ಬುಧವಾರ, ಏಪ್ರಿಲ್ 14, 2021
24 °C

ಸ್ವರ್ಣಲತಾ ನ್ಯಾಯಾಂಗ ಬಂಧನ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಸ್ವರ್ಣಲತಾ ಎಂ.ಭಂಡಾರಿ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಇದೇ 9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ದಿನದ ಮಟ್ಟಿಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬುಧವಾರ ರಾತ್ರಿ ಆದೇಶ ಹೊರಡಿಸಿದ್ದರು. ಗುರುವಾರ ಬೆಳಿಗ್ಗೆ ಮತ್ತೆ ಆರೋಪಿಯನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸ್ವರ್ಣಲತಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಜು.9ರವರೆಗೆ ವಿಸ್ತರಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು.ಜಾಮೀನು ಕೋರಿ ಸ್ವರ್ಣಲತಾ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಇದೇ 7ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ.ಪ್ರಕರಣದ `ಕೇಸ್ ಡೈರಿ~ಯನ್ನು ಆಕ್ಷೇಪಣೆ ಜೊತೆಗೆ ಸಲ್ಲಿಸುವಂತೆ ನ್ಯಾಯಾಲಯ ತನಿಖಾಧಿಕಾರಿಗೆ ನಿರ್ದೇಶನ ನೀಡಿದೆ.ನಗದು, ಚಿನ್ನ ಪತ್ತೆ:
ಆರೋಪಿ ಮನೆಯಲ್ಲಿ ಶೋಧ ನಡೆಸಿದಾಗ ಬ್ಯಾಂಕ್ ಲಾಕರ್ ಕೀ ಪತ್ತೆಯಾಗಿತ್ತು. ಡಿವೈಎಸ್‌ಪಿ ಅಬ್ದುಲ್ ಅಹದ್ ನೇತೃತ್ವದ ತಂಡ ಈ ಲಾಕರನ್ನು ಗುರುವಾರ ತೆರೆದು, ಪರಿಶೀಲಿಸಿದೆ. 600 ಗ್ರಾಂ. ಚಿನ್ನ, ರೂ 6.27 ಲಕ್ಷ ನಗದು ಲಾಕರಿನಲ್ಲಿ ದೊರೆತಿದೆ.ಸ್ವರ್ಣಲತಾ ಅವರ ಪತಿಯ ಬ್ಯಾಂಕ್ ಖಾತೆಯಲ್ಲಿ 47 ಲಕ್ಷ ರೂಪಾಯಿ ಪತ್ತೆಯಾಗಿದೆ ಎಂದು ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಪಿ.ಕೆ.ಶಿವಶಂಕರ್  ತಿಳಿಸಿದರು.1989ರಲ್ಲಿ ಸಚಿವಾಲಯ ಸೇವೆಯಲ್ಲಿ ಶೀಘ್ರಲಿಪಿಕಾರರ ಹುದ್ದೆಗೆ ಸೇರಿದ ಸ್ವರ್ಣಲತಾ, ಇತ್ತೀಚೆಗಷ್ಟೇ ಉಪ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಹೊಂದಿದ್ದರು.ಮಂಗಳವಾರ ಒಂದೇ ದಿನ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳಿಂದ 1.40 ಲಕ್ಷ ರೂಪಾಯಿ ಲಂಚ ವಸೂಲಿ ಮಾಡಿರುವುದನ್ನು ದೃಢಪಡಿಸುವ ಸಾಕ್ಷ್ಯಗಳು ತನಿಖಾ ತಂಡಕ್ಕೆ ದೊರೆತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದ 70ಕ್ಕೂ ಹೆಚ್ಚು ಕಡತಗಳನ್ನು ನಾಲ್ಕು ತಿಂಗಳಿಗೂ ಹೆಚ್ಚು ಕಾಲದಿಂದ ವಿಲೇವಾರಿ ಮಾಡದೇ ಇರಿಸಿಕೊಂಡಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ.ಫಲ ನೀಡಿದ ಸುಳಿವು:

ಬೆಳಗಾವಿ ಜಿಲ್ಲೆಯ ಶಿಕ್ಷಣ ಸಂಸ್ಥೆಯೊಂದಕ್ಕೆ ಅನುದಾನ ಬಿಡುಗಡೆ ಮಾಡುವ ಆದೇಶ ಹೊರಡಿಸಬೇಕಿತ್ತು. ಆದರೆ, ಕಡತವನ್ನು ನಾಲ್ಕು ತಿಂಗಳಿಗೂ ಹೆಚ್ಚುಕಾಲ ಇರಿಸಿಕೊಂಡಿದ್ದ ಸ್ವರ್ಣಲತಾ ಶಿಕ್ಷಣ ಸಂಸ್ಥೆಯ ಪ್ರತಿನಿಧಿಗಳನ್ನು ಸತಾಯಿಸುತ್ತಿದ್ದರು. ಬುಧವಾರ ಆ ಸಂಸ್ಥೆಯ ಪ್ರತಿನಿಧಿಯೊಬ್ಬರು ಕಚೇರಿಗೆ ಹೋದಾಗಲೂ ಆರೋಪಿ ಸರಿಯಾದ ಪ್ರತಿಕ್ರಿಯೆ ನೀಡಿರಲಿಲ್ಲ. ಅವರ ಎದುರಿನಲ್ಲೇ ಹಲವರಿಂದ ಲಂಚ ಪಡೆದು, ಕಡತಗಳಿಗೆ ಸಹಿ ಮಾಡಿದ್ದರು.ಇದೆಲ್ಲವನ್ನೂ ಗಮನಿಸಿದ ಆ ವ್ಯಕ್ತಿ ಪಕ್ಕದಲ್ಲೇ ಇರುವ ಲೋಕಾಯುಕ್ತ ಕಚೇರಿಗೆ ತೆರಳಿ ಈ ಬಗ್ಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ವರ್ಣಲತಾ ಕಚೇರಿಗೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು, ಪರಿಶೀಲನೆ ನಡೆಸಿದರು. ದಾಳಿ ನಡೆಯುವ ಸಂದರ್ಭದಲ್ಲೂ ಹಲವು ಶಿಕ್ಷಣ ಸಂಸ್ಥೆಗಳು ಉಪ ಕಾರ್ಯದರ್ಶಿಯವರ ಕಚೇರಿ ಎದುರು ಕಾದು ನಿಂತಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.