ಭಾನುವಾರ, ನವೆಂಬರ್ 17, 2019
29 °C

ಸ್ವಚ್ಛ ಮನಸ್ಸು ಶಕ್ತಿಶಾಲಿ

Published:
Updated:

ದೇವರು ನಮಗೆ ನೀಡಿದ ಅಂತಃಶಕ್ತಿಯನ್ನು ಬಳಸಿಕೊಳ್ಳೋಣ. ಶ್ರೇಷ್ಠ ಸಂತ ವಿವೇಕಾನಂದರು ಹೇಳಿದಂತೆ `ನಿಮ್ಮಳಗೆ ಅನಂತವಾದ ಶಕ್ತಿ ಇರುತ್ತದೆ.~ ಮಾದಕದ್ರವ್ಯ ವ್ಯಸನಿಯಾಗಿದ್ದ ಮ್ಯಾಕ್ ಕೊನೆಗೂ ಆ ಶಕ್ತಿಯನ್ನು ಕಂಡುಕೊಂಡ. ಹಿಂದೊಮ್ಮೆ ಆರೋಗ್ಯವಂತನಾಗಿದ್ದ ಮ್ಯಾಕ್ ಬೀದಿಯಲ್ಲಿ ಬದುಕಲು ಆರಂಭಿಸಿದ್ದ. ಆತ ಮದ್ಯವ್ಯಸನಿಯಾಗಿದ್ದ. ಮಾದಕ ವಸ್ತುಗಳ ಚಟಕ್ಕೆ ಬಿದ್ದಿದ್ದ. ಮಾದಕ ವಸ್ತುಗಳಿಗೆ ಸಂಬಂಧಿಸಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರಿಂದ ಹಲವು ವರ್ಷ ಜೈಲಿನಲ್ಲಿ ಬಂಧಿಯಾಗಿದ್ದ. ಇಂತಹ ವ್ಯಕ್ತಿ ಬೀದಿಯಲ್ಲಿ ಬಿದ್ದು ಸಾಯಬಹುದು ಎಂದು ನಿಮಗೆ ಅನಿಸಿರಬಹುದು. ಆದರೆ, ಹಾಗಾಗಲಿಲ್ಲ. ನಾವು ಸ್ವಲ್ಪವೇ ಎಚ್ಚೆತ್ತುಕೊಂಡರೂ ಸಾಕು, ಆ ದೈವೀ ಶಕ್ತಿ, ನಮ್ಮದೇ ಉನ್ನತಾತ್ಮ ಹಾಗಾಗಲು ಬಿಡುವುದಿಲ್ಲ.

ಮಾದಕ ದ್ರವ್ಯಗಳ ಚಟದಿಂದ ಬಿಡಿಸುವ `ನಾರ್ಕೋಟಿಕ್ಸ್ ಅನಾನಿಮಸ್~ ಕಾರ್ಯಕ್ರಮಕ್ಕೆ ಆತ ಸೇರಿಕೊಂಡ. ತನ್ನ ಮನಸ್ಸನ್ನು ಆವರಿಸಿದ್ದ ಮಬ್ಬನ್ನು  ತೊಡೆದುಹಾಕಿದ. ಮದ್ಯ ಸೇವಿಸುವ ಬದಲು ಆಧ್ಯಾತ್ಮಿಕ ಪುಸ್ತಕಗಳ ಜೇನು ಸವಿದ. ಹೆಚ್ಚೆಚ್ಚು ಪುಸ್ತಕಗಳನ್ನು ಓದುತ್ತಾ ಹೋದಂತೆ ಸತ್ಯವನ್ನು ಕಂಡುಕೊಂಡ. ವೇದಾಂತದಲ್ಲಿ ಶಾಂತಿ ಕಂಡುಕೊಂಡ. ಅದು ಆತನನ್ನು ಸಂಪೂರ್ಣವಾಗಿ ಆವರಿಸಿತು. ಮದ್ಯ, ಮಾದಕ ವಸ್ತುಗಳ ಚಟವನ್ನು ಕೂಡಲೇ ತೊಡೆಯುವುದು ಸಾಧ್ಯವಾಗದೇ ಹೋದರೂ ದೈವಿಕ ಪ್ರಭೆಯಲ್ಲಿ ಬದುಕಬೇಕು ಎಂಬ ಹಂಬಲ, ಆಧ್ಯಾತ್ಮಿಕ ಸತ್ಯದಿಂದಾಗಿ ಆತನ ಮನಸ್ಸು ಬಲಶಾಲಿಯಾಯಿತು.

40ರ ಹರೆಯದಲ್ಲಿ ಮ್ಯಾಕ್ ಮಾದಕ ವಸ್ತುಗಳಿಂದ ಮುಕ್ತಿ ಪಡೆದ. ಆತ ಒರಟಾಗಿ ಮಾತನಾಡುತ್ತಿದ್ದ. ಅವನ ಮೈಮೇಲೆ ವಿಚಿತ್ರ ಹಚ್ಚೆಗಳಿದ್ದವು. ತನಗೆ ಎಲ್ಲವೂ ತಿಳಿದಿದೆ ಎಂಬಂತೆ ಮಾತನಾಡುವ ಆತನ ಶೈಲಿಯಿಂದಾಗಿ ಜನರಿಗೆ ಕಿರಿಕಿರಿಯಾಗುತ್ತಿತ್ತು. ಆದರೆ, ಯಾವುದೇ ಚಟವಿಲ್ಲದೇ ಇತರರನ್ನು ಕೀಳಾಗಿ ಕಾಣುವವರಿಗೆ ಮ್ಯಾಕ್ `ದೇವರು ಕಳುಹಿಸಿದ ಸಂದೇಶ~ದಂತೆ ಕಾಣುತ್ತಿದ್ದ.

ನೀವು ಮ್ಯಾಕ್‌ನನ್ನು ಭೇಟಿಯಾದರೆ ತನಗೆ ಎಲ್ಲವೂ ಗೊತ್ತು ಎಂಬ ಅವನ ಧೋರಣೆ, ಎಲ್ಲವೂ ತಕ್ಷಣಕ್ಕೆ ಸಿಗಬೇಕು ಎಂಬ ಕಾತರ, ಅದು ಸಿಗುವವರೆಗೆ ಆತ ಪೀಡಿಸುವ ರೀತಿಯಿಂದ ನಿಮಗೆ ಸಿಟ್ಟು ಬರಬಹುದು. ಅಹಂಗೆ ಧಕ್ಕೆಯಾಗಬಹುದು. ಆದರೆ, ನೀವು ವಿನಮ್ರತೆಯನ್ನು ಕಲಿಯಬೇಕಾದರೆ ಅಹಂಗೆ ಧಕ್ಕೆಯಾಗುತ್ತದೆ. ನಿಮ್ಮಲ್ಲಿ ಇಲ್ಲದ ದೈವಿಕ ಗುಣಗಳು ಮ್ಯಾಕ್‌ನಲ್ಲಿ ಇವೆ ಎಂಬುದನ್ನು ಗುರುತಿಸಿದಾಗ ನೀವು ವಿನಮ್ರತೆಯ ಪಾಠ ಕಲಿತಿರುತ್ತೀರಿ. ನೀವು ಮ್ಯಾಕ್ ಬಗ್ಗೆ ನಿರಾಸೆ ಹೊಂದಿ ಕೈಬಿಡಬಹುದು. ಆದರೆ, ಆತ ಎಂದಿಗೂ ನಿಮ್ಮ ಬಗ್ಗೆ ಭರವಸೆ ಕಳೆದುಕೊಳ್ಳಲಾರ. ಇದನ್ನು ಅರಿತಾಗ ನಿಮ್ಮ ಅಹಂ ಚೂರಾಗಿರಬಹುದು. ಆದರೆ, ಚೂರಾಗಿರುವುದು ನಿಮ್ಮ ಅಹಂ ಮಾತ್ರ. ನೀವು ಗಟ್ಟಿಯಾಗಿಯೇ ಇದ್ದೀರಿ.

ಹಾಗಾದರೇ ಮ್ಯಾಕ್‌ನ ಆ ಶಕ್ತಿಗಳೇನು?

ಶಿಸ್ತು: ಚಟಕ್ಕೆ ಬಿದ್ದಾಗ ತನಗೆ ಬೇಕಾದ ಮದ್ಯ, ಮಾದಕ ವಸ್ತು ಪಡೆಯುವಲ್ಲಿ ಆತ ಶಿಸ್ತು ಪಾಲಿಸುತ್ತಿದ್ದ. ಚಟದಿಂದ ಬಿಡಿಸಿಕೊಳ್ಳುವಾಗ ಆರೋಗ್ಯಕರ ವಿಧಾನಗಳಿಗೆ ಮೊರೆ ಹೋದ. ಕಟ್ಟುನಿಟ್ಟಾಗಿ ಆ ವಸ್ತುಗಳನ್ನು ದೂರ ಇಡುತ್ತಿದ್ದ.

ನಂಬಿಕೆ: ಆ ದೇವರು ಎಂದಿಗೂ ತನ್ನ ಕೈಬಿಡುವುದಿಲ್ಲ ಎಂಬ ನಂಬಿಕೆಯಿಂದ ಆತ ಚಟ ಬಿಡಲು ಸಾಧ್ಯವಾಯಿತು. ಮದ್ಯ, ಮಾದಕವಸ್ತು ಚಟದಿಂದ ಮುಕ್ತಿ ಪಡೆಯುವಾಗ ಆತ ಅಲ್ಲಲ್ಲಿ ಎಡವಿರಬಹುದು. ಆ ಹಳೆಯ ಹಾದಿಗೆ ಅಕಸ್ಮಾತ್ತಾಗಿ ಮರಳಿರಬಹುದು. ಆದರೆ, ಚಟವನ್ನು ಬಿಡಲು ಸಾಧ್ಯ ಎಂಬ ಅಚಲ ನಂಬಿಕೆ ಆತನನ್ನು ಮುನ್ನಡೆಸಿತು.

ಕರುಣೆ: ಚಟಕ್ಕೆ ಬಿದ್ದವರು ಕಷ್ಟ ಅನುಭವಿಸುತ್ತಿರುವಾಗ ಅವರ ತೊಂದರೆ ಮ್ಯಾಕ್‌ಗೆ ಅರ್ಥವಾಗುತ್ತಿತ್ತು. ದೊಡ್ಡ ದೊಡ್ಡ ಸಲಹೆ ನೀಡದೇ ತನ್ನದೇ ಉದಾಹರಣೆಯ ಮೂಲಕ ಆತ ಅವರಿಗೆ ವ್ಯಸನಗಳಿಂದ ಮುಕ್ತಿ ಪಡೆಯಬಹುದು ಎಂಬ ಸಂದೇಶ ನೀಡುತ್ತಿದ್ದ. `ನಿಮ್ಮಂತೆ ನಾನು ಸಹ ಕತ್ತಲಿನಲ್ಲಿ ನಡೆಯುತ್ತಿದ್ದೆ. ನನ್ನ ಮೋಂಬತ್ತಿ ಈಗ ಉರಿಯುತ್ತಿದೆ. ನನ್ನ ದೀಪದಿಂದ ನೀವೂ ಸಹ ದೀಪ ಹಚ್ಚಿಕೊಳ್ಳಬಹುದು~ ಎಂದು ಮೌನವಾಗಿಯೇ ಆತ ಸಂದೇಶ ಸಾರುತ್ತಿದ್ದ.

ಶಿಸ್ತು, ನಂಬಿಕೆ ಹಾಗೂ ಕರುಣೆಯ ಮೂಲಕ ನಾವು ಹಲವು ಯುದ್ಧಗಳನ್ನು ಗೆಲ್ಲಬಹುದು.

ಯಾವುದೇ ಬಲಹೀನತೆಗೆ ಪಕ್ಕಾಗದಂತೆ ಇರುವ ಮಹತ್ವವನ್ನು ಮೊದಲು ಅರಿಯಬೇಕು. ಹಾಸ್ಯದ ಹೆಸರಿನಲ್ಲಿ ಬೇರೆಯವರ ಬಗ್ಗೆ ಲಘು ಟೀಕೆ ಮಾಡುವುದು, ವ್ಯಂಗ್ಯವಾಡುವುದು ಸಲ್ಲ. ಇಂತಹ ಅರಿವು ಬೆಳೆಸಿಕೊಳ್ಳಲು ಸಾಕಷ್ಟು ಶಕ್ತಿ ಬೇಕಾಗುತ್ತದೆ.

ಬೇರೆಯವರ ಬಗ್ಗೆ ಟೀಕೆ ಮಾಡದೇ ಇತರರತ್ತ ಕರುಣೆ, ದಯೆ ತೋರುವುದು ಶಕ್ತಿ.

ದ್ವೇಷಿಸದೇ ಇರುವುದು ಶಕ್ತಿ.

ಕೆಟ್ಟ ಸುದ್ದಿಯನ್ನು ಸಮಚಿತ್ತದಿಂದ ಸ್ವೀಕರಿಸುವುದು ಸಹ ಶಕ್ತಿ.

ಯಶಸ್ಸು ಅಥವಾ ವೈಫಲ್ಯ ಇಲ್ಲ, ಕೇವಲ ಪ್ರತಿಕ್ರಿಯೆ ಇರುತ್ತದೆ ಎಂದು ಯೋಚಿಸುವುದು ಸಹ ಶಕ್ತಿ.

ಯಾವುದೇ ಸಂದರ್ಭದಲ್ಲಿ ನೀವು ಇತರರಿಗಿಂತ ಮೇಲುಗೈ ಸಾಧಿಸಿದ್ದೀರಿ ಎಂದು ಅಂದುಕೊಳ್ಳದೇ ಇರುವುದು ಶಕ್ತಿ.

ಯಾರ ಕುರಿತಾದರೂ ನಿರ್ಣಯಿಸುವಂತೆ ಮಾತನಾಡದೇ ಇರುವುದು, ಟೀಕಿಸದೇ ಇರುವುದು ಶಕ್ತಿ.

ಆಲಸಿಯಾಗದೇ ಇರುವುದು, ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು ಸಹ ಶಕ್ತಿ.

ಕ್ರಮಬದ್ಧ ಆಲೋಚನೆಗಳ ಮೂಲಕ ಮನಸ್ಸಿನ ಸ್ನಾಯುಗಳನ್ನು ಗಟ್ಟಿಗೊಳಿಸಿಕೊಳ್ಳಿ. ಅರ್ಥಾತ್ ನಿಮ್ಮ ಆಲೋಚನೆಗಳು ಸಂತಸ ತರುವಂತೆ ಇರಲಿ. ದೈವಿಕವಾದ ಬಿಳಿಯ ಬೆಳಕು ನಿಮ್ಮನ್ನು ಆವರಿಸಿದೆ ಅಂದುಕೊಳ್ಳಿ. ಅನವಶ್ಯಕ ಅನುಮಾನಗಳು, ಸಿನಿಕತನದಿಂದ ಕೂಡಿದ ವ್ಯರ್ಥ ಚಿಂತನೆಗಳು ನಿಮ್ಮನ್ನು ಮುತ್ತದಿರಲಿ. ಸ್ವಚ್ಛ ಮನಸ್ಸು ಶಕ್ತಿಶಾಲಿಯಾಗಿರುತ್ತದೆ.

ನಿಮ್ಮ ಮನಸ್ಸು ಸ್ವಚ್ಛಗೊಳಿಸಿಕೊಳ್ಳಲು ಈ ಸೂತ್ರ ಅನುಸರಿಸಿ.

ದೇಹಾರೋಗ್ಯ ಹದಗೆಟ್ಟಾಗ `ದೇವರೇ ಸದ್ಯ ನನಗೆ ನೋವಾಗುತ್ತಿಲ್ಲ~ ಅಂದುಕೊಳ್ಳಿ.

ದೇಹಕ್ಕೆ ನೋವಾಗುತ್ತಿದ್ದಾಗ, `ನಾನು ಅದೃಷ್ಟವಂತ ಬದುಕಿ ಉಳಿದಿರುವೆ. ನನ್ನವರೆಲ್ಲ ನೋಡಿಕೊಳ್ಳುತ್ತಿದ್ದಾರೆ~ ಎಂದು ಸಂತಸ ಪಡಿ.

ಜೀವನದಲ್ಲಿ ನೀವು ಅಂದುಕೊಂಡಂತೆ ಆಗದಿದ್ದಾಗ ನಿಮ್ಮ ಬದುಕಿನಲ್ಲಿ ಜರುಗಿದ ಉತ್ತಮ ಸಂಗತಿಗಳನ್ನು ನೆನಪಿಸಿಕೊಳ್ಳಿ.

ಪತಿ/ ಪತ್ನಿ ವಿಚ್ಛೇದನ ನೀಡಿದಾಗ ಆ ಕಹಿ ಭಾವದಿಂದ ಹೊರಬರಲು, ಹಿಂದೆ ಜರುಗಿದ್ದ ಸಂತಸಮಯ ಕ್ಷಣಗಳಲ್ಲಿ ಮತ್ತೆ ಮುಳುಗಿ. ನಿಮ್ಮ ಸುಂದರ ನೆನಪುಗಳನ್ನು ಯಾವುದು ಸಹ ಹಾಳು ಮಾಡಲು ಸಾಧ್ಯವಿಲ್ಲ.

ಕಷ್ಟದ ಸಮಯದಲ್ಲಿ ಚಿಂತೆ ಬಿಟ್ಟು, ಪ್ರಾರ್ಥನೆಯಲ್ಲಿ ತೊಡಗಿಕೊಳ್ಳಿ.

ನಮ್ಮ ಕಷ್ಟಗಳನ್ನು ನಿವಾರಿಸಿ, ಮುಕ್ತಿ ನೀಡಲು ಏಸು ಭೂಮಿಗೆ ಬಂದಿದ್ದ ಅನ್ನುತ್ತಾರೆ. ನಾನು ಮಾಡಲು ಸಾಧ್ಯವಾದರೆ, ನೀವು ಸಹ ಮಾಡಲು ಸಾಧ್ಯ ಎಂದು ತೋರಿಸಿಕೊಡಲು ಮ್ಯಾಕ್ ಭೂಮಿಗೆ ಬಂದಿದ್ದಾನೆ.

ಪ್ರತಿಕ್ರಿಯಿಸಿ (+)