ಸ್ವಸ್ಥ ಬದುಕು: ನೆರಳಿನ ಹಿಂದೆ ಕಾಂತಿ ಇದೆ

7

ಸ್ವಸ್ಥ ಬದುಕು: ನೆರಳಿನ ಹಿಂದೆ ಕಾಂತಿ ಇದೆ

Published:
Updated:

ಒಂದು ದಿನ ನೀವು ಬೆಳಗ್ಗೆದ್ದು ನೋಡಿದಾಗ ಎಲ್ಲರ ಮುಗುಳ್ನಗೆಯೂ ನಿಮ್ಮ ನಗುವಿನಂತೆ ಕಾಣುತ್ತದೆ. ಸೂರ್ಯ, ಮರ- ಗಿಡಗಳು, ಹೂವುಗಳು, ಹಕ್ಕಿ, ಕಲ್ಲು ಎಲ್ಲವೂ ನಗುತ್ತಿರುವಂತೆ ಭಾಸವಾಗುತ್ತದೆ. ಇದು ಊಹೆಯಲ್ಲ. ಇದು ಜೀವನ. ನೈಜ ಜೀವನ.ನಾವು ಹೊರಗೆ ನೋಡುತ್ತಿರುವ ಜೀವನ ಕೇವಲ ನೆರಳು. ನಿಮ್ಮ ದೇಹವೂ ಒಂದು ನೆರಳು. ಈ ನೆರಳಿನ ಹಿಂದೆ ನಿಮ್ಮ ಆತ್ಮದ ಕಾಂತಿಯಿದೆ. ಈ ಕಾಂತಿಯಲ್ಲಿ ಪ್ರೀತಿ ಮತ್ತು ಜ್ಞಾನದ ಬೆಳಕಿದೆ.ನೆರಳಿನಂತಿರುವ ನಿಮ್ಮ ದೇಹದ ಆರೈಕೆ ಮಾಡಿಕೊಂಡಾಗ ಮಾತ್ರ ಒಳಗಿರುವ ನಿಮ್ಮ ಆತ್ಮದ ಬೆಳಕು ಮುಖದ ಮೂಲಕ ಪಸರಿಸುತ್ತದೆ. ಆತ್ಮದ ಆ ಸಂತಸ ಹೃದಯದಲ್ಲಿ ಹರಡುತ್ತದೆ. ಇಲ್ಲದಿದ್ದಲ್ಲಿ ಅದನ್ನು ನೀವು ಅನುಭವಿಸುವುದು ಹೇಗೆ?ಹಾಗೆಯೇ ನಿಮ್ಮಲ್ಲಿ ನೆರಳಿನಂತೆ ಇರುವ ಕೆಟ್ಟ ವಿಚಾರ, ಸಣ್ಣತನಗಳನ್ನು ಅಪ್ಪಿಕೊಳ್ಳಿ. ಅದರ ಹಿಂದೆ ಸುಂದರವಾದ, ಸಿಹಿಯಾದ ಆಲೋಚನೆಗಳು ಇರುತ್ತವೆ. ನಿಮ್ಮ ಕೆಲ ದೌರ್ಬಲ್ಯಗಳು, ಅಪರಿಪೂರ್ಣತೆಯ ಹಿಂದೆ `ಸೌಂದರ್ಯ~ ಹಾಗೂ `ಬಲ~ ಅಡಗಿರುತ್ತದೆ. ನಾನು ಇಲ್ಲಿ `ಸೌಂದರ್ಯ~ ಎಂದು ಹೇಳುತ್ತಿದ್ದೇನೆ. `ಪರಿಪೂರ್ಣತೆ~ ಎಂದು ಹೇಳುತ್ತಿಲ್ಲ. ಪರಿಪೂರ್ಣತೆ ಯಾವತ್ತೂ ಸುಂದರವಾಗಿರುವುದಿಲ್ಲ. ಆಂತರಿಕ ಸೌಂದರ್ಯ ಪರಿಪೂರ್ಣತೆಗಿಂತ ದೊಡ್ಡದು.

ಬೇರೆಯವರ ಬಗ್ಗೆ ಆರೋಪ ಹೊರಿಸಲು ದನಿ ಎತ್ತುವ ಮೊದಲು ನಾನೇನು ಮಾಡುತ್ತಿದ್ದೇನೆ, ನಾನೇನು ಹೇಳುತ್ತಿದ್ದೇನೆ ಎಂಬುದನ್ನು ಗಮನಿಸಿ.ಒಂದೂರಿನಲ್ಲಿ ಒಬ್ಬ ಚಿಕ್ಕ ಬಾಲಕಿ ಇದ್ದಳು. ಆಕೆಗೊಬ್ಬ ಯಾವಾಗಲೂ ಗಂಟು ಮೋರೆ ಹಾಕಿಕೊಳ್ಳುತ್ತಿದ್ದ, ಕೋಪಿಷ್ಟ ಚಿಕ್ಕಪ್ಪನಿದ್ದ. ಒಂದು ದಿನ ಬಾಲಕಿ ಚಿಕ್ಕಪ್ಪನಿಗೆ ಓಡಿಹೋಗಿ ಕಚುಗುಳಿ ಇಟ್ಟಳು. ಮೊದಲು ಮುಗುಳ್ನಕ್ಕ ಆ ಚಿಕ್ಕಪ್ಪ ನಂತರ ದೊಡ್ಡದಾಗಿ ನಕ್ಕುಬಿಟ್ಟ. ನಕ್ಕು, ನಕ್ಕು ಕಣ್ಣೀರು ಆತನ ಕೆನ್ನೆಯ ಮೇಲೆ ಉರುಳಿತು. ಆತನನ್ನು ಹೇಗೆ ನಗಿಸಿದೆ ಎಂದು ಎಲ್ಲರೂ ಕೇಳಿದರು. `ಆತನ ಒರಟು ಮುಖದ ಹಿಂದೆ ನಗುವಿನ ಮುಖವಿದೆ ಎಂಬುದು ನನಗೆ ಗೊತ್ತಿತ್ತು~ ಎಂದು ಆಕೆ ಮುಗ್ಧತೆಯಿಂದ ಉತ್ತರಿಸಿದಳು.ಶಿಕ್ಷಕಿ ಸಾವಿತ್ರಿ ನನಗೆ ಹೇಳುತ್ತಾರೆ. ಮನಸ್ಸು ಪ್ಯಾರಾಚೂಟ್‌ನಂತೆ. ಅದನ್ನು ನಿಧಾನವಾಗಿ ತೆರೆಯಿರಿ. ನಿಮ್ಮ ಋಣಾತ್ಮಕ ಗುಣವನ್ನು ಕತ್ತಲೆಗೆ ದೂಡಬೇಡಿ. ಮಳೆ ಬಿದ್ದಾಗ ಕೆಸರು ತುಂಬುತ್ತದೆ. ಅದೇ ಸಮಯದಲ್ಲಿ ಕಾಮನಬಿಲ್ಲು ಸಹ ಮೂಡುತ್ತದೆ. ಜಾಣತನಕ್ಕೆ ಹಲವು ಮುಖಗಳಿವೆ. ಎಲ್ಲರನ್ನೂ ಅರ್ಥ ಮಾಡಿಕೊಳ್ಳುವುದು, ಅವರ ಗುಣಗಳನ್ನು ಒಪ್ಪಿಕೊಳ್ಳುವುದು ಸಹ ಅದರಲ್ಲಿ ಒಂದು.ನಿಮ್ಮಲ್ಲಿರುವ ಋಣಾತ್ಮಕ ಗುಣವನ್ನು ಹೇಗೆ ಒಪ್ಪಿಕೊಳ್ಳುತ್ತೀರಿ. ಪೂರ್ವಗ್ರಹವಿಲ್ಲದೇ ಕೇಳಿಸಿಕೊಳ್ಳುವ ವ್ಯಕ್ತಿಯ ಬಳಿ ಈ ಬಗ್ಗೆ ಮಾತನಾಡಿ. ಇಲ್ಲವೇ ಅದರ ಬಗ್ಗೆ ಬರೆಯಿರಿ. ಇದು ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಅಂತಿಮವಾಗಿ ಇದು ನಿಮ್ಮಲ್ಲಿ ಹೆಪ್ಪುಗಟ್ಟಿರುವ ಅಪರಾಧಿ ಭಾವ ಅಥವಾ ನಾಚಿಕೆಯನ್ನು ಹೊರದೂಡುವುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry