ಸ್ವಚ್ಛತಾ ಆಂದೋಲನಕ್ಕೆ ನಗರಸಭೆ ಚಾಲನೆ

7

ಸ್ವಚ್ಛತಾ ಆಂದೋಲನಕ್ಕೆ ನಗರಸಭೆ ಚಾಲನೆ

Published:
Updated:

ಚಿಕ್ಕಮಗಳೂರು: ಪ್ರತಿನಿತ್ಯ ನಗರ ಸ್ವಚ್ಛತೆಗೆ ಪೌರಕಾರ್ಮಿಕರು ಹಿಡಿಯುತ್ತಿದ್ದ ಸಲಕರಣೆಗಳು ಇಂದು ಸಚಿವರು, ಅಧಿಕಾರಿಗಳು ಮತ್ತು ನೌಕರರ ಕೈಗೆ ಬಂದಿದ್ದವು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ತಮ್ಮ ಕಚೇರಿ ಆವರಣದಲ್ಲಿ ಸ್ವಚ್ಛತೆಗೆ ಮುಂದಾದರು.ಮಹಾತ್ಮ ಗಾಂಧಿ ಜನ್ಮ ದಿನಾಚರಣೆಯನ್ನು ಜಿಲ್ಲಾಡಳಿತ ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಮುಂದಾಯಿತು.ಜಿಲ್ಲಾಡಳಿತ ನಗರಸಭೆ ಸಹಯೋಗದೊಂದಿಗೆ ಇದೇ 2 ಮತ್ತು 3ರಂದು  ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನಕ್ಕೆ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಕಸ ಗುಡಿಸುವುದರೊಂದಿಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಿಂದ  ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಕಚೇರಿ ಮುಂದಿನ ರಸ್ತೆಯನ್ನು ಸ್ವಚ್ಛಗೊಳಿಸಿದರು.ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ಗಳನ್ನು ಹೆಕ್ಕಿ ಕಸದ ತೊಟ್ಟಿಗೆ ಎಸೆದರು. ಗುಡಿಸಿದ ಕಸವನ್ನು ಒಂದೆಡೆ ಸಂಗ್ರಹಿ ಸಿದರು. ರಸ್ತೆ ಬದಿ ಬೆಳೆದಿದ್ದ ಕಳೆಯನ್ನು ತೆಗೆ ದರು.  ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರು ಸಹ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ನಗರಸಭಾ ಸದಸ್ಯ ಪ್ರೇಂಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ರಾಜಪ್ಪ ಕೈಜೋಡಿಸಿದರು.

ಜಿಲ್ಲಾಧಿಕಾರಿ ಅಂಜನ್ ಕುಮಾರ್ ಮತ್ತು  ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಶಶಿಕುಮಾರ್, ನಗರಸಭೆ ಆಯುಕ್ತ ಪ್ರಭಾಕರ್ ಪೊರಕೆ ಹಿಡಿದು ತಮ್ಮ ಕಚೇರಿ ಸುತ್ತಮುತ್ತ ಸ್ವಚ್ಛತಾಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

 ಬಿಎಸ್‌ಪಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ, ಹಿರಿಯ ಕ್ರೀಡಾ ಪಟು ಪದ್ಮಾತಿಮ್ಮೇಗೌಡ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ನಗರ ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು.ನಂತರ ಉನ್ನತ ಶಿಕ್ಷಣ ಸಚಿವರು  ಗೃಹಮಂಡಳಿ ಬಡಾವಣೆಯಲ್ಲಿ ನೋಡೆಲ್ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಶ್ರಮದಾನದಲ್ಲಿ ಭಾಗವಹಿಸಿದ್ದರು. ನಗರಸಭಾ ವ್ಯಾಪ್ತಿಯ 35ವಾರ್ಡ್‌ಗಳಲ್ಲಿ ಇಬ್ಬರು ಜಿಲ್ಲಾ ಮಟ್ಟದ ಅಧಿಕಾರಿಗಳು, ನಗರಸಭೆ ನೌಕರರು ಮತ್ತು ಆ ಭಾಗದ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ, ಸಂಸ್ಥೆಗಳು, ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘದ ಮುಖಂಡರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು.ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು, ಎನ್.ಸಿ.ಸಿ. ವಿಭಾಗಗಳು, ವಿವಿಧ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಹಲವು ಸೇವಾ ಸಂಸ್ಥೆಗಳು, ನಾಗರಿಕರು ಎರಡು ದಿನಗಳ ಕಾಲ ನಡೆಯುವ ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡು, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಶ್ರಮಿಸಲಿದ್ದಾರೆ.ಸುಮಾರು 12ಗಂಟೆ ಮತ್ತು ಮಧ್ಯಾಹ್ನದ ವೇಳೆ ಬಂದ ಮಳೆ ಸ್ವಚ್ಛತಾ ಆಂದೋಲನಕ್ಕೆ ತುಸು ಅಡ್ಡಿಯನ್ನುಂಡು ಮಾಡಿತು. ಆಯಾ ವಾರ್ಡಿನ ನಗರಸಭಾ ಸದಸ್ಯರು ನೋಡೆಲ್ ಅಧಿಕಾರಿಗಳೊಂದಿಗೆ ಸ್ವಚ್ಚತಾ ಆಂದೋಲನಕ್ಕೆ ಸಹಕರಿಸಿದರು.ಸಚಿವ ಸಿ.ಟಿ.ರವಿ ಸುದ್ದಿಗಾರರೊಂದಿಗೆ ಮಾತನಾಡಿ, ಗಾಂಧಿ ಜಯಂತಿಯನ್ನು ಪ್ರೇರಣೆ ನೀಡುವ ದಿನವನ್ನಾಗಿ ಆಚರಿಸಲು ಜಿಲ್ಲಾಡಳಿತ ಯೋಜನೆ ಹಾಕಿಕೊಂಡಿದೆ. ಸೇವೆ ಬದುಕಿನ ಭಾಗವಾಗಬೇಕು. ವೃತ್ತಿ ಗೌರವ ಉಳಿಸಿಕೊಳ್ಳಬೇಕೆನ್ನುವ ಗಾಂಧೀಜಿ ಕನಸನ್ನು ಸಾಕಾರಗೊಳಿಸಬೇಕಾಗಿದೆ. ನಗರ ಸ್ವಚ್ಛತೆಗೆ ಜನತೆ ಸಹಕರಿಸಬೇಕೆಂದು ಮನವಿ ಮಾಡಿದರು.ಜಿಲ್ಲಾಧಿಕಾರಿ  ಅಂಜನ್‌ಕುಮಾರ್ ಮಾತನಾಡಿ, ಗಾಂಧೀಜಿ ಹುಟ್ಟುಹಬ್ಬವನ್ನು ಕೇವಲ ಆಚರಣೆಯನ್ನಾಗಿಸದೆ. ಅದರ ಬದಲಾಗಿ ಸ್ವಚ್ಛತೆಯೊಂದಿಗೆ ಆಚರಿಸಿದರೆ ಸೂಕ್ತ ಎಂಬ ಉದ್ದೇಶದಿಂದ  ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಸ್ವಚ್ಛಮತ್ತು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಜಿಲ್ಲಾಧಿಕಾರಿಗಳು ಎರಡು ದಿನ ಗಳ ಕಾಲ ಆಂದೋಲನಾವನ್ನು ಹಮ್ಮಿಕೊಂಡಿದ್ದು, ನಗರದ ನಾಗರಿಕರು, ಸರ್ಕಾರಿ ನೌಕರರು, ವಿವಿಧ ಸಂಘ, ಸಂಸ್ಥೆಗಳು, ವಿದ್ಯಾರ್ಥಿಗಳು  ಮೊದಲನೆಯ ದಿನ ತಮ್ಮನ್ನು ತೊಡಗಿಸಿಕೊಂಡರು. ವಾಹನಕ್ಕಾಗಿ ಪ್ರತಿಭಟನೆ

ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು, ವಿವಿಧ ಸಂಘ, ಸಂಸ್ಥೆಗಳ ಮುಖಂಡರು ವಿಜಯಪುರ ಮುಖ್ಯರಸ್ತೆ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸಿದ್ದರು. ಆದರೆ ಇದರಿಂದ ಸಂಚಾರ ನಿಯಮ ಉಲ್ಲಂಘನೆ ಮತ್ತು ಇತರ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂದು ಸಂಚಾರ ಪೊಲೀಸರು ವಾಹನಗಳನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಈ ವಿಷಯ ತಿಳಿದ ಸಾರ್ವಜನಿಕರು ಪೊಲೀಸರ ವಿರುದ್ಧ ಆಕ್ರೋಶಗೊಂಡರು.   ವಾಹನ ತಂದು ಕೊಡುವ ತನಕ ಜಾಗಬಿಟ್ಟು ಕದಲುವುದಿಲ್ಲ ಎಂದು  ಪಟ್ಟುಹಿಡಿದು ರಸ್ತೆ ತಡೆ ನಡೆಸಿದ್ದರಿಂದ ಸಂಚಾರಕ್ಕೆ ತೊಡಕು ಉಂಟಾಯಿತು. ನಗರ ವೃತ್ತ ನಿರೀಕ್ಷಕ  ಸ್ಥಳಕ್ಕೆ ಬಂದು ಪ್ರತಿಭಟನಾ ನಿರತರ ಸಮಸ್ಯೆ ಆಲಿಸಿದರು. ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಳಿಕ  ಸ್ವಚ್ಚತಾಕಾರ್ಯದಲ್ಲಿ ತೊಡಗಿಸಿಕೊಂಡಿದ್ದವರು ಪ್ರತಿಭಟನೆ ಸ್ಥಗಿತಗೊಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry