ಸೋಮವಾರ, ಆಗಸ್ಟ್ 26, 2019
28 °C
ಅಭಿವ್ಯಕ್ತಿಯ ಅಡೆ ತಡೆ

ಸ್ಯಾನಿಟೈ್‌ಡ ಲಿಟರೇಚರ್ ಒಂದು ನೋಟ

Published:
Updated:

ಒಬ್ಬ  ಲೇಖಕಿಗಾಗಲೀ, ಕಲಾವಿದೆಗಾಗಲೀ ಹೆಣ್ಣೆಂಬ ಒಂದೇ ಕಾರಣದಿಂದ ಅವಳ ಅಭಿವ್ಯಕ್ತಿಗೆ ಅಡೆತಡೆ ಉಂಟಾಗುತ್ತಿದ್ದರೆ, ಅದು ಖಂಡಿತ ತಪ್ಪು. ಈ ಅಡೆತಡೆ ಹೊರಗಿನ ಜಗತ್ತಿನಿಂದ ಬಂದದ್ದು ಇರಬಹುದು. ಅಥವಾ ಅವಳ ಒಳಗಿನ  ಜಗತ್ತಿನಲ್ಲೇ  ಜೀವ ತಾಳಿದ್ದಿರಬಹುದು. ಪ್ರಕೃತಿ, ಸಮಾಜ, ಕುಟುಂಬ, ಚರಿತ್ರೆ, ಧರ್ಮ, ಪರಿಸರ, ಸಂಸ್ಕೃತಿ, ವರ್ಗ, ಒಟ್ಟಿನಲ್ಲಿ ಸಾಮೂಹಿಕ ಚೇತನದ ನಂಬಿಕೆಗಳಿಂದ ಬಂದ ಅಡೆತಡೆಗಳು ಹೆಣ್ಣಿಗೆ  ಹೊರಜಗತ್ತಿನಿಂದ ಹೇರಲ್ಪಟ್ಟಿರುವುವು. ಇವು ಒಂದು ಕಡೆಯಾದರೆ  ತಮಗೆ  ತಾವೇ  ಬಾಲ್ಯದಿಂದ ಹೆಣ್ಣು ಹೀಗೇ ಇರಬೇಕು-ಇರಬಾರದು, ಹೀಗೇ ಮಾತಾಡಬೇಕು-ಮಾತಾಡಬಾರದು, ಇಂಥಾ ಕಡೆ ಒಂಟಿಯಾಗಿ ಹೋಗಬಹುದು-ಹೋಗಬಾರದು, ಹೀಗೆ ಬಟ್ಟೆ ತೊಡಬಹುದು-ತೊಡಬಾರದು - ಹೀಗೆ  ಗಟ್ಟಿಯಾಗಿ ಬೇರು ಬಿಟ್ಟಿರುವ ಅಂಶಗಳು  ಮತ್ತೊಂದು ಕಡೆ. ಎರಡೂ ಅಷ್ಟೇ ಶಕ್ತಿಯುತವಾದುವು. ಹಲವಾರು ಆಯಾಮಗಳನ್ನು ಹೊಂದಿದ ಈ ಜೆಂಡರ್ ಸೆನ್ಸಾರ್ ಶಿಪ್ ಅನುಭವದ ಕೊರತೆ ಮತ್ತು ಭಾಷೆಯ ಇತಿಮಿತಿಯ ರೂಪದಲ್ಲಿ ವ್ಯಕ್ತವಾಗಿ, ಒಬ್ಬ ಹೆಣ್ಣು ಪರಿಪೂರ್ಣ ಲೇಖಕಿಯಾಗಲು ದಾರಿಗಡ್ಡ ಬರುವಂಥವು.ನಾವಿಲ್ಲಿ ಮುಖ್ಯವಾಗಿ ಗಮನಿಸ ಬೇಕಾದ ವಿಷಯವೆಂದರೆ ಒಬ್ಬ ಲೇಖಕ/ಲೇಖಕಿಗೆ  ಅಭಿವ್ಯಕ್ತಿಯ ಮೂಲ ದ್ರವ್ಯ ಅನುಭವ ಮತ್ತು ಭಾಷೆ  ಎನ್ನುವುದನ್ನು. ಆದರೆ  ಹೆಣ್ಣೆಂಬ ಒಂದೇ ಕಾರಣದಿಂದ ಅವಳಿಗೆ ದಕ್ಕದೆ ಹೋದ ಅನುಭವಗಳೆಷ್ಟು? ದಕ್ಕದ ಅ ಅನುಭವಗಳಿಂದ ಅವಳ  ವಿಶ್ವ ಸಂಕುಚಿತಗೊಂಡು, ಇದು  ಅವಳ ಅಭಿವ್ಯಕ್ತಿಗೆ ಕಡಿವಾಣ ಹಾಕುವುದಿಲ್ಲವೇ?ಬರವಣಿಗೆಯ ಅವಶ್ಯಕತೆ, ಆಸಕ್ತಿಗಳಿಗೆ ತಕ್ಕಂತೆ ಒಂಟಿಯಾಗಿ ಗುಡ್ಡಗಾಡುಗಳನ್ನು, ಪರ್ವತಗಳನ್ನು, ಅರಣ್ಯಗಳನ್ನು ಸುತ್ತುವುದು, ಕೊಳೆಗೇರಿಗಳನ್ನು  ಒಳಹೊಕ್ಕು ಅಲ್ಲಿನ ಜನರ ಬದುಕನ್ನು ಅರಿಯುವುದು, ಕಾಮಾಟಿಪುರದ ಗಲ್ಲಿಗಳಲ್ಲಿ ತಿರುಗಾಡುವುದು, ಡಾನ್ಸ್ ಬಾರಿನಲ್ಲಿ ಒಬ್ಬಳೇ ಕೂತು ಅಲ್ಲಿನ ಸಾರ ಹೀರುವುದು, ಒಂದು ಪಬ್ಬಿನಲ್ಲಿ ಬಿಯರ್ ಕುಡಿಯುತ್ತಾ ಜನರ ಮಾತುಕತೆ ಆಲಿಸುವುದು, ಕೊನೇ ಪಕ್ಷ ಸುರಕ್ಷತೆಯಿಂದ ಸುಮ್ಮನೆ ಬೀಚಿನಲ್ಲಿ ಕೂತು ಹೋಗಿಬರುವವರನ್ನು ನೋಡುವುದು - ಎಷ್ಟು ಮಹಿಳೆಯರಿಗೆ ಸಾಧ್ಯ? ಸುರಕ್ಷಿತ?ಇಂಥಾ ಸಂದರ್ಭದಲ್ಲಿ ನನಗೆ ಮುಂಬೈ ನೆನಪಾಗುತ್ತದೆ.  ಊರಿನ ಲಕ್ಷಾಧೀಶರಿಂದ ಹಿಡಿದು ಬೀದಿ ಪೋಕರಿಗಳ ವರೆಗೂ ಗಂಡಸು ಹೆಂಗಸರೆನ್ನದೆ ಒಂದು ಬೋಗಿಯಲ್ಲಿ ಒಂದೇ ಏಟಿಗೆ ಎತ್ತಿ ಹಾಕಿಕೊಂಡು ಓಡುತ್ತಾ ಮುಂದಿನ ಸ್ಟೇಶನ್ನಿನಲ್ಲಿ ಉದುರಿಸುತ್ತಿದ್ದ  ಅಲ್ಲಿನ ಸಬರ್ಬನ್ ರೈಲುಗಳು ಎಲ್ಲಾ ವರ್ಗಗಳ ಅನುಭವಗಳ, ಕತೆಗಳ, ಅಶ್ಲೀಲ ಬೈಗಳ,  ಬೇರೆ ಬೇರೆ ಆಡುಭಾಷೆಗಳ, ಕಳ್ಳಾಟಗಳ, ಚಿತ್ರ ವಿಚಿತ್ರ  ಉಡುಪುಗಳ, ಬೆವರುಗಳ, ಸೆಂಟುಗಳ ಮಿಲನದ ಖಜಾನೆಯಾಗಿರುತ್ತವೆ. ಅದರಲ್ಲಿ ಪ್ರಯಾಣ ಮಾಡಿದಾಗ  ಮುಂಬೈ ಬದುಕಿನ  ಅಚ್ಚರಿಗಳ, ಎಲ್ಲಾ ರೀತಿಯ ತಾಕಲಾಟಗಳ,  ನೀತಿ ಸಂಹಿತೆಗಳ, ಬೇರೆಬೇರೆ ಸ್ತರದ ವ್ಯಾಪಾರಿಗಳ ವ್ಯಾಕರಣಗಳ, ತರತರದ ಬದುಕಿನ  ಕತೆಗಳ ಮೇಲ್ಪದರದೊಂದಿಗಾದರೂ  ಮುಖಾಮುಖಿ ಆಗುತ್ತದೆ.ಮುಂಬೈನಲ್ಲಿ ನಡೆದ ಒಂದು ಘಟನೆ ನನಗೆ ಇಂದಿಗೂ ನೆನಪಾಗುತ್ತದೆ.  ನಾನು, ನನ್ನ ಗಂಡ ಒಂದು ಶನಿವಾರ ದಿನಪೂರ್ತಿ ಗೊರೈ ಬೀಚಿನಲ್ಲಿ ಓಡಾಡಿಕೊಂದು ಬರಲು ಹೋಗಿದ್ದೆವು. ಹಾಗೇ ತಿರುಗಾಡುತ್ತಿದ್ದಾಗ, ಸ್ವಲ್ಪ ನಿರ್ಜನ ಭಾಗವೊಂದರಲ್ಲಿ ಸಾಲಾಗಿ ಸಮುದ್ರಕ್ಕೆದುರಾಗುವಂತೆ  ಒಣಗಿದ ತೆಂಗಿನ ಗರಿಗಳ ಚಪ್ಪರಗಳು ಕಣ್ಣಿಗೆ ಬಿದ್ದುವು. ಪಾಪ, ಬಿಸಿಲಿನಲ್ಲಿ ವಿಶ್ರಮಿಸಲು ವಿಹಾರಿಗಳಿಗೆ  ಅನುಕೂಲವಾಗಲೆಂದು  ಯಾರೋ ಹಾಕಿದ್ದಾರೆ ಎಂದು ಖುಶಿಯಿಂದ ಅದರಲ್ಲಿ ಹೋಗಿ ಕೂತೆವು. ಕೊಂಚ ಕ್ಷಣಗಳಲ್ಲೆ ನಮ್ಮೆದುರು ಗಟ್ಟಿಕಚ್ಚೆ ಸೀರೆಯ ಧಡೂತಿ ಕೋಳಿ ಹೆಂಗಸೊಂದು ಪ್ರತ್ಯಕ್ಷವಾಯಿತು.ಹುಬ್ಬುಗಂಟಿಕ್ಕಿ , `ಯಹಾಂ ಬೈಠನೇ ಕಾ ಹೈ ಕ್ಯಾ? ಉಸ್ಕೆ ಲಿಯೇ ಪೈಸಾ ಲಗತಾ ಹೈ, ಮಾಲೂಮ್ ನಹೀಂ?' ಎಂದು ಗದರಿಸಿತು. ಪಬ್ಲಿಕ್ ಪ್ರಾಪರ್ಟಿಯಾಗಿದ್ದ ಬೀಚಿನಲ್ಲಿ  ಕೂಡಲು ಈ ದೊಣ್ಣೆನಾಯಕಿಗೆ ಹಣವೇಕೆ ಕೊಡಬೇಕೆಂದು ನಾವು ಅಲ್ಲಿಂದ ಎದ್ದು ನಡೆದೆವು.ಮಾರನೆ ದಿನ ಆಫೀಸಿನಲ್ಲಿ ಈ ವಿಷಯ ನನ್ನ ಗೆಳೆಯರಿಗೆ ಹೇಳಿದಾಗ ಅವರು ಬಿದ್ದುಬಿದ್ದು ನಗತೊಡಗಿದರು! `ಬೈಠನೇ ಕಾ ಹೈ' ಎನ್ನುವುದರ `ಒಳ' ಅರ್ಥವನ್ನು ವಿವರಿಸಿ, ಅಲ್ಲಿ ಇಂಥಾ  ಹೆಂಗಸರು ಪ್ರೇಮಿಗಳಿಗೆ ಗುಟ್ಟಾಗಿ ಮಿಲನಕ್ಕೆ ಅವಕಾಶ ಮಾಡಿಕೊಡಲು ಇಂಥಾ ಚಪ್ಪರಗಳನ್ನು ಹಾಕಿ ದಂಧೆ ನಡೆಸುವ ಬಗ್ಗೆ ವಿವರಿಸಿದರು! ಅಲ್ಲಿನ ಗಂಡಸರಿಗೆಲ್ಲ  ಗೊತ್ತಿದ್ದ ಈ ಪ್ರಖ್ಯಾತ ಮುಂಬೈ ಉಕ್ತಿ ನನಗೆ ತಿಳಿಯದೆ ಇ್ದ್ದದಿದ್ದು, ಮಧ್ಯಮವರ್ಗದ ಹೆಣ್ಣಾಗಿದ್ದಿದ್ದರಿಂದ ನನ್ನ ಕಿವಿ ಮೇಲೆ ಸುಲಭವಾಗಿ ಬೀಳದ ಪದಗಳ ಒಂದು ಭಾಗವೇ ಎನ್ನುವುದು ಗೋಚರವಾಯಿತು.  ಜೊತೆಗೆ ನನಗೆ ಪರಿಚಯವಿಲ್ಲದ ಭಿನ್ನ ಸ್ತರದ ದಿಟ್ಟ ಹೆಣ್ಣು ತನ್ನ ಹೊಟ್ಟೆಪಾಡಿಗಾಗಿ ಮಾಡಿಕೊಂಡಿದ್ದ ಈ ದಂಧೆಯ ಬಗ್ಗೆ ಅಚ್ಚರಿಯಾಗಿತ್ತು.ಇನ್ನು ಭಾಷೆಯ ಬಗ್ಗೆ ಹೇಳಬೇಕಾದರೆ, ಯಾವುದೇ ಕತೆ ಕಾದಂಬರಿಯ ಸೊಗಡು  ತಾವು ಬದುಕುವ ಪರಿಸರಕ್ಕೆ ಹೊಂದಿಕೊಂಡಂತೆ ಅಲ್ಲಿನ ಪಾತ್ರಗಳು ಆಡುವ ಭಾಷೆಯೇ ಆಗಿರುತ್ತದೆ. ಹಳ್ಳಿಗಳಿಂದ ಬಂದು ಪಟ್ಟಣಗಳಲ್ಲಿ ತಮ್ಮದೇ ಮನೆಗೆಲಸ ಮಾಡುವ ಹೆಂಗಸರ ಮನೆಯ ಪರಿಸರ, ಭಾಷೆ ಎಷ್ಟು ಜನಕ್ಕೆ  ಪರಿಚಯವಿರುತ್ತದೆ? ಇನ್ನು ಎ್ಲ್ಲಲೆಲ್ಲೋ ಭೂಗತ ಜಗತ್ತಿನಲ್ಲೊ, ಪೊಲೀಸ್ ಸ್ಟೇಶನ್ನುಗಳಲ್ಲೋ, ಕೊಳೆಗೇರಿ ಹೆಂಗಸರ  ಕಾದಾಟದಲ್ಲೋ, ಅತಿ ಸಿರಿವಂತರ ಕಾರ್ಡ್ಸ್ ಪಾರ್ಟಿಗಳಲ್ಲೋ ಆಡುವ ಭಾಷೆಯ ಶೈಲಿಯಂತೂ ಮಧ್ಯಮವರ್ಗದ ಮಹಿಳೆಯರಿಗೆ ಪರಿಚಯ ಇರುವ ಸಾಧ್ಯತೆ ತುಂಬಾ ಕಡಿಮೆ. ಹಾಗಾಗಿ ಮಹಿಳೆಯರು ಬರೆಯುವ ಕತೆ ಕಾದಂಬರಿಗಳ ಮೇಲೆ ಇತಿಮಿತಿಗಳ ಹೊರೆ ಹೆಚ್ಚಾಗುತ್ತಾ ಹೋಗುತ್ತದೆ.ಇಲ್ಲಿ ಒಂದು ಸ್ವಾರಸ್ಯಕರ ವಿಷಯ ಮನಸ್ಸಿಗೆ ಬರುತ್ತದೆ. ನಾನು ಇಂಗ್ಲಿಷ್ ಸಾಹಿತ್ಯ ಸಾಕಷ್ಟು ಓದುವುದರಿಂದ, ಜೊತೆಗೆ ಇಂಗ್ಲಿಷ್‌ನಲ್ಲೂ ಬರೆಯುತ್ತ್ದ್ದಿದೆನಾದ್ದರಿಂದ, ಯಾವಾಗಲೂ ಒಂದು ಪ್ರಶ್ನೆ ಕಾಡುತ್ತಿರುತ್ತಿತ್ತು. ಕನ್ನಡದಲ್ಲಿ ಕಾಮೋದ್ದೀಪಕ ಪ್ರಸಂಗಗಳನ್ನು (ಇರಾಟಿಕಾ) ಬರೆಯುವಾಗ ಅಷ್ಟೊಂದು ಮುಜುಗರದಿಂದ ಪದ ಪುಂಜಗಳಿಗೆ ತಡಕಾಡಿ, ಕೊನೆಗೆ ರೂಪಕಗಳಿಂದ ತುಂಬಿ ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ನಾನು, ಅದೇ ಪ್ರಸಂಗವನ್ನು ಎಷ್ಟು ಸಹಜವಾಗಿ ಇಂಗ್ಲಿಷ್‌ನಲ್ಲಿ ಬರೆದುಬಿಡುತ್ತೀನಲ್ಲಾ ಎಂಬುದು! ಮೊದಲು ಇದಕ್ಕೆ ಕಾರಣ ಕನ್ನಡ ಭಾಷೆಯ ಇತಿಮಿತಿ ಎನ್ನಿಸುತ್ತಿತ್ತು. ನಂತರ ಹಾಗಲ್ಲ.ಇದಕ್ಕೆ ಮುಖ್ಯ ಕಾರಣ  ಕನ್ನಡ ಭಾಷೆಯೊಂದಿಗೆ, ಸಂಸ್ಕೃತಿಯೊಂದಿಗೆ  ನನಗಿರುವ  ಗಾಢವಾದ ಭಾವನಾತ್ಮಕ ಸಂಬಂಧ ಎಂಬ ಅರಿವಾಯಿತು! ಇದೇ ಕಾರಣಕ್ಕಾಗಿಯೇ ಅವಶ್ಯಕತೆಯಿರುವ  ಕಡೆಗಳಲ್ಲೂ ಅಶ್ಲೀಲ ಬೈಗಳನ್ನು ಉಪಯೋಗಿಸುವ ಮೊದಲು  ಹಿಂಜರಿಕೆ ಕಾಣಿಸಿಕೊಳ್ಳುವುದೇನೋ!ಈ ರೀತಿಯ ಮನಸ್ಸುಗಳಿಂದ ಒಂದು ರೀತಿಯಲ್ಲಿ ಹೆಚ್ಚುಹೆಚ್ಚು  `ಸ್ಯಾನಿಟೈ್‌ಡ ಲಿಟರೇಚರ್' (sanitized literature)   ಉತ್ಪತ್ತಿಯಾಗುವ ಸಾಧ್ಯತೆಗಳಿಲ್ಲವೇ?

Post Comments (+)