ಸ್ಮಾರಕ ಸಂರಕ್ಷಿಸಿ

7

ಸ್ಮಾರಕ ಸಂರಕ್ಷಿಸಿ

Published:
Updated:

ಭಾರತೀಯ ಪುರಾತತ್ವ ಇಲಾಖೆಯ ಅಧೀನದಲ್ಲಿ ಸುರಕ್ಷಿತವಾಗಿ ಇರಬೇಕಾಗಿದ್ದ 92 ಐತಿಹಾಸಿಕ ಸ್ಮಾರಕಗಳು ನಾಪತ್ತೆಯಾಗಿರುವ ವಿಷಯವನ್ನು ಮಹಾಲೇಖಪಾಲರ ವರದಿ ಬಹಿರಂಗಪಡಿಸಿದೆ. ಕಾಣೆಯಾಗಿರುವ ಸ್ಮಾರಕಗಳಲ್ಲಿ ಕಿತ್ತೂರಿನ ಶಾಸನ, ಬೆಂಗಳೂರು ಬಳಿಯ ಚಿಕ್ಕಜಾಲ ಮತ್ತು ಹೆಜ್ಜಾಲದ ಶಾಸನ ಹಾಗೂ ವಿಜಾಪುರದ ನಂದಿಕೇಶ್ವರದ ಶಾಸನವೂ ಸೇರಿವೆ.ಐತಿಹಾಸಿಕ ಮಹತ್ವ ಇರುವ ದೇವಾಲಯ, ವಿಗ್ರಹ, ಶಿಲಾಶಾಸನಗಳ ರಕ್ಷಣೆ ಬಗ್ಗೆ ಪುರಾತತ್ವ ಇಲಾಖೆಗೆ ಇರುವ `ಕಾಳಜಿ' ಎಲ್ಲರಿಗೂ ತಿಳಿದಿರುವುದೇ ಆಗಿದೆ! ಹೊಯ್ಸಳರು, ಚಾಲುಕ್ಯರು, ಗಂಗರು, ತುಳುವರು ಈ ಮುಂತಾದ ಹತ್ತುಹಲವು ರಾಜಮನೆತನಗಳು ನಿರ್ಮಿಸಿದ ದೇವಾಲಯಗಳಲ್ಲಿ ಹಲವು ಈಗಾಗಲೇ ನೆಲಕಚ್ಚಿವೆ. ಇನ್ನು ಕೆಲವು ಸೂಕ್ತ ರಕ್ಷಣೆ ಇಲ್ಲದೇ ಶಿಥಿಲ ಅವಸ್ಥೆಯಲ್ಲಿವೆ.ಇವುಗಳಿಗೆ ಸಂಬಂಧಪಟ್ಟ ಹತ್ತುಹಲವು ಶಿಲಾಶಾಸನಗಳು ಬಟ್ಟೆ ಒಗೆಯಲು, ಚರಂಡಿ ದಾಟಲು ಕಲ್ಲುಚಪ್ಪಡಿಯಾಗಿ, ಮನೆಗಳಿಗೆ ಮೆಟ್ಟಿಲಾಗಿ ಬಳಕೆಯಾಗುತ್ತಿರುವುದು ಹೊಸ ವಿಷಯವೇನಲ್ಲ. ಕೆಲವೆಡೆ ದೇವಾಲಯದ ಆವರಣ ಹಸು, ಎಮ್ಮೆ, ಮೇಕೆ ಕಟ್ಟಲು ಬಳಕೆಯಾಗುತ್ತಿದೆ. ಒಳಗಿನ ಗಾಢಾಂಧಕಾರದ ವಾತಾವರಣವನ್ನು ಪಾರಿವಾಳ, ಗೂಬೆಗಳು ವಾಸಕ್ಕೆ ಬಳಸಿವೆ. ಐತಿಹಾಸಿಕ ಮೌಲ್ಯ ಉಳ್ಳ ವಿಗ್ರಹ, ಚಿನ್ನಾಭರಣ, ಅಲಂಕಾರದ ವಸ್ತುಗಳು ಚೋರರ ವಶವಾಗಿ ವಿದೇಶಿ ವಸ್ತುಸಂಗ್ರಹಾಲಯಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೊಸ ವಿದ್ಯಮಾನವಲ್ಲ. ಇತ್ತೀಚೆಗೆ ಮೂಡುಬಿದರೆಯ ಸಿದ್ಧಾಂತ ಮಂದಿರದ ಪುರಾತನ ವಿಗ್ರಹಗಳು ಕಳವಾಗಿದ್ದವು. ಇದರಲ್ಲಿ ಕೆಲವು ವಿಗ್ರಹಗಳು ಮಾತ್ರ ಪತ್ತೆಯಾದವು. ಕೆಲವು ಚಿನ್ನದ ವಿಗ್ರಹಗಳನ್ನು ಚೋರರು ಕರಗಿಸಿಬಿಟ್ಟಿದ್ದಾರೆ. ಇದರಿಂದ ಅಮೂಲ್ಯ ಐತಿಹಾಸಿಕ ಮಹತ್ವದ ವಿಗ್ರಹಗಳು ಶಾಶ್ವತವಾಗಿ ಮರೆಯಾಗಿವೆ.ಇಂದು ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ರಕ್ಷಣೆಗೆ ಸಿ.ಸಿ ಟಿ.ವಿ, ಅಪಾಯ ಸೂಚಕ ಎಚ್ಚರಿಕೆಯ ಗಂಟೆ, ವಿದ್ಯುತ್ ಬೇಲಿ, ತರಬೇತಿ ಹೊಂದಿದ ಭದ್ರತಾ ಸಿಬ್ಬಂದಿ ಬಳಕೆ ಅತ್ಯಗತ್ಯ. ಐತಿಹಾಸಿಕ ಮಹತ್ವದ ವಸ್ತುಗಳು ಎಂದರೆ ಚರಿತ್ರೆಯ ಅಮೂಲ್ಯ ಪುಟಗಳು.ಸಾಹಿತ್ಯ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ವಿವರ ಇರುವ ತಾಡ ಓಲೆ ಗ್ರಂಥಗಳು, ಶಿಲಾಶಾಸನಗಳು, ನಾಣ್ಯಗಳು ಸೂಕ್ತ ರಕ್ಷಣೆ ಪಡೆಯಲೇಬೇಕು. ನಿಧಿ ಶೋಧದ ಹೆಸರಿನಲ್ಲಿ ವಿಗ್ರಹಗಳನ್ನು ಒಡೆದು ಹಾಕುವ ಘಟನೆಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಶಿವ ದೇವಾಲಯಗಳ ಮುಂದಿರುವ ನಂದಿ ವಿಗ್ರಹಗಳ ಅಡಿ, ಗರ್ಭಗುಡಿಯ ವಿಗ್ರಹಗಳ ಅಡಿ ನಿಧಿ ಹೂತಿಟ್ಟಿದ್ದಾರೆ ಎಂಬ ವದಂತಿ, ನಂಬಿಕೆಗಳು ದುಷ್ಕರ್ಮಿಗಳನ್ನು ನೆಲ ಅಗೆಯಲು ಪ್ರಚೋದಿಸಿದ್ದೂ ಇದೆ.ಸ್ಥಳೀಯ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಚಾರಿತ್ರಿಕ ಸ್ಮಾರಕಗಳು ತಮ್ಮ ಊರಿನ ದೊಡ್ಡ ಆಸ್ತಿ; ಅದನ್ನು ಕಾಪಾಡುವುದು ತಮ್ಮ ಕರ್ತವ್ಯ ಎನ್ನುವ ತಿಳಿವಳಿಕೆ ಮೂಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಯುದ್ಧ ಅರ್ಧ ಗೆದ್ದಂತೆ. ಸ್ಥಳೀಯ ಸಂಘ ಸಂಸ್ಥೆಗಳನ್ನು ಈ ಉದ್ದೇಶಕ್ಕೆ ಬಳಸುವುದು ಸೂಕ್ತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry