ಮಂಗಳವಾರ, ಜನವರಿ 21, 2020
18 °C

ಸ್ವಯಂಸೇವೆ: ಉಪಚಾರ, ಅತಿಥಿ ಸತ್ಕಾರ ಬಲು ಜೋರು...

ಪ್ರಜಾವಾಣಿ ವಾರ್ತೆ/ ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

ಸ್ವಯಂಸೇವೆ: ಉಪಚಾರ, ಅತಿಥಿ ಸತ್ಕಾರ ಬಲು ಜೋರು...

ಮೂಡುಬಿದಿರೆ: ಸಾರ್ ನೀವು ಎಲ್ಲಿಗೆ ಹೋಗ­ಬೇಕು, ಇಲ್ಲಿ ನೋಡಿ ಇದು ರತ್ನಾಕರ  ವರ್ಣಿ ವೇದಿಕೆ. ಅಗೋ ಅದು ಪಂಜೆ ಮಂಗೇಶರಾಯ ವೇದಿಕೆ.. ಇಲ್ಲಿ ಬನ್ನಿ, ತಿಂಡಿ ತಿಂದಿರಾ..–ಮೂಡುಬಿದಿರೆಯ ಆಳ್ವಾಸ್‌ ವಿಶ್ವ ನುಡಿಸಿರಿ ಸಮ್ಮೇಳನದಲ್ಲಿ ಸ್ವಯಂ ಸೇವಕರು ಶುಕ್ರವಾರ ಉಪಚರಿಸುತ್ತಿದ್ದ ಪರಿ ಇದು. ಎತ್ತ ನೋಡಿದರತ್ತ ವಿದ್ಯಾರ್ಥಿಗಳ ದಂಡು, ಕೊರಳಲ್ಲಿ ‘ಸ್ವಯಂ ಸೇವಕರು’ ಎಂಬ ಪಟ್ಟಿಯನ್ನು ಧರಿಸಿ ಅತಿಥಿ­ಗಳನ್ನು ಉಪಚರಿಸುತ್ತಿದ್ದು, ಸಮ್ಮೇಳನದಲ್ಲಿ ಅತಿಥಿಗಳಿಗೆ ಯಾವ ಕೊರತೆಯೂ ಬರದಂತೆ ವಿದ್ಯಾರ್ಥಿಗಳು ನೋಡಿಕೊಳ್ಳುತ್ತಿದ್ದರು.ವಿದ್ಯಾಗಿರಿಯ ಹೆಬ್ಬಾಗಿಲಿನಿಂದ ಪ್ರತಿಯೊಂದು ವೇದಿಕೆಯಲ್ಲೂ ಸ್ವಯಂ ಸೇವಕರ ದಂಡು ಇತ್ತು. ಹೊರಗಡೆಯಿಂದ ಬಂದ ಅತಿಥಿಗಳಿಗೆ ದಾರಿ ತೋರಿ­ಸುವುದು. ವಿದ್ಯಾರ್ಥಿಗಳನ್ನು ಸರತಿ ಸಾಲಿ­ನಲ್ಲಿ ಕರೆತರುವುದು. ವಿವಿಧ ವೇದಿಕೆಗಳಲ್ಲಿ ನಡೆ­ಯುವ ಕಾರ್ಯಕ್ರಮಗಳ ಮಾಹಿತಿ ನೀಡಿ ಅತಿಥಿ­ಗಳಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ಸ್ವಯಂ ಸೇವಕರು ಮಾಡುತ್ತಿದ್ದರು.ವಿವಿಧ ಕಾರ್ಯಕ್ರಮಗಳ ಮಾಹಿತಿ, ವೇದಿಕೆ­ಗಳು, ಊಟದ ವ್ಯವಸ್ಥೆ, ಆತಿಥಿ ಸತ್ಕಾರದಲ್ಲಿ ವಿದ್ಯಾರ್ಥಿಗಳು ಎತ್ತಿದ ಕೈ. ಇದಕ್ಕಾಗಿ 400 ಎನ್‌ಸಿಸಿ ವಿದ್ಯಾರ್ಥಿಗಳು, ಮೂರು ಸಾವಿರ ಎನ್ಎಸ್ಎಸ್ ವಿದ್ಯಾರ್ಥಿಗಳು ಅಲ್ಲದೇ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾ­ಸಕರು ಅತಿಥಿ ಸತ್ಕಾರದಲ್ಲಿ ತೊಡಗಿಸಿ­ಕೊಂಡಿದ್ದಾರೆ.‘ಸಮ್ಮೇಳನಕ್ಕೆ ಬಂದ ಅತಿಥಿಗಳಿಗೆ ಮಾಹಿತಿ ನೀಡುವುದು, ಅವರಿಗೆ ದಾರಿ ತೋರಿಸುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ. ಬೆಳಿಗ್ಗೆ 9ರಿಂದ ರಾತ್ರಿ 12ರ ತನಕ ನಾವು ಸೇವೆ ಮಾಡುತ್ತೇವೆ’ ಎನ್ನುತ್ತಾರೆ ನೇತೃತ್ವ ವಹಿಸಿರುವ ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್, ಆರ್‌ಡಿ ಕೆಡೆಟ್‌ ದೀಪ್ತಿ ವಸಂತ್.ಸುಮಾರು 35 ಕಾಲೇಜುಗಳ 3ಸಾವಿರ ಎನ್ಎಸ್ಎಸ್ ವಿದ್ಯಾರ್ಥಿಗಳು ಊಟ, ವಸತಿ, ವೇದಿಕೆ ನಿರ್ಮಾಣಕ್ಕೆ ಸಹಾಯ ಮಾಡುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಫುಡ್ ಕಮಿಟಿ ಸದಸ್ಯರು ಅತಿಥಿಗಳಿಗೆ ಊಟ, ತಿಂಡಿ ಬಡಿಸುವುದು. ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು. ಅತಿಥಿಗಳು ವೇದಿಕೆಗೆ ಹೋಗಲು ಸಹಾಯ ಮಾಡುವುದು. ಬ್ಯಾಡ್ಜ್ ಕಟ್ಟುವ ಕೆಲಸ ನಿರ್ವಹಿಸುತ್ತಿದ್ದಾರೆ. ಆಳ್ವಾಸ್ ಕಾಲೇಜಿನ ಎನ್‌ಎಸ್ಎಸ್ ಅಧಿಕಾರಿಗಳಾದ ಚಂದ್ರಶೇಖರ್‌ ಗೌಡ, ಪ್ರಶಾಂತ್ ನೇತೃತ್ವ ವಹಿಸಿದ್ದಾರೆ.ಮಾಧ್ಯಮ ಕೇಂದ್ರ: ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಅತಿಥಿ ಸತ್ಕಾರ­ದಲ್ಲಿ ಯಾರಿಗೂ ಕಡಿಮೆ ಇರಲಿಲ್ಲ. ಪತ್ರಕರ್ತರ ಹಾಗೂ ವಿದ್ಯಾರ್ಥಿಗಳ ನೋಂದಣಿ ಮಾಡಿ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದರು.ಅಲ್ಲದೇ 9 ವೇದಿಕೆಗಳಲ್ಲಿ ನಡೆಯುವ ಕಾರ್ಯಕ್ರಮದ ವರದಿ ಹಾಗೂ ಚಿತ್ರಗಳನ್ನು ಆಳ್ವಾಸ್ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುತ್ತಿದ್ದು, ಅಲ್ಲಿಂದಲೂ ಮಾಹಿತಿ ಪಡೆದುಕೊಳ್ಳಬಹುದು.ಆಳ್ವಾಸ್ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಚೆಂಗಪ್ಪ, ಅಭಿಜಿತ್, ದೇಶಪಾಂಡೆ, ಬಿ.ಎನ್.ಸುಬ್ರಹ್ಮಣ್ಯ ಹಾಗೂ ಮೌಲ್ಯ­ಜೀವನ್‌ರಾಂ ನೇತೃತ್ವದಲ್ಲಿ ಕೋರ್ ಕಮಿಟಿ ರಚಿಸಿದ್ದು, ಅವರು ಕಾರ್ಯಕ್ರಮಗಳ ನಿರ್ವಹಣೆ ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)