ಸ್ವರ ಸಾಧಕರು

7

ಸ್ವರ ಸಾಧಕರು

Published:
Updated:

ಗೌರಿಸುಂದರ್ ಅವರ ಸುಂದರ ಪ್ರಕಾಶನದವರು ಕಳೆದ ವಾರ ಪುಸ್ತಕ ಪ್ರಕಾಶನದಲ್ಲಿ ಒಂದು ಮೈಲಿಗಲ್ಲು ಸಾಧಿಸಿದರು. ಅವರ ಪ್ರಕಾಶನದ 200ನೇ ಪುಸ್ತಕವಾಗಿ `ಸ್ವರಸಾಧಕರು~ ಪುಸ್ತಕವನ್ನು ಕಳೆದ ವಾರ ಅನಾವರಣಗೊಳಿಸಲಾಯಿತು.

 

ಅದೇ ಸಂದರ್ಭದಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರನ್ನು ಕುರಿತ `ಶಬ್ದ ಚಿಂತಾಮಣಿ ಜಿ.ವಿ.~ ಹಾಗೂ ಟಿ.ಜಿ. ಅಶ್ವತ್ಥನಾರಾಯಣರ `ಅಶ್ವತ್ಥ ಪ್ರದಕ್ಷಿಣೆ~ ಪುಸ್ತಕಗಳೂ ಬಿಡುಗಡೆಗೊಂಡವು.ಆ ಸಂದರ್ಭದಲ್ಲಿ ವಿದ್ವಾನ್ ಆರ್.ಕೆ. ಪದ್ಮನಾಭ ಹಾಡಿ, ಶತಾಯು ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ನಾದ ನಮನ ಸಲ್ಲಿಸಿದರು. ಜಿ.ವಿ. ಅವರ ಮೇಲೆ ಒಂದು ಗೀತೆಯನ್ನೇ ಕಟ್ಟಿ ಸಮರ್ಪಿಸಿದರು. `ನಮಿಸೋಣ ಬನ್ನಿ ಶತಾಯು ಶ್ರೀ ವೆಂಕಟಸುಬ್ಬಯ್ಯ ಗುರುಗಳಿಗೆ~ ಎಂದು ಹಾಡುತ್ತಾ ನಮಿಸಿದರು.ಆ ಮೊದಲು ಕಲ್ಯಾಣಿ ರಾಗವನ್ನು ಆಲಾಪಿಸಿ; ರಾಗದ ಪಾಯದ ಮೇಲೆ ಗೀತೆಯ ಕಟ್ಟಡವನ್ನು ಕಟ್ಟಿ, ಬೆಳಗಿಸಿದರು. ಅದಕ್ಕೂ ಮುನ್ನ ಕುಮಾರವ್ಯಾಸನ ಪ್ರಾರ್ಥನಾ ಪದ್ಯಗಳಿಂದ ಆಯ್ದ ಸರಸ್ವತಿಯ ಮೇಲಿನ ಕವಿತೆಯಿಂದ ಗಾಯನ ಪ್ರಾರಂಭಿಸಿದರು. ಮಾಮೂಲಿ ಪ್ರಾರ್ಥನಾ ಗೀತೆಗಳಿಗಿಂತ ಇದು ಸ್ವಾಗತಾರ್ಹ ಆಯ್ಕೆ. ಸಾರಮತಿ ರಾಗದಲ್ಲಿ ತ್ಯಾಗರಾಜರು ರಚಿಸಿರುವ ಅರ್ಥಪೂರ್ಣ ಕೀರ್ತನೆ `ಮೋಕ್ಷಮುಗಲದಾ~ ವಿಳಂಬದಲ್ಲಿ ಭಾವ ಮಡುಗಟ್ಟುವಂತೆ ನಿರೂಪಿಸಿದರು.ನಾದಬ್ರಹ್ಮವು ಸಕಲೇಂದ್ರಿಯ ವೃತ್ತವನ್ನು ದಾಟಿ ಆತ್ಮವನ್ನು ಸ್ಪರ್ಶಿಸುವುದು. ಪ್ರಣವನಾದವು ಪ್ರಾಣಾಗ್ನಿ ಸಂಯೋಗದಿಂದ ಸಪ್ತಸ್ವರಗಳಾಗಿ ನಾಭಿ, ಹೃದಯ, ಕಂಠ, ನಾಸಾದಿಗಳನ್ನು ಮುಟ್ಟಿ ಪ್ರಕಟವಾಗುವುದು. ಸದ್ಭಕ್ತಿ ಸಂಗೀತವು ಸಾಕ್ಷಾತ್ ಮುಕ್ತಿಗೆ ಕಾರಣವಾಗುವುದು ಎಂದಿರುವ ತ್ಯಾಗರಾಜ ಸ್ವಾಮಿಗಳು ನಾದಾನುಭವದಿಂದ ಜೀವನ್‌ಮುಕ್ತರಾಗಿರೆಂದು ಕರೆ ಕೊಟ್ಟಿದ್ದಾರೆ.`ಸಾಮಗಾನಪ್ರಿಯ, ಎಂತವೇಡುಕೊ~ ಮುಂತಾದ ರಚನೆಗಳನ್ನು ಹಾಡಿದರು. ಕೊನೆಯಲ್ಲಿ ತಮ್ಮದೇ ಒಂದು ರಚನೆ (ಭಾವಲಯದ) ಹಾಗೂ ವಾದಿರಾಜರ ಒಂದು ಉಗಾಭೋಗವನ್ನೂ ಸೇರಿಸಿದರು. ಪಿಟೀಲಿನಲ್ಲಿ ಎಂ.ಎಸ್. ಗೋವಿಂದಸ್ವಾಮಿ, ಮೃದಂಗದಲ್ಲಿ ಸಿ. ಚೆಲುವರಾಜ್ ಹಾಗೂ ತಬಲಾದಲ್ಲಿ ವಿಶ್ವನಾಥ್ ನಾಕೋಡ್ ಚೆನ್ನಾಗಿ ಮೇಳೈಸಿದರು.ಕಂಚಿನ ಕಂಠ


ಬೆಂಗಳೂರಿನ ಬೀದಿಬೀದಿಗಳಲ್ಲಿ ಗಣೇಶೋತ್ಸವದ ಚಪ್ಪರಗಳು ತಲೆಎತ್ತಿವೆ. ಗಣೇಶನ ಅಲಂಕಾರ, ಮೆರವಣಿಗೆಗಳ ಜೊತೆಗೆ ಹೋಮ, ಹವನ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಮಿಳಿತವಾಗಿ ಜನರಲ್ಲಿ ಸಡಗರ, ಉತ್ಸಾಹಗಳು ಮೈವೆತ್ತಿವೆ.ಅಂಥ ಸಂಸ್ಥೆಗಳಲ್ಲಿ ಒಂದಾದ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿಯವರು ಬಸವನಗುಡಿಯ ದೊಡ್ಡ ಗಣಪತಿಯ ಸನ್ನಿಧಾನದಲ್ಲಿ ಕಳೆದ 43 ವರ್ಷಗಳಿಂದ ಗಣೇಶ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ನಾಗಸ್ವರ, ಲಯವಾದ್ಯ ಗೋಷ್ಠಿ, ಹಾಡುಗಾರಿಕೆ ಮತ್ತು ಹರಿಕಥೆಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು.ಇಲ್ಲಿ ಹಾಡಿದ ನಿತ್ಯಶ್ರೀ ಮಹದೇವನ್ ಸಂಗೀತಾಭಿಮಾನಿಗಳ ದೊಡ್ಡ ವರ್ಗವನ್ನೇ ಆಕರ್ಷಿಸಿದರು. ಪ್ರಾರಂಭಕ್ಕೆ ದೀಕ್ಷಿತರ ಸಿದ್ದಿವಿನಾಯಕಂ ಕೃತಿಯಲ್ಲಿ ಷಣ್ಮುಖಪ್ರಿಯ ರಾಗಭಾವವನ್ನು ಚೆನ್ನಾಗಿ ಹಿಡಿದಿಟ್ಟರು. ಪಾಪನಾಶಂ ಶಿವನ್ ಅವರ ಒಂದು ರಚನೆಯಿಂದ ಮುಂದುವರೆದರು. `ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ~, `ಎಂಥ ಚೆಲುವಗೆ ಮಗಳನು ಕೊಟ್ಟನು~ ಮುಂತಾದ ಕನ್ನಡ ದೇವರನಾಮಗಳು ಕೇಳುಗರಿಗೆ ಪ್ರಿಯವಾದುದು, ಸಹಜವೇ. ವರನಾರದ ಕೃತಿಯನ್ನು ದ್ರುತಗತಿಯಲ್ಲಿ ಹಾಡಿ, ದಿನದ ಪ್ರಧಾನ ರಾಗಕ್ಕೆ ಸರಿದರು. ಬಿಲಹರಿಯನ್ನು ಆಯ್ದು ವಿಸ್ತರಿಸಿದರು.ಶಂಕರಾಭರಣ ಜನ್ಯವಾದ ಬಿಲಹರಿಯು ಔಡವ ಸಂಪೂರ್ಣ ರಾಗ. ಈ ರಾಗದಲ್ಲಿ ಅನೇಕ ಜನಪ್ರಿಯ ಕೃತಿಗಳನ್ನು ಹೆಣೆಯಲಾಗಿದೆ. ನಿತ್ಯಶ್ರೀ ಮಿಂಚಿನ ಸಂಗತಿಗಳಿಂದ ಆಲಾಪನೆ ಮಾಡಿ ತ್ಯಾಗರಾಜರ ಒಂದು ಘನವಾದ ಕೀರ್ತನೆ ದೊರಕುನಾ ಇಟುವಂಟಿ ಸೇವಾ ಸುಂದರವಾಗಿ ಅರಳಿಸಿದರು.ತನ್ನ ಹೆಚ್ಚು ಶೃತಿಯ ಪ್ರಖರ ಕಂಠದಿಂದ ಮಿಂಚಿನ ಸಂಗತಿಗಳನ್ನು ನಿರೂಪಿಸಿ, ಸಭೆಯ ಮೆಚ್ಚುಗೆಗೆ ಪಾತ್ರರಾದರು. ಗಾಯಕಿಯ ಗಾಯನಕ್ಕೆ ಪೂರಕವಾಗಿ, ಚಾರುಲತಾ ರಾಮಾನುಜನ್ ಪಿಟೀಲು ನುಡಿಸಿದರೆ, ಲಯವಾದ್ಯಗಳಲ್ಲಿ ತುಮಕೂರು ರವಿಶಂಕರ್ ಮತ್ತು ಬಿ. ಶಶಿಶಂಕರ್ ಕಾವು ತುಂಬಿದರು.ಜಾನಪದ ಸೊಗಡು


ರಂಗಸಂಸ್ಥಾನದವರು ಬೆಂಗಳೂರಿನ ಭಿನ್ನ ಬಡಾವಣೆಗಳಲ್ಲಿ ಜಾನಪದ ಗೀತೆಗಳ ಶಿಕ್ಷಣ, ಗಾಯನ ಕಾರ್ಯಕ್ರಮಗಳನ್ನು ಐದು ದಿನಗಳ ಕಾಲ ಹಮ್ಮಿಕೊಂಡು ಕೈಂಕರ್ಯ ಸಲ್ಲಿಸಿದರು. ಈಗಾಗಲೇ ನೂರಾರು ಆಸಕ್ತರಿಗೆ ಜಾನಪದ ಗೀತೆಗಳನ್ನು ಕಲಿಸಿ, ಹಾಡಿಸಿ, ಅದರ ಪ್ರಚಾರ-ಪ್ರಸಾರದಲ್ಲಿ ರಂಗ ಸಂಸ್ಥಾನ ದಾಪುಗಾಲು ಹಾಕುತ್ತಿದೆ.

 

ಈಗ ನಡೆಸಿದ ಋತುಗಾನ ಸಂಗೀತ ಉತ್ಸವದಲ್ಲಿ ಹಿರಿಯ ಕಲಾವಿದರೊಂದಿಗೆ ಕಿರಿಯ ಗಾಯಕರೂ ದನಿಗೂಡಿಸಿದರು. ಹೊಂಬೇಗೌಡ ಪದವಿಪೂರ್ವ ಕಾಲೇಜಿನಲ್ಲಿ ನಾಂದಿಯಾದ ಉತ್ಸವದಲ್ಲಿ ಹಿರಿಯ ಕಲಾವಿದ ಡಾ. ಬಾನಂದೂರು ಕೆಂಪಯ್ಯ ಎರಡು ಜನಪ್ರಿಯ ಜಾನಪದ ಗೀತೆಗಳನ್ನು ಹಾಡಿದರು.

 

ಹಟ್ಟಿಯ ಬಾಗಿಲಿಗೆ ಬಂದ ಬಳೆಗಾರನನ್ನು ಹೋಗಯ್ಯ ನನ್ನ ತವರೂರಿಗೆ ಎಂಬ ಹಾಡನ್ನು ತಮ್ಮ ಕಂಚಿನ ಕಂಠದಿಂದ ಹಾಡಿದಾಗ ಸಭೆ ಸ್ತಬ್ಧ! `ಬಿದಿರು ನಾನ್ಯಾರಿಗಲ್ಲದವಳು~ ಹಾಡು ಬಿದಿರಿನ ಕಥೆ ಹೇಳುವಂಥದು. ರಾಷ್ಟ್ರ ಪ್ರಶಸ್ತಿ ವಿಜೇತೆ ಡಾ. ಕಾವೇರಿ ಶ್ರೀಧರ್ ಅವರ ನಿರ್ದೇಶನದಲ್ಲಿ ಬೆಂಗಳೂರು ಯೂತ್ ಕ್ವಾಯರ್‌ನ ಕಲಾವಿದರು ಕುವೆಂಪು ರಚಿತ ನಾಡಗೀತೆ `ಜಯ ಭಾರತ ಜನನಿಯ ತನುಜಾತೆ~ಯನ್ನು ಸುಶ್ರಾವ್ಯವಾಗಿ ಹಾಡಿದರು.

 

ಡಾ. ಕಾ.ವೆಂ. ಶ್ರೀನಿವಾಸ್‌ರ `ಕನ್ನಡ ಎಂದರೆ ಬರಿ ನುಡಿ ಅಲ್ಲ~ ಸಹ ಒಂದು ಉತ್ತಮ ಆಯ್ಕೆ. ಕೊನೆಯಲ್ಲಿ ರಂಗಸಂಸ್ಥಾನ ತಂಡದವರು ಒಂದು ಸ್ವಾರಸ್ಯಕರ ಗೀತೆ ಮದುವೆಯಲ್ಲಿ ಗಂಡಿನ ಕಡೆಯವರು ಹೆಣ್ಣಿನ ಕಡೆಯವರನ್ನು ಜರಿಯುವ `ಸೋ ಎನ್ನಿರೊ ಸೋಬಾನೆ ಎನ್ನಿರೊ~ ಹಾಡಿದರು. ಬಂಡ್ಲಹಳ್ಳಿ ವಿಜಯಕುಮಾರ್ ನೇತೃತ್ವದಲ್ಲಿ `ಮಹದೇಶ್ವರ~ ಹಾಡನ್ನು ಕೂಡಿ ಹಾಡಿದರು. ಕೀಬೋರ್ಡ್‌ನಲ್ಲಿ ವಸಂತಕುಮಾರ ಕುಂಬ್ಲೆ, ಲಯ ವಾದ್ಯಗಳಲ್ಲಿ ರಾಘವೇಂದ್ರ ಜೋಶಿ ಹಾಗೂ ಶಶಿಧರ್ ನೆರವಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry