆ ಸೇರುತ್ತಿದ್ದಂತೆಯೆ ಇತರ ಹಿಂದುಳಿದ ಸಮಾಜಗಳು ಪ್ರತಿರೋಧ ಒಡ್ಡಿದ್ದರು. ಪೊಲೀಸರ ಮಧ್ಯಸ್ಥಿಕೆಯಲ್ಲಿ ಯಥಾಸ್ಥಿತಿ ಕಾಪಾಡಬೇಕೆಂಬ ಸಂಧಾನಕ್ಕೆ ಬರಲಾಗಿತ್ತು. ಹಿಂದುಳಿದ ಸಮಾಜದವರು ವೀರಶೈವ ಸಮಾಜಕ್ಕೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿರುವುದನ್ನು ರದ್ದು ಮಾಡಬೇಕು.ಸರ್ವೆ ನಂ 4ರ ಭೂಮಿಯಲ್ಲಿ ಇತರೆಲ್ಲಾ ಸಮಾಜಗಳು ಹಿಂದಿನಿಂದ ಶವಸಂಸ್ಕಾರ ಮಾಡುತ್ತಿದ್ದು, ಸದರಿ ಭೂಮಿಯಲ್ಲಿ ಎಲ್ಲಾ ಸಮಾಜದವರಿಗೆ ಜನಸಂಖ್ಯೆಯ ಆಧಾರದ ಮೇಲೆ ಭೂಮಿ ವಿತರಿಸಬೇಕು ಎಂದು ಪಟ್ಟು ಹಿಡಿದಿತ್ತು. ಇದೇ ಆಕ್ಷೇಪಣೆಯನ್ನು ಹಿಂದಿನಿಂದಲೂ ಸಲ್ಲಿಸುತ್ತಲೆ ಬಂದಿದ್ದರಿಂದ ವಿಷಯವು ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು.ಶುಕ್ರವಾರ ನಡೆದ ಸರ್ವೆ ಕಾರ್ಯದ ಸಮಯದಲ್ಲಿ ಜಿಲ್ಲಾಧಿಕಾರಿ ಹಾಗೂ ಗಂಗಾವತಿ ತಹಸೀಲ್ದಾರರು ಆಗಮಿಸಿದ ಸಂದರ್ಭದಲ್ಲಿ ಉಭಯ ಗುಂಪುಗಳ ಮಧ್ಯೆ ಅವಘಡಗಳು ನಡೆದು, ವೀರಶೈವ ಸಮಾಜದಿಂದ ರಸ್ತೆತಡೆ, ಠಾಣೆಯಲ್ಲಿ ಧರಣಿ ನಡೆದಿತ್ತು.ಇಂದು ಗ್ರಾಮೀಣ ಸಿಪಿಐ ಬಿ. ಎಸ್. ಶಾಂತಕುಮಾರ ನೇತೃತ್ವದಲ್ಲಿ ಸರ್ವೆ ಕಾರ್ಯಕ್ಕೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುಂಜಾಗರೂಕ ಕ್ರಮವಾಗಿ ಗಂಗಾವತಿ ಗ್ರಾಮೀಣ, ಕನಕಗಿರಿ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿಯನ್ನು ಕರೆಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry