ಸ್ವಾಗತಕ್ಕೆ ಎರಡೂ ಬಣಗಳ ನಡುವೆ ಪೈಪೋಟಿ

7

ಸ್ವಾಗತಕ್ಕೆ ಎರಡೂ ಬಣಗಳ ನಡುವೆ ಪೈಪೋಟಿ

Published:
Updated:

ಚಿಕ್ಕಬಳ್ಳಾಪುರ: ಪ್ರಥಮ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಜಿಲ್ಲೆಯ ಜನರಿಗಿಂತಲೂ ಕಾಂಗ್ರೆಸ್‌ನ ಎರಡೂ ಬಣಗಳ ನಡುವೆಯೇ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎಂ.ಆಂಜನಪ್ಪ ನೇತೃತ್ವದ ಬಣ ಒಂದೆಡೆ ಸಿದ್ಧತೆ ಇತ್ತು, ಶಾಸಕ ಡಾ.ಕೆ.ಸುಧಾಕರ್‌ ನೇತೃತ್ವತ ಬಣವೂ ತನ್ನ ಬಲ ಪ್ರದರ್ಶಿಸಲು ಹೆಚ್ಚಿನ ಬೆಂಬಲಿಗರೊಂದಿಗೆ ಆಗಮಿಸಿತ್ತು. ಪರಿಸ್ಥಿತಿ ಗಂಭೀರತೆ ಅರಿತ ಪೊಲೀಸರು ಬಂದೋಬಸ್ತ್‌ ಕಲ್ಪಿಸಿದರು. ಇದರಿಂದ ಯಾವುದೇ ಗೊಂದಲ, ಅಹಿತಕರ ಘಟನೆ ಘಟಿಸಲಿಲ್ಲ.  ಎಂ.ಆಂಜನಪ್ಪ ಬಣ ಗುರುವಾರ ರಾತ್ರಿಯೇ ಪಕ್ಷದ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ­ಗೊಳಿಸಿದ್ದಲ್ಲದೇ ಬೆಳಿಗ್ಗೆ 10.30ರ ಸುಮಾರಿಗೆ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮ ಆಯೋಜಿಸಿತ್ತು. ಸಮಯ ಕಳೆಯುತ್ತಿದ್ದಂತೆಯೇ ಡಾ.ಕೆ.ಸುಧಾಕರ್‌ ಬಣದ ನೇತೃತ್ವ ವಹಿಸಿಕೊಂಡು ಸುಧಾಕರ್‌ ಅವರ ತಂದೆ ಪಿ.ಎನ್‌.ಕೇಶವರೆಡ್ಡಿ ಪೆರೇಸಂದ್ರದ ಕೆಲ ಮುಖಂಡರು ಮತ್ತು ಬೆಂಬಲಿಗರೊಂದಿಗೆ ಪಕ್ಷದ ಕಚೇರಿಯತ್ತ ಆಗಮಿಸಿದರು.ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಎಂ.ಆಂಜನಪ್ಪ ಮತ್ತಿತರರು ಇದ್ದರೆ ತಾವೇ ಮೊದಲು ಮುಖ್ಯಮಂತ್ರಿವರನ್ನು ಸ್ವಾಗತಿಸಲು ಪಿ.ಎನ್‌.­ಕೇಶವರೆಡ್ಡಿ ಕಚೇರಿಯಿಂದ ಸ್ವಲ್ಪ ದೂರದಲ್ಲಿ ನಿಂತರು. ಇದನ್ನರಿತ ಎಂ.ಆಂಜನಪ್ಪ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ರಸ್ತೆಬದಿಯತ್ತ ಆಗಮಿಸಿ­ದರು. ಇದೆಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪೊಲೀಸ್‌ ಬಂದೋಬಸ್ತ್‌ ಇನ್ನೂ ಬಿಗಿಗೊಳಿಸಲಾಯಿತು.ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಿವಪ್ರಸಾದ್‌ ಪಿ.ಎನ್‌.ಕೇಶವರೆಡ್ಡಿ ಮತ್ತು ಎಂ.ಆಂಜನಪ್ಪ ಅವರನ್ನು ಅಕ್ಕಪಕ್ಕ ನಿಲ್ಲಿಸಿ, ನೀವು ಹಿರಿಯರು ಮತ್ತು ಕಿರಿಯರು. ಯಾವುದೇ ರೀತಿಯ ತೊಂದರೆ ಮತ್ತು ಆತಂಕಕ್ಕೆ ಎಡೆಮಾಡಿಕೊಡದೇ ಕಾರ್ಯಕ್ರಮ ಚೆನ್ನಾಗಿ ನಡೆಸಿಕೊಡುವಂತೆ ಹೇಳಿದರು. ಅಷ್ಟಕ್ಕೆ ಸುಮ್ಮನಾಗದ ಅವರು ಸುಮಾರು 20 ನಿಮಿಷಗಳ ಕಾಲ ಅಲ್ಲಿಯೇ ನಿಂತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ, ನಂತರ ಅಲ್ಲಿಂದ ನಿರ್ಗಮಿಸಿದರು.ಮುಖ್ಯಮಂತ್ರಿ ಮತ್ತು ಸಚಿವರು ಆಗಮಿಸು­ತ್ತಿದ್ದಂತೆಯೇ ಅವರನ್ನು ಸ್ವಾಗತಿಸಲು ಎರಡೂ ಬಣದವರು ಮುಗಿಬಿದ್ದರು. ಒಂದು ಬಣದವರು ಎಂ.ಆಂಜನಪ್ಪ ಅವರನ್ನು ಜೈಕಾರ ಹಾಕಿದರೆ, ಮತ್ತೊಂದು ಬಣದವರು ಡಾ. ಕೆ.ಸುಧಾಕರ್‌ ಅವರ ಭಾವಚಿತ್ರವುಳ್ಳ ಪ್ಲೆಕಾರ್ಡ್‌ಗಳನ್ನು ಹಿಡಿದು ಜೈಘೋಷ ಹಾಕಿದರು. ಅಶಾಂತಿ ಉಂಟಾಗಬಹುದು ಎಂಬ ಆತಂಕ ಪೊಲೀಸರಿಗೆ ಕೊನೆಯ ನಿಮಿಷದ­ವರೆಗೂ ಇತ್ತು.‘ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ದಿನೇಶ್‌ ಗುಂಡೂರಾವ್‌ ಅವರು ಪ್ರಥಮ ಬಾರಿಗೆ ಜಿಲ್ಲೆಗೆ ಬಂದ ಸಂದರ್ಭದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಎರಡೂ ಬಣಗಳ ನಡುವೆ ತೀವ್ರ ವಾಗ್ವಾದವೇ ನಡೆದಿತ್ತು. ಕೈಕೈ ಮಿಲಾಯಿಸುವ ಹಂತ ತಲುಪಿತ್ತು. ಅಂತಹ ಘಟನೆ ಮತ್ತೆ ಮರುಕಳಿಸಬಾರದು ಎಂಬ ಕಾರಣಕ್ಕೆ ಹೆಚ್ಚಿನ ಬಿಗಿ ಬಂದೋಬಸ್ತ್‌  ಮಾಡಿದ್ದೆವು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry