ಸ್ವಯಂಚಾಲಿತ ಬಸ್ ವಿವರ ಘೋಷಣೆ

7

ಸ್ವಯಂಚಾಲಿತ ಬಸ್ ವಿವರ ಘೋಷಣೆ

Published:
Updated:

ಈಶಾನ್ಯ ಸಾರಿಗೆಯಲ್ಲಿ ಹೊಸ ತಂತ್ರಜ್ಞಾನಗುಲ್ಬರ್ಗ: ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ಅನೇಕ ಕಡೆಗಳಲ್ಲಿ ಬಸ್ ಹೊರಡುವ ಬಗ್ಗೆ ಧ್ವನಿವರ್ಧಕಗಳ ಮೂಲಕ ಘೋಷಣೆ ಮಾಡುವ ವ್ಯವಸ್ಥೆ ಇದೆ. ಇದೇ ಮೊದಲ ಬಾರಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಎಸ್‌ಆರ್‌ಟಿಸಿ)ಯಲ್ಲಿ `ರೇಡಿಯೊ ಫ್ರಿಕ್ವೆನ್ವಿ ಐಡೆಂಟಿಫಿಕೇಷನ್-ಆರ್‌ಎಫ್‌ಐಡಿ~ ಮೂಲಕ  ಘಟಕದಿಂದ ಬಸ್ ಹೊರಡುವ ಬಗ್ಗೆ ಸ್ವಯಂಚಾಲಿತವಾಗಿ ಘೋಷಣೆಯಾಗುವ ತಂತ್ರಜ್ಞಾನ ಅಳವಡಿಸಲಾಗಿದೆ.ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.ಪ್ಲಾಟ್‌ಫಾರ್ಮ್‌ನಲ್ಲಿ ಬಸ್ ನಿಲ್ಲಿಸಿದ ಬಳಿಕ ಚಾಲಕರು ತಮ್ಮ ನೀಡಲಾದ `ಆರ್‌ಎಫ್‌ಐಡಿ ಕಾರ್ಡ್~ಅನ್ನು ಕಂಟ್ರೋಲ್ ರೂಮ್‌ಗೆ ನೀಡುವರು. ಈ ಕಾರ್ಡ್ ಅನ್ನು ಕಂಟ್ರೋಲ್ ರೂಮ್‌ನ ಕಂಪ್ಯೂಟರ್‌ಗೆ ಜೋಡಿಸಿದ ತಕ್ಷಣ ಪ್ರತಿ ನಿಮಿಷಕ್ಕೊಂದು ಬಾರಿಯಂತೆ ಐದು ಸಲ ಬಸ್ ಸಂಖ್ಯೆ, ಪ್ಲಾಟ್‌ಫಾರಂ ಸಂಖ್ಯೆ ಹಾಗೂ ಹೊರಡುವ ಊರಿನ ಕುರಿತು ವಿವರಗಳನ್ನು ಘೋಷಣೆ ಮಾಡಲಾರಂಭಿಸುತ್ತದೆ. ಗುಲ್ಬರ್ಗ ಕೇಂದ್ರೀಯ ಬಸ್ ನಿಲ್ದಾಣದ ಮೂಲೆ ಮೂಲೆಗೂ ಅಳವಡಿಸಲಾದ ಎಲ್‌ಸಿಡಿ ಟಿವಿಗಳಲ್ಲಿಯೂ ಈ ಬಗ್ಗೆ ಏಕಕಾಲಕ್ಕೆ ವಿವರ ಪ್ರದರ್ಶನವಾಗುತ್ತದೆ ಎಂದು ತಿಳಿಸಿದರು.ಪುಣೆಯ `ವೃತ್ತಿ ಸೊಲ್ಯುಷನ್ಸ್~ ಕಂಪೆನಿಯು ಈ ತಂತ್ರಜ್ಞಾನ ಒದಗಿಸಿದೆ. ಇನ್ನು ಮುಂದೆ ಬಸ್ ನಿಯಂತ್ರಣ     ಚಾರ್ಟ್ ಬರೆಯುವ ಬದಲಾಗಿ ಕಂಪ್ಯೂಟರ್ ಮೂಲಕವೆ ಆರ್‌ಎಫ್‌ಐಡಿ ತಂತ್ರಜ್ಞಾನದಿಂದ ಬಸ್ ವಿವರ ದಾಖಲಿಸಲು ಸಾಧ್ಯವಾಗಲಿದೆ. ವಿಳಂಬವಾಗಿ ಚಲಿಸುವ ಬಸ್‌ಗಳ ಬಗ್ಗೆ ಸುಲಭವಾಗಿ ಮಾಹಿತಿ ಪಡೆದು ಪರಿಹಾರ ಕಂಡುಹಿಡಿಯಲು ಅನುಕೂಲವಾಗುತ್ತದೆ. ಅಲ್ಲದೆ ಪ್ರಯಾಣಿಕರು ನಿಲ್ದಾಣದ ಯಾವುದೇ ಮೂಲೆಯಲ್ಲಿದ್ದರೂ ಬಸ್ ಹೊರಡುವ ಬಗ್ಗೆ ಘೋಷಣೆ ಹಾಗೂ ಪ್ರದರ್ಶನದ ಮೂಲಕ ಮಾಹಿತಿ ಲಭ್ಯವಾಗುವುದರಿಂದ ಯಾವುದೇ ತಾಪತ್ರಯ ಅನುಭವಿಸುವ ಪ್ರಸಂಗ ಎದುರಾಗುವುದಿಲ್ಲ ಎಂದರು.ಎಸ್‌ಎಂಎಸ್ ಸೇವೆ: ಪ್ರಯಾಣಿಕರು ತಾವು ಹೊರಡುವ ಮಾರ್ಗದ ಬಸ್ ವೇಳಾಪಟ್ಟಿಯನ್ನೂ ಮೊಬೈಲ್ ಮೂಲಕವೇ ತಿಳಿದುಕೊಳ್ಳುವ ತಂತ್ರಜ್ಞಾನವನ್ನೂ `ಎನ್‌ಇಕೆಎಸ್‌ಆರ್‌ಟಿಸಿ~ ಅಳವಡಿಸಿಕೊಂಡಿದೆ.(get><fromstation><tostation><M(M-morning, A-after noon, E -evening, N-night) ಎಲ್ಲ ಶಬ್ದಗಳ ನಡುವೆ ಸ್ಥಳ ಬಿಡಬೇಕು. ಈ ಸಂದೇಶವನ್ನು 54646ಗೆ ಕಳುಹಿಸಿದರೆ,  ಮಾಹಿತಿ ಲಭ್ಯವಾಗುತ್ತದೆ. ಬಿಎಸ್‌ಎನ್‌ಎಲ್ ಬಳಕೆದಾರರಿಗೆ ರೂ 1 ಮತ್ತು ಇತರೆ ಬಳಕೆದಾರರಿಗೆ ಪ್ರತಿ ಎಸ್‌ಎಂಎಸ್‌ಗೆ ರೂ 3 ಶುಲ್ಕ ನಿಗದಿ ಮಾಡಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry