ಮಂಗಳವಾರ, ಏಪ್ರಿಲ್ 13, 2021
30 °C

ಸ್ಲಂ ನಿವಾಸಿಗಳ ಸಮಸ್ಯೆಗೆ ಪರಿಹಾರ: ಡಿಸಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಜಿಲ್ಲೆಯಲ್ಲಿನ ಎಲ್ಲ ಸ್ಲಂ ನಿವಾಸಿಗಳು ಹಲವಾರು ವರ್ಷಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಂತ, ಹಂತವಾಗಿ ಕ್ರಮ ತೆಗೆದು ಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ ಹೇಳಿದರು. ನಗರದ ನಗರಸಭೆಯ ಸಭಾಭವನದಲ್ಲಿ ಇತ್ತೀಚೆಗೆ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಜಿಲ್ಲಾ ಕೊಳಚೆ ನಿವಾಸಿಗಳ ಹಿತ ರಕ್ಷಣಾ ಸಮಿತಿಗಳ ಆಶ್ರಯದಲ್ಲಿ ಸ್ಲಂ ಹಬ್ಬ ಹಾಗೂ ಸ್ಲಂ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಒಟ್ಟು 87 ಸ್ಥಳಗಳನ್ನು ಕೊಳಚೆ ಪ್ರದೇಶಗಳೆಂದು ಗುರುತಿಸ ಲಾಗಿದೆ. ಅವುಗಳಲ್ಲಿ 11,031 ಕುಟುಂಬಗಳ 54 ಸಾವಿರ ಜನರು ವಾಸವಾಗಿದ್ದಾರೆ. ನಗರದಲ್ಲಿ 46, ಮುಳಗುಂದದಲ್ಲಿ 5, ಲಕ್ಷ್ಮೇಶ್ವರದಲ್ಲಿ 9, ರೋಣ 5, ನರೇಗಲ್ 4, ಗಜೇಂದ್ರಗಡ 6, ಮುಂಡರಗಿ 8, ನರಗುಂದ 4 ಸ್ಲಂಗಳಿದ್ದು ಅಲ್ಲಿನ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸ್ಲಂ ಬೋರ್ಡ್‌ನೊಂದಿಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಮುಂದಾಗಿದ್ದು, ಸದ್ಯದಲ್ಲಿಯೇ ಈ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು. ಸಂವಿಧಾನದ ಚೌಕಟ್ಟಿನಲ್ಲಿ ಸಮಾನತೆ, ನೆಮ್ಮದಿಯ ಬದುಕು ಸಾಗಿಸಲು ಎಲ್ಲರಿಗೂ ಮುಕ್ತ ಅವಕಾಶ ನೀಡಿದ್ದು, ಪ್ರತಿಯೊಬ್ಬರೂ ತಮ್ಮ ಹಕ್ಕು ಹಾಗೂ ಕರ್ತವ್ಯವನ್ನು ಅರಿತುಕೊಳ್ಳಬೇಕು ಆಗ ಮಾತ್ರ ಸಮಾಜದಲ್ಲಿ ಸಾಮರಸ್ಯ ನೆಲೆಸಲು ಸಾಧ್ಯ ಎಂದರು.ಸ್ಲಂ ಪ್ರಣಾಳಿಕೆ ಬಿಡುಗಡೆಗೊಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ ನಾಯಕ, ಸ್ಲಂ ಜನರು  ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿ ದಿದ್ದಾರೆ. ಹೀಗಾಗಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬುದ್ಧಿವಂತಿಕೆ ಮತ್ತು ಶೈಕ್ಷಣಿಕವಾಗಿ ಸುಧಾರಿಸಿದಾಗ ಮಾತ್ರ ಅವರ ಜೀವನ ಮಟ್ಟ ಸುಧಾರಣೆಯಾಗಲು ಸಾಧ್ಯ ಎಂದು ಹೇಳಿದರು.    

 

ರಾಜ್ಯದಲ್ಲಿ 5570 ಕೊಳಚೆ ಪ್ರದೇಶಗಳಿದ್ದು, ಇವುಗಳಲ್ಲಿ 3021 ಅಧಿಕೃತವಾಗಿವೆ ಎಂದು ಕೊಳಚೆ ಅಭಿವೃದ್ಧಿ ಮಂಡಳಿ ಘೋಷಣೆ ಮಾಡಿದೆ, ರಾಜ್ಯದ 6 ಕೋಟಿ ಜನರಲ್ಲಿ ಒಂದು ಕೋಟಿ ಮಂದಿ ಸ್ಲಂಗಳಲ್ಲಿಯೇ ವಾಸಿಸುತ್ತಿದ್ದು ಅವರ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಈ ಬಾರಿಯ ಬಜೆಟ್‌ನಲ್ಲಿಯೂ ಹೆಚ್ಚಿನ ಆದ್ಯತೆ ನೀಡದೇ ಇರುವುದು ನೋವಿನ ಸಂಗತಿ ಎಂದರು.ನಗರಸಭೆ ಸದಸ್ಯ ಸದಾನಂದ ಪಿಳ್ಳಿ, ವೆಂಕಟೇಶ ಕಟ್ಟಿಮನಿ, ಐಸಾಕ್ ಅರುಳಸೆಲ್ವ ಮಾತನಾಡಿದರು. ಅಶೋಕ ಮ್ಯಾಗೇರಿ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಕಾಂತ ಖಟವಟೆ, ದುರಗಪ್ಪ ನವಲಗುಂದ, ಉಮಾದೇವಿ ಕಾತರಕಿ, ಅಶೋಕ ಕುಡತಿನ್ನಿ ಮತ್ತಿತರರು ಹಾಜರಿದ್ದರು. ವೆಂಕಟೇಶಯ್ಯ ಹಾಗೂ ಸಂಗಡಿಗರು ಕ್ರಾಂತಿಗೀತೆ ಹಾಡಿದರು. ಇಮ್ತಿಯಾಜ್ ಮಾನ್ವಿ ಸ್ವಾಗತಿಸಿದರು. ಮಂಜುಳಾ ವೆಂಕಟೇಶಯ್ಯ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.