ಶನಿವಾರ, ನವೆಂಬರ್ 16, 2019
21 °C

ಸ್ವಂತ ಕಟ್ಟಡ ಇಲ್ಲದ ಅಂಗನವಾಡಿ!

Published:
Updated:

ಚನ್ನಗಿರಿ: ಇಲ್ಲಿನ ಟಿಪ್ಪುನಗರ ಮೊದಲನೇ ಕ್ರಾಸ್‌ನಲ್ಲಿ ಇರುವ 18ನೇ ನಂಬರಿನ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದೇ 13 ವರ್ಷಗಳಿಂದ ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಇಲ್ಲಿರುವ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರವನ್ನು ಒಮ್ಮೆ ನೋಡಿದರೆ ಹೇಗಪ್ಪ ಇಲ್ಲಿ ಮಕ್ಕಳನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಾರೆ ಎಂಬ ಆಶ್ಚರ್ಯವಾಗುವುದರ ಜತೆಗೆ ಕೇಂದ್ರದ ಹೊರಗಿನ ವಾತಾವರಣ ಗಮನಿಸಿದರೆ ಭಯ ಉಂಟಾಗುತ್ತದೆ.ಈ ಬಾಡಿಗೆ ಕಟ್ಟಡದ ಹೊರಗಡೆ ಮಕ್ಕಳು ಆಟವಾಡಲು ಮೈದಾನವಿರಲಿ, ಅವರು ಹೊರಗೆ ಬಂದು ಮೂತ್ರ ವಿಸರ್ಜನೆಗೆ ಹೋಗಲು ಭಯಪಡುವಂತಹ ವಾತಾವರಣ ಇದೆ. ಬೆಂಕಿ ಪೊಟ್ಟಣದಂತಹ ಸಣ್ಣ ಕೊಠಡಿ. ಈ ಕೊಠಡಿಯಲ್ಲಿಯೇ 14 ಮಕ್ಕಳು ಆಟ-ಪಾಠವಾಡುವ ಅನಿವಾರ್ಯತೆ ಇದೆ. ಜತೆಯಲ್ಲಿ ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳ ಸಂಗ್ರಹ ಕೂಡಾ ಈ ಕಿರಿದಾದ ಕೊಠಡಿಯಲ್ಲಿಯೇ ಮಾಡಲಾಗಿದೆ.ಅಂಗನವಾಡಿ ಕೇಂದ್ರದ ದಾಖಲಾತಿ ಪುಸ್ತಕಗಳ ರಾಶಿ ಒಂದು ಬದಿಯಲ್ಲಿ ಮಾಡಲಾಗಿದೆ. ಇಂತಹ ಸಮಸ್ಯೆ ಇದ್ದರೂ ಇದುವರೆಗೆ ಈ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ನೀಡಲು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮುಂದಾಗದೇ ಇರುವುದು ಇವರ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಇನ್ನು ಮುಂದಾದರೂ ಈ ದುಸ್ಥಿತಿಯಲ್ಲಿರುವ ಬಾಡಿಗೆ ಕೊಠಡಿಯಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಮಕ್ಕಳಿಗೆ ಅನುಕೂಲ ಮಾಡಿಕೊಡಲು ಸಂಬಂಧಪಟ್ಟ  ಇಲಾಖೆಯವರು ಗಮನ ಹರಿಸಬೇಕಾಗಿದೆ ಎನ್ನುತ್ತಾರೆ ಮನ್ಸೂರ್ ಬೇಗ್ ಮತ್ತು ಇರ್ಫಾನ್.

ಪ್ರತಿಕ್ರಿಯಿಸಿ (+)