ಸ್ಲಿಮ್ ರಶ್ಮಿ

7

ಸ್ಲಿಮ್ ರಶ್ಮಿ

Published:
Updated:
ಸ್ಲಿಮ್ ರಶ್ಮಿ

`ಅನು~ ಚಿತ್ರದ ನಂತರ ಬಹುತೇಕ ಚಿತ್ರರಂಗದಿಂದಲೇ ಕಣ್ಮರೆಯಾಗಿದ್ದ ದುನಿಯಾ ರಶ್ಮಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆ ತಯಾರಾಗಿದ್ದ `ಅರುಂಧತಿ~ ಬಿಡುಗಡೆಯ ಹಾದಿಯಲ್ಲಿದೆ. ಅವರ ಪಾಲಿಗೆ ಇದು ವಿಭಿನ್ನ ಪಾತ್ರ ನೀಡಿದ ಚಿತ್ರ. `ದುನಿಯಾ~, `ಕೃಷ್ಣ~, `ಅಕ್ಕತಂಗಿ~ ಚಿತ್ರಗಳಿಗಿಂತ ರಶ್ಮಿ ಪ್ರತಿಭೆಯನ್ನು ಬೇರೆಯದೇ ರೀತಿಯಲ್ಲಿ ಮಂಡಿಸಿದ ಚಿತ್ರ.ಇಲ್ಲಿ ಅವರದು ದ್ವಂದ್ವ ಪಾತ್ರ. ನಾಯಕಿ ಕನಸಿನಲ್ಲಿ ಕಂಡ ಕೊಲೆಗಳು ಬೆಳಿಗ್ಗೆ ನಿಜವಾಗಿರುತ್ತವೆ. ಸ್ವಂತ ತಂಗಿಯದೇ ಕೊಲೆ ನಡೆದು ಹೋಗಿರುತ್ತದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಇದು ತೆಲುಗಿನ `ಅರುಂಧತಿ~ಗಿಂತಲೂ ಭಿನ್ನ ಎನ್ನುತ್ತಾರೆ ರಶ್ಮಿ. ಸುಮಾರು ಹದಿನೈದು ದಿನಗಳ ಕಾಲ ನಡೆದ ಚಿತ್ರದ ಚಿತ್ರೀಕರಣ ಅವರ ಪಾಲಿಗೆ ಹೊಸ ಅನುಭವವನ್ನೇ ನೀಡಿತ್ತು. ಈಗ ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿರುವುದು ಅವರನ್ನು ತುದಿಗಾಲಲ್ಲಿ ನಿಲ್ಲಿಸಿದೆ.`ಅನು~ ಚಿತ್ರದ ಬಳಿಕ ಬಂದ ಅವಕಾಶಗಳನ್ನು ಅವರು ತಿರಸ್ಕರಿಸಿದರು. ಈ ನಿರ್ಧಾರಕ್ಕೆ ರಶ್ಮಿ ಅವರ ಬಳಿ ಎರಡು ಕಾರಣಗಳಿವೆ. ಮೊದಲನೆಯದು ತಮಗೆ ಸರಿಹೊಂದುವಂತಹ ಕತೆ ಸಿಗಲಿಲ್ಲ ಎಂಬುದು. ಇನ್ನೊಂದು ಅವರ ಓದು. ಚಿತ್ರರಂಗಕ್ಕೆ ಬಂದ ಮೇಲೆ ಅವರು ತಮ್ಮ ಪದವಿ ಪೂರ್ಣಗೊಳಿಸಿಕೊಳ್ಳಬೇಕಿತ್ತು. ಬಿ.ಕಾಂ ಸಲುವಾಗಿಯೇ ಒಂದಷ್ಟು ದಿನ ಅಭಿನಯದಿಂದ ದೂರ ಉಳಿಯಬೇಕಾಯಿತು.ಇದೆಲ್ಲಕ್ಕಿಂತಲೂ ಮುಖ್ಯ ಸುದ್ದಿ ಅವರು ಸಾಕಷ್ಟು ತೆಳುವಾಗಿರುವುದು! ಚಿತ್ರರಂಗದಿಂದ ದೂರ ಉಳಿದಿದ್ದ ಸಮಯದಲ್ಲಿ ತಮ್ಮ ದೇಹಸೌಂದರ್ಯವನ್ನು ಹೆಚ್ಚಿಸಿಕೊಳ್ಳುವತ್ತಲೇ ಅವರ ಗಮನ ಹರಿದಿತ್ತು. ಹಾಗೆಂದು ಡಯೆಟ್ ಮಾಡುವುದಕ್ಕೆ ಮನಸ್ಸಾಗಲಿಲ್ಲವಂತೆ. ಚೆನ್ನಾಗಿ ತಿನ್ನು, ಅಷ್ಟೇ ಚೆನ್ನಾಗಿ ವ್ಯಾಯಾಮ ಮಾಡು ಎಂಬುದು ಅವರ ನೀತಿಯಾಗಿತ್ತು. ಸ್ವಲ್ಪ ದಿನ ಪಾನಕ ಕುಡಿದು ಜಿಮ್‌ಗೆ ಹೋಗಿ ಕಸರತ್ತು ಮಾಡಿದರು. ಆ ನಂತರ ಮನೆಯಲ್ಲೇ ವ್ಯಾಯಾಮ ನಡೆಯಿತು.ಸದ್ಯ ಅವರು `ಆಶಾಕಿರಣಗಳು~ ಮಕ್ಕಳ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಮಕ್ಕಳೊಂದಿಗೆ ನಟಿಸುವಾಗ ಮಕ್ಕಳಂತೆಯೇ ಆಗಿ ಬಿಡುವ ಖುಷಿ ಅವರ ಪಾಲಿಗೆ. ಸದ್ಯ ದಾವಣಗೆರೆ ಜಿಲ್ಲೆಯ ಬಸವಾಪಟ್ಟಣದಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. “ಮಕ್ಕಳನ್ನಷ್ಟೇ ಅಲ್ಲದೇ ದೊಡ್ಡವರನ್ನೂ ತಟ್ಟುವಂತಹ ಕತೆ `ಆಶಾಕಿರಣಗಳು~. ಮಕ್ಕಳ ಕರುಣಾಜನಕ ಕತೆಯನ್ನು ಚಿತ್ರದಲ್ಲಿ ಹಿಡಿದಿಡಲಾಗಿದೆ” ಎನ್ನುವ ರಶ್ಮಿ ಅವರಿಗೆ ಚಿತ್ರದಲ್ಲಿ ಶಿಕ್ಷಕಿಯ ಪಾತ್ರ. ಶಿಕ್ಷಕಿಯಾಗಿ ನಟಿಸಬೇಕು ಎಂಬುದು ಅವರ ಬಹುದೊಡ್ಡ ಆಸೆಯಾಗಿತ್ತಂತೆ. ಈಗ ಆ ಕನಸು ಈಡೇರಿದ ಸಂತಸ ಅವರದು.ರಶ್ಮಿಗೆ ಬ್ರೇಕ್ ನೀಡಲಿದೆ ಎಂದೇ ನಂಬಲಾಗಿರುವ `ಮುರಾರಿ~ ಚಿತ್ರ ಕೂಡ ಬಿಡುಗಡೆಯ ಹಾದಿಯಲ್ಲಿದೆ. ನಟ ಮುರಳಿ ಅವರೊಂದಿಗೆ ರಶ್ಮಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ತೆರೆಗೆ ಚಿತ್ರವನ್ನು ತರುವ ಸಂಬಂಧ ನಿರ್ಮಾಪಕರೊಂದಿಗೂ ಚರ್ಚಿಸಿದ್ದಾರೆ. ಅಲ್ಲದೆ ಅವರು `ಜನವರಿ ಒಂದು ಬಿಡುಗಡೆ~ ಚಿತ್ರಕ್ಕೆ ಕಾಲ್‌ಶೀಟ್ ನೀಡಿದ್ದಾರೆ. ಇನ್ನೂ ಎರಡು ಚಿತ್ರಗಳ ಕುರಿತು ಮಾತುಕತೆ ನಡೆಸಿದ್ದಾರೆ.ಮಲಯಾಳಂ ಚಿತ್ರಗಳಲ್ಲಿ ರಶ್ಮಿ ನಟಿಸುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ. `ಅವಕಾಶವೊಂದು ಅರಸಿ ಬಂದಿದ್ದು ನಿಜ. ಆದರೆ ಅದು ಕೈಗೂಡಲಿಲ್ಲ. ಆರು ತಿಂಗಳ ಹಿಂದೆ ಸತ್ಯ ಎಂಬುವವರ ತೆಲುಗು ಚಿತ್ರಕ್ಕೆ ಒಪ್ಪಿಕೊಂಡಿದ್ದೆ. ಇನ್ನಷ್ಟೇ ಅದು ಸೆಟ್ಟೇರಬೇಕಿದೆ. ಮುಂದಿನ ದಿನಗಳಲ್ಲಿ ತಮಿಳು ಚಿತ್ರರಂಗದತ್ತಲೂ ಗಮನಹರಿಸುವೆ~ ಎನ್ನುತ್ತಾರೆ ಅವರು.ರಶ್ಮಿ ಸಖತ್ ಖಡಕ್ ಎಂಬ ಮಾತು ಗಾಂಧಿನಗರದಲ್ಲಿ ಆಗಾಗ ಹರಿದಾಡುತ್ತದೆ. ಈ ಬಗ್ಗೆ ಕೇಳಿದಾಗ ಅವರದು ಜೋರು ನಗು. `ನನಗೆ ಕೊಬ್ಬು, ಅಹಂಕಾರ ಎಂದು ಮಾತನಾಡುವವರು ಇದ್ದಾರೆ. ಶಿಸ್ತಿದ್ದರೆ ಎಲ್ಲದಕ್ಕೂ ಬೆಲೆ ಇರುತ್ತದೆ ಎನ್ನುವುದು ನನ್ನ ಪಾಲಿಸಿ. ಬಲ್ಲವರಿಗೆ ಮಾತ್ರ ಗೊತ್ತು ನಾನು ಏನೆಂಬುದು. ಗಾಂಧಿನಗರ ಎಂದರೆ ಗಾಳಿಮಾತುಗಳ ಆಗರ. ಅದನ್ನೆಲ್ಲಾ ಯೋಚಿಸುವ ಅಗತ್ಯವಿಲ್ಲ~ ಎಂದು ಕಡ್ಡಿ ತುಂಡಾದಂಥ ಮಾತು ಅವರಿಂದ.ಸಿನಿಮಾ ಮಾಡುವುದಕ್ಕಿಂತ ಸುದ್ದಿ ಮಾಡುವುದರಲ್ಲಿಯೇ ರಶ್ಮಿ ತಲ್ಲೆನರಾಗಿರುತ್ತಾರೆ ಎಂಬುದು ಅವರ ಬಗೆಗಿನ ಮತ್ತೊಂದು ಆರೋಪ. ಇದಕ್ಕೆ ಅವರ ಪ್ರತಿಕ್ರಿಯೆ ಹೀಗಿದೆ:ನಾನಾಗಿಯೇ ಎಲ್ಲೂ ಸುದ್ದಿ ಮಾಡಿಲ್ಲ. ಆದರೆ ಚಿತ್ರರಂಗದ ಘಟನೆಗಳು ಸುದ್ದಿಗೆ ಇಂಬು ನೀಡುತ್ತವೆ. ಅದರಿಂದ ಪ್ರಚಾರ ಸಿಗುವುದಾದರೆ ನಾನೇಕೆ ಬೇಡ ಅನ್ನಲಿ?

ಓದು ಪೂರ್ಣಗೊಂಡ ಬಳಿಕ ಅವರ ಮನಸ್ಸನ್ನು ಪೂರ್ತಿ ತುಂಬಿಕೊಂಡಿರುವುದು ಚಿತ್ರರಂಗ. `ಇದೇ ನನ್ನ ಕ್ಷೇತ್ರ. ಸಾಧಿಸುವುದಿದ್ದರೆ ಇಲ್ಲಿಯೇ~ ಎಂಬ ದೃಢ ನಿರ್ಧಾರಕ್ಕೆ ಅವರು ಬಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry