`ಸ್ಯಾಂಪಲ್' ನೆಪದಲ್ಲಿ ರೈತರ ಸುಲಿಗೆ

7

`ಸ್ಯಾಂಪಲ್' ನೆಪದಲ್ಲಿ ರೈತರ ಸುಲಿಗೆ

Published:
Updated:

ಶಿಡ್ಲಘಟ್ಟ:  ತಾಲ್ಲೂಕಿನಲ್ಲಿ ಅಕಾಲ ಮಳೆಯಾದರೆ, ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಗೂಡು ಕಳ್ಳರಿಗೆ ಸಕಾಲವಾಗುತ್ತದೆ  ಎಂಬುದು ರೈತರ ಸಂಕಟದ ನುಡಿ.ಮಳೆ, ಜಡಿಮಳೆ, ಚಳಿಗಾಳಿ ಮುಂತಾದ ತಂಪಿನ ವಾತಾವರಣದಲ್ಲಿ ರೇಷ್ಮೆ ಗೂಡು ಸರಿಯಾಗಿ ಕಟ್ಟದಿರುವುದರಿಂದ ಅಂತಹ ಗೂಡುಗಳ ಬಿಚ್ಚಾಣಿಕೆ ಸರಿಯಾಗಿ ಇರದು. ರೇಷ್ಮೆ ಬಿಚ್ಚಾಣಿಕೆಗೆ ಸರಿಯಾಗಿ ರೇಷ್ಮೆ ಗೂಡು ಆಗಿಬರುತ್ತದೆಯೋ ಇಲ್ಲವೋ ಎಂದು ಪರೀಕ್ಷಿಸುತ್ತೇವೆಂದು  ಸ್ಯಾಂಪಲ್  ಎಂಬ ಹೆಸರಿಟ್ಟು ರೀಲರುಗಳು ಸ್ವಲ್ಪ ಗೂಡನ್ನು ರೈತರಿಂದ ಪಡೆದು ಹೊರಹೋಗುತ್ತಾರೆ. ಆದರೆ ಪರೀಕ್ಷಿಸುವವರು, ಪರೀಕ್ಷಿಸಿ ರೇಷ್ಮೆ ಗೂಡನ್ನು ಕೊಳ್ಳುವವರು ಕೆಲವೇ ಮಂದಿ. ರೀಲರುಗಳು ಮತ್ತು ರೀಲರುಗಳಲ್ಲದವರು ಎಗ್ಗಿಲ್ಲದೆ ರೈತರಿಂದ ಸ್ಯಾಂಪಲ್ ಹೆಸರಿನಲ್ಲಿ ಕೈತುಂಬ, ಜೇಬುತುಂಬ ಮತ್ತು ತಮ್ಮ ಅಂಗಿಯೊಳಗೆಲ್ಲಾ ತುಂಬಿಕೊಂಡು ಮಾರುಕಟ್ಟೆಯಿಂದ ಹೊರಹೋಗುತ್ತಾರೆ.ಮಾರುಕಟ್ಟೆಗೆ ಬರುವ ಪ್ರತಿಯೊಬ್ಬ ರೈತರೂ ಕನಿಷ್ಠ ಎರಡು ಕೆಜಿ ಗೂಡನ್ನಾದರೂ ಈ ರೀತಿ ಕಳೆದುಕೊಳ್ಳುತ್ತಾರೆ. ತಮ್ಮ ಗೂಡನ್ನು ಪರೀಕ್ಷಿಸಿ ಹೆಚ್ಚಿನ ಬೆಲೆಗೆ ಹರಾಜು ಕೂಗಬಹುದು ಎಂಬ ಆಸೆಯಿಂದ ರೈತರೂ ತಮ್ಮ ಗೂಡು ತೆಗೆದುಕೊಂಡು ಹೋಗುವುದನ್ನು ನೋಡಿಯೂ ಸುಮ್ಮನಾಗುತ್ತಾರೆ. ಆದರೆ ಇದೊಂದು ರೀತಿಯ ಹಗಲುಕಳ್ಳತನ. ರೀಲರುಗಳಲ್ಲದವರೇ ಹಲವಾರು ಮಂದಿ ಬಂದು ಪ್ರತಿ ದಿನ ರೇಷ್ಮೆ ಗೂಡನ್ನು ತಮ್ಮ ಜೇಬುಗಳಲ್ಲಿ ಮತ್ತು ಅಂಗಿಯ ತುಂಬಾ ತುಂಬಿಕೊಂಡು ಹೋಗುತ್ತಾರೆ  ಎನ್ನುತ್ತಾರೆ ಪ್ರಗತಿಪರ ರೈತ ನಾರಾಯಣಸ್ವಾಮಿ.ಮಾರುಕಟ್ಟೆಗೆ ಬರುವ ರೀಲರುಗಳ ಗುರುತಿನ ಚೀಟಿ ಪರೀಕ್ಷಿಸಿ ಒಳಗೆ ಬಿಡಬೇಕು. ರೇಷ್ಮೆ ಗೂಡನ್ನು ಪರೀಕ್ಷೆಗೆ ಒಳಪಡಿಸಲೆಂದೇ ಮಾರುಕಟ್ಟೆಯಲ್ಲಿ ಫಿಲೇಚರ್ ಘಟಕ ಸ್ಥಾಪಿಸಬೇಕು. ಇಲ್ಲವಾದಲ್ಲಿ ಸ್ಯಾಂಪಲ್ ಗೂಡನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು. ಇದರಿಂದ ಪ್ರತಿದಿನ ನಡೆಯುವ ಸಾವಿರಾರು ರೂಪಾಯಿ ಹಗಲುದರೋಡೆ ನಿಲ್ಲುತ್ತದೆ. ಪ್ರತಿದಿನ ಗೂಡು ಹರಡುವ ಟ್ರೇಗಳಿಗಾಗಿ ಹಣ, ಹರಾಜು ಕೂಗುವವರಿಗೆ ಹಣ, ತೂಕ ಮಾಡುವವರಿಗೆ ಹಣ, ಸ್ಯಾಂಪಲ್ ಹೆಸರಿನಲ್ಲಿ ಕಳ್ಳತನ.. ಹೀಗೆ ರೈತರನ್ನು ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶೋಷಣೆಗೆ ಒಳಪಡಿಸುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಮಾರುಕಟ್ಟೆ ಅಭಿವೃದ್ಧಿ ಸಮಿತಿ ನೆಪ ಮಾತ್ರಕ್ಕೆ ಇದ್ದು, ಸದಸ್ಯರು ದನಿ ಎತ್ತದೆ ಅವ್ಯವಹಾರಕ್ಕೆ ಪರೋಕ್ಷವಾಗಿ ಸಹಕಾರಿಯಾಗಿದ್ದಾರೆ  ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry