ಸ್ವರ್ಣಗೌರಿ ಮೂರ್ತಿ ವಿಸರ್ಜನೆ

7

ಸ್ವರ್ಣಗೌರಿ ಮೂರ್ತಿ ವಿಸರ್ಜನೆ

Published:
Updated:

ಜಾವಗಲ್‌: ಪಟ್ಟಣದ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಕಳೆದ 15ದಿನಗಳಿಂದ ಪ್ರತಿಷ್ಠಾಪಿಸಲಾಗಿದ್ದ ಸ್ವರ್ಣಗೌರಿ ದೇವಿಯ ಮೂರ್ತಿ ವಿಸರ್ಜನಾ ಮಹೋತ್ಸವವು ಸೋಮವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.ಮುಂಜಾನೆ ದೇಗುಲದಲ್ಲಿ ದೇವರಿಗೆ ಅಭೀಷೇಕ, ಅರ್ಚನೆ ನಡೆದು ಸ್ವರ್ಣಗೌರಿಯನ್ನು ಪುಷ್ಪಾಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಗ್ರಾಮದೇವತೆಗಳಾದ ಕರಿಯಮ್ಮ, ಪ್ಲೇಗಿನಮ್ಮ, ದೊಡ್ಡಮ್ಮ ದೇವಿಯರನ್ನು ಮೆರವಣಿಗೆ ನಡೆಸಲಾಯಿತು. ತುಮಕೂರು ಬಸವರಾಜು ವೃಂದದವರಿಂದ ವೀರಭದ್ರ ಕುಣಿತ, ಸೋಮನ ಕುಣಿತ, ಡೊಳ್ಳು ಕುಣಿತ, ಕರಡೆವಾದಗಳೊಂದಿಗೆ ಮದ್ದು ಗುಂಡು, ಪಟಾಕಿಗಳ ಸಿಡಿತದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಿದರು.ಗ್ರಾಮದ ಪ್ರತಿಯೊಬ್ಬರ ಮನೆಗಳ ಮುಂದೆ ನೀರು ಹಾಕಿ ರಂಗವಲ್ಲಿಗಳಿಂದ ಸಿಂಗರಿಸಿ ಸುಮಂಗಲಿಯರು ಪೂಜೆ ಸಲ್ಲಿಸಿ ಮಡಿಲಕ್ಕಿ ಒಪ್ಪಿಸಿದರು. ಗೌರಮ್ಮ ಸೇವಾಸಮಿತಿಯವರು ಸೇರಿದಂತೆ ಅನೇಕ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು. ಗ್ರಾಮದ ದೊಡ್ಡಕೆರೆಗೆ ಸಂಜೆ ಮೂರ್ತಿ ವಿಸರ್ಜನೆ ಮಾಡಲಾಯಿತು.28ರಂದು ಮೂರ್ತಿ ವಿಸರ್ಜನೆ

ಅರಸೀಕೆರೆ: ತಾಲ್ಲೂಕಿನ ಕಣಕಟ್ಟೆ ಹೋಬಳಿ ಕಲ್ಗುಂಡಿ ಗ್ರಾಮದಲ್ಲಿ ಭಾದ್ರಪದ ಮಾಸದ ತದಿಗೆ ದಿನದಂದು ಪ್ರತಿಷ್ಠಾಪಿಸಿರುವ ಗೌರಮ್ಮದೇವಿ ವಿಸರ್ಜನಾ ಮಹೋತ್ಸವ ಸೆ. 28ರಂದು ಅತ್ಯಂತ ವೈಭವಯುತವಾಗಿ ನೆರವೇರಲಿದೆ.ಕಲ್ಗುಂಡಿ ಗ್ರಾಮದ ಮುಂಭಾಗದಲ್ಲಿರುವ ದೇವಾಲಯದಲ್ಲಿ ಗೌರಿ ಹಬ್ಬದ ದಿನದಂದು ಪ್ರತಿಷ್ಠಾಪನೆಗೊಂಡಿರುವ ಗೌರಮ್ಮ ದೇವಿಗೆ ತ್ರಿಕಾಲ ಪೂಜೆಯನ್ನು ಧಾರ್ಮಿಕ ವಿಧಿ–ವಿಧಾನಗಳಿಂದ ನೆರವೇರಿಸಲಾಗುತ್ತದೆ. ಅಮಾವಾಸ್ಯೆಯ ಹಿಂದಿನ ದಿನ ಸೆ.28 ರಂದು ಶನಿವಾರ ಆರಂಭಗೊಳ್ಳಲಿರುವ ಗೌರಮ್ಮ ದೇವಿಯ ವಿಸರ್ಜನಾ ಮಹೋತ್ಸವಕ್ಕೆ ಗ್ರಾಮದ ದೇವತೆ ಕಲ್ಲುಕೋಡಮ್ಮನವರ ಸಮ್ಮುಖದಲ್ಲಿ ಹಾಗೂ ಭದ್ರಕರ್ಣ ಮಹಾಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ವೀರಭದ್ರೇಶ್ವರ ಸ್ವಾಮಿ ದುಗ್ಗಲೋತ್ಸವ ನಡೆಯಲಿದೆ. ನಂತರ ಚೋಮದೇವರಿಂದ ಅಷ್ಟ ದಿಕ್ಕುಗಳಿಗೂ ಪೂಜಾ ಕೈಂಕಯರ್ಗಳು ಜರುಗಲಿವೆ.19 ದಿನದಂದು ಸೂರ್ಯೋದಯಕ್ಕೆ ಮುನ್ನ ಗೌರಮ್ಮ ದೇವಿಗೆ ಕಡಲೆ ಹಿಟ್ಟು, ಬೆಣ್ಣೆಯಿಂದ ತಿದ್ದಿ ನಿಂತ ನಿಲುವಿನ ಗೌರಮ್ಮದೇವಿಯ ರೂಪ ನೀಡಲಾಗುತ್ತದೆ. ಬೆಳಿಗ್ಗೆ ಪುಷ್ಪಾಲಂಕೃತವಾದ ಹೂವಿನ ಮಂಟಪದಲ್ಲಿ ಗೌರಮ್ಮ ದೇವಿಯನ್ನು ಉತ್ಸವದಲ್ಲಿ ಕರೆದೊಯ್ಯಲಾಗುವುದು.ಈ ಸಂದಭರ್ದಲ್ಲಿ ನಡೆಯುವ ತಲವು ಅಂದರೆ ಕುರುಹು ಕೇಳುವುದು ಪ್ರಸಿದ್ಧಿ ಪಡೆದಿದ್ದು, ದೇವಿ ಕುರುವು ಕೊಟ್ಟರೆ ಸುಳ್ಳಾಗುವುದಿಲ್ಲ ಎಂಬ ನಂಬಿಕೆ ಭಕ್ತ ಸಮೂಹದಲ್ಲಿ ನೆಲೆಯೂರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry