ಸೋಮವಾರ, ನವೆಂಬರ್ 18, 2019
24 °C

ಸ್ವಚ್ಛ ಇಂಧನಕ್ಕೆ ಸಿರಿವಂತ ರಾಷ್ಟ್ರಗಳ ಸಬ್ಸಿಡಿ ಅಗತ್ಯ

Published:
Updated:

ನವದೆಹಲಿ (ಪಿಟಿಐ): ಹೆಚ್ಚು ಮಾಲಿನ್ಯ ಉಗುಳುವ ಮೂಲಕ ಜಾಗತಿಕ ತಾಪಮಾನಕ್ಕೆ ಪ್ರಮುಖ ಕಾರಣವಾಗಿರುವ ಸಿರಿವಂತ ರಾಷ್ಟ್ರಗಳು ಸ್ವಚ್ಛ ಇಂಧನ ಉತ್ಪಾದನೆಗಾಗಿ ಸಬ್ಸಿಡಿಯ ನೆರವು ನೀಡಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಪ್ರತಿಪಾದಿಸಿದರು.ಸ್ವಚ್ಛ ಇಂಧನ ಉತ್ಪಾದನೆ ಕುರಿತ ನಾಲ್ಕನೇ ಅಂತರರಾಷ್ಟ್ರೀಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದಕ್ಕೆ ಬೇಕಾದ ಹೂಡಿಕೆಯನ್ನು ಕೇವಲ ಮಾರುಕಟ್ಟೆ ಶಕ್ತಿಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಸದ್ಯ, ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಮಾತುಕತೆಯ ಪ್ರಗತಿ ತೀರಾ ಮಂದಗತಿಯಲ್ಲಿದೆ. ಹಾಗೆಯೇ, ಜಾಗತಿಕ ತಾಪಮಾನದಲ್ಲಿ ಸ್ಥಿರತೆ ಸಾಧಿಸುವ ಗುರಿಯ ಹತ್ತಿರಕ್ಕೂ ಸಾಗಲು ಸಾಧ್ಯವಾಗಿಲ್ಲ.

ಈಗಿನ ಪರಿಸ್ಥಿತಿಯಲ್ಲಿ, ಪರಿಸರ ಸ್ನೇಹಿ ಇಂಧನದ ಉತ್ಪಾದನೆಯ ಸಬ್ಸಿಡಿ ಅಥವಾ ಭತ್ಯೆಗಳ ಬೆಂಬಲವಿಲ್ಲದೆ ಲಾಭದಾಯಕವಾಗಲು ಸಾಧ್ಯವಿಲ್ಲ. ಈ ವಲಯದಲ್ಲಿ ಹೂಡಿಕೆ ಮಾಡುವವರಿಗೆ ಭತ್ಯೆ ಮತ್ತು ಪ್ರೋತ್ಸಾಹಧನಗಳ ನೀಡಿಕೆ ಮುಂದುವರಿಯುತ್ತದೆ ಎಂಬ ಖಾತ್ರಿ ನೀಡುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.ಸಾಂಪ್ರದಾಯಿಕ ಇಂಧನಗಳಿಗಿಂತ ಪರಿಸರ ಸ್ನೇಹಿ ಇಂಧನಗಳ ಉತ್ಪಾದನಾ ವೆಚ್ಚ ಅಧಿಕವಾಗಿದೆ. ಕಳೆದ ಎರಡು ವರ್ಷಗಳಲ್ಲಿ, ಸೌರ ಶಕ್ತಿ ಉತ್ಪಾದನಾ ವೆಚ್ಚ ಶೇ 50ರಷ್ಟು ಕಡಿಮೆಯಾಗಿದೆ. ಆದರೂ ಪಳೆಯುಳಿಕೆ ಇಂಧನದಿಂದ ಉತ್ಪಾದಿಸುವ ವಿದ್ಯುತ್‌ಗೆ ಹೋಲಿಸಿದರೆ ಅಧಿಕವೇ ಇದೆ ಎಂದು ಹೇಳಿದರು.

ಸಿರಿವಂತ ರಾಷ್ಟ್ರಗಳು ಸ್ವಚ್ಛ ಇಂಧನ ತಯಾರಿಕೆಗೆ ಬೇಕಾದ ಆರ್ಥಿಕ ಪ್ರೋತ್ಸಾಹ ಹಾಗೂ ಕಾರ್ಯಸಾಧುವಾದ ತಾಂತ್ರಿಕ ಪರಿಹಾರಗಳನ್ನು ನೀಡಬಹುದಾಗಿದೆ. ಕೈಗಾರಿಕಾ ರಾಷ್ಟ್ರಗಳ ತಲಾ ಆದಾಯ ಅಧಿಕವಿರುವುದರಿಂದ ಅವು ಹೊರೆ ಹೊರಲು ಸಮರ್ಥವಾಗಿವೆ ಎಂದು ಮನಮೋಹನ್ ಪ್ರತಿಪಾದಿಸಿದರು.

ಪ್ರತಿಕ್ರಿಯಿಸಿ (+)