ಸ್ವಸ್ಥ ಬದುಕು:ಪ್ರತಿ ದಿನ ಪವಾಡ ಸೃಷ್ಟಿಸಿ

7

ಸ್ವಸ್ಥ ಬದುಕು:ಪ್ರತಿ ದಿನ ಪವಾಡ ಸೃಷ್ಟಿಸಿ

Published:
Updated:

`ನಾನು~ ಅಥವಾ `ಅವರು~ ಎಂದು ಯೋಚಿಸುವ ಬದಲು `ನಾವು~ ಎಂದು ಯೋಚಿಸಿ. ಇಂತಹ ಸಾಧ್ಯತೆಯಿಂದಲೇ ಸೃಜನಶೀಲತೆಯ ತೊರೆ ಹುಟ್ಟುತ್ತದೆ. ಮನಸ್ಸಿನ ಬಾಗಿಲು ತೆರೆಯುತ್ತದೆ.

ದೇವರು ಒಬ್ಬನೇ, ಆದರೆ ಆತ ಪ್ರಕಟವಾಗುವುದು ಮಾತ್ರ ವೈವಿಧ್ಯಮಯ ರೂಪದಲ್ಲಿ. ಶ್ರೇಷ್ಠ ತತ್ವಜ್ಞಾನಿ ರಾಲ್ಫ್ ವಾಲ್ಡೊ ಎಮರ‌್ಸನ್ ಹೇಳಿದ ಈ ಮಾತುಗಳು ಉಲ್ಕೆಯಂತೆ ನಿಮ್ಮ ಮನಸ್ಸಿಗೆ ಅಪ್ಪಳಿಸಬಹುದು. ಹಾ, ಹೌದು..! ದೇವರು ಒಬ್ಬನೇ. ದೇವರು ಅಂದರೆ ಅಗಾಧವಾದ, ಅಳೆಯಲು ಸಾಧ್ಯವಿಲ್ಲದ ಅಪಾರ ಬುದ್ಧಿವಂತಿಕೆಯ ಒಂದು ಶಕ್ತಿ.ಆಕಾರವಿಲ್ಲದ ಈ ಶಕ್ತಿ ಹಕ್ಕಿಗಳು, ಪ್ರಾಣಿಗಳು, ಸಸ್ಯಗಳು, ಮನುಷ್ಯರು ಹಾಗೂ ನಿರ್ಜೀವ ಕಲ್ಲಿನಲ್ಲಿಯೂ ವ್ಯಕ್ತವಾಗುತ್ತದೆ. ಒಮ್ಮೆ ಪೂಜಾರಿಯೊಬ್ಬ ಪುಟ್ಟ ಬಾಲಕಿಗೆ ಸವಾಲು ಹಾಕಿದ. `ದೇವರು ಎಲ್ಲಿದ್ದಾನೆ ಎಂದು ತೋರಿಸಿಕೊಟ್ಟಲ್ಲಿ ಒಂದು ಡಾಲರ್ ನೀಡುವೆ~ ಎಂದು ಹೇಳಿದ. ಆ ಪುಟ್ಟ ಬಾಲಕಿ ತನ್ನ ಸ್ವಚ್ಛ ಕಣ್ಣುಗಳಿಂದ ಪೂಜಾರಿಯನ್ನು ದಿಟ್ಟಿಸಿದಳು.ದೇವರು ಎಲ್ಲಿಲ್ಲ ಎಂದು ತೋರಿಸಿಕೊಟ್ಟಲ್ಲಿ ನಾನು ಐದು ಡಾಲರ್ ನೀಡುತ್ತೇನೆ ಎಂದು ಆಕೆ ಮೃದುವಾಗಿ ನುಡಿದಳು.ಜಗತ್ತಿನ ಈ ವೈವಿಧ್ಯವನ್ನು ಹೊಸ ದೃಷ್ಟಿಕೋನದಿಂದ ನೋಡಿ. ನಾವು ಜಗತ್ತನ್ನು ಮತ್ತೊಬ್ಬರ ಕಣ್ಣಿನಿಂದ ನೋಡುವುದನ್ನು ಕಲಿಯಬೇಕು.

 

ಆ ದೈವಿಕ ಶಕ್ತಿ ಇದನ್ನೇ ಬಯಸುತ್ತದೆ. ಜಗತ್ತನ್ನು ಬೇರೆ ಬೇರೆ ದೃಷ್ಟಿಕೋನದಿಂದ ನೋಡಿದಾಗಲಷ್ಟೇ ನಾವು ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳಲು, ಅವರೊಂದಿಗೆ ಸಂಪರ್ಕ ಸಾಧಿಸಲು, ಮತ್ತೊಬ್ಬರ ನೋವು ತೊಡೆಯಲು, ನಾವು ಬೆಳೆಯಲು ಸಾಧ್ಯವಾಗುತ್ತದೆ.

ಮತ್ತೊಬ್ಬರ ದೃಷ್ಟಿಕೋನದಿಂದ ನೋಡಿದಾಗ ನಮ್ಮ ಮನಸ್ಸು ವಿಶಾಲವಾಗುತ್ತದೆ.ನಾವು ಜೀವಂತಿಕೆಯಿಂದ ಪುಟಿಯುತ್ತೇವೆ. ನಮ್ಮಳಗೆ ಅರಿವಿನ ದೀಪ ಬೆಳಗುತ್ತಿರುತ್ತದೆ. ಈ ಅರಿವಿನ ಬಯಲಿನಲ್ಲಿ ಎಲ್ಲ ಸಂಘರ್ಷಗಳೂ ಕರಗಿಹೋಗುತ್ತವೆ. ನಮ್ಮಳಗಿನ ಪೂರ್ವಗ್ರಹ ಚೂರು, ಚೂರಾದಾಗ ಪ್ರೀತಿ ನಮ್ಮಳಗಿಂದ ಉಕ್ಕುತ್ತದೆ. ನಾವು ಬದಲಾಗಿರುತ್ತೇವೆ.ಇತ್ತೀಚೆಗೆ ನಾನು ವಿಸ್ಮಯಕಾರಿ ಘಟನೆಗೆ ಸಾಕ್ಷಿಯಾದೆ. `ರಾಶಿ~ಯ ಕಚೇರಿಯಲ್ಲಿ ಸಮಸ್ಯೆ ಉದ್ಭವಿಸಿತ್ತು. ಮಾಲೀಕರಿಂದ ಆಕೆ ತೊಂದರೆಗೆ ಒಳಗಾಗಿದ್ದಳು. ತಾನು ರಾಜೀನಾಮೆ ನೀಡಲಿ ಎಂದು ಅವರು ಕಾಯುತ್ತಿದ್ದಾರೆ ಎಂದು ಆಕೆ ಅಂದುಕೊಂಡಿದ್ದಳು. ಆದರೆ, ಮಾಲೀಕರ ದೃಷ್ಟಿಕೋನದಿಂದ ಸಮಸ್ಯೆಯನ್ನು ಅವಲೋಕಿಸಿದಾಗ ಆಕೆಯ ಕಷ್ಟ ಮಂಜಿನಂತೆ ಕರಗಿತು.ಇಡೀ ಉದ್ಯಮವೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ ಅಂದುಕೊಂಡಾಗ ಅವಳ ಸಿಟ್ಟು, ಹತಾಶೆ ಮಾಯವಾಯಿತು. ರಾತ್ರಿಯೆಲ್ಲ ಈ ಬಗ್ಗೆ ಯೋಚಿಸಿ ಬೆಳಿಗ್ಗೆ ಎದ್ದಾಗ ಆಕೆಯ ಮುಖದಲ್ಲಿ ನಗು ಮಿನುಗುತ್ತಿತ್ತು. `ಪ್ರತಿದಿನ ನಾನು ಪವಾಡ ಸೃಷ್ಟಿಸುತ್ತೇನೆ~ ಎಂಬ ಭಾವ ಅವಳಲ್ಲಿ ಮೂಡಿತು. ಕಚೇರಿ ಅಂದರೆ ದೂರ ಓಡುತ್ತಿದ್ದ ಆಕೆ ಯಾವುದೋ ದೈವಿಕ ನಿರ್ದೇಶನ ದೊರಕಿದಂತೆ ಬೆಳಿಗ್ಗೆ ಉತ್ಸಾಹದಿಂದ ಕಚೇರಿಗೆ ಹೋಗತೊಡಗಿದಳು.ಅಂತಹ ಸಕಾರಾತ್ಮಕ ಮನೋಭಾವಕ್ಕೆ ಕಾರಣವೇನು?

ಮೊದಲು, ನಿಮ್ಮಳಗೆ ಇರುವ ಪ್ರೀತಿಯ ಚಿಲುಮೆಯನ್ನು ಕಂಡುಕೊಳ್ಳಿ. ನಾವೆಲ್ಲ ಬೃಹತ್ ದೈವಿಕ ಸಾಗರದೊಳಗಿನ ಮಂಜಿನ ಹನಿಗಳಂತೆ. ಪ್ರತಿ ಮಂಜಿನ ಹನಿಯೂ ತನ್ನದೇ ಆದ ರೀತಿಯಲ್ಲಿ ಸೂರ್ಯನ ಕಿರಣಗಳನ್ನು ಪ್ರತಿಫಲಿಸುತ್ತದೆ. ಆ ಕಿರಣಗಳನ್ನು ನಮ್ಮಳಗೆ ಹಿಡಿದಿಟ್ಟುಕೊಳ್ಳಬಾರದು. ಆದರೆ, ಮತ್ತಷ್ಟು ಕಾಂತಿಯುತವಾಗಿ ಪ್ರಜ್ವಲಿಸಬೇಕು.ಬೈಬಲ್‌ನಲ್ಲಿ ಹೇಳಿದಂತೆ, `ನಾವೆಲ್ಲ ದೇವರ ಬಣ್ಣಗಳನ್ನು ಜಗತ್ತಿಗೆ ಪಸರಿಸಲು ಬಂದ ಬೆಳಕಿನ ಕಿರಣಗಳು~. ನಂಬಿಕೆಯಿಂದ ಮುನ್ನಡೆಯಿರಿ. ನೀವು ಕಷ್ಟಕ್ಕೆ ಸಿಲುಕಿದ್ದಲ್ಲಿ ಉನ್ನತ ದೈವೀ ಶಕ್ತಿ ನಿಮ್ಮನ್ನು ಕೆಲ ತಿಂಗಳಿನಿಂದ ಈ ಕಷ್ಟಕರ ಹಾದಿಯಲ್ಲಿ ಮುನ್ನಡೆಸಲು ಸಜ್ಜುಗೊಳಿಸುತ್ತಿತ್ತು ಅಂದುಕೊಳ್ಳಿ. ಚಿಂತಕ ಎಡ್ವರ್ಡ್ ಟೆಲ್ಲರ್ ಹೇಳುವಂತೆ ಬೆಳಕಿನ ಕೊನೆಯಲ್ಲಿ ನೀವು ಅಪರಿಚಿತ ಅಂಧಕಾರದಲ್ಲಿ ಕಾಲಿಡುತ್ತೀರಿ. ಒಂದೋ ನೀವು ಕಾಲೂರಲು ಅಲ್ಲಿ ಗಟ್ಟಿಯಾದ ಜಾಗ ಸಿಗುತ್ತದೆ. ಇಲ್ಲವೇ ಹಾರಾಡಲು ಅವಕಾಶ ಸಿಗುತ್ತದೆ. ಈ ಅಂಶವನ್ನು ಅಂತರ್ಗತ ಮಾಡಿಕೊಳ್ಳಿ. ನಿಮ್ಮ ಚೈತನ್ಯ ಕುಣಿದಾಡುತ್ತದೆ.`ನಾನು~ ಅಥವಾ `ಅವರು~ ಎಂದು ಯೋಚಿಸುವ ಬದಲು `ನಾವು~ ಎಂದು ಯೋಚಿಸಿ. ಅಭಿಪ್ರಾಯಗಳು ತದ್ವಿರುದ್ಧವಾಗಿದ್ದರೂ ನಾವಿಬ್ಬರೂ ಸರಿಯಾಗಿಯೇ ಇರಬಹುದು. ಯಾರು ಸರಿ ಅಥವಾ ಯಾರು ತಪ್ಪು ಪ್ರಶ್ನೆ ಅದಲ್ಲ. ಇಂತಹ ಸಾಧ್ಯತೆಯಿಂದಲೇ ಸೃಜನಶೀಲತೆಯ ತೊರೆ ಹುಟ್ಟುತ್ತದೆ. ಮನಸ್ಸಿನ ಬಾಗಿಲು ತೆರೆಯುತ್ತದೆ. ಸಂಕುಚಿತ ಚಿಂತನೆಯ ಬದಲು ಹೊಸ ವಿಚಾರಗಳು, ವಿಧಾನಗಳು, ತಂತ್ರಗಳು, ಅನ್ವೇಷಣೆಗಳು ಹೊಳೆಯುತ್ತವೆ.ಮನಸ್ಸಿಟ್ಟು ಕೇಳಿ. ನಾನು ಹೇಗೆ ಅವರನ್ನು ಉತ್ತೇಜನಗೊಳಿಸಬಲ್ಲೆ, ಸಮಾಧಾನ ನೀಡಬಲ್ಲೆ, ಸಲಹೆ ನೀಡಬಲ್ಲೆ ಎಂದು ಯೋಚಿಸದೇ ಬೇರೆಯವರು ಹೇಳುವುದನ್ನು ಕೇಳಿಸಿಕೊಳ್ಳಿ. ಪೂರ್ತಿ ಗಮನ ಕೇಂದ್ರೀಕರಿಸಿ ಕೇಳಿದಾಗ `ನಾನು ನಿನಗಾಗಿ ಇದ್ದೇನೆ~ ಎಂಬುದನ್ನು ಹೇಳಿದಂತಾಗುತ್ತದೆ. ನಮ್ಮನ್ನು ಅರ್ಥ ಮಾಡಿಕೊಳ್ಳಲಿ, ಯಾವುದೇ ತೀರ್ಪು ನೀಡದೇ ಕೇಳಿಸಿಕೊಳ್ಳಲಿ ಎಂಬ ಆಸೆ ಎಲ್ಲರಲ್ಲೂ ಇರುತ್ತದೆ.ಇದು ಹೇಳುವವರು ಹಾಗೂ ಕೇಳುವವರು ಇಬ್ಬರಿಗೂ ಬಿಡುಗಡೆಯ ಹಾದಿಯಾಗಿರುತ್ತದೆ. ಇಂತಹ ಬಿಡುಗಡೆಯ ಪ್ರಕ್ರಿಯೆಯಲ್ಲಿ ಪೂರ್ವಗ್ರಹ, ಹಿಂಜರಿಕೆ ಇತ್ಯಾದಿ ನಮ್ಮ ಆಳದ ನೋವುಗಳು, ಮಿತಿಗಳೆಲ್ಲ ಕರಗಿಹೋಗುತ್ತವೆ. ಹೌದು, ಮತ್ತೊಬ್ಬರ ದೃಷ್ಟಿಕೋನ ಹಾಗೂ ಪರಿಕಲ್ಪನೆಯಿಂದ ನೋಡುವಾಗ ಪ್ರತಿ ದಿನ ನಾವು ಪವಾಡ ಸೃಷ್ಟಿಸುತ್ತೇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry