ಸೋಮವಾರ, ಸೆಪ್ಟೆಂಬರ್ 28, 2020
28 °C

ಸ್ಮಾರ್ಟ್‌ಸಿಟಿ ರಿಯಾಲ್ಟಿ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಮಾರ್ಟ್‌ಸಿಟಿ ರಿಯಾಲ್ಟಿ ಸಮ್ಮೇಳನ

ಮುಂದಿನ ಎರಡು ದಶಕಗಳಲ್ಲಿ ಅಂದರೆ 2050ರ ವೇಳೆಗೆ ವಿಶ್ವದೆಲ್ಲೆಡೆಯ ನಗರ ಪ್ರದೇಶದ ಜನಸಂಖ್ಯೆಯು ಈಗಿರುವ ಶೇ 50ರಿಂದ ಶೇ 70ಕ್ಕೆ ಏರಿಕೆ ಆಗಲಿದೆ ಎನ್ನುತ್ತದೆ ಇತ್ತೀಚಿನ ಅಧ್ಯಯನ.ಹೆಚ್ಚುತ್ತಿರುವ ವಲಸೆ, ನಗರ ಕೇಂದ್ರೀಕೃತ ಕೈಗಾರಿಕಾ ನೀತಿ ಮತ್ತು ಕೃಷಿ ಕುಂಠಿತಗೊಂಡಿರುವುದು `ನಗರದ ಜನಸಾಂದ್ರತೆ~ ಹೆಚ್ಚುವಂತೆ ಮಾಡಿವೆ. ನಗರಗಳ ಪಾಲಿಗೆ ಇದು ಎಚ್ಚರಿಕೆಯ ಕರೆಗಂಟೆ. ಹರಿದು ಬರುತ್ತಿರುವ ಜನಪ್ರವಾಹಕ್ಕೆ ನೆಲೆ ಒದಗಿಸಲು ನಗರ ಸಿದ್ಧಗೊಳ್ಳಬೇಕಿರುವುದು ಸವಾಲೇ ಸರಿ.

 

ವಸತಿ ಮತ್ತು ಮೂಲಸೌಕರ್ಯ ರಂಗಗಳು ಆಮೂಲಾಗ್ರ ಬದಲಾವಣೆಗೆ ತೆರೆದುಕೊಳ್ಳಲು ಇದು ಸಕಾಲ. ಈವರೆಗೆ ಇದ್ದ ನಗರೀಕರಣ ಕಲ್ಪನೆ ಬದಲಾಗಿ, ಇನ್ನಷ್ಟು ವ್ಯವಸ್ಥಿತವೂ, ಸುಸ್ಥಿರವೂ ಆದ ನಗರ ನಿರ್ಮಾಣ (ಞಚ್ಟಠಿ ್ಚಜಿಠಿ) ಕಲ್ಪನೆಗೆ ನೀತಿ ನಿರೂಪಕರು ಮುಂದಾಗಬೇಕಿದೆ.ನಗರಾಡಳಿತ, ರಿಯಲ್ ಎಸ್ಟೇಟ್ ಸಂಸ್ಥೆಗಳು ಮತ್ತು ನೀತಿ ನಿರೂಪಕರು ಜಂಟಿಯಾಗಿ ಭವಿಷ್ಯ ನಗರಗಳನ್ನು ನಿರ್ಮಿಸಬೇಕಿದೆ. ನಗರಕ್ಕೆ ಗ್ರಾಮೀಣ ವಲಸೆ ತಡೆಯುವುದು ಮತ್ತು ಎರಡು ಮತ್ತು ಮೂರನೇ ಹಂತದ ನಗರಗಳಿಗೂ ಕೈಗಾರಿಕೆಗಳ ವಿಕೇಂದ್ರೀಕರಣ ಮತ್ತಿತರ ಕ್ರಮಗಳಿಂದ ನಗರಗಳ ಜನಸಂಖ್ಯೆ ಹೆಚ್ಚಳ ತಡೆಯಬಹುದು. ದೇಶದ ಇಡೀ ಅರ್ಥವ್ಯವಸ್ಥೆ ಮತ್ತು ಅಭಿವೃದ್ಧಿಗೆ ಇದು ಬಹು ಮುಖ್ಯ ಅಂಶ.ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಒಂದಕ್ಕೊಂದು ತಳುಕು ಹಾಕಿಕೊಂಡಿರುವ ಸಂಗತಿಗಳು. ಭವಿಷ್ಯದ `ಸ್ಮಾರ್ಟ್ ಸಿಟಿ~ಗಳನ್ನು ನಿರ್ಮಿಸುವುದು ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಹೇಗೆ ಸವಾಲೋ, ಹಾಗೆಯೇ ಇದೊಂದು ಉತ್ತಮ ಅವಕಾಶ ಕೂಡ ಹೌದು ಎನ್ನುತ್ತದೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ.ದೇಶದ ಆರ್ಥಿಕ ಪ್ರಗತಿ ಮತ್ತು ಸುಸ್ಥಿರ ನಗರೀಕರಣದಲ್ಲಿ ರಿಯಲ್ ಎಸ್ಟೇಟ್ ಪಾತ್ರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ದೇಶದ ರಿಯಾಲ್ಟಿ ವಲಯ ವಾರ್ಷಿಕ ಶೇ 30ರಷ್ಟು ಪ್ರಗತಿ ಹೊಂದುತ್ತಿದೆ. ಅದರಲ್ಲೂ ಈ ವಲಯದಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಲಭಿಸಿದ ನಂತರ ಇಡೀ ನಗರ ನಿರ್ಮಾಣ ಚಿತ್ರಣವೇ ಬದಲಾಗಿದೆ. ನಿವೇಶನ ಅಥವಾ ಮನೆ ಖರೀದಿ ವಿಷಯದಲ್ಲಿ ಗ್ರಾಹಕರೂ ಹೆಚ್ಚು `ಸ್ಮಾರ್ಟ್~ ಆಗತೊಡಗಿದ್ದಾರೆ. ಪಾವತಿಸಿದ ಹಣಕ್ಕೆ ತಕ್ಕ ಮೌಲ್ಯದ, ಅಂತರರಾಷ್ಟ್ರೀಯ ಗುಣಮಟ್ಟದ ಮನೆಗಳು ಅವರ ಬೇಡಿಕೆಯಾಗಿವೆ.ಭವಿಷ್ಯದ ನಗರ

ಜಾಗತೀಕರಣ ಇಡೀ ವಿಶ್ವವನ್ನೇ ಪುಟ್ಟ ಹಳ್ಳಿಯನ್ನಾಗಿಸಿದೆ. ಭಾರತದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶದಲ್ಲಿ ನಗರೀಕರಣ ಗಾಳಿ ತೀವ್ರವಾಗಿದೆ. ಗ್ರಾಹಕರೂ ನಗರಗಳಿಂದ ನಗರಗಳಿಗೆ ಉತ್ತಮ ಜೀವನ ಅರಸಿ ಹೋಗುತ್ತಿದ್ದಾರೆ.ಹಾಗಾದರೆ ಭವಿಷ್ಯದ ನಗರಗಳು ಹೇಗಿರಬೇಕು?

ಸರಳ ಮತ್ತು ನೆಮ್ಮದಿಯ ಬದುಕು ಒದಗಿಸುವ ತಾಣಗಳೇ  `ಸ್ಮಾರ್ಟ್ ಸಿಟಿ~. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಮೂಲಕ ಈ ನಗರಗಳು ಜನ-ಜೀವನದ ನಡುವೆ ಬೆಸುಗೆ ಹಾಕುತ್ತವೆ. ಎಲ್ಲ ರೀತಿಯ ಮೂಲಸೌಕರ್ಯ, ನಾಗರಿಕ ಸೇವೆಗಳು ಸರಳವಾಗಿ, ಕ್ಷಣದಲ್ಲೇ ಲಭಿಸುತ್ತವೆ. ಇಂಗಾಲ ಮುಕ್ತ, ಟ್ರಾಫಿಕ್ ಕಿರಿಕಿರಿ ಇಲ್ಲದ, ಶುದ್ಧ ಗಾಳಿ, ಬೆಳಕು, ಹಸಿರು ಇರುವ ಮಾಲಿನ್ಯ ರಹಿತ ಪರಿಸರ ಈ ನಗರ ನಿರ್ಮಾಣದ ಹಿಂದಿರುವ ಕಲ್ಪನೆ.ಪೋರ್ಚುಗಲ್‌ನಲ್ಲಿರುವ `ಪ್ಲಾನ್ ಐಟಿ ವ್ಯಾಲಿ~ ದಕ್ಷಿಣ ಕೊರಿ   ಯಾದ ಸಂಗ್ಡೊ, ಜಪಾನ್‌ನಲ್ಲಿರುವ `ಫುಜಿಸುವಾ~ ಚೀನಾದ `ಡಾಂಗ್‌ಟೈನ್~, ಅಮೆರಿಕದ `ಮಸ್ದರ್~ ನಗರಗಳು `ಸ್ಮಾರ್ಟ್ ಸಿಟಿ~ಗೆ ಅತ್ಯುತ್ತಮ ಉದಾಹರಣೆ. ಈ ನಗರಗಳಿಂದ ಸ್ಫೂರ್ತಿ ಪಡೆದು ದೇಶದಲ್ಲೂ ಇಂತಹ ನಗರಗಳು ನಿರ್ಮಾಣಗೊಳ್ಳುವ ಸಿದ್ಧತೆಯಲ್ಲಿವೆ.

 

ದೆಹಲಿ-ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್(ಡಿಎಂಐಸಿ) ಯೋಜನೆ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಇಂತಹ 7ಕ್ಕೂ ಹೆಚ್ಚು `ಸ್ಮಾರ್ಟ್ ಸಿಟಿ~ ನಿರ್ಮಾಣಕ್ಕೆ ವೇದಿಕೆ ಒದಗಿಸಿದೆ. ಉತ್ತರ ಪ್ರದೇಶ, ಹರಿಯಾಣ, ರಾಜಸ್ತಾನ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಇಂಥ 24 `ಸ್ಮಾರ್ಟ್ ಸಿಟಿ~ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಭಿವೃದ್ಧಿಪಡಿಸಿವುದು, ನಾಗರಿಕ ಮೂಲಸೌಕರ್ಯಗಳ ಸಮರ್ಪಕ ನಿರ್ವಹಣೆ, ಜಲಸಂರಕ್ಷಣೆ ಮತ್ತು ಮರು ಬಳಕೆ ಕೂಡ ಈ ಮಾದರಿ ನಗರ ನಿರ್ಮಾಣ ಯೋಜನೆಯಲ್ಲಿ ಅಡಕವಾಗಿವೆ.`ನಗರೀಕರಣದ ಲಾಭಗಳು ನಮ್ಮ ದೇಶಕ್ಕೂ ಲಭಿಸಬೇಕು. ಈ ನಿಟ್ಟಿನಲ್ಲಿ ನಗರ ನಿರ್ಮಾಣ ತಜ್ಞರು, ತಂತ್ರಜ್ಞಾನ ಪೂರೈಕೆದಾರರು, ರಿಯಲ್ ಎಸ್ಟೇಟ್ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಈ ಹಿನ್ನಲೆಯಲ್ಲಿ ಇದೇ 3ರಂದು ಬೆಂಗಳೂರಿನಲ್ಲಿ(ಹೋಟೆಲ್ ವಿಂಡ್ಸರ್ ಮ್ಯಾನೋರ್) ಒಂದು ದಿನದ ದಕ್ಷಿಣ ಭಾರತ ರಿಯಲ್ ಎಸ್ಟೇಟ್ ಮೇಳ(ಎಸ್‌ಐಆರ್‌ಇಸಿ) ಆಯೋಜಿಸಲಾಗಿದೆ.

 

ರಿಯಲ್ ಎಸ್ಟೇಟ್ ಸಂಸ್ಥೆಗಳು, ನಗರಾಭಿವೃದ್ಧಿ ತಜ್ಞರು, ತಂತ್ರಜ್ಞಾನ ಪೂರೈಕೆದಾರರು, ಪರಿಸರ ತಜ್ಞರು ಒಂದೇ ಸೂರಿನಡಿ ಸೇರಿ 21ನೇ ಶತಮಾನದ `ಸ್ಮಾರ್ಟ್ ಸಿಟಿ~ ನಿರ್ಮಾಣ ಕುರಿತು ಚರ್ಚಿಸಲಿದ್ದಾರೆ.ಮುಂಬೈ, ದೆಹಲಿ ಹೊರತುಪಡಿಸಿದರೆ ರಿಯಲ್ ಎಸ್ಟೇಟ್‌ನ ಪ್ರಮುಖ ಮಾರುಕಟ್ಟೆ ದಕ್ಷಿಣ ಭಾರತ. ಚೆನ್ನೈ, ಬೆಂಗಳೂರು, ಹೈದರಾಬಾದ್ ಈಗಾಗಲೇ ಜಾಗತಿಕ ರಿಯಲ್ ಎಸ್ಟೇಟ್ ನಕಾಶೆಯಲ್ಲಿ ಗುರುತಿಸಿಕೊಂಡಿವೆ.ಸುಸ್ಥಿರ ಪ್ರಗತಿ ಜತೆಗೇ ರಿಯಾಲ್ಟಿ ವಲಯದಲ್ಲಿ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲೂ ಈ ಸಮ್ಮೇಳನ ಮಹತ್ವದ್ದು. ಗ್ರಾಹಕ ಸಂಬಂಧ ನಿರ್ವಹಣೆ (ಸಿಆರ್‌ಎಂ), ಉದ್ಯಮ ಸಂಪನ್ಮೂಲ ಯೋಜನೆ (ಇಆರ್‌ಪಿ) ಸೇರಿದಂತೆ ಹಲವು ವಿಷಯಗಳ ಕುರಿತೂ ತಜ್ಞರಿಂದ ಗೋಷ್ಠಿಗಳು ನಡೆಯಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.