ಮಂಗಳವಾರ, ಜೂನ್ 15, 2021
21 °C

ಸ್ವಯಂ ಸೇವಕಿಯರಿಂದ ಪ್ರತಿಭಟನೆ: ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ದೇವದಾಸಿಯರ ಪುನರ್ವಸತಿಗಾಗಿನ ಸ್ವಯಂ ಸೇವಕಿಯರಿಗೆ ನೀಡುವ ಗೌರವ ಧನವನ್ನು ಹೆಚ್ಚಿಸಬೇಕು ಎಂಬುದೂ ಒಳಗೊಂಡಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ದೇವದಾಸಿ ಪುನರ್ವಸತಿ ಸ್ವಯಂ ಸೇವಕಿಯರ ಸಂಘದ ಬಳ್ಳಾರಿ ಜಿಲ್ಲಾ ಘಟಕದ ಸದಸ್ಯೆಯರು ನಗರದಲ್ಲಿ ಸೋಮವಾರ  ಪ್ರತಿಭಟನೆ ನಡೆಸಿದರು.ಸ್ಥಳೀಯ ಮೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತೆಯರು ಬಳಿಕ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿಯಾಗಿರುವ ದೇವದಾಸಿ ಮಹಿಳೆಯರಿಗೆ ಸ್ವಾಭಿಮಾನ, ಚೈತನ್ಯ ತುಂಬುವುದಲ್ಲದೆ ಅವರ ಏಳ್ಗೆಗಾಗಿ ಹೋರಾಟ ನಡೆಸುತ್ತಿರುವ ಸ್ವಯಂ ಸೇವಕಿಯರು ಯೋಜನೆಯನ್ನು ದೇವದಾಸಿ ಮಹಿಳೆಯರಿಗೆ ತಲುಪಿಸಲು ಶ್ರಮಿಸುತ್ತಿದ್ದಾರೆ.ಪ್ರತಿ ಸ್ವಯಂ ಸೇವಕಿ 4ರಿಂದ 6 ಗ್ರಾಮಗಳಿಗೆ ತೆರಳಿ, ಕೆಲಸ ಮಾಡಬೇಕಾಗಿದ್ದು, ಸರ್ಕಾರ ನೀಡುತ್ತಿರುವ ಗೌರವಧನ ಸಾಕಾಗುತ್ತಿಲ್ಲ. ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ತೆರಳುವ ಪ್ರಯಾಣ ವೆಚ್ಚಕ್ಕೂ ಸರ್ಕಾರ ನೀಡುವ ಗೌರವಧನವನ್ನೇ ಅವಲಂಬಿಸಿರುವ ಸ್ವಯಂ ಸೇವಕಿಯರಿಗೆ ಕನಿಷ್ಠ ಮಾಸಿಕ ರೂ 3000 ಗೌರವಧನ ನೀಡಬೇಕು ಎಂದು ಕೋರಲಾಯಿತು.ಪ್ರತಿ ಸ್ವಯಂ ಸೇವಕಿಗೂ ಪ್ರತ್ಯೇಕವಾಗಿ ಪ್ರಯಾಣ ಭತ್ಯೆ ನೀಡಬೇಕು, ರೂ 1 ಲಕ್ಷದ ಸಬ್ಸಿಡಿ ಆಧಾರದ ಸಾಲ ಸೌಲಭ್ಯ ನೀಡಬೇಕು, ನಿವೇಶನ, ಮನೆ, ಬಿಪಿಎಲ್ ಕಾರ್ಡ್ ನೀಡಬೇಕು ಎಂಬ ಬೇಡಿಕೆ ಇರುವ ಮನವಿ ಸಲ್ಲಿಸಲಾಯಿತು.ರಾಜ್ಯ ದೇವದಾಸಿ ಪುನರ್ವಸತಿ ಸ್ವಯಂ ಸೇವಕಿಯರ ಸಂಘದ ಅಧ್ಯಕ್ಷೆ ಕೆ.ನಾಗರತ್ನಮ್ಮ, ಬಿ.ಮಾಳಮ್ಮ, ಸಲಹೆಗಾರ ಯು.ಬಸವರಾಜ್, ಬಿ.ಮಲ್ಲಮ್ಮ, ಶಾಂಭವಿ, ಸಾವಿತ್ರಿ, ಮಂಜುಳಾ, ರೇಣುಕಾ, ಚಂದ್ರಕುಮಾರಿ, ಯಂಕಮ್ಮ ಕೂಡ್ಲಿಗಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.