ಸೋಮವಾರ, ಮೇ 23, 2022
27 °C
ಖಾಲಿ ಹುದ್ದೆ ಭರ್ತಿಗೆ ನಿರ್ಲಕ್ಷ್ಯ: ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ ಪುಸ್ತಕಗಳ ಕೊರತೆ

ಸ್ವಂತ ಕಟ್ಟಡವಿಲ್ಲದೆ ಸೊರಗಿದ ಗ್ರಂಥಾಲಯ

ಪ್ರಜಾವಾಣಿ ವಿಶೇಷ ವರದಿ/ ಎನ್. ರವಿ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜನರಿಗೆ ಜ್ಞಾನದ ಬೆಳಕು ನೀಡುವ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವೇ ಇಲ್ಲ. ಅಗತ್ಯ ಮೂಲ ಸೌಕರ್ಯ ಕೂಡ ಕಲ್ಪಿಸಿಲ್ಲ. ಇದರಿಂದ ಗ್ರಂಥಾಲಯಕ್ಕೆ ಬರುವ ಓದುಗರು ಸೌಲಭ್ಯ ಇಲ್ಲದೆ ವಂಚಿತರಾಗುತ್ತಿದ್ದಾರೆ. ಸೂಕ್ತ ಸವಲತ್ತು ಕಲ್ಪಿಸಲು ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮುಂದಾಗಿಲ್ಲ.2004ರ ವೇಳೆ ನಗರದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ತೆರೆಯಲಾಯಿತು. ಕಳೆದ 9 ವರ್ಷದಿಂದಲೂ ಸಾವಿರಾರು ಮಂದಿ ಗ್ರಂಥಾಲಯಕ್ಕೆ ಭೇಟಿ ನೀಡಿದ್ದಾರೆ. ಆದರೆ, ಸೌಲಭ್ಯ ಇಲ್ಲದಿರುವ ಪರಿಣಾಮ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾರೆ.ಇನ್ನೊಂದೆಡೆ ಈ ಗ್ರಂಥಾಲಯ ಸಿಬ್ಬಂದಿ ಕೊರತೆಯಿಂದ ನಲುಗಿದೆ. ಜಿಲ್ಲಾ ಗ್ರಂಥಾಲಯ ಅಧಿಕಾರಿ, ತಾಂತ್ರಿಕ ವಿಭಾಗಕ್ಕೆ 5 ಸಿಬ್ಬಂದಿ, 2 ಸಹಾಯಕಿಯರು, ಬೆರಳಚ್ಚುಗಾರ, ದ್ವಿತೀಯದರ್ಜೆ ಸಹಾಯಕ ಸೇರಿದಂತೆ ಒಟ್ಟು 15 ಹುದ್ದೆ ಮಂಜೂರಾಗಿವೆ. ಗ್ರಂಥಾಲಯಾಧಿಕಾರಿ ಸೇರಿದಂತೆ ಕೇವಲ 8 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮಕೈಗೊಂಡಿಲ್ಲ.ನಿತ್ಯವೂ ಗ್ರಂಥಾಲಯಕ್ಕೆ ಸುಮಾರು 500ಕ್ಕೂ ಹೆಚ್ಚು ಓದುಗರು ಬರುತ್ತಾರೆ. ಇವರಲ್ಲಿ ಯುವಕರೇ ಹೆಚ್ಚು. ವಿದ್ಯಾರ್ಥಿನಿಯರು ಗ್ರಂಥಾಲಯಕ್ಕೆ ಬರುವುದು ವಿರಳ. ಮಹಿಳೆಯರ ಸಂಖ್ಯೆಯೂ ಕಡಿಮೆ ಇದೆ. ಗ್ರಂಥಾಲಯದ ಮುಂಭಾಗದಲ್ಲಿಯೇ ಲಾರಿ ನಿಲ್ದಾಣವಿದೆ. ವಾಹನಗಳ ಸಂಚಾರವೂ ಹೆಚ್ಚಿದೆ. ಗ್ರಂಥಾಲಯ ಇರುವ ಸ್ಥಳ ಸುರಕ್ಷಿತವಾಗಿಲ್ಲ ಎನ್ನುವುದು ಬಹಳಷ್ಟು ಮಹಿಳೆಯರ ದೂರು.ಪ್ರಸ್ತುತ ಶಿಕ್ಷಣ ಇಲಾಖೆ ನೀಡಿರುವ ಕಟ್ಟಡದಲ್ಲಿ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಸುಮಾರು 1 ಲಕ್ಷದಷ್ಟು ಜನಸಂಖ್ಯೆಯಿದೆ. ಗ್ರಂಥಾಲಯದ ಪಕ್ಕದಲ್ಲಿಯೇ ಶಾಲಾ- ಕಾಲೇಜುಗಳಿವೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಬೇಕಿದ್ದ ಗ್ರಂಥಾಲಯ ಮಾತ್ರ ಸೌಲಭ್ಯದಿಂದ ವಂಚಿತವಾಗಿದೆ.ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲ್ಲೂಕು ಕೇಂದ್ರದಲ್ಲಿರುವ ಗ್ರಂಥಾಲಯಗಳು ಕೂಡ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ನಗರ ಸ್ಥಳೀಯ ಸಂಸ್ಥೆಗಳಿಂದ ಕ್ರೋಡೀಕರಿಸುವ ತೆರಿಗೆಯಲ್ಲಿ ಶೇ. 6ರಷ್ಟು ಹಣವನ್ನು ಆಯಾ ವ್ಯಾಪ್ತಿಯ ಗ್ರಂಥಾಲಯದ ಅಭಿವೃದ್ಧಿಗೆ ನೀಡಬೇಕಿದೆ. ಈ ತೆರಿಗೆ ಹಣ ಹಾಗೂ ನೋಂದಾಯಿತ ಸದಸ್ಯರು ನೀಡುವ ಹಣವನ್ನು ಗ್ರಂಥಾಲಯದ ನಿರ್ವಹಣೆ, ಅಭಿವೃದ್ಧಿಗೆ ಬಳಸಬೇಕು ಎನ್ನುವುದು ಸರ್ಕಾರದ ನಿಯಮಾವಳಿ. ಆದರೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮರ್ಪಕವಾಗಿ ತೆರಿಗೆ ವಸೂಲಾತಿ ನಡೆಯುತ್ತಿಲ್ಲ. ಸ್ಥಳೀಯ ಸಂಸ್ಥೆಗಳ ಈ ನೀತಿ ಗ್ರಂಥಾಲಯದ ಅಭಿವೃದ್ಧಿ ಮೇಲೂ ಪರಿಣಾಮ ಬೀರಿದೆ.`ರಾಜ್ಯ ಸಮಿತಿ ಆಯ್ಕೆ ಮಾಡಿದ ಪುಸ್ತಕಗಳು ಗ್ರಂಥಾಲಯಕ್ಕೆ ಬರುತ್ತವೆ. ಪ್ರಸ್ತುತ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ 15 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಒಟ್ಟು 2,503 ಸದಸ್ಯರು ಪುಸ್ತಕ ಎರವಲು ಪಡೆಯುತ್ತಿದ್ದಾರೆ. ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಸಂಬಂಧಿಸಿದ ಪುಸ್ತಕಗಳ ಸಂಖ್ಯೆ ಕಡಿಮೆಯಿದೆ' ಎನ್ನುತ್ತಾರೆ ಗ್ರಂಥಾಲಯ ಸಹಾಯಕಿ ಪ್ರಭಾವತಿ.`ಗ್ರಂಥಾಲಯದಲ್ಲಿ ಕಥೆ, ಕಾದಂಬರಿ, ಇತಿಹಾಸ ಆಧಾರಿತ ಪುಸ್ತಕ ಹೊರತುಪಡಿಸಿದರೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಹಕಾರಿಯಾಗುವಂತಹ ಮಾರ್ಗದರ್ಶಿ ಪುಸ್ತಕಗಳು ದೊರೆಯುವುದಿಲ್ಲ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪಠ್ಯಪುಸ್ತಕಗಳು ಕೂಡ ಇಲ್ಲ. ಇದರಿಂದ ತೊಂದರೆಯಾಗಿದೆ' ಎಂದು ವಿದ್ಯಾರ್ಥಿ ಮಹದೇವಪ್ರಸಾದ್ ಅಳಲು ತೋಡಿಕೊಂಡರು.`ಸ್ವಂತ ಕಟ್ಟಡ ನಿರ್ಮಿಸಲು ನಿವೇಶನಕ್ಕೆ ಹುಡುಕಾಟ'

`ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲಿರುವ ಸಾರ್ವಜನಿಕ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡ ಇಲ್ಲ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಂಸದ ಆರ್. ಧ್ರುವನಾರಾಯಣ ಹಾಗೂ ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ನಿವೇಶನ ಗುರುತಿಸಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದೆಂದು ಸಂಸದರು ಭರವಸೆ ನೀಡಿದ್ದಾರೆ' ಎಂದು ಮುಖ್ಯ ಗ್ರಂಥಾಲಯಾಧಿಕಾರಿ ಡಿ. ನಾಗವೇಣಿ `ಪ್ರಜಾವಾಣಿ'ಗೆ ತಿಳಿಸಿದರು.

`ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಹಂಚಿಕೆ ವೇಳೆ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಸೂಕ್ತ ನಿವೇಶನ ಮಂಜೂರು ಮಾಡಲಾಗುವುದು. ಈ ನಿವೇಶನ ಪಡೆಯಲು ಅಗತ್ಯವಿರುವ ಹಣ ಕ್ರೋಡೀಕರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ನಿವೇಶನ ಪಡೆದು ಸ್ವಂತ ಕಟ್ಟಡ ನಿರ್ಮಾಣ ಮಾಡುವ ಪ್ರಕ್ರಿಯೆ ನಡೆದಿದೆ' ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.