ಶನಿವಾರ, ಆಗಸ್ಟ್ 24, 2019
28 °C

`ಸ್ಯಾಫ್'ನಲ್ಲಿ ಮೂಡಿದ ಭರವಸೆ

Published:
Updated:
`ಸ್ಯಾಫ್'ನಲ್ಲಿ ಮೂಡಿದ ಭರವಸೆ

ಭಾರತದ ಜೂನಿಯರ್ ತಂಡಗಳಿಗೆ ಈಗ ಶುಕ್ರದೆಸೆ ಎನ್ನಬಹುದು. 19 ವರ್ಷ ವಯಸ್ಸಿನೊಳಗಿನವರ ಕ್ರಿಕೆಟ್ ತಂಡದವರು ಕೆಲ ವಾರಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ ಚಾಂಪಿಯನ್ ಆಗಿದ್ದರು. ಬಾಲಕಿಯರ ಹಾಕಿ ತಂಡ ಜರ್ಮನಿಯ ಮಾಂಚೆಂಗ್ಲಾಬಾಕ್‌ನಲ್ಲಿ ನಡೆದ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಅದರ ಜೊತೆಗೆ ಭಾರತ 16 ವರ್ಷ ವಯಸ್ಸಿನೊಳಗಿನವರ ಬಾಲಕರ ತಂಡದವರು `ಸ್ಯಾಫ್' ಫುಟ್‌ಬಾಲ್ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.ಇದರಲ್ಲಿ ಫುಟ್‌ಬಾಲ್ ತಂಡ ತೋರಿದ ಸಾಧನೆ ವಿಶೇಷವಾದುದು.  ದಕ್ಷಿಣ ಏಷ್ಯಾ ಫುಟ್‌ಬಾಲ್ ಫೆಡರೇಷನ್ (ಸ್ಯಾಫ್) 16 ವರ್ಷ ವಯಸ್ಸಿನೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಟ್ರೋಫಿ ಜಯಿಸಿದ್ದು ದೇಶದ ಫುಟ್‌ಬಾಲ್‌ನ ಭವಿಷ್ಯದ ದೃಷ್ಟಿಯಲ್ಲಿ ಶುಭಸೂಚನೆ ಎನ್ನಬಹುದು.ಕ್ರಿಕೆಟ್‌ನಲ್ಲಿ ಜೂನಿಯರ್ ಆಟಗಾರರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಮರ್ಥ್ಯ ತೋರಿಸಲು ಸಾಕಷ್ಟು ಅವಕಾಶಗಳಿವೆ. ಪ್ರತಿವರ್ಷ ಹಲವು ಟೂರ್ನಿಗಳು, ವಿದೇಶ ಪ್ರವಾಸಗಳು ನಡೆಯುತ್ತಿರುತ್ತವೆ. ಆದರೆ ಫುಟ್‌ಬಾಲ್ ಆಟಗಾರರಿಗೆ ಹೆಚ್ಚಿನ ಅವಕಾಶಗಳಿಲ್ಲ. ಫಿಫಾ ನಡೆಸುವ ಜೂನಿಯರ್ ವಿಶ್ವಕಪ್‌ನಂತಹ ಟೂರ್ನಿಯಲ್ಲಿ ಭಾರತ ತಂಡ ಪಾಲ್ಗೊಳ್ಳುವುದು ಕನಸಿನ ಮಾತೇ ಸರಿ. ಏನಿದ್ದರೂ ಏಷ್ಯಾ ಅಥವಾ ದಕ್ಷಿಣ ಏಷ್ಯಾ ಮಟ್ಟದಲ್ಲಿ ಮಾತ್ರ ತನ್ನ ಸಾಮರ್ಥ್ಯ ತೋರಿಸಬೇಕಷ್ಟೆ.ಕಠ್ಮಂಡುವಿನಲ್ಲಿ ನಡೆದ `ಸ್ಯಾಫ್' ಟೂರ್ನಿಯಲ್ಲಿ ಭಾರತ ಒಳಗೊಂಡಂತೆ ಒಟ್ಟು ಏಳು ತಂಡಗಳು ಪಾಲ್ಗೊಂಡಿದ್ದವು. ದಶರಥ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ 1-0 ಗೋಲಿನಿಂದ ಆತಿಥೇಯ ನೇಪಾಳ ತಂಡವನ್ನು ಮಣಿಸುವ ಮೂಲಕ ಭಾರತದ ಬಾಲಕರು ಸ್ಮರಣೀಯ ಸಾಧನೆ ಮಾಡಿದ್ದರು. ಭಾರತ ತಂಡ ಲೀಗ್ ಹಂತದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿತ್ತು. ಅಲ್ಲಿ ಎದುರಾಗಿದ್ದ ಆಫ್ಘಾನಿಸ್ತಾನ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಗೋಲುಗಳಿಂದ ಸೋಲಿಸಿತ್ತು. ಈ ಮೂಲಕ ಅಜೇಯವಾಗಿ ಟ್ರೋಫಿ ಜಯಿಸಿದೆ.ಟೂರ್ನಿಯಲ್ಲಿ ಪಾಲ್ಗೊಂಡ 23 ಸದಸ್ಯರ ತಂಡದಲ್ಲಿ ಹೆಚ್ಚಿನವರು ಈಶಾನ್ಯ ರಾಜ್ಯಗಳಿಂದ ಬಂದವರು. ಮಣಿಪುರ, ಅಸ್ಸಾಂ, ಮಿಜೋರಾಂ ಮತ್ತು ಮೇಘಾಲಯದ ಒಟ್ಟು 10 ಆಟಗಾರರು ಇದ್ದರು. ದೇಶದ ಈ ಭಾಗದಲ್ಲಿ ಫುಟ್‌ಬಾಲ್ ಹೆಚ್ಚಿನ ಜನಪ್ರಿಯತೆ ಗಳಿಸುತ್ತಿದೆ ಎಂಬುದಕ್ಕೆ ಇದು ಸಾಕ್ಷಿ. ನೇಪಾಳ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಗೆಲುವಿನ ಗೋಲು ತಂದಿತ್ತ ಜೆರ್ರಿ ಲಾಲ್‌ರಿಂಜುವಾಲ ಅವರು ಮಿಜೋರಾಂ ರಾಜ್ಯದವರು. ಪಶ್ಚಿಮ ಬಂಗಾಳದ ನಾಲ್ಕು ಆಟಗಾರರು ತಂಡದಲ್ಲಿದ್ದರು. ಆದರೆ ಕರ್ನಾಟಕದ ಯಾರೂ ಸ್ಥಾನ ಪಡೆದಿರಲಿಲ್ಲ.ಜೂನಿಯರ್ ತಂಡದಲ್ಲಿದ್ದ ಎಷ್ಟು ಮಂದಿ ಮುಂದೆ ರಾಷ್ಟ್ರೀಯ ತಂಡಕ್ಕೆ ಆಡುವರು ಎಂಬುದು ಮುಖ್ಯವಲ್ಲ. ಈ ಗೆಲುವು ದೇಶದ ಫುಟ್‌ಬಾಲ್‌ಗೆ ಸಂಬಂಧಿಸಿದಂತೆ ಮಹತ್ವದ್ದಾಗಿದೆ. ಇಲ್ಲಿ ಯುವ ಪ್ರತಿಭೆಗಳಿಗೆ ಕೊರತೆಯಿಲ್ಲ ಎಂಬುದನ್ನು ತೋರಿಸಿದೆ. ಫುಟ್‌ಬಾಲ್ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಬೇಕೆಂಬ ಕನಸು ಹೊತ್ತುಕೊಂಡಿರುವ ಮಕ್ಕಳಲ್ಲಿ ಹೊಸ ಭರವಸೆ ಮೂಡಿಸಿದೆ.ಈ ಬಾಲಕರ ತಂಡ ಯೂರೋಪಿಯನ್ ತಂಡಗಳನ್ನು ಸೋಲಿಸುವ ಮಟ್ಟಿಗೆ ಬೆಳೆಯಬೇಕೆಂಬುದು ನನ್ನ ಕನಸು ಎಂದು ಕೋಚ್ ಗೌತಮ್ ಘೋಷ್ ಹೇಳಿದ್ದಾರೆ. ಆದರೆ ಇದು ನಿರೀಕ್ಷಿಸಿದಷ್ಟು ಸುಲಭವಲ್ಲ. ಯೂರೋಪಿಯನ್ ತಂಡಗಳ ಪ್ರದರ್ಶನ ಭಾರತ ತಂಡಕ್ಕಿಂತ ಉನ್ನತಮಟ್ಟದಲ್ಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.`ಇಟಲಿ, ಫ್ರಾನ್ಸ್ ಮುಂತಾದ ತಂಡಗಳನ್ನು ಸೋಲಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಹಾಗಾದರೆ ಮಾತ್ರ ನನಗೆ ತೃಪ್ತಿ ಲಭಿಸಲಿದೆ. ತಂಡದ ಬಾಲಕರು ಕಠಿಣ ಪ್ರದರ್ಶನ ನೀಡಿದ್ದರಿಂದ ಸ್ಯಾಫ್ ಟೂರ್ನಿಯಲ್ಲಿ ಟ್ರೋಫಿ ಜಯಿಸಲು ಸಾಧ್ಯವಾಯಿತು' ಎಂದು ಗೌತಮ್ ಘೋಷ್ ಹೇಳಿದ್ದರು.ದೇಶದ ವಿವಿಧ ಭಾಗಗಳಿಂದ ಪ್ರತಿಭಾನ್ವಿತ ಬಾಲಕರನ್ನು ಆಯ್ಕೆ ಮಾಡಿ ತಂಡವನ್ನು ಕಟ್ಟುವುದು ಸುಲಭದ ವಿಚಾರವಾಗಿರಲಿಲ್ಲ. ಈ ತಂಡದ ಆಟಗಾರರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡುವುದು ಅಗತ್ಯ. ಜೂನಿಯರ್ ವಿಭಾಗದಲ್ಲಿ ಮಿಂಚಿದವರು ವಿವಿಧ ಕಾರಣಗಳಿಂದ ಈ ಕ್ರೀಡೆಯಿಂದ ದೂರ ಸರಿದ ಹಲವು ಉದಾಹರಣೆಗಳಿವೆ. ಕೇವಲ ಫುಟ್‌ಬಾಲ್ ಮಾತ್ರವಲ್ಲ, ಇತರ ಕ್ರೀಡೆಗಳಲ್ಲೂ ಈ ಸಮಸ್ಯೆ ಇದೆ.

 

Post Comments (+)