ಭಾನುವಾರ, ಮೇ 9, 2021
25 °C

ಸ್ವಯಂಕೃತ ಮುಜುಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಪೊಲೀಸ್ ಇಲಾಖೆ ಮುಖ್ಯಸ್ಥರ ನೇಮಕದಲ್ಲಿ ಹೈಕೋರ್ಟ್ ಟೀಕೆಗೆ ಒಳಗಾಗಿ ತೀವ್ರ ಮುಜುಗರ ಅನುಭವಿಸಬೇಕಾಗಿ ಬಂದಿರುವುದಕ್ಕೆ ರಾಜ್ಯ ಸರ್ಕಾರದ ವಿವೇಚನಾರಹಿತ ನಿರ್ಧಾರವೇ ಕಾರಣ.ಪೊಲೀಸ್‌ನಂತಹ ಸೂಕ್ಷ್ಮ ಇಲಾಖೆಯ ಮುಖ್ಯಸ್ಥರ ಹುದ್ದೆಗೆ ನೇಮಕ ಮಾಡಿಕೊಳ್ಳುವಾಗ ವಹಿಸಬೇಕಾದ ಎಚ್ಚರವನ್ನು ವಹಿಸಲಿಲ್ಲವೆಂದೇ ರಾಜ್ಯ ಸರ್ಕಾರದ ನಿರ್ಧಾರ, ಮೊದಲು ಕೇಂದ್ರ ಆಡಳಿತ ನ್ಯಾಯಮಂಡಲಿಯಲ್ಲಿ (ಸಿಎಟಿ) ರದ್ದಾಯಿತು. ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಹೋಗಿ ಅಲ್ಲಿಯೂ ಸರ್ಕಾರಕ್ಕೆ ಮುಖಭಂಗವಾಯಿತು.ಪೊಲೀಸ್ ಮಹಾನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಿಕೊಳ್ಳುವಾಗ ಅರ್ಹತೆಯನ್ನು ಮಾನದಂಡವಾಗಿ ಪರಿಗಣಿಸುವುದಕ್ಕಿಂತ, ಬೇಕಾದ ವ್ಯಕ್ತಿಯನ್ನು ಆ ಸ್ಥಾನಕ್ಕೆ ತರಬೇಕು ಎಂಬ ಹಟವನ್ನು ಸರ್ಕಾರ ನೇಮಕ ಪ್ರಕ್ರಿಯೆಯ ಪ್ರತಿ ಹಂತದಲ್ಲಿಯೂ ಪ್ರದರ್ಶಿಸಿತು.ಈ ನೇಮಕಕ್ಕೆ ಮೊದಲು ಸರ್ಕಾರ, ಹಂಗಾಮಿ ನೆಲೆಯಲ್ಲಿ ನೇಮಿಸಿದ ಅಧಿಕಾರಿಗೆ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಬರುವ ಅರ್ಹತೆ ಇರಲಿಲ್ಲ ಎಂದು ಕೇಂದ್ರ ಲೋಕಸೇವಾ ಆಯೋಗವು ಅಭಿಪ್ರಾಯಪಟ್ಟಿದ್ದರೂ ರಾಜ್ಯ ಸರ್ಕಾರ, ಮುಂದಿನ ಆಯ್ಕೆಯ ಬಗ್ಗೆ ಎಚ್ಚರ ವಹಿಸಲಿಲ್ಲ.

 

ಮಹಾನಿರ್ದೇಶಕ ಹುದ್ದೆ, ಪೊಲೀಸ್ ಪಡೆಯ ನೈತಿಕ ಸ್ಥೈರ್ಯ ಮತ್ತು ಕರ್ತವ್ಯಪರತೆಯನ್ನು ಹೆಚ್ಚಿಸಿ ಕಾನೂನು ವ್ಯವಸ್ಥೆಯ ಬಗ್ಗೆ ರಾಜ್ಯದ ಜನತೆಯಲ್ಲಿ ವಿಶ್ವಾಸ ಮೂಡಿಸಬೇಕು ಎಂಬುದಕ್ಕಿಂತ ತನ್ನ ಆಣತಿ ಮತ್ತು ಆಶಯಕ್ಕೆ ಅನುಗುಣವಾಗಿ ಪೊಲೀಸ್ ಪಡೆಯನ್ನು ಬಳಸಿಕೊಳ್ಳುವಂತಿರಬೇಕು ಎಂದು ಸರ್ಕಾರ ನಿರೀಕ್ಷಿಸಿದ್ದೇ ಈ ಪರಿಸ್ಥಿತಿಗೆ ಕಾರಣ. ಈ ಬಗೆಯ ರಹಸ್ಯ ಕಾರ್ಯಸೂಚಿಯನ್ನು ಸರ್ಕಾರ ಹೊಂದಿದ್ದರೆ ಇಂಥ ಮುಜುಗರವನ್ನು ಎದುರಿಸಬೇಕಾಗುತ್ತದೆ.ಹೈಕೋರ್ಟ್ ಆದೇಶದಂತೆ ಅಬ್ದುಲ್ ರೆಹಮಾನ್ ಇನ್ಫಂಟ್ ಅವರನ್ನು ಸದ್ಯಕ್ಕೆ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಹಂಗಾಮಿ ನೆಲೆಯಲ್ಲಿ ನೇಮಕ ಮಾಡಿದ್ದರೂ ರಾಜ್ಯ ಸರ್ಕಾರ, ಶಂಕರ ಬಿದರಿ ಅವರನ್ನು ನೇಮಿಸಿದ ತನ್ನ ಹಿಂದಿನ ನಿರ್ಧಾರದ ಬಗ್ಗೆ ಹಠಮಾರಿ ಧೋರಣೆಯನ್ನು ಬಿಟ್ಟಿಲ್ಲ.ಹೈಕೋರ್ಟ್ ತೀರ್ಪಿನ ಪ್ರತಿ ಬಂದ ನಂತರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಮಾತನ್ನು ಮುಖ್ಯಮಂತ್ರಿ ಅವರೇ ಹೇಳಿದ್ದಾರೆ. ಹೆಚ್ಚು ಅರ್ಹರಾಗಿದ್ದರೂ ಪೊಲೀಸ್ ಇಲಾಖೆ ಮುಖ್ಯಸ್ಥರ ಹುದ್ದೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಯ ನೇಮಕವನ್ನು ಇಷ್ಟಪಡದ ಸರ್ಕಾರ, ಅರ್ಹರಾದ ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ ಕಳುಹಿಸುವಾಗ ತನ್ನ ಆಯ್ಕೆಯ ಶಂಕರ ಬಿದರಿ ಅವರಿಗೆ ಸಂಬಂಧಿಸಿದ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ವರದಿಯಲ್ಲಿನ ಅಂಶಗಳನ್ನು ಕಳುಹಿಸದೆ ಮರೆಮಾಚಿದ್ದರಲ್ಲಿಯೇ ಪಕ್ಷಪಾತ ವರ್ತನೆ ಸ್ಪಷ್ಟವಾಗಿದೆ.

 

ರಾಜ್ಯಗಳ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ನೇಮಕ ಸಂಬಂಧದಲ್ಲಿ (ಪ್ರಕಾಶ್‌ಸಿಂಗ್ ಪ್ರಕರಣ) ಸುಪ್ರೀಂ ಕೋರ್ಟ್ ನೀಡಿದ ಸೂಚನೆಯಲ್ಲಿ ಅಂಥ ವರಿಷ್ಠ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಗುರುತಿಸುವಲ್ಲಿ ರಾಜಕೀಯ ಉದ್ದೇಶದ ತೀರ್ಮಾನ ಕೈಗೊಳ್ಳಬಾರದು ಎಂಬ ಆಶಯ ಇದ್ದುದನ್ನು ಅರ್ಥ ಮಾಡಿಕೊಂಡು ಅರ್ಹತೆಗಷ್ಟೇ ಮನ್ನಣೆ ನೀಡಿದ್ದರೆ ಈ ಮುಜುಗರದ ಸ್ಥಿತಿ ರಾಜ್ಯ ಸರ್ಕಾರಕ್ಕೆ ಬರುತ್ತಿರಲಿಲ್ಲ.ಪೊಲೀಸ್ ಮುಖ್ಯಸ್ಥರ ಹುದ್ದೆಯನ್ನು ಜಾತಿ ರಾಜಕೀಯ ಲಾಭದ ನೇಮಕವಾಗಿ ಪರಿಗಣಿಸಿದ ಪರಿಣಾಮ ಇಡೀ ಪೊಲೀಸ್ ವ್ಯವಸ್ಥೆಯ ನೈತಿಕ ಸ್ಥೈರ್ಯವೂ ಕುಸಿಯುವಂತಾಗಿದೆ. ವ್ಯಕ್ತಿಗತ ಪ್ರತಿಷ್ಠೆಗಾಗಿ ಪೊಲೀಸ್ ಪಡೆಯ ಹಿತವನ್ನು ಕಡೆಗಣಿಸುವುದು ಬೇಕಾಗಿತ್ತೇ? 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.