ಸ್ವಸಹಾಯ ಸಂಘ: ಪುನಶ್ಚೇತನಕ್ಕೆ ನೆರವು

7

ಸ್ವಸಹಾಯ ಸಂಘ: ಪುನಶ್ಚೇತನಕ್ಕೆ ನೆರವು

Published:
Updated:

ಗೋಕಾಕ: ಅರಬಾವಿ ಮತಕ್ಷೇತ್ರದಾದ್ಯಂತ ಕಾರ್ಯವ್ಯಾಪ್ತಿ ಹೊಂದಿರುವ ಸುಮಾರು 1,600 ಮಹಿಳಾ ಸ್ವ-ಸಹಾಯ ಸಂಘಗಳ ಪುನಶ್ಚೇತನಕ್ಕಾಗಿ ತಲಾ ರೂ. 15 ಸಾವಿರಗಳಂತೆ ಒಟ್ಟು ರೂ. 2.5 ಕೋಟಿ ಸಹಾಯ ಧನ ನೀಡುವ ಮಹಾತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದ್ದು ಇಷ್ಟರಲ್ಲೇ ಅದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಚಿವ ಬಾಲಚಂದ್ರ ಜಾರಕಿಹೊಳಿ ಪ್ರಕಟಿಸಿದರು.ಇತ್ತೀಚೆಗೆ, ಅರಬಾವಿಯ ಹನುಮಾನ ದೇವಸ್ಥಾನದ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅರಬಾವಿ, ಸಂಗನಕೇರಿ ಮತ್ತು ದುರದುಂಡಿ ಕಾರ್ಯಕ್ಷೇತ್ರಗಳ ಸ್ವ- ಸಹಾಯ ಸಂಘಗಳ ಒಕ್ಕೂಟಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಿಸೆಂಬರ್‌ನಲ್ಲಿ ಮೂಡಲಗಿಯಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಬೃಹತ್ ಸಮಾವೇಶ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದರು.ಸ್ವ-ಸಹಾಯ ಸಂಘಗಳಿಗೆ ಹೆಚ್ಚಿನ ಆರ್ಥಿಕ ನೆರವು ಕಲ್ಪಿಸಿಕೊಡುವ ಮೂಲಕ ಅವುಗಳ ಸದಸ್ಯರ ಆರ್ಥಿಕ ಮಟ್ಟ ಸುಧಾರಣೆಯಾಗಿ ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡಿದಂತಾಗುತ್ತದೆ. ಮಹಿಳೆಯರೂ ಕ್ರಿಯಾಶೀಲರಾಗಿ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕು.ಈಗಾಗಲೇ ಆರ್ಥಿಕ ಸಹಾಯ ಪಡೆದ ಸ್ವ-ಸಹಾಯ ಸಂಘಗಳು ಸಾಲವನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡದಿರುವುದರಿಂದ ಬಾಕಿದಾರರಿಗೆ ನೋಟಿಸ್‌ನ್ನು ಜಾರಿ ಮಾಡಿರುವ ವಿಷಯ ಗಮನಕ್ಕೆ ಬಂದಿದೆ. ಭೀಕರ ಬರಗಾಲದ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಮಾಡಲು  ಸಂಘಗಳಿಗೆ ವರ್ಷದವರೆಗೆ ಕಾಲಾವಕಾಶ ನೀಡುವುದು ಸೂಕ್ತ ಎಂದರು.ಈಗಾಗಲೇ ಅರಬಾವಿ ಗ್ರಾಮಕ್ಕೆ ಸುವರ್ಣ ಗ್ರಾಮೋದಯ ಯೋಜನೆಯಡಿ ರೂ. 1.80 ಕೋಟಿ ಹಣ  ಬಿಡುಗಡೆಯಾಗಿ ಕಾಮಗಾರಿಗಳು ಕೂಡ ಪೂರ್ಣಗೊಂಡಿವೆ. ಆದರೂ ಗ್ರಾಮಸ್ಥರ ಬೇಡಿಕೆಯಂತೆ ಉಳಿದಿರುವ 400 ಅಡಿ ಉದ್ದದ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.ಸಾನ್ನಿಧ್ಯ ವಹಿಸಿದ್ದ ಬಬಲಾದಿ ಮಠದ ಶಿವಯ್ಯ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ಅರಬಾವಿ ಗ್ರಾ.ಪಂ. ಅಧ್ಯಕ್ಷೆ ಬಸವ್ವ ಸಂಪಗಾಂವಿ, ತಾ.ಪಂ. ಸದಸ್ಯ ಸುನಿಲ್ ಜಮಖಂಡಿ, ದುರದುಂಡಿ ಗ್ರಾ.ಪಂ. ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಜಿ.ಪಂ. ಮಾಜಿ ಸದಸ್ಯರಾದ ಶಂಕರ ಬಿಲಕುಂದಿ, ಡಾ. ರಾಜೇಂದ್ರ ಸಣ್ಣಕ್ಕಿ, ವಿಠ್ಠಲ ಸವದತ್ತಿ ಮತ್ತು ಸುಧೀರ ಜೋಡಟ್ಟಿ, ಕರ್ನಾಟಕ ದಸಂಸ ರಾಜ್ಯ ಸಂಚಾಲಕ ಯಲ್ಲಪ್ಪ ಮಾದರ ಉಪಸ್ಥಿತರಿದ್ದರು.ಕರಾವಳಿ ಶೈಲಿ:
ಇದಕ್ಕೂ ಮೊದಲು ಸಚಿವ ಬಾಲಚಂದ್ರ ಜಾರಕಿಹೊಳಿ ಟೆಂಗಿನ ಹಿಂಗಾರನ್ನು ಅರಳಿಸುವ ಮೂಲಕ ಕರಾವಳಿ ಜಿಲ್ಲೆಗಳ ಶೈಲಿಯಲ್ಲಿಯೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಹಿಳಾ ಸ್ವ- ಸಹಾಯ ಸಂಘಗಳಿಗೆ ರೂ 18 ಲಕ್ಷ  ವೆಚ್ಚದ ಕೃಷಿ ಸಲಕರಣೆ, ಗೋಬರ್ ಗ್ಯಾಸ್ ಘಟಕಕ್ಕೆ ಅನುದಾನ ಹಾಗೂ 71 ಹೊಸ ಸ್ವಯಂ ಸೇವಕರಿಗೆ ಆದೇಶದ ಪ್ರತಿ ನೀಡಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಆನಂದ ಸುವರ್ಣ ಸಂಸ್ಥೆಯ ಯೋಜನೆಗಳನ್ನು ವಿವರಿಸಿದರು.ಜಾನಪದ ಗಾಯಕ ಬಸವರಾಜ ಘಿವಾರಿ ನಾಡಗೀತೆ ಪ್ರಸ್ತುತ ಪಡಿಸಿದರು. ಸಂಸ್ಥೆಯ ಮೇಲ್ವಿಚಾರಕ ನಾರಾಯಣ ಪಾಲನ ಸ್ವಾಗತಿಸಿದರು. ಅರಬಾವಿ ವಲಯದ ಮೇಲ್ವಿಚಾರಕ ಕೆ.ಎನ್. ಸಂತೋಷ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry