ಶುಕ್ರವಾರ, ಮೇ 14, 2021
25 °C

ಸ್ವರವಚನದಿಂದ ಜಾನಪದಕ್ಕೆ ಹೊಸ ಆಯಾಮ: ಡಾ.ಭಾಸ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸ್ವರ ವಚನಕಾರ ರಾಮಪುರ ಬಕ್ಕಪ್ಪನವರ ಹಾಡುಗಳು ಜಾನಪದ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿವೆ ಎಂದು ಹಾವೇರಿಯ ಕರ್ನಾಟಕ ವಿಶ್ವ ವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ.ಟಿ.ಎಂ. ಭಾಸ್ಕರ ಅಭಿಪ್ರಾಯಪಟ್ಟರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗುಲ್ಬರ್ಗ ಜಿಲ್ಲಾ ಘಟಕದ ಆಶ್ರಯದಲ್ಲಿ ನಗರದ ಭಾರತೀಯ ಎಂಜಿನಿಯರ್ಸ್‌ ಸಂಸ್ಥೆಯ ವಿಶ್ವೇಶ್ವರಯ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ನಡೆದ ಮೊದಲ ಗೋಷ್ಠಿಯಲ್ಲಿ `ರಾಮಪುರ ಬಕ್ಕಪ್ಪನವರ' ಕುರಿತು ಅವರು ಉಪನ್ಯಾಸ ನೀಡಿದರು.ಲೋಕಾನುಭವ, ಶರಣಸತಿ ಲಿಂಗಪತಿ ತತ್ವಗಳು ಬಕ್ಕಪ್ಪನವರ ಸ್ವರ ವಚನಗಳಲ್ಲಿ ಒಳಗೊಂಡಿವೆ. ವಚನ ಸಾಹಿತ್ಯದ ಸಮೃದ್ಧಿಯನ್ನು ಜಾನಪದ ಸಾಹಿತ್ಯದ ಮೂಲಕ ಜನಸಾಮಾನ್ಯರಿಗೂ ತಿಳಿಯುವಂತೆ ಅವರು ಮಾಡಿದ್ದಾರೆ. ಅನುಭಾವದ ಮೂಲಕ ಲೋಕಜ್ಞಾನವನ್ನೂ ಹಾಡಿನ ಮೂಲಕ ಅವರು ಸಾರಿದ್ದಾರೆ ಎಂದರು.ದಾರ್ಶನಿಕರು ದೇಹದಂಡನೆ ಮಾಡಿದರೆ ಬಕ್ಕಪ್ಪನವರು ಸಮಾಜದ ಒಳಗೇ ಇದ್ದು ಜನ ಸಾಮಾನ್ಯರ ಬದುಕು ಸುಧಾರಣೆಗೆ ಪ್ರಯತ್ನಿಸಿದವರು. ಸಾವಿರಾರು ಸ್ವರ ವಚನಗಳನ್ನು ಬರೆದ ಅವರು, ಅದು ಜನರಿಗೆ ಅರ್ಥವಾಗಲಿಲ್ಲ ಎಂದು ನದಿಗೆ ಹರಿಯಬಿಟ್ಟರು ಎಂಬುದು ಅವರ ಜೀವನ ಚರಿತ್ರೆಯಿಂದ ತಿಳಿದು ಬರುತ್ತದೆ. ಜನಪದರು ಹಾಡುವ ಭಜನೆಗಳಲ್ಲಿ ಬಕ್ಕಪ್ಪನವರ ಕುರಿತ ಮಾಹಿತಿ ಸಿಗುತ್ತದೆ ಎಂದು ತಿಳಿಸಿದರು. ದೇವರು ಕೈಹಿಡಿದು ನಡೆಸುವವನು ಮಾತ್ರ. ಆದರೆ ಕೈ ಹಿಡಿಸಿಕೊಳ್ಳುವವನು ಯೋಗ್ಯನಾದವನೋ ಎಂಬುದನ್ನು ತೀರ್ಮಾನಿಸುವವನು ಮನುಷ್ಯ. ಅದಕ್ಕೆ ನಡೆಯನ್ನು ಒರೆಗೆ ಹಚ್ಚಬೇಕು. ಪ್ರಜ್ಞಾಹೀನನಾಗಿರುವ ಮನುಷ್ಯನನ್ನು ಶಿವಪ್ರಜ್ಞೆ ಎಚ್ಚರಿಸುತ್ತದೆ. ಇದನ್ನು ಅರಿತು ಶಿವನೆಡೆಗೆ ಸರಿಯಬೇಕು ಎಂಬುದನ್ನು ಬಕ್ಕಪ್ಪನವರು ತಮ್ಮ ಸ್ವರ ವಚನಗಳಲ್ಲಿ ಪ್ರತಿಪಾದಿಸಿದ್ದಾರೆ ಎಂದು ಉಲ್ಲೇಖಿಸಿದರು.ನಿವೃತ್ತ ಪ್ರಾಚಾರ್ಯ ಪ್ರೊ. ಅಲ್ಲಮಪ್ರಭು ಬೆಟ್ಟದೂರ `ಉರಿ ಬರಲಿ ಸಿರಿ ಬರಲಿ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ಉರಿ ಕಷ್ಟದ ಸಂಕೇತ ಸಿರಿ ಸುಖದ ಸಂಕೇತ. ಉರಿ ಸಿರಿಯಾಗಲೂ ಬಹುದು ಸಿರಿ ಉರಿಯಾಗಲೂಬಹುದು. ಯಾರು ಶರಣರಂತೆ ಆತ್ಮಾವಲೋಕನ ಮಾಡಿಕೊಳ್ಳುತ್ತಾರೊ ಅವರು ಉರಿ, ಸಿರಿ ಎರಡನ್ನೂ ಸಮಭಾವದಿಂದ ಸ್ವೀಕರಿಸುತ್ತಾರೆ ಎಂದು ವಿಶ್ಲೇಷಿಸಿದರು.ಅಧ್ಯಾತ್ಮ ಎಂದರೆ ನಮ್ಮ ಇಡೀ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು. ನಮ್ಮನ್ನು ನಾವು ತೂಕ ಮಾಡಿಕೊಂಡರೆ ವ್ಯಕ್ತಿತ್ವ ಸುಧಾರಿಸುತ್ತದೆ. ಇದು ಬೆಳವಣಿಗೆಗೂ ಅಗತ್ಯ. ಬಸವಣ್ಣ ಬೇಡುವವರಿಲ್ಲದ ಸಮಾಜವನ್ನು ನೀಡಿದ. ಆದರೆ ಇಂದು ಮುಖ್ಯಮಂತ್ರಿಗಳ ಮುಂದೆ ಹಣಕ್ಕೆ ಕೈಚಾಚುವ ಮಠಾಧೀಶರು ನಮಗೇನು ಕೊಡಬಲ್ಲರು ಎಂದು ಅವರು ಪ್ರಶ್ನಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗ ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ವಿ.ಜಿ. ಪೂಜಾರ ಮಾತನಾಡಿ, ವಚನ, ಸ್ವರವಚನ ಹಾಗೂ ತತ್ವಪದ ರೂಪದಲ್ಲಿ ಬೇರೆ ಬೇರೆ ಆಗಿದ್ದರೂ ವಸ್ತುವಿನ ದೃಷ್ಟಿಯಲ್ಲಿ ಅವುಗಳಿಗೆ ವ್ಯತ್ಯಾಸವಿಲ್ಲ ಎಂದರು. ಸಮ್ಮೇಳನದ ಸರ್ವಾಧ್ಯಕ್ಷೆ ವಿಲಾಸವತಿ ಖೂಬಾ ಉಪಸ್ಥಿತರಿದ್ದರು. ಮಾಲಾಶ್ರೀ ಕಣವಿ ಮತ್ತು ಸಂಗಡಿಗರು ವಚನ ಗಾಯನ ನಡೆಸಿಕೊಟ್ಟರು. ಶರಣ ಸಾಹಿತ್ಯ ಪರಿಷತ್ತು ಅಫಜಲಪುರ ಘಟಕ ಪದಾಧಿಕಾರಿಗಳು ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ಸ್ವಾಗತಿಸಿದರು. ಬಸವರಾಜ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.