ಶುಕ್ರವಾರ, ಮೇ 14, 2021
35 °C

`ಸ್ವಚ್ಛತೆ ಇಲ್ಲದೇ ರೋಗ ನಿಯಂತ್ರಣ ಅಸಾಧ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ಮನುಷ್ಯ ತಾನು ಬದುಕುತ್ತಿರುವ ಪರಿಸರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳದ ಹೊರತು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಇಲ್ಲ ಎಂದು ತಹಶೀಲ್ದಾರ್ ಎಚ್.ವಿ. ವಿಜಯರಾಜು ಅಭಿಪ್ರಾಯಪಟ್ಟರು.ಪಟ್ಟಣದ ಪುರಸಭಾ ಕಲ್ಯಾಣ ಮಂಟಪದಲ್ಲಿ ಗುರುವಾರ ಆರೋಗ್ಯ ಇಲಾಖೆ ಹಾಗೂ ಪುರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಪುರಸಭಾ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಡೆಂಗೆ ನಿಯಂತ್ರಣ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ವಾತಾವರಣಗಳ ನಡುವೆ ಅನೇಕ ವ್ಯತ್ಯಾಸಗಳು ಇರುತ್ತವೆ. ಪಟ್ಟಣ ವಾಸಿಗಳು ಸ್ವಯಂ ಜಾಗೃತರಾಗಿ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕಾಗಿದೆ. ನಿರೀಕ್ಷೆಗೂ ಮೀರಿ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಪಟ್ಟಣಗಳ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.ತಾಲ್ಲೂಕು ಪಂಚಾಯ್ತಿ ಇಒ ತಿಪ್ಪೇಸ್ವಾಮಿ ಮಾತನಾಡಿ, ಅತಿಯಾದ ಆಧುನಿಕತೆಯ ಬದುಕಿನಲ್ಲಿ ಪರಿಸರ ಸಂರಕ್ಷಿಸುವ ಜವಾಬ್ಧಾರಿ ಕ್ಷೀಣಿಸುತ್ತಿದೆ. ಯಾವುದೇ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವ ಮುನ್ನ ಜನರು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ಮಾತನಾಡಿ, ಡೆಂಗೆ ಜ್ವರಕ್ಕೆ ಔಷಧಿ, ಮಾತ್ರೆಗಳು ಇಲ್ಲ ಎನ್ನುವುದನ್ನು ಜನತೆ ತಿಳಿಯಬೇಕು. 1740ರಲ್ಲಿ ಕಾಣಿಸಿಕೊಂಡ ಮಾರಕ ಡೆಂಗೆ ಜ್ವರ ಮಾನವನ ಜೀವನವನ್ನು ಸಾವಿನ ಅಂಚಿಗೆ ದೂಡುತ್ತದೆ ಎಂದು ವಿವರಿಸಿದರು.ಸೊಳ್ಳೆಗಳು ಮೊಟ್ಟೆಗಳನ್ನು ಇಟ್ಟು ವಂಶವೃದ್ಧಿ ಆಗದಂತೆ ಎಚ್ಚರಿಕೆ ವಹಿಸಬೇಕು. ಮನೆ ಸುತ್ತಲಿನ ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಐ. ಬಸವರಾಜು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.