ಸ್ವಯಮಾಡಳಿತಕ್ಕೆ ಬೇಕು ಸ್ವಾತಂತ್ರ್ಯ...

7

ಸ್ವಯಮಾಡಳಿತಕ್ಕೆ ಬೇಕು ಸ್ವಾತಂತ್ರ್ಯ...

Published:
Updated:

ರಾಜ್ಯದ 238 ಪಟ್ಟಣಗಳ ಗಾತ್ರ ಮುಂದಿನ 15 ವರ್ಷಗಳಲ್ಲಿ ದುಪ್ಪಟ್ಟಾಗಲಿದೆ. ಆದರೂ ನಗರ ನಿರ್ವಹಣಾ ಯೋಜನೆ ಮಾತ್ರ ಇಲ್ಲಿ ಗಗನಕುಸುಮ.ಮೆಕ್ಸಿಕೊದ ಕ್ಯಾನ್‌ಕನ್‌ನಲ್ಲಿ ಈಚೆಗೆ ನಡೆದ ಜಾಗತಿಕ ಪರಿಸರ ಸಮಾವೇಶದಲ್ಲಿ ತಾನು ನಿರ್ವಹಿಸಿದ ಪಾತ್ರದ ಮೂಲಕ ಭಾರತ ಜಾಗತಿಕವಾಗಿ ಮಿಂಚಿಬಿಟ್ಟಿದೆ ನಿಜ. ಆದರೆ, ಪರಿಸರ ಸಂರಕ್ಷಣೆಯಂತಹ ಸೂಕ್ಷ್ಮ ವಿಚಾರಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಮ್ಮಂತಹ ದೇಶಗಳ ಹೊಣೆಗಾರಿಕೆಯೂ ಅಲ್ಲಿ ಸೂಕ್ಷ್ಮವಾಗಿ ಪ್ರಸ್ತಾಪವಾಗಿದೆ. ಇದು ನಮ್ಮ ಕಣ್ಣು ತೆರೆಸಬೇಕಾದ ವಿಚಾರ.ರಾಜ್ಯವು ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ  ಮುಖ್ಯವಾಗಿ ಗಮನದಲ್ಲಿ ಇಟ್ಟುಕೊಂಡು ತನ್ನ ಕೈಗಾರಿಕೆ, ಕೃಷಿ, ವಾಣಿಜ್ಯ, ಇಂಧನದಂತಹ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬೇಕಿದೆ. ನಗರಾಭಿವೃದ್ಧಿ ಎಂದರೆ ಈಗಲೂ ನಮ್ಮ ಪಟ್ಟಣಗಳಿಗೆ ಬೆಂಗಳೂರು ಯಾಕೆ ಮಾದರಿಯಾಗಬೇಕು? ಹವಾನಿಯಂತ್ರಿತ ರೆಸ್ಟೋರೆಂಟ್‌ಗಳು, ಮಾಲ್‌ಗಳು, ಸೂಪರ್‌ಮಾಲ್‌ಗಳಿಂದಷ್ಟೇ ನಗರ ನಿರ್ಮಾಣ ಸಾಧ್ಯವೇ? ಹೀಗಾಗಿ ನಾವಿಂದು ಇಂಗಾಲದ ಮಾಲಿನ್ಯ ಪರಿಸರದ ಮೇಲೆ ತೀವ್ರ ದುಷ್ಪರಿಣಾಮ ಬೀರದಂತಹ ರೀತಿಯಲ್ಲಿ ನಗರ ಯೋಜನೆಗಳನ್ನು ರೂಪಿಸಬೇಕಿದೆ. ನಮ್ಮ ಪಟ್ಟಣಗಳ ಅಭಿವೃದ್ಧಿಯಲ್ಲಿ ಈಗಲೇ ಇಂತಹ ಚಿಂತನೆ ನಡೆಸುವುದು ಅಗತ್ಯ.ಬೆಂಗಳೂರಿನಲ್ಲಿ 800 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ 85 ಲಕ್ಷ ಜನ ವಾಸಿಸುತ್ತಿದ್ದಾರೆ. ರಾಜ್ಯದ ಇನ್ಯಾವ ನಗರದಲ್ಲೂ ಜನಸಂಖ್ಯೆ 10 ಲಕ್ಷ ಮೀರಿಲ್ಲ. ಉಳಿದ 238 ಪಟ್ಟಣಗಳಲ್ಲಿನ ಒಟ್ಟು ಜನಸಂಖ್ಯೆ 120 ಲಕ್ಷವನ್ನೂ ಮೀರಿ ಮುನ್ನಡೆದಿಲ್ಲ. ಈ ಪೈಕಿ ಸುಮಾರು 140 ಪಟ್ಟಣಗಳಲ್ಲಿನ ಜನಸಂಖ್ಯೆ 5 ಸಾವಿರದಿಂದ 75 ಸಾವಿರದ ನಡುವೆಯೇ ಇದೆ. 2030ರ ಹೊತ್ತಿಗೆ ಈ ಪಟ್ಟಣಗಳಲ್ಲಿನ ಜನಸಂಖ್ಯೆ ಮತ್ತು ವ್ಯಾಪ್ತಿ ಈಗಿನದಕ್ಕಿಂತ ದುಪ್ಪಟ್ಟಾಗಲಿದೆ. ಆದರೆ ಶೀಘ್ರವೇ 1 ಕೋಟಿ ಜನಸಂಖ್ಯೆ  ಹೊಂದಲಿರುವ ಬೆಂಗಳೂರಿನ ಸವಾಲು ಕೇವಲ ರಾಷ್ಟ್ರೀಯವಾಗಿ ಉಳಿದಿಲ್ಲ, ಬದಲಿಗೆ ಜಾಗತಿಕ ಸವಾಲಾಗಿ ಮಾರ್ಪಟ್ಟಿದೆ.ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿ ಕೇವಲ ನಾಲ್ಕು ನಗರಗಳಲ್ಲಿ ಮಾತ್ರ 5 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇದೆ. ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡಗಳಲ್ಲಿ ಸುಮಾರು 8 ಲಕ್ಷ ಹಾಗೂ ಮಂಗಳೂರು-ಬೆಳಗಾವಿಗಳಲ್ಲಿ ಸುಮಾರು 5 ಲಕ್ಷ ಜನ ವಾಸಿಸುತ್ತಿದ್ದಾರೆ. ಆದರೆ ಈ ನಗರಗಳ ಶೇಕಡಾವಾರು ಪ್ರಗತಿಯನ್ನು ಗಮನಿಸಿದರೆ ಬೆಂಗಳೂರಿಗಿಂತ ಅದೆಷ್ಟೋ ಪಟ್ಟು ಅಧಿಕ ವೇಗದಲ್ಲಿ ಬೆಳೆಯುತ್ತಿರುವುದು ಗೊತ್ತಾಗುತ್ತದೆ.2.5 ಲಕ್ಷದಿಂದ 5 ಲಕ್ಷದೊಳಗೆ ಜನಸಂಖ್ಯೆ ಇರುವ ಆರು ನಗರಗಳು ರಾಜ್ಯದಲ್ಲಿವೆ. ಅವುಗಳೆಂದರೆ ತುಮಕೂರು, ವಿಜಾಪುರ, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ ಮತ್ತು ಗುಲ್ಬರ್ಗ. ಈ ಎರಡು ಗುಂಪಿನ 10 ನಗರಗಳಲ್ಲಿನ ಒಟ್ಟು ಜನಸಂಖ್ಯೆ ಸುಮಾರು 45 ಲಕ್ಷ. ಬೆಳೆಯುತ್ತಿರುವ ನಗರಗಳು ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಇದೀಗ ಈ ನಗರಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕಿದೆ.1ರಿಂದ 1.5 ಲಕ್ಷ ಜನಸಂಖ್ಯೆ ಇರುವ 13 ಸಣ್ಣ ನಗರಗಳು ರಾಜ್ಯದಲ್ಲಿದ್ದು, ಒಟ್ಟು ಜನಸಂಖ್ಯೆ 18 ಲಕ್ಷದಟ್ಟಾಗುತ್ತದೆ. 25ರಿಂದ 75 ಸಾವಿರ ಜನಸಂಖ್ಯೆ ಇರುವ 90 ಪಟ್ಟಣಗಳು ಹಾಗೂ 20 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ 120 ಪಟ್ಟಣಗಳು ರಾಜ್ಯದಲ್ಲಿವೆ.

ಈ ಎಲ್ಲ ಜನಸಂಖ್ಯೆ ಮಾಹಿತಿ ತಿಳಿದಾಗ ರಾಜ್ಯ ಸದ್ಯ ಗಂಭೀರವಾಗಿ ಪರಿಗಣಿಸಬೇಕಿರುವುದು ಸುಮಾರು 20 ಸಣ್ಣ ನಗರಗಳು ಮತ್ತು ಪಟ್ಟಣಗಳ ಬಗ್ಗೆ ಮಾತ್ರ ಎಂಬುದು ಗೊತ್ತಾಗುತ್ತದೆ.2030ರ ಹೊತ್ತಿಗೆ ಈ ಪಟ್ಟಣಗಳು ವ್ಯವಸ್ಥಿತ ನಗರಗಳಾಗಿ ರೂಪುಗೊಳ್ಳಬೇಕು. ಇದಕ್ಕೆ ಈಗ ಸೂಕ್ತ ಕಾಲ ಕೂಡಿಬಂದಿದೆ ಎಂದು ಜನ ಮತ್ತು ಸರ್ಕಾರ ಪರಿಗಣಿಸುತ್ತಿಲ್ಲ ಎಂಬುದೇ ಈಗಿನ ಪ್ರಶ್ನೆ. ಬೆಂಗಳೂರು ಸಹಿತ ಜಗತ್ತಿನ ಪ್ರಮುಖ ನಗರಗಳೆಲ್ಲ ತಮ್ಮ ಅಭಿವೃದ್ಧಿಯ ಗತಿಯಲ್ಲಿ ಅದೆಷ್ಟೋ ತಪ್ಪುಗಳನ್ನು ಮಾಡಿವೆ. ಅದರ ಸ್ಪಷ್ಟ ಚಿತ್ರಣ ನಮ್ಮ ಮುಂದಿದೆ. ಇದೆಲ್ಲ ಒಂದು ಪಾಠವೆಂಬಂತೆ ತಿಳಿದುಕೊಂಡು ಅಭಿವೃದ್ಧಿ ಹೊಂದುತ್ತಿರುವ ನಗರಗಳನ್ನು ರೂಪಿಸುವ ಹಾಗೂ ಇತಿಹಾಸ ಮರುಕಳಿಸದಂತೆ ನೋಡಿಕೊಳ್ಳುವ ಗುರುತರ ಹೊಣೆಗಾರಿಕೆ ಸರ್ಕಾರ ಮತ್ತು ನಮ್ಮೆಲ್ಲರ ಮೇಲಿದೆ.ನಗರ ಯೋಜನಾ ತಯಾರಕರ ಪಾತ್ರ ಇಲ್ಲಿ ದೊಡ್ಡದಾಗಿ ಕಾಣಿಸುತ್ತಿದೆ. ಈ ಪಟ್ಟಣಗಳ ಭೌಗೋಳಿಕ ವಿನ್ಯಾಸ, ಗಿರಿ, ಕಂದರಗಳು, ಪರಿಸರಗಳನ್ನೆಲ್ಲ ಗಣನೆಗೆ ತೆಗೆದುಕೊಂಡು ಸರ್ಕಾರದ ಕೆಲವು ಸರಳ ಮಾರ್ಗದರ್ಶನಗಳನ್ನು ಹೇಗೆ ಪರಿಣಾಮಕಾರಿಯಾಗಿ ಜಾರಿಗೆ ತರಬಹುದು ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.ಸಾರಿಗೆ, ಇಂಧನ, ನೀರು ಮತ್ತು ತ್ಯಾಜ್ಯ ನಿರ್ವಹಣೆಗಳು ಪ್ರಮುಖ ನಾಲ್ಕು ಅಂಶಗಳಾಗಿರುತ್ತವೆ. ತ್ಯಾಜ್ಯ ನಿರ್ವಹಣೆಯಂತೂ ಅತ್ಯಂತ ಸುಲಭದ ಕಾರ್ಯ. ಯಾವುದೇ ಆಯುಕ್ತರ, ನಗರ ಯೋಜನಾಕಾರರ, ಖಾಸಗಿ ಕ್ಷೇತ್ರಗಳಿಗೆ ಮೊರೆ ಹೋಗದೆ ವಾರ್ಡ್, ಬ್ಲಾಕ್ ಮಟ್ಟದಲ್ಲೇ ಕ್ರಿಯಾ ಗುಂಪುಗಳು ಅಥವಾ ಸ್ವಸಹಾಯ ಗುಂಪುಗಳ ಮೂಲಕ ನಿಭಾಯಿಸುವುದು ಸಾಧ್ಯವಿದೆ.ಜನರು ಸಕ್ರಿಯವಾಗಿ ಪಾಲ್ಗೊಂಡರೆ ಮತ್ತು ಸರ್ಕಾರದ ಹಸ್ತಕ್ಷೇಪ ಇಲ್ಲದಿದ್ದರೆ ಪರಿಸರ ಸಂರಕ್ಷಣೆಯೊಂದಿಗೆ ಅಭಿವೃದ್ಧಿ ಕಾರ್ಯಗಳಲ್ಲಿ ಅದ್ಭುತಗಳನ್ನೇ ಮಾಡಿ ತೋರಿಸಬಹುದು. ಸರ್ಕಾರೇತರ ಸಂಘಟನೆಗಳು (ಎನ್‌ಜಿಒ) ಮಾರ್ಗದರ್ಶನ ಮಾಡುವ ಕಲಸ ಮಾಡಬೇಕೇ ಹೊರತು ವ್ಯವಸ್ಥೆಯನ್ನು ದೂರುವುದಲ್ಲ.ಜನ, ಸರ್ಕಾರ ಮತ್ತು ನಿಜವಾದ ಅಭಿವೃದ್ಧಿಯ ಬಗ್ಗೆ ಕಳಕಳಿ ಇರುವ ಸಂಘಟನೆಗಳಿಂದ ಮಾತ್ರ ಕಳೆದ 50 ವರ್ಷಗಳಲ್ಲಿ ಕಾಣದ ವ್ಯವಸ್ಥಿತ ಅಭಿವೃದ್ಧಿಗಳನ್ನು ಮಾಡಲು ಸಾಧ್ಯ. ಚೀನಾದ ಪ್ರಾಂತ್ಯಗಳಲ್ಲಿ ಇಂತಹ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಿರುವುದು ಇದೇ ಕಾರಣದಿಂದ. ನಮ್ಮ ಜನ, ಸಂಸ್ಕೃತಿ, ಮನೋಭಾವಗಳಲ್ಲಿ ಬದಲಾವಣೆಗಳಿವೆ. ಹೀಗಾಗಿ ಚೀನಾದಲ್ಲಿ ಮಾಡಿದ ಅಭಿವೃದ್ಧಿ ಅಸಾಧ್ಯ ಎಂದು ಭಾವಿಸಬೇಕಿಲ್ಲ. ನಮ್ಮ ಸಣ್ಣ ಸಣ್ಣ ಪಟ್ಟಣಗಳಲ್ಲಿ ಖಂಡಿತವಾಗಿಯೂ ಒಂದು ರೀತಿಯ ಸಾಂಸ್ಕೃತಿಕ ಸಾಮ್ಯತೆ ಇದ್ದೇ ಇದೆ. ಅದನ್ನೇ ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತವಾಗಿ ಬಳಸಬೇಕಿದೆ.ನಾವಿಲ್ಲಿ ಸಾವಿರಾರು ವರ್ಷಗಳ ನಮ್ಮದೇ ಭವ್ಯ ಇತಿಹಾಸದ ಬಗ್ಗೆ ಸ್ವಲ್ಪ ಗಮನ ಹರಿಸಬೇಕು. ಚಾಲುಕ್ಯ, ಹೊಯ್ಸಳ, ಬಹುಮನಿ, ದೇವರಾಯ ಸಹಿತ ಹಲವು ರಾಜರ ಆಳ್ವಿಕೆ ಸಮಯದಲ್ಲಿ ಸ್ವ ಆಡಳಿತಕ್ಕೆ ಹೆಚ್ಚಿನ ಮಹತ್ವ ಇತ್ತು. ಗಡಿ ರಕ್ಷಣೆಯಂತಹ ಪ್ರಮುಖ ಕಾರ್ಯಗಳ ಹೊರತಾಗಿ ಒಳಾಡಳಿತದ ವಿಚಾರದಲ್ಲಿ ರಾಜರು ಅನಗತ್ಯ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ತುಕ್ಕು ಹಿಡಿದ ಸರ್ಕಾರಿ ಕಾರ್ಖಾನೆಯಲ್ಲಿ ಮತ್ತಷ್ಟು ಉದ್ಯೋಗಿಗಳನ್ನು ಸೇರಿಸಿಕೊಳ್ಳುವ ಕೆಲಸವನ್ನು ಮಾತ್ರ ಮಾಡುತ್ತಿರುವ ಸರ್ಕಾರದ ಅಂಗಗಳ ಹಸ್ತಕ್ಷೇಪ ಇಲ್ಲದೆ ಜನರು ತಮ್ಮ ಪಾಡಿಗೆ ಬದುಕುವಂತೆ ಮಾಡಲು ಸಾಧ್ಯವಿಲ್ಲವೇ?ರಾಜ್ಯದ ಜನಸಂಖ್ಯೆ 6.5 ಕೋಟಿಗೆ ಹೆಚ್ಚಿದ್ದು, ಶೇ 70ರಷ್ಟು ಮಂದಿ ಹಳ್ಳಿಗಳಲ್ಲಿ ನೆಲೆಸಿದ್ದಾರೆ. ‘ನಮ್ಮ ಹಳ್ಳಿಗಳ ಹೃದಯದಲ್ಲಿ ಭಾರತ ನೆಲೆಸಿದೆ’ ಎಂದು ಮಹಾತ್ಮಾ ಗಾಂಧೀಜಿ ಅವರು 80 ವರ್ಷಗಳ ಹಿಂದೆಯೇ ಹೇಳಿದ್ದರು. ಆ ಮಾತು ಇಂದಿಗೂ ಸತ್ಯ. ಇಂಧನ, ನೀರು ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಇಂದು ಪ್ರತಿ ಹಳ್ಳಿಯೂ ಸ್ವಸಾಮರ್ಥ್ಯ ಪ್ರದರ್ಶಿಸಿ ಯಾರಿಗೂ ಅವಲಂಬಿತವಾಗದಂತೆ ಬೆಳೆಯಬೇಕಿದೆ. ಬಾಲಗಂಗಾಧರ ತಿಲಕ್ ಅವರು ಘೋಷಿಸಿದ ‘ಪೂರ್ಣ ಸ್ವರಾಜ್’ನ ಬೀಜವೂ ಇಲ್ಲೇ ಅಡಗಿದೆ. ಇದರಿಂದ ಹಳ್ಳಿಗಳ ಮೂಲಸೌಕರ್ಯ ಅಭಿವೃದ್ಧಿ ಹೆಸರಲ್ಲಿ ದುಡ್ಡು ಜೇಬಿಗೆ ಸೇರಿಸಿಕೊಳ್ಳುವ ದಂಧೆ ನಿಲ್ಲುತ್ತದೆ, ಆರೋಗ್ಯ, ಶಿಕ್ಷಣ, ಕೃಷಿಯತ್ತ ಇನ್ನಷ್ಟು ದುಡ್ಡು ಹರಿದು ಜನರ ಜೀವನ ಮಟ್ಟ ಸುಧಾರಣೆಗೆ ದಾರಿ ಸುಗಮವಾಗುತ್ತದೆ.ಬೇಕು ಸಾಮಾಜಿಕ ಸ್ವಾತಂತ್ರ್ಯ: ದೇಶ ರಾಜಕೀಯ ಸ್ವಾತಂತ್ರ್ಯ ಗಳಿಸಿದ (1947) 43 ವರ್ಷಗಳ ಬಳಿಕ ಅಂದರೆ 1991ರಲ್ಲಿ ಆರ್ಥಿಕ ಸ್ವಾತಂತ್ರ್ಯ ಗಳಿಸಿಕೊಂಡಿತು. ಆದರೆ ನಮಗಿಂದು ಬೇಕಾಗಿದೆ ಸಾಮಾಜಿಕ ಸ್ವಾತಂತ್ರ್ಯ.ಸರ್ಕಾರ ಇಂದು ಜನರ ಸಾಮರ್ಥ್ಯ, ಸ್ವಾತಂತ್ರ್ಯ ಮತ್ತು ಸ್ವಯಮಾಡಳಿತಗಳನ್ನು ಹತ್ತಿಕ್ಕುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ. ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಎಂಬ ಗೀಳನ್ನು ಮನಸ್ಸಿಗೆ ಬಿತ್ತಿ ಜನರ ಕೈಕಟ್ಟಿಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದು ಅಲ್ಪಾವಧಿಗೆ ಮಾತ್ರವಲ್ಲ, ದೀರ್ಘಾವಧಿಗೆ ಕೂಡ ಅಪಾಯಕಾರಿ.ಜನರ ಸಾಹಸ ಮನೋಭಾವ ಹತ್ತಿಕ್ಕುತ್ತಿರುವ ಘಟನೆಗಳನ್ನು ನೋಡಿಯೇ 1959ರಲ್ಲಿ ರಾಜಾಜಿ ಅವರು ಕಾಂಗ್ರೆಸ್ ಪಕ್ಷ ಮತ್ತು ನೆಹರೂ ಅವರನ್ನು ಬಿಟ್ಟು ದೂರ ಸರಿದರು. ಜನರ ಸಾಹಸ ಮನೋಭಾವ ಹತ್ತಿಕ್ಕುವುದೆಂದರೆ ಪ್ರಜಾಪ್ರಭುತ್ವದ ಮರಣ ಮೃದಂಗ ಎಂಬುದು ಅವರ ಬಲವಾದ ನಿಲುವಾಗಿತ್ತು.ವಿದ್ಯುತ್ ಬಳಸದ ಪಂಪ್‌ಗಳನ್ನು ಅಳವಡಿಸಿಕೊಂಡು ನಮ್ಮ ರೈತರು ಸಾಗುವಳಿ ಮಾಡುವಂತಾದರೆ, ರಸಗೊಬ್ಬರಗಳ ಬದಲಿಗೆ ಜಾನುವಾರುಗಳಿಂದ ಉತ್ಪತ್ತಿಯಾಗುವ ಗೊಬ್ಬರಗಳನ್ನೇ ಹೊಲಗಳಿಗೆ ಹಾಕುವಂತಾದರೆ, ಮುಖ್ಯ ವಿದ್ಯುತ್ ಗ್ರಿಡ್‌ಗೆ ಅವಲಂಬಿತವಾಗದೆ ನಮ್ಮ ಹಳ್ಳಿಗಳಲ್ಲಿನ ವಿದ್ಯುತ್ ದೀಪಗಳು ಬೆಳಗುವಂತಾದರೆ, ದೂರದ ನದಿಗಳಿಂದ ನೀರು ಹರಿಸುವ ಸಂಕೀರ್ಣ ಮತ್ತು ವ್ಯರ್ಥ ನೀರಾವರಿ ಯೋಜನೆಯನ್ನು ಅವಲಂಬಿಸದೆ ನಮ್ಮ ಹೊಲ ಗದ್ದೆಗಳಿಗೆ ನೀರು ಸಿಗುವಂತಾದರೆ....ಇದೆಲ್ಲ ಕೇವಲ ಕನಸು ಎಂದುಕೊಳ್ಳಬೇಡಿ, ಇದನ್ನು ಸಾಧಿಸುವುದು ಸಾಧ್ಯವಿದೆ. ನಮ್ಮ ಜೀವನದ ಮೇಲೆ ಸವಾರಿ ಮಾಡುವ ಸರ್ಕಾರದಿಂದ ಸ್ವಾತಂತ್ರ್ಯ ಪಡೆಯಲು ಪ್ರಜ್ಞಾಪೂರ್ವಕ ಮತ್ತು ಕೆಚ್ಚಿನ ಹೋರಾಟ ನಡೆಸಿದರೆ ಮಾತ್ರ ಈ ಕನಸು ನನಸಾಗುವುದು ಸಾಧ್ಯವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry