ಸ್ವತಂತ್ರ ತನಿಖೆ ಆಗಲಿ

7

ಸ್ವತಂತ್ರ ತನಿಖೆ ಆಗಲಿ

Published:
Updated:

ಭ್ರಷ್ಟಾಚಾರ ತಪ್ಪಿಸಲೆಂದು ರೂಪಿಸಿದ ‘ವರ್ಕ್‌ಕೋಡ್’ ವ್ಯವಸ್ಥೆಯಲ್ಲಿಯೇ ಅವ್ಯವಹಾರ ನಡೆಸಿದ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಹಣಕಾಸು ವಿಭಾಗದ ಅಧಿಕಾರಿಗಳು ಪಾಲಿಕೆಯ ಬೊಕ್ಕಸಕ್ಕೆ ಕನ್ನ ಕೊರೆದಿರುವುದು ಆಂತರಿಕ ಲೆಕ್ಕ ಪರಿಶೋಧನೆ ವರದಿಯಲ್ಲಿ ಸ್ಪಷ್ಟವಾಗಿದೆ.ಒಂದು ವರ್ಷದ (2009-2010) ಲೆಕ್ಕಪತ್ರ ಪರಿಶೀಲನೆಯಲ್ಲಿ ಎರಡು ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಅಕ್ರಮವಾಗಿ ಹಣ ಪಾವತಿಯಾಗಿರುವುದನ್ನು ಸರ್ಕಾರ ಲಘುವಾಗಿ ಪರಿಗಣಿಸಬಾರದು.ಅದಕ್ಕೂ ಹಿಂದಿನ ವರ್ಷ ಒಂದೂವರೆ ಸಾವಿರ ಕೋಟಿ ರೂಪಾಯಿ ಮೊತ್ತದ ಅಕ್ರಮ ಕಾಮಗಾರಿಗಳಿಗೆ ಹಣ ಪಾವತಿಯಾಗಿದ್ದು ಪತ್ತೆಯಾಗಿದ್ದರೂ ಈ ಕುರಿತಾಗಿ ಯಾವ ಕ್ರಮವೂ ಇಲ್ಲದಿರುವುದನ್ನು ಗಮನಿಸಿದರೆ ಈ ಹಗರಣದಲ್ಲಿ ಸರ್ಕಾರದಲ್ಲಿರುವ ತುಂಬ ಪ್ರಭಾವಿಗಳು ಭಾಗಿಯಾಗಿರುವಂತೆ ತೋರುತ್ತದೆ.ಈ ಅವಧಿಯಲ್ಲಿ ಪಾಲಿಕೆಯ ಆಡಳಿತ ನೇರವಾಗಿ ಸರ್ಕಾರದ ನಿಯಂತ್ರಣದಲ್ಲಿಯೇ ಇತ್ತು. ಸಾರ್ವಜನಿಕರಿಗೆ ಮೂಲಸೌಕರ್ಯಗಳನ್ನು ಒದಗಿಸುವ ಯಾವುದೇ ಕಾಮಗಾರಿಗಳು ಆಡಳಿತಾತ್ಮಕ ಕ್ರಮಗಳಿಂದ ವಿಳಂಬವಾಗಬಾರದು; ನಡೆದ ಕೆಲಸಗಳಿಗೆ ಹಣ ಪಾವತಿಯೂ ತಡವಾಗಬಾರದು ಎಂಬ ಆಶಯದ ಮೇಲೆ ರೂಪಿಸಿದ್ದ ವರ್ಕ್ ಕೋಡ್ ಪದ್ಧತಿಯನ್ನು ವ್ಯವಸ್ಥಿತವಾಗಿ ದುರುಪಯೋಗಪಡಿಸಿಕೊಂಡ  ಈ ಕ್ರಮ ಆಡಳಿತ ನಿರ್ವಹಣೆಯ ವ್ಯವಸ್ಥೆಗೆ ಸವಾಲು. ಈ ಅವ್ಯವಹಾರ ಅಂತರಿಕ ಲೆಕ್ಕಪರಿಶೋಧನೆಯ ಹಂತದಲ್ಲಿ ಬಯಲಾಗಿರುವಷ್ಟಕ್ಕೆ ಮುಕ್ತಾಯವಾಗಕೂಡದು. ಇಂಥ ಅಕ್ರಮ ವ್ಯವಹಾರಗಳಿಗೆ ತಡೆ ಹಾಕುವ ಪ್ರತಿಕ್ರಮಗಳನ್ನು ಕೈಗೊಳ್ಳದಿದ್ದರೆ ಜನತೆ ಸ್ಥಳೀಯಾಡಳಿತದ ಮೇಲೆ ವಿಶ್ವಾಸ ಉಳಿಸಿಕೊಳ್ಳಲಾರರು.ಪಾಲಿಕೆ ಆಡಳಿತದಲ್ಲಿ ಹಣಕಾಸು ವಿಭಾಗ ಬಿಲ್ ಪಾವತಿಯಲ್ಲಿ ಪ್ರಮುಖ ಪಾತ್ರ ವಹಿಸುವಂಥದ್ದು. ಬಿಲ್ಲುಗಳನ್ನು ಅನುಮೋದಿಸಿ ಹಣ ಪಾವತಿಸುವುದಕ್ಕೆ ಚುನಾಯಿತ ಮಂಡಲಿ ಇಲ್ಲವೇ ಆಡಳಿತಾಧಿಕಾರಿಯ  ಮಂಜೂರಾತಿ ಅವಶ್ಯಕ. ಮಂಜೂರಾತಿ ಪಡೆದ ಮೊತ್ತದ ಹತ್ತರಷ್ಟು ಹಣ ಪಾವತಿಯಾಗಿರುವಂಥ ಪ್ರಕರಣಗಳು ಪತ್ತೆಯಾಗಿರುವುದನ್ನು ನೋಡಿದರೆ ಇಲ್ಲಿ ಎಲ್ಲ ನಿಯಮಗಳನ್ನೂ ಉಲ್ಲಂಘಿಸಿ ಭ್ರಷ್ಟಾಚಾರ ಎಸಗಿರುವುದು ಸ್ಪಷ್ಟ.ಸರ್ಕಾರದಲ್ಲಿ ಪ್ರಭಾವ ಇದ್ದವರೂ, ಅಧಿಕಾರಿಗಳೂ, ಗುತ್ತಿಗೆದಾರರೂ ಅಕ್ರಮವಾಗಿ ಒಂದಾಗಿ ಸಂಚು ನಡೆಸದಿದ್ದರೆ ಈ ಪ್ರಮಾಣದ ಅವ್ಯವಹಾರ ನಡೆಸುವುದು ಸುಲಭವಲ್ಲ. ಸರ್ಕಾರದಲ್ಲಿ ರಕ್ಷಣೆಯ ಭರವಸೆ  ಇಲ್ಲದಿದ್ದಲ್ಲಿ ಅಧಿಕಾರಿಗಳೂ ಇಂಥ ದುಸ್ಸಾಹಸಕ್ಕೆ ಇಳಿಯಲಾರರು. ಈಗ ಬಯಲಿಗೆ ಬಂದಿರುವ  ಬೃಹತ್ ಪ್ರಮಾಣದ ಅವ್ಯವಹಾರವನ್ನು ಪಾಲಿಕೆಯ ಮಟ್ಟದಲ್ಲಿಯೇ ತನಿಖೆ ಮಾಡಿದರೆ ಇಡೀ ಹಗರಣವೇ ಮುಚ್ಚಿಹೋಗುವ  ಸಾಧ್ಯತೆ ಇದೆ.ಕೋಟ್ಯಂತರ ರೂಪಾಯಿ ಅವ್ಯವಹಾರದ ಈ ಪ್ರಕರಣವನ್ನು ಸರ್ಕಾರ ಕೂಡಲೆ ಸ್ವತಂತ್ರವಾದ ತನಿಖೆಗೆ ಒಳಪಡಿಸಬೇಕು. ಸಿಐಡಿ ಇಲ್ಲವೇ ಲೋಕಾಯುಕ್ತರಿಂದ ತನಿಖೆಗೆ ಆದೇಶ ನಡೆಸುವುದರಿಂದ ಈ ಹಗರಣದ ಆರೋಪಿಗಳನ್ನು ಪತ್ತೆ ಮಾಡುವುದು ಸಾಧ್ಯ. ಆಡಳಿತ ವ್ಯವಸ್ಥೆಗೆ ಸವಾಲು ಹಾಕುವಂತೆ ಕೆಲವು ವರ್ಷಗಳಿಂದ ನಡೆದು ಬಂದಂತಿರುವ ಈ ಅಕ್ರಮ ವ್ಯವಹಾರದ ಹಿಂದೆ ಇರುವ ಪ್ರಭಾವಿಗಳನ್ನು ಕಾನೂನು ವ್ಯಾಪ್ತಿಗೆ ತರುವ ದಿಟ್ಟತನವನ್ನು ಸರ್ಕಾರ ಪ್ರದರ್ಶಿಸಬೇಕು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry